ಹೊಲಿಗೆ ತಾತ
ಪುಗಸಟ್ಟೆ ಹೊಲಿಗೆ ಕಲಿಸ್ತಾರೆ. ಯಾರೋ ತಾತ ಅಂತ ಸದರ ಬೇಡ.

ಪುಗಸಟ್ಟೆ ಹೊಲಿಗೆ ಕಲಿಸ್ತಾರೆ. ಯಾರೋ ತಾತ ಅಂತ ಸದರ ಬೇಡ. ಒಂದು ಕಾಲದ ಸ್ವಾತಂತ್ರ್ಯ ಸೇನಾನಿ. ನನ್ನ ದೇಶದ ಸೆರೆ ಬಿಡಿಸಾಕ ಹೋರಾಡಿದ್ದಕ್ಕ ಪಿಂಚಣಿ ತಗೋಬೇಕೇನ್ರಿ ಎಂದು ತಿರಸ್ಕರಿಸಿದ ಸ್ವಾಭಿಮಾನಿ.
ಬನ್ನಿ, ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲೂರು ಗ್ರಾಮದ ಹನಮಂತ ಗಿರಿಧರ ಸುಳೇಭಾವಿ ಅವರನ್ನು ಭೇಟಿಯಾಗಿ. ವಯಸ್ಸು ಎಂಬತ್ತಮೂರು. ನಿಸ್ವಾರ್ಥ ಮುಗ್ಧ ಜೀವಿಯಾದ ಅವರು ಒಂದೊಮ್ಮೆ ಸ್ವಾತಂತ್ರ್ಯ ಹೋರಾಟಗಾರರು, ಇಂದು ಬಡ ಹಾಗೂ ಮಹಿಳಾ ನಿರುದ್ಯೋಗಿಗಳ ಆಶಾಕಿರಣ. ಈ ಭಾಗದಲ್ಲಿ 'ಹೊಲಿಗೆ ಕಲಿಸುವ ಸುಳೇಭಾವಿ ಅಜ್ಜ' ಎಂದೇ ಜನಪ್ರಿಯರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಅಜ್ಜ, ಆ ಕುರಿತು ಸರಕಾರದ ಪಿಂಚಣಿಗೆ ಮಾತ್ರ ಆಶೆ ಪಟ್ಟವರಲ್ಲ. ಏಕೆ ಎಂದು ಯಾರಾದರೂ ಪ್ರಶ್ನಿಸಿದರೆ, ನಾ ನನ್ನ ದೇಶ ಕಾಪಾಡಾಕ ಮಾಡಿದ ಸೇವೆಗೆ ಪಗಾರ ಬೇಕೆನ್ರಿ ಅನ್ನುವವರು. ಮಹಾರಾಷ್ಟ್ರದ ಪುನೇರಿಯಾದ ಸಂತ ವಿನೋಭಾ ಬಾವೆಯವರ ಆಶ್ರಮಕ್ಕೆ ಭೇಟಿ ನೀಡಿ ಅವರ ಆದರ್ಶವನ್ನು ತನುಮನದಲ್ಲಿ ಅಳವಡಿಸಿಕೊಳ್ಳಲು ನಿಶ್ಚಯಿಸಿದರು. ನಂತರ ಹೊಲಿಗೆ ತರಬೇತಿಯ ಕಾಯಕ ಹಿಡಿದರು.
ಸುಮಾರು 35 ವರ್ಷಗಳಿಂದ ಬೆಳಗಾವಿ ಜಿಲ್ಲೆಯ ನಾನಾ ಊರುಗಳು, ಧಾರವಾಡ, ಮುದ್ದೇಬಿಹಾಳ, ಬೇವಿನಕೊಪ್ಪ ಹಾಗೂ ಉತ್ತರ ಕನ್ನಡದ ಹಳಿಯಾಳ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಮತ್ತು ಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ತಮಿಳುನಾಡು ಮುಂತಾದ ರಾಜ್ಯಗಳಿಗೆ ತೆರಳಿ ಅಲ್ಲಿನ ನಿರುದ್ಯೋಗಿಗಳನ್ನು ಗುರುತಿಸಿ ಉಚಿತವಾಗಿ ಹೊಲಿಗೆ ತರಬೇತಿ ನೀಡಿ ಬಂದಿದ್ದಾರೆ. ಇಲ್ಲಿಯವರೆಗೆ 650ಕ್ಕೂ ಹೆಚ್ಚು ನಗರ-ಗ್ರಾಮಗಳಿಗೆ ತೆರಳಿ ಸಾವಿರಾರು ನಿರುದ್ಯೋಗಿಗಳಿಗೆ ನವಚೇತನ ಮೂಡಿಸಿದ್ದಾರೆ.
ಒಂದೂವರೆ ತಿಂಗಳಲ್ಲಿ 30ಕ್ಕೂ ಹೆಚ್ಚು ನಮೂನೆಯ ಸಿದ್ಧ ಉಡುಪುಗಳ ಮಾಹಿತಿ ನೀಡುತ್ತಾರಿವರು. ಆಸಕ್ತರು ಕೇವಲ ಊಟ, ವಸತಿ ಒದಗಿಸಿದರೆ ಸಾಕು. ಆಕಾಶವಾಣಿಯಲ್ಲಿಯೂ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹಲವಾರು ಪುರಸ್ಕಾರಗಳನ್ನು ಪಡೆದಿದ್ದಾರೆ. ಈ ವಯಸ್ಸಿನಲ್ಲೂ ಉತ್ಸಾಹದ ಚಿಲುಮೆಯಾಗಿ, ಯುವಕ ಯುವತಿಯರ ಸ್ಪೂರ್ತಿಯ ಸಾಥಿಯಾಗಿರುವ ಇವರನ್ನು ಸಂಪರ್ಕಿಸಲು: 9945135049.
- ಮಹಾಂತೇಶ ರಾಜಗೋಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


