ಸುಳಿವು ಸಣ್ಣದಿರಬಹುದು, ಅದನ್ನು ಕಡೆಗಣಿಸಬೇಡಿ
'ಸೈಲೆಂಟ್ ಕಿಲ್ಲರ್' ಎನ್ನುವ ಹೆಸರು ಅದಕ್ಕೆ ಸಾರ್ಥಕ. ಅಧಿಕ ರಕ್ತದೊತ್ತಡ ಏಕಾಏಕಿ ಉಂಟಾಗುವುದಿಲ್ಲ ಖರೆ. ಆದರೆ ಅದು ಪ್ರಕಟವಾಗುವುದು ಮಾತ್ರ ಒಮ್ಮಿಂದೊಮ್ಮೆಲೇ. ಅದುವರೆಗೆ ತನ್ನ ಲಕ್ಷಣವನ್ನೇ ತೋರದಿದ್ದ ಅಧಿಕ ರಕ್ತದೊತ್ತಡ ದಿಢೀರ್ ಕಾಣಿಸಿಕೊಳ್ಳಬಹುದು. ನನ್ನ ಗೆಳೆಯರೊಬ್ಬರಿಗೆ ಹಾಗೆಯೇ ಆಯಿತು. ತುಂಬ ಆರೋಗ್ಯವಾಗಿದ್ದರು. ಒಂದು ದಿನ ವಾಕಿಂಗ್ಗೆ ಹೋದವರು ವಾಕ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದರು. ಆಸ್ಪತ್ರೆಗೆ ಕರೆದೊಯ್ದಾಗಲೇ ಗೊತ್ತಾದದ್ದು, ಅವರಿಗೆ ಅಧಿಕ ರಕ್ತದೊತ್ತಡ ಅಥವಾ ಹೈ ಬ್ಲಡ್ ಪ್ರೆಶರ್ (ಎಚ್ಬಿಪಿ) ಇದೆ ಎನ್ನುವುದು. ಅವರಿಗೂ ಸ್ವತಃ ಈ ಬಗ್ಗೆ ಕಲ್ಪನೆ ಇರಲಿಲ್ಲ. ಸಣ್ಣಪುಟ್ಟ ಮುನ್ಸೂಚನೆಗಳೂ ಕಾಣಿಸಿಕೊಂಡಿರಲಿಲ್ಲ. ಬಹಳಷ್ಟು ಜನರಲ್ಲಿ ಹೀಗೆಯೇ ಆಗುತ್ತದೆ. ಅದಕ್ಕಾಗಿಯೇ ಹೈಬಿಪಿಯನ್ನು 'ಸೈಲೆಂಟ್ ಕಿಲ್ಲರ್' ಎಂದು ಹೇಳುತ್ತಾರೆ.
ಸರಳವಾಗಿ ಹೇಳಬೇಕೆಂದರೆ ಅಧಿಕ ರಕ್ತದೊತ್ತಡ ಎಂದರೆ ರಕ್ತನಾಳಗಳ ಮೇಲೆ ಹೊರೆ ಬೀಳುವುದು. ಸಾಮರ್ಥ್ಯಕ್ಕೆ ಮೀರಿದ ಕೆಲಸ ನಿರ್ವಹಿಸುವಾಗ ನಮಗೂ ತೊಂದರೆ ಆಗುವುದಿಲ್ಲವೆ? ಹಾಗೆಯೇ ರಕ್ತನಾಳಗಳಿಗೆ ಕೂಡ. ವ್ಯಕ್ತಿಯ ಸಹಜ ರಕ್ತದೊತ್ತಡ 120/80. ಇದು 140/90 ದಾಟಕೂಡದು. ವೈದ್ಯರ ಪ್ರಕಾರ ಶೇ 80ರಷ್ಟು ಮಂದಿಗೆ ಹೈಬಿಪಿ ಸಾಮಾನ್ಯ. ರಕ್ತದೊತ್ತಡ 120-140 ಮಧ್ಯೆ ಇದ್ದರೆ ಅದನ್ನು ವ್ಯಾಯಾಮ, ರಕ್ತದಲ್ಲಿ ಕೊಲೆಸ್ಟರಾಲ್ ಕಡಿಮೆ ಮಾಡಿಕೊಳ್ಳುವುದು, ಉಪ್ಪು ಕಡಿಮೆ ಸೇವಿಸುವುದು ಮೊದಲಾದ ವಿಧಾನಗಳಿಂದ ನಿಯಂತ್ರಿಸಿಕೊಳ್ಳಲು ಸಾಧ್ಯವಿದೆ. 140ಕ್ಕಿಂತಲೂ ಜಾಸ್ತಿ ಇದ್ದರೆ ಆಗ ಚಿಕಿತ್ಸೆ ಅನಿವಾರ್ಯ. ವೈದ್ಯರು ಸೂಚಿಸುವವರೆಗೂ ನಿಯಮಿತವಾಗಿ ಮಾತ್ರೆ ಸೇವಿಸುತ್ತಿರಬೇಕು. ಅವರ ಸಲಹೆ ಇಲ್ಲದೆ ಏಕಾಏಕಿ ನಿಲ್ಲಿಸುವುದು ಅಪಾಯಕಾರಿ.
ತಲೆ ನೋವಿನ ಸಮಸ್ಯೆ ಇಲ್ಲದೇ ಇರುವವರಿಗೆ ಆಗಾಗ ತಲೆ ನೋವು ಕಾಣಿಸಿಕೊಳ್ಳುವುದು, ವಾಂತಿ ಬರುವುದು, ದೃಷ್ಟಿ ಮಂದವಾದಂತೆ ಭಾಸವಾಗುವುದು, ತಲೆ ಸುತ್ತು ಬರುವುದು, ಮುಖಕ್ಕೆ ರಕ್ತ ನುಗ್ಗಿದಂತೆ ಅನುಭವವಾಗುವುದು, ಮೂಗಿನಲ್ಲಿ ರಕ್ತಸ್ರಾವ, ಉಸಿರಾಟದ ತೊಂದರೆ, ಕಿವಿ ಬಿಗಿದುಕೊಂಡಂತೆ ಅನ್ನಿಸುವುದು, ಸಣ್ಣಪುಟ್ಟ ವಿಚಾರಗಳಿಗೂ ಗೊಂದಲ ಉಂಟಾಗುವುದು, ಅತಿಯಾಗಿ ಬೆವರುವುದು, ನಿದ್ರೆ ಮಾಡಬೇಕು ಅನ್ನಿಸುವುದು ಇವೆಲ್ಲ ಅಧಿಕ ರಕ್ತದೊತ್ತಡದ ಮುನ್ಸೂಚನೆಗಳು. ಇವು ಎಲ್ಲರಲ್ಲೂ ಕಾಣಿಸಿಕೊಳ್ಳುತ್ತವೆ ಎಂದಲ್ಲ. ಬಹುತೇಕ ಸಂದರ್ಭಗಳಲ್ಲಿ ಮುನ್ಸೂಚನೆ ಸಿಗುವುದೇ ಇಲ್ಲ. ಆದರೆ ಇವುಗಳಲ್ಲಿ ಯಾವ ಲಕ್ಷಣ ಕಾಣಿಸಿಕೊಂಡರೂ ತಡ ಮಾಡದೇ ವೈದ್ಯರನ್ನು ಕಂಡು ರಕ್ತದೊತ್ತಡ ಪರೀಕ್ಷಿಸಿಕೊಳ್ಳಬೇಕು. ಹೈಬಿಪಿ ಇರುವುದು ಗೊತ್ತಾದರೂ ಅದನ್ನು ನಿರ್ಲಕ್ಷ್ಯ ಮಾಡುವುದು ಕೂಡ ಸರಿಯಲ್ಲ. ಹಾಗೊಮ್ಮೆ ಕಡೆಗಣಿಸಿದರೆ ಹೃದಯ, ಪಿತ್ಥಕೋಶ, ಮೂತ್ರ ಜನಕಾಂಗ, ಕಣ್ಣು ಮೊದಲಾದ ಪ್ರಮುಖ ಅಂಗಗಳಿಗೆ ತೊಂದರೆಯಾಗಬಹುದು.
ಅಧಿಕ ರಕ್ತದೊತ್ತಡ ನಿಯಂತ್ರಿಸುವ ಆಹಾರ ಪದ್ಧತಿ ಕುರಿತಂತೆ ಮುಂದಿನ ಸಂಚಿಕೆಗಳಲ್ಲಿ ವಿವರವಾಗಿ ಚರ್ಚಿಸೋಣ.
ಮೊ.9900113699 (ಎಸ್ಎಂಎಸ್ಗೆ ಮಾತ್ರ)
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

