ಜಲ ಝಲಕು

ಕಳೆದ ವರ್ಷಕ್ಕಿಂತ ಹೆಚ್ಚೇ ಮಳೆ ಬರುತ್ತಿದೆ. ಹೀಗಾಗಿಯೇ ಸೊರಗಿದ ಹಳ್ಳ, ಕೊಳ್ಳ, ನದಿ, ನದಗಳಿಗೆ ಜೀವಕಳೆ ಬಂದು, ಉಕ್ಕಿ ಹರಿಯುತ್ತಿವೆ. ಜಲಪಾತಗಳು ತಮ್ಮ ಆರ್ಭಟ ಹೆಚ್ಚಿಸಿಕೊಂಡಿದ್ದರೆ, ಜಲಾಶಯಗಳು ನಯನಮನೋಹರವಾಗಿ ಕಂಗೊಳಿಸುತ್ತಿವೆ. ರೈತರಲ್ಲಿ ಉತ್ಸಾಹ ತುಂಬಿಸಿರುವ ಈ ಮಳೆಗಾಲ ಪ್ರವಾಸಿಗರಲ್ಲಿ ಉನ್ಮಾದ ಮೂಡಿಸಿರುವುದಂತೂ ಹೌದು.
ಪ್ರಕೃತಿ ಪ್ರಿಯರ ಸ್ವರ್ಗವೆನಿಸಿದ ಮಲೆನಾಡಿನ ಭಾಗಗಳಲ್ಲಿ ಇದೀಗ ಸಣ್ಣಪುಟ್ಟ ನೀರ ತೊರೆಗಳೂ ಆಕರ್ಷಣೀಯ, ಸಾಧಾರಣ ಜಲಾಶಯಗಳು ರುದ್ರರಮಣೀಯವಾಗಿರುತ್ತವೆ. ವರ್ಷದಲ್ಲಿ ಒಮ್ಮೆ ಮಾತ್ರ ಉಂಟಾಗುವ ಇಂತಹ ಜಲವೈಭವವನ್ನು ಪ್ರತಿಯೊಬ್ಬರೂ ಸವಿಯಲೇ ಬೇಕು. ಹೀಗೆ ಹೋಗುವಾಗ ಕೆಲವು ಮುನ್ನೆಚ್ಚರಿಕೆ ಕ್ರಮಗಳು ಅತೀ ಅಗತ್ಯ.
ಶೂಗಳಿರಲಿ
ಜಲಪಾತ ನೋಡಲು ಹೋಗುವಾಗ ಚಪ್ಪಲಿಗಿಂತ ಶೂ ಧರಿಸುವುವುದು ಒಳ್ಳೆಯದು. ಮಳೆ ಬಿದ್ದು ಆ ಪ್ರದೇಶದಲ್ಲಿ ಪಾಚಿ ಕಟ್ಟಿಕೊಂಡು ಚಪ್ಪಲಿ ಜಾರುವ ಸಂಭವ ಹೆಚ್ಚು.
ಕೊಡೆ ಬೇಡ
ಮಳೆಗಾಲದಲ್ಲಿ ನೀರ ಸೌಂದರ್ಯ ಸವಿಯಲು ಹೋಗುವಾಗ ಕೊಡೆಗಿಂತಲೂ ರೈನ್ ಕೋಟ್ ಧರಿಸಿಕೊಂಡು ಹೋಗುವುದು ಉತ್ತಮ. ಮಳೆಯೊಂದಿಗೆ ಗಾಳಿಯೂ ಹೆಚ್ಚಾಗಿ ಬೀಸುವುದರಿಂದ ಛತ್ರಿ ಹಾರಿಹೋಗಲೂ ಬಹುದು. ಹೀಗಾಗಿ ಮಳೆಗಾಲದಲ್ಲಿ ನದೀ ತಟ, ಜಲಪಾತ ಮೊದಲಾದ ಜಲಮೂಲಗಳ ಹತ್ತಿರ ಹೋಗುವಾಗ ಕೊಡೆ ಬಳಕೆ ಬೇಡ.
ಕ್ಯಾಮೆರಾ ಇರಲಿ
ಪ್ರಕೃತಿ ಕಾಲಕಾಲಕ್ಕೆ ತಕ್ಕಂತೆ ತನ್ನ ಸೌಂದರ್ಯ ಬದಲಾಯಿಸಿಕೊಳ್ಳುತ್ತಲೇ ಇರುತ್ತದೆ. ಆ ಕ್ಷಣದಲ್ಲಿ ಕಣ್ತುಂಬಿಸಿಕೊಳ್ಳುವುದರ ಜತೆಗೆ ಅದನ್ನು ಬೇರೆಯವರಿಗೂ ಕಾಣಿಸಲು ಕೈಯಲ್ಲೊಂದು ಕ್ಯಾಮೆರಾ ಇದ್ದರೆ ಒಳ್ಳೆಯದು. ವಿವಿಧ ಭಂಗಿಯಲ್ಲಿ ಜಲಧಾರೆಯ ಸೌಂದರ್ಯ ಸೆರೆಹಿಡಿದು ವರ್ಷವಿಡೀ ಅದನ್ನು ಮೆಲುಕು ಹಾಕಲು ಕ್ಯಾಮೆರಾ ಸಹಕಾರಿ.
ದೂರದಿಂದಲೇ ಸವಿಯಿರಿ
ನದಿಯಲ್ಲಿ ನೀರು ಕಡಿಮೆ ಇದ್ದಾಗ ಹೋಗುವುದಕ್ಕೂ ತುಂಬಿ ಹರಿಯುತ್ತಿರುವಾಗ ಹೋಗುವುದಕ್ಕೂ ಬಹಳ ವ್ಯತ್ಯಾಸವಿದೆ. ಈಗ ನೀರಿನಲ್ಲಿ ಸೆಳೆತ ಹೆಚ್ಚು. ಆದ್ದರಿಂದ ಯಾವುದೇ ಕಾರಣಕ್ಕೂ ನದಿಯ ಹತ್ತಿರ ಹೋಗಲೇಬೇಡಿ. ನದಿ ಸಮೀಪದಲ್ಲಿ ಮಣ್ಣು ಕುಸಿಯಬಹುದು. ಅಂತಹ ಜಾಗದಿಂದ ಬಹಳ ದೂರ ಇರುವುದೇ ಉತ್ತಮ.
ಸೇತುವೆ ಮೇಲಿನಿಂದಲೂ ನದಿಯನ್ನು ನೋಡುವಾಗ ಬಹಳ ಬಗ್ಗಿ ನೋಡಬೇಡಿ. ತಲೆ ಸುತ್ತುಬಂದು ಮುಗ್ಗರಿಸಿ ಬೀಳುವ ಸಾಧ್ಯತೆಯೂ ಇದೆ. ಮಕ್ಕಳನ್ನು ಸೇತುವೆ ಮೇಲೆ ನಿಲ್ಲಿಸಿಕೊಂಡು ನದಿ ತೋರಿಸುವ ಪ್ರಯತ್ನಕ್ಕೆ ಕೈ ಹಾಕುವುದು ಬಹಳ ಅಪಾಯಕಾರಿ.
ಮಕ್ಕಳ ಬಗ್ಗೆ ಜಾಗ್ರತೆ
ನೀರು ನೋಡುವ ಧಾವಂತದಲ್ಲಿ ಮಕ್ಕಳನ್ನು ಮಳೆಯಲ್ಲಿ ನೆನೆಯುವಂತೆ ಮಾಡುವುದಾಗಲೀ, ಅವರ ಕೈ ಬಿಟ್ಟುಬಿಡುವುದಾಗಲೀ ಸಲ್ಲದು. ಮಳೆಯಲ್ಲಿ ಹೆಚ್ಚು ನೆನೆದರೆ ಮಕ್ಕಳಿಗೆ ಶೀತ, ಕೆಮ್ಮು ಬರುವ ಸಾಧ್ಯತೆ ಇರುತ್ತದೆ.
ಉಕ್ಕಿ ಹರಿಯುತ್ತಿರುವ ಹಳ್ಳಕೊಳ್ಳಗಳ ಮೇಲೆ ಇರುವ ಕಾಲುಸಂಕದ ಮೇಲೆ ನಡೆಯುವಾಗ ಜಾಗರೂಕರಾಗಿರಿ. ಶಾಲಾ ಮಕ್ಕಳು, ವೃದ್ಧರು ದಾಟುವಾಗ ಸರಿಯಾದ ಮಾರ್ಗದರ್ಶಕರು ಇರಲಿ. ಮಳೆಗಾಲದಲ್ಲಿ ಡ್ಯಾಂಗಳತ್ತ ಹೋಗುವಾಗ ವಿಶೇಷ ಗಮನ ಅಗತ್ಯ. ಹಿನ್ನೀರು ಏರುತ್ತಿರುವಾಗ ಡ್ಯಾಂ ಮೇಲೆ ನಡೆಯುವ ಪ್ರಯತ್ನ ಬೇಡ.
ಪ್ರದರ್ಶನ ಬೇಡ
ಸೇತುವೆಯ ಮೇಲೆ ನದಿ ನೀರು ಹರಿಯುತ್ತಿರುವಾಗ ಸುಮ್ಮನೆ ಪ್ರದರ್ಶನಕ್ಕಾಗಿ ನದಿ ದಾಟುವ ಪ್ರಯತ್ನ ಮಾಡಬಾರದು. ಕಾಲು ಜಾರಿ ನೀರಿನಲ್ಲಿ ಕೊಚ್ಚಿ ಹೋಗುವ ಸಂಭವವಿರುತ್ತದೆ.
ಒಟ್ಟಿನಲ್ಲಿ ಮಳೆಗಾಲದಲ್ಲಿ ಯಾವುದೇ ಜಲಮೂಲಗಳ ಹತ್ತಿರ ಹೋಗುವಾಗ ಒಬ್ಬ ಉತ್ತಮ ಜಲತಜ್ಞರು ನಿಮ್ಮೊಂದಿಗಿರಲಿ. ಪ್ರವಾಸೀ ತಾಣಗಳಲ್ಲಿರುವ ಫಲಕಗಳ ಎಚ್ಚರಿಕೆ ಚಾಚೂ ತಪ್ಪದೆ ಪಾಲಿಸಿ. ವರ್ಷಕ್ಕೊಮ್ಮೆ ಕಾಣಸಿಗುವ ವರ್ಷವೈಭವವನ್ನು ಪ್ರತಿಯೊಬ್ಬರೂ ಕಣ್ತುಂಬಿಸಿಕೊಳ್ಳಿ, ಹ್ಯಾಪಿ ಜರ್ನಿ.
- ಸುಧೀಂದ್ರ ಜಮ್ಮಟಿಗೆ
sudheeja@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


