ಗಣೇಶ ಎಂಬ ಆನೆ

ದಾಂಡೇಲಿ ಅಭಯಾರಣ್ಯ ನಾನಾ ಬಗೆಯ ವನ್ಯಮೃಗಗಳ ನೆಲೆ. ಕುಳಗಿ ಅರಣ್ಯ ಪ್ರದೇಶ ಕೂಡ ಇದರ ವ್ಯಾಪ್ತಿಯಲ್ಲಿದೆ. ಒಂಟಿ ಸಲಗವೊಂದು ಈ ಪ್ರದೇಶದ ಅನೇಕ ವರ್ಷಗಳ ನಿವಾಸಿ. ಸ್ವಚ್ಛಂದವಾಗಿ ತಿರುಗಾಡುವ ಇದನ್ನು ಈ ಪ್ರದೇಶದ ಬಹುತೇಕ ಜನ ಬಲ್ಲರು. ಒಂದೇ ದಾಡೆಯನ್ನು ಹೊಂದಿರುವುದರಿಂದ ಜನ ಇದಕ್ಕಿಟ್ಟ ಹೆಸರು 'ಗಣೇಶ'.
ಅರಣ್ಯ ಪ್ರದೇಶ ಅತಿಕ್ರಮಿಸಿದ ಹಾಗೂ ಅರಣ್ಯದ ಪಕ್ಕದಲ್ಲಿರುವವರ ಮನೆ ಸನಿಹದ ತೆಂಗಿನಮರ, ಬಾಳೆಗಿಡಗಳನ್ನು ಉರುಳಿಸಿ ತಿನ್ನುವುದು ಇದರ ಅಭ್ಯಾಸ. ಕುಳಗಿ, ಗೌಳಿವಾಡಾ, ಅಂಬಿಕಾನಗರ, ಜಮಗಾ ಪ್ರದೇಶಗಳಲ್ಲಿ ಈ ಗಣೇಶ ರಾತ್ರಿ ಸಮದಲ್ಲಿ ತೆಂಗಿನ ಮರವನ್ನು ಉರುಳಿಸಿ ಮನೆಗಳ ಪಕ್ಕದಲ್ಲೇ ನಿಂತು ಮರದ ತಿರುಳನ್ನು ತಿನ್ನುವುದು ಇಲ್ಲಿ ಸಾಮಾನ್ಯ ದೃಶ್ಯ.
ಜೂನ್ ತಿಂಗಳ ಮೊದಲ ವಾರದಲ್ಲಿ ಒಂದು ದಿನ ಗಣೇಶ ಕುಳಗಿ ಪ್ರಕೃತಿ ಶಿಬಿರದ ಆನೆ ಕಂದಕವನ್ನು ದಾಟಿ ಅಲ್ಲಿ ಬಗನಿ ಮರವನ್ನು ಬೀಳಿಸಿ ತಿನ್ನಲು ಪ್ರಾರಂಭಿಸಿತು. ಬಗನಿ ಮರ ಆನೆಗಳಿಗೆ ಅತ್ಯಂತ ಪ್ರಿಯವಾದ ಆಹಾರ. ಕುಳಗಿ ಪ್ರಕೃತಿ ಶಿಕ್ಷಣ ಶಿಬಿರದಲ್ಲಿ ಎತ್ತರವಾಗಿ ಬೆಳೆದ ಬಗನಿ ಮರಗಳನ್ನು ಇಲ್ಲಿ ಹಿಂದೆ ವಲಯ ಅರಣ್ಯಾಧಿಕಾರಿಯಾಗಿದ್ದ ಎನ್.ಎಂ. ನಾಯ್ಕ ನೆಟ್ಟಿದ್ದರು. ಅದರಲ್ಲಿ ಎರಡು ದೊಡ್ಡ ಬಗನಿ ಮರಗಳು ವಿದ್ಯುತ್ ತಂತಿಗಳ ಪಕ್ಕದಲ್ಲೇ ಬೆಳೆದಿತ್ತು.
ದಾಂಡೇಲಿ- ಅಣಶಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಬಿ.ಬಿ. ಮಲ್ಲೇಶ, ಆನೆಗಳ ವರ್ತನೆಯ ಬಗ್ಗೆ ಸಾಕಷ್ಟು ಮಾಹಿತಿ ಹೊಂದಿರುವವರು. ಗಣೇಶ ಬಗನಿ ಮರಗಳನ್ನು ತಿಂದು ಹೋಗಿರುವುದನ್ನು ನೋಡಿ, ಆನೆ ಮತ್ತೆ ಬರುವ ಸಾಧ್ಯತೆ ಇದೆ ಎಂದು ಕಂಡುಕೊಂಡರು. ಕೂಡಲೇ ಸನಿಹದ ವಿದ್ಯುತ್ ಸಂಪರ್ಕ ತಪ್ಪಿಸಲು ಹಾಗೂ ಎಲ್ಲ ಎಚ್ಚರಿಕೆ ಕ್ರಮ ಜರುಗಿಸಲು ಸಿಬ್ಬಂದಿಗೆ ಆದೇಶ ನೀಡಿದರು. ವಿದ್ಯುತ್ ಇಲ್ಲದೆ ಶಿಬಿರಕ್ಕೆ ಪ್ರವಾಸಿಗರು ಬಾರದಿದ್ದರೂ ಆಗಬಹುದು, ಮರ ವಿದ್ಯುತ್ ತಂತಿಯ ಮೇಲೆ ಬಿದ್ದು ಗಣೇಶನಿಗೆ ಅಪಾಯವಾಗಬಾರದೆಂಬ ಮುನ್ನೆಚ್ಚರಿಕೆ ಅದು.
ಮರುದಿನ ರಾತ್ರಿ ಮಲ್ಲೇಶ್ ಅಂದುಕೊಂಡಂತೇ ಆಯ್ತು. ಕಾವಲಿನಲ್ಲಿದ್ದ ಸಿಬ್ಬಂದಿ ಎಷ್ಟೇ ಬೆದರಿಸಿದರೂ ಕ್ಯಾರೇ ಮಾಡದ ಗಣೇಶ ಶಿಬಿರದೊಳಗೆ ನುಗ್ಗಿ ವಿದ್ಯುತ್ ತಂತಿ ಪಕ್ಕದಲ್ಲಿದ್ದ ಎರಡು ಎತ್ತರದ ಬಗನಿ ಮರಗಳನ್ನು ಬೀಳಿಸಿದ. ಅವು ವಿದ್ಯುತ್ ತಂತಿ ಮೇಲೆ ಬಿದ್ದು ಎರಡೂ ಕಡೆಯ ವಿದ್ಯುತ್ ಕಂಬಗಳು ಮುರಿದು ಬಿದ್ದವು. ಆ ಮೇಲೆ ರಾಜಾರೋಷವಾಗಿ ಮರಗಳ ತಿರುಳನ್ನು ತಿಂದು ಬೆಳಗಾಗುವದರೊಳಗೆ ಪಕ್ಕದ ಅರಣ್ಯಕ್ಕೆ ಸೇರಿಕೊಂಡ!
ಅಂದು ವಿಶ್ವ ಪರಿಸರ ದಿನ. ಅಂದು ನಡೆಯಬಹುದಾಗಿದ್ದ ಅನಾಹುತ ಹಾಗೂ ಮರುದಿನ ಅರಣ್ಯ ಇಲಾಖೆ ಎದುರಿಸಬೇಕಾಗಿದ್ದ ಸಂಕಷ್ಟ ನೆನೆಸಿಕೊಂಡರೆ! ಈ ಸುಂದರ ಆನೆಯನ್ನು ಉಳಿಸಿಕೊಂಡ ಬಿ.ಬಿ. ಮಲ್ಲೇಶರಂತಹ ಅಧಿಕಾರಿಗಳ ಸಂಖ್ಯೆ ಹೆಚ್ಚಲಿ.
- ಯು.ಡಿ.ನಾಯ್ಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


