ಬೈಟುಕಾಫಿ

ಕರಿ ಅಣಬೆ ಎನ್ನುವ ದೀರ್ಘಾಯುಷ್ಯದ ಟಾನಿಕ್

Published On :

ಅಣಬೆ ನಮಗೆಲ್ಲರಿಗೂ ಗೊತ್ತಿರುವಂಥದ್ದೇ. ಅದನ್ನು ಬಳಸಿ ರುಚಿಕರವಾದ ಅಡುಗೆಗಳನ್ನೂ ಮಾಡುತ್ತೇವೆ. ಕೆಲವರ್ಷಗಳ ಹಿಂದೆ ಅಣಬೆ ಬೇಸಾಯ ಕಲಿಸಿಕೊಡುವುದೇ ನಮ್ಮಲ್ಲಿ ಒಂದು ಉದ್ಯೋಗವಾಗಿತ್ತು. ಸಾಮಾನ್ಯವಾಗಿ ನಾವು ಬಳಸುವುದು ಬಿಳಿ ಅಥವಾ ನಸುಕಂದು ಬಣ್ಣದಲ್ಲಿರುವ ಬಟನ್ ಮಶ್ರೂಮ್. ಕಪ್ಪು ಅಣಬೆ ಎನ್ನುವ ಇನ್ನೊಂದು ಬಗೆಯೂ ಇದೆ. ಏಷ್ಯ ಖಂಡದಲ್ಲೇ ಇದರ ಬಳಕೆ ಹೆಚ್ಚು. ಇದನ್ನು ಔಷಧಿ ಅಣಬೆ ಎಂದೂ ಹೇಳುತ್ತಾರೆ. ಚೀನಾ ಮತ್ತು ಜಪಾನ್‌ಗಳ ಪುರಾತನ ವೈದ್ಯ ಪದ್ಧತಿಯಲ್ಲಿ ಇವುಗಳನ್ನು ಬಹುವಾಗಿ ಬಳಸುತ್ತಿದ್ದರು. ವೈದ್ಯಕೀಯ ಮಹತ್ವ ಗೊತ್ತಾಗುತ್ತಿದ್ದಂತೆ ಭಾರತದಲ್ಲೂ ಈಗೀಗ ಇದನ್ನು ವ್ಯಾಪಕವಾಗಿ ಬೆಳೆಯಲಾಗುತ್ತಿದೆ. ಕೆಲವರಂತೂ ಇದನ್ನು 'ದೀರ್ಘಾಯುಷ್ಯದ ಟಾನಿಕ್‌' ಎಂದೂ ಹೇಳುತ್ತಾರೆ. ಕಾರ್ಬೊಹೈಡ್ರೇಟ್‌ಗಳು, ನಾರು, ವಿಟಮಿನ್ ಬಿ, ಕಬ್ಬಿಣ, ಪ್ರೊಟೀನ್‌ಗಳು, 18 ಬಗೆಯ ಅಮಿನೋ ಆಮ್ಲಗಳು, ನಿಯಾಸಿನ್ ಮೊದಲಾದವು ಇದರಲ್ಲಿ ಹೇರಳವಾಗಿವೆ. ನಿಯಾಸಿನ್ ನರವ್ಯೂಹವನ್ನು ಚೆನ್ನಾಗಿಟ್ಟರೆ, ಕಬ್ಬಿಣದ ಅಂಶ ರಕ್ತದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆ ಹೆಚ್ಚಲು ಸಹಕರಿಸುತ್ತದೆ. ವಿಟಮಿನ್ ಬಿ ರೋಗನಿರೋಧಕ ಶಕ್ತಿ ಹೆಚ್ಚಿಸುವುದರ ಜತೆಗೆ ದೇಹದ ಮೇಲೆ ದಾಳಿ ಮಾಡುವ ಸೋಂಕಾಣುಗಳನ್ನು ಪ್ರತಿಬಂಧಿಸುತ್ತವೆ. ರಕ್ತ ಹೆಪ್ಪುಗಟ್ಟುವುದನ್ನು ತಡೆಯುವಲ್ಲಿಯೂ ಕಪ್ಪು ಅಣಬೆ ನೆರವಾಗುತ್ತದೆ ಎನ್ನುವುದು ಇತ್ತೀಚಿನ ಸಂಶೋಧನೆಗಳಿಂದ ತಿಳಿದುಬಂದಿದೆ.

ಏಷ್ಯನ್ನರು ಶತಮಾನಗಳಿಂದಲೂ ಔಷಧವಾಗಿ ಇದನ್ನು ಬಳಸುತ್ತಿದ್ದರೆ, ರಕ್ತದ ಆರೋಗ್ಯಕ್ಕೆ ಇದು ಒಳ್ಳೆಯ ಮದ್ದು ಎನ್ನುವುದನ್ನು ಕಂಡುಹಿಡಿದು ವೈಜ್ಞಾನಿಕವಾಗಿ ನಿರೂಪಿಸಿದವರು ಅಮೆರಿಕನ್ನರು. ರಕ್ತ ಹೆಪ್ಪುಗಟ್ಟುವುದನ್ನು ಕರಿ ಅಣಬೆ ತಡೆಯುತ್ತದೆ ಎನ್ನುವ ಸಂಗತಿ ಗೊತ್ತಾದದ್ದೂ ಒಂದು ಆಕಸ್ಮಿಕವೇ. ಯೂನಿವರ್ಸಿಟಿ ಆಫ್ ಮಿನ್ನೆಸೊಟಾ ಮೆಡಿಕಲ್ ಸ್ಕೂಲ್‌ನ ಹೆಮಾಟೊಲೊಜಿಸ್ಟ್ ಡಾ.ಡೇಲ್ ಎನ್ನುವವರು ಒಮ್ಮೆ ಏಷ್ಯ ಮೂಲದ ಹೋಟೆಲ್‌ಗೆ ಹೋಗಿದ್ದರು. ಬ್ಲ್ಯಾಕ್ ಮಶ್ರೂಮ್‌ನಿಂದ ಮಾಡಿದ್ದ ತಿನಿಸು ತಿಂದರು. ಆ ನಂತರ ತಮ್ಮ ರಕ್ತದ ಪ್ಲೇಟ್ಲೆಟ್‌ಗಳಲ್ಲಿ ಏನೋ ಬದಲಾಗಿದೆ ಎನ್ನುವುದು ಅವರ ಗಮನಕ್ಕೆ ಬಂತು. ಮತ್ತೊಮ್ಮೆ ಅದೇ ತಿನಿಸು ತಿಂದು, ತಮ್ಮ ರಕ್ತವನ್ನು ವಿವರವಾದ ಪರೀಕ್ಷೆಗೆ ಒಳಪಡಿಸಿದರು. ಪ್ಲೇಟ್ಲೆಟ್‌ಗಳು ಒಂದೆಡೆ ಸೇರಲು ಅವಕಾಶ ಸಿಗುತ್ತಿಲ್ಲ ಎನ್ನುವುದು ಗೊತ್ತಾಯಿತು. ಮತ್ತಷ್ಟು ಸಂಶೋಧನೆ ನಡೆಸಿದಾಗ ಕಪ್ಪು ಅಣಬೆಯನ್ನು ನಿಯಮಿತವಾಗಿ ಸೇವಿಸಿದರೆ ರಕ್ತ ದಪ್ಪ ಆಗುವುದಿಲ್ಲ ಎನ್ನುವುದನ್ನೂ ಅವರು ಕಂಡುಕೊಂಡರು.

'ಈರುಳ್ಳಿ, ಬೆಳ್ಳುಳ್ಳಿಗಳಲ್ಲಿರುವ ಅಡೆನೊಸಿನ್ ಎನ್ನುವ ಪದಾರ್ಥ ಕರಿ ಅಣಬೆಯಲ್ಲಿಯೂ ಇರುತ್ತದೆ. ಇದರಿಂದಾಗಿಯೇ ರಕ್ತ ಹೆಪ್ಪುಗಟ್ಟುವುದಿಲ್ಲ' ಎನ್ನುವುದು ಡಾ.ಡೇಲ್ ಅಭಿಪ್ರಾಯ. ಬಟನ್ ಮಶ್ರೂಮ್‌ಗಳು ರುಚಿಕರವಾಗಿರುತ್ತವೆಯೇ ವಿನಾ ಅವುಗಳನ್ನು ಔಷಧವಾಗಿ ಬಳಸಲು ಸಾಧ್ಯವಿಲ್ಲ ಎನ್ನುವ ನಿಲುವನ್ನೂ ವೈದ್ಯಕೀಯ ವಿಜ್ಞಾನ ಲೋಕ ಹೊಂದಿದೆ.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.