ಕಣ್ಣುಗಾವಲು
ಇಂದು ಇಡೀ ಜಗತ್ತು ಇಣುಕುತ್ತಿರುವುದು ಕಂಪ್ಯೂಟರಿನ ಕಿಟಕಿಗಳ ಮೂಲಕ. ಒಪ್ಪೋಣ. ಆದರೆ, ದಿನದಲ್ಲಿ ಏಳೆಂಟು ಗಂಟೆ ಹೀಗೆ ಇಣುಕಿದರೆ ...

ಇಂದು ಇಡೀ ಜಗತ್ತು ಇಣುಕುತ್ತಿರುವುದು ಕಂಪ್ಯೂಟರಿನ ಕಿಟಕಿಗಳ ಮೂಲಕ. ಒಪ್ಪೋಣ. ಆದರೆ, ದಿನದಲ್ಲಿ ಏಳೆಂಟು ಗಂಟೆ ಹೀಗೆ ಇಣುಕಿದರೆ ನಿಮ್ಮ ಕಣ್ಣಿನ ಕಥೆ ಏನಾಗಬೇಡ?
ಕಂಪ್ಯೂಟರನ್ನು ಹೆಚ್ಚು ಮತ್ತು ನಿರಂತರ ಬಳಸುವವರಿಗೆ 'ಕಂಪ್ಯೂಟರ್ ವಿಷನ್ ಸಿಂಡ್ರೋಮ್' ಖಂಡಿತಾ ಅಟ್ಯಾಕ್ ಮಾಡಿಯೇ ಮಾಡುತ್ತದೆ. ಮಾನವನ ದೃಷ್ಟಿಯು ಮೂಲಭೂತವಾಗಿ ದೂರದ ವಸ್ತುಗಳನ್ನು ನೋಡಲು ಅನುಕೂಲವಾಗುವಂತೆ ರೂಪಿತವಾಗಿದೆ. ಕಂಪ್ಯೂಟರ್ ಎಂಬ ಸೃಷ್ಟಿಯ ಬಗ್ಗೆ ಭಗವಂತನಿಗೆ ಮುಂಚಿತವಾಗಿಯೇ ಗೊತ್ತಿದ್ದಿದ್ದರೆ, ಇದಕ್ಕೆ ತಕ್ಕಂತೆ ಕಣ್ಣನ್ನು ನಿರ್ಮಿಸುತ್ತಿದ್ದ. ಬಿಳಿ ಪರದೆಯನ್ನು ಹೀಗೆ ಅತಿಹತ್ತಿರದಿಂದ ನೋಡುವುದರಿಂದ ಕಣ್ಣಿನ ಮಾಂಸಖಂಡಗಳು ಸುಸ್ತು ಹೊಡೆಯುತ್ತವೆ. ಅವುಗಳ ಮೇಲೆ ವಿಶೇಷ ಒತ್ತಡ ಬಿದ್ದು ದುರ್ಬಲಗೊಳ್ಳುತ್ತವೆ. ಹೀಗಾಗಿ, ಕಣ್ಣಿನ ಮಿಟುಕಿಸುವ ಸಮಯ ಕಡಿಮೆಯಾಗುತ್ತದೆ. ಕೆಲವೊಮ್ಮೆ ಇದರ ಪರಿಣಾಮ 'ಒಣಗಿದ ಕಣ್ಣು' ಎಂಬ ಸ್ಥಿತಿ ಏರ್ಪಡುತ್ತದೆ.
ಬಹಳಷ್ಟು ಹೊತ್ತು ಕಂಪ್ಯೂಟರ್ ಎದುರು ಕೆಲಸ ಮಾಡುವುದರಿಂದ ಸಮೀಪ ದೃಷ್ಟಿದೋಷ, ದೂರದೃಷ್ಟಿದೋಷ, ಅಸಮನಿಟ್ಟುದೋಷವೂ ಒಕ್ಕರಿಸಿಕೊಳ್ಳಬಹುದು. ದೃಷ್ಟಿಯನ್ನು ಕೇಂದ್ರೀಕರಿಸುವ ಕಣ್ಣಿನ ಶಕ್ತಿ ಹಾಗೂ ಕಣ್ಣಿನ ಸಮತೋಲನ ದೃಷ್ಟಿ ಇವೆಲ್ಲವೂ ಕಂಪ್ಯೂಟರಿನ ಕಾರಣದಿಂದಾಗಿ ತೀವ್ರ ಏರುಪೇರಾಗುತ್ತದೆ. ಇದರ ಜೊತೆಗೆ ಒಂದೇ ಭಂಗಿಯಲ್ಲಿ ಕೂತು ಕೆಲಸ ಮಾಡುವುದರಿಂದ ಕುತ್ತಿಗೆ ಹಾಗೂ ಭಜದ ಮಾಂಸ ಖಂಡಗಳಲ್ಲೂ ತೊಂದರೆ ಕಾಣಿಸಿಕೊಳ್ಳಬಹುದು. ತಲೆನೋವೂ ಬರಬಹುದು.
ಅದನೇ ಇರಲಿ, ಈ ಕಣ್ಣಿನ ಬಗ್ಗೆ ನಾವೊಂದಿಷ್ಟು ಕಾಳಜಿ ವಹಿಸುವುದು ಒಳಿತು.
ಲಕ್ಷಣಗಳೇನು?
ಕಣ್ಣು ನೋವು, ದೃಷ್ಟಿ ಮಂಜಾಗುವುದು, ತಲೆ ತಿರುಗುವುದು, ವಾಂತಿ ಬರುವಂತೆ ಆಗುವುದು, ತಲೆನೋವು, ಕಣ್ಣು ಕೆಂಪಾಗುವುದು, ಉರಿಯುವುದು, ಒಣಗುವುದು, ಬಣ್ಣಗಳ ಗುರುತಿಸುವಿಕೆಯಲ್ಲಿ ವ್ಯತ್ಯಾಸವಾಗುವುದು, ದೃಷ್ಟಿಯನ್ನು ಕೇಂದ್ರೀಕರಿಸುವಲ್ಲಿ ತೀವ್ರ ತೊಂದರೆ, ಕಣ್ಣು ಆಯಾಸ ಹೊಂದುವುದು, ಕುತ್ತಿಗೆ, ಬೆನ್ನು ಹಾಗೂ ಭುಜದ ಭಾಗದಲ್ಲಿ ನೋವು, ಅಪರೂಪವಾಗಿ ಕೆಲವೊಮ್ಮೆ ಒಂದು ವಸ್ತು ಎರಡಾಗಿ ಕಾಣಿಸುವುದು... ಇವೆಲ್ಲ ಇದರ ಮುಖ್ಯ ಲಕ್ಷಣಗಳು.
ಚಿಕಿತ್ಸೆ ಏನು?
ಹಲವು ರೀತಿಯ ಕಣ್ಣಿನ ಹನಿ ಔಷಧಿಗಳನ್ನು ಚಿಕಿತ್ಸೆಯಾಗಿ ಬಳಸಬಹುದಾದರೂ ಮುಖ್ಯವಾಗಿ ಈ ರೀತಿಯ ತೊಂದರೆ ಬರದಂತೆ ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮಗಳೇ ಮಹತ್ವದ್ದು.
ಏನು ಮಾಡಬೇಕು?
- ನಿಮ್ಮ ಕಂಪ್ಯೂಟರ್ಗಳನ್ನು ಸರಿಯಾಗಿ ಅಡ್ಜಸ್ಟ್ ಮಾಡಿಕೊಳ್ಳಿ. ಕಂಪ್ಯೂಟರ್ ಪರದೆಗೂ ಕಣ್ಣಿಗೂ 20- 24 ಸೆಂ.ಮೀ. ಅಂತರವಿರಲಿ. ನೋಡಬೇಕಾದ ಕೋನ ಮಧ್ಯಪರದೆ ಮತ್ತು ಪರದೆಯ ಮೇಲ್ಭಾಗಕ್ಕೆ 10ರಿಂದ 20 ಡಿಗ್ರಿಗಳ ಕೋನವಿರಬೇಕು.
- ಪ್ರತಿ ನಿಮಿಷಕ್ಕೊಮ್ಮೆ ವಿರಾಮಕೊಟ್ಟು, ಸುಲಭ ಕಣ್ಣಿನ ವ್ಯಾಯಾಮಗಳನ್ನು ಮಾಡುವುದೊಳ್ಳೆಯದು.
- ಕುಳಿತುಕೊಳ್ಳುವ ಮೇಜಿನ ವ್ಯವಸ್ಥೆ ಸರಿಯಾಗಿರುವಂತೆ ನೋಡಿಕೊಳ್ಳಬೇಕು.
- ಇಡೀ ಕೊಠಡಿಯ ಬೆಳಕಿನ ವ್ಯವಸ್ಥೆ- ಪರದೆಯ ಬೆಳಕಿನ 3ರಷ್ಟಕ್ಕಿಂತ ಹೆಚ್ಚಿರಬಾರದು.
- ಪರದೆಯ ಬೆಳಕಿನ ತೀವ್ರತೆ ಮತ್ತು ಕಾಂಟ್ರಾಸ್ಟ್ಗಳನ್ನು ಸರಿಹೊಂದಿಸಬೇಕು.
- ಮೇಲ್ಗಡೆಯಿಂದ ಬೀಳುವ ಬೆಳಕಿಗಿಂತ ಬದಿಯಿಂದ ಬೆಳಕು ಬೀಳುವ ಟೇಬಲ್ ಲ್ಯಾಂಪ್ ಒಳ್ಳೆಯದು.
- ಕಿಟಕಿಗಳಿಂದ ಹಾಗೂ ಮೇಲ್ಗಡೆಯ ದೀಪದಿಂದ ಉಂಟಾಗುವ ಗ್ಲೇರ್ಗಳನ್ನು ನಿವಾರಿಸಿಕೊಳ್ಳಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


