ಬೈಟುಕಾಫಿ

ನಾಯಿನೆರಳು

ಪತ್ನಿ ಮೇಲಿನ ಪ್ರೀತಿಗೆ ಸಮಾಜ ಸೇವೆಯತ್ತ ಮುಖ ಮಾಡಿದವರು ಸುಂದರಂ ರೆಡ್ಡಿ.

ನಾಯಿನೆರಳು
Published On :

ಸಮಾಜ ಸೇವೆಗೆ ಮುಖಗಳು ಹಲವು. ಪತ್ನಿ ಮೇಲಿನ ಪ್ರೀತಿಗೆ ಸಮಾಜ ಸೇವೆಯತ್ತ ಮುಖ ಮಾಡಿದವರು ಸುಂದರಂ ರೆಡ್ಡಿ. ಹೆಂಡತಿ ಮೇಲಿನ ಪ್ರೀತಿ ಇವರಿಗೆ ಬೀದಿನಾಯಿಗಳ ಮೇಲೆ ವ್ಯಾಮೋಹವನ್ನು ತಂದೊಡ್ಡಿದೆ. ಜಾಕಿ, ಚನ್ನಿ, ಬಿಳಿಯ, ಚಿಕ್ಕು, ಕರಿಯ, ಮುನ್ನ, ನಾಕಿ, ಪಿಂಟು ಹೀಗೆ ನೂರೈವತ್ತಕ್ಕೂ ಅಧಿಕ ಬೀದಿ ನಾಯಿಗಳನ್ನು ಈ ದಂಪತಿ ತಮ್ಮ ಮಕ್ಕಳಂತೆ ಸಲಹುತ್ತಿದ್ದಾರೆ.
ಚಿಕ್ಕನಿಂದಲೂ ಸುಂದರಂ ಅವರ ಪತ್ನಿ ಶಾಂತಾರಿಗೆ ಮೂಕಜೀವಿಗಳೆಂದರೆ ಅಚ್ಚು ಮೆಚ್ಚು. ಸುಂದರಂ ಅವರಿಗೆ ನಾಯಿಗಳೆಂದರೆ ಅಲರ್ಜಿ. ಆದ್ದರಿಂದ ಶಾಂತಾ ಗಂಡನಿಗೆ ಅರಿಯದಂತೆ ನಾಯಿಗಳಿಗೆ ಆಹಾರ ನೀಡಿ ಖುಷಿ ಪಡುತ್ತಿದ್ದರು. ಒಂದು ದಿನ ಬೀದಿನಾಯಿಗಳಿಗೆ ಬಿಸ್ಕತ್ ನೀಡುತ್ತಿರುವಾಗ ಸಿಕ್ಕಿ ಬಿದ್ದರು. ಬೀದಿ ನಾಯಿಗಳಿಗೋಸ್ಕರ ಪತಿಯನ್ನೆ ತೊರೆಯುವ ನಿರ್ಧಾರಕ್ಕೂ ಶಾಂತಾ ಮುಂದಾದರು. ಪತ್ನಿಯನ್ನು ಬಿಟ್ಟಿರಲಾಗದ ಸುಂದರಂ ಅವರ ಇಚ್ಛೆಯಂತೆ ಬೀದಿನಾಯಿ ಸಲಹುವ ಕೇಂದ್ರ ಆರಂಭಿಸಿದರು.
ಯವ್ವನದಲ್ಲಿ ದುಡಿದು ವೃದ್ಧಾಪ್ಯ ಕಳೆಯಲು ಬೇಕು ಎಂದಿರಿಸಿದ್ದ ಹಣವನ್ನೆಲ್ಲ ಇಲ್ಲಿ ಸುರಿದರು. ಅದು ಸಾಲದಿದ್ದಾಗ ರಾಜಾಜಿನಗರದಲ್ಲಿದ್ದ ತಮ್ಮ ಮನೆಯನ್ನೆ ಮಾರಿ ಬೀದಿನಾಯಿಗಳ ಪಾಲಿಗೆ ಆಶ್ರಯ ನೀಡಿದರು. ತಾವು ಸಲಹಿದ ಬೀದಿ ನಾಯಿಗಳು ತೋರುವ ನಿಷ್ಠೆ, ಪ್ರೀತಿಯಿಂದ ಸುಂದರಂ ಕೂಡ ಬದಲಾದರು. ದಿನ ಕಳೆದಂತೆ ಬೀದಿನಾಯಿಗಳನ್ನು ಸಲಹುವುದರಲ್ಲಿ ಖುಷಿ ಕಂಡರು. ಸುಂದರಂ ರೆಡ್ಡಿ ಅವರಿಗೆ ಈಗ ಬರೋಬ್ಬರಿ 78 ವರ್ಷ ವಯಸ್ಸು. ಅವರ ಬೀದಿನಾಯಿಗಳ ಸಲಹುವ ಕಾಯಕಕ್ಕೆ ಮೂವತ್ತು ವರ್ಷ.
ಬೀದಿನಾಯಿಗಳನ್ನು ದೇವರೆಂದು ಭಾವಿಸಿ ಆರಾಧಿಸುವ ಈ ದಂಪತಿ, ಮಾರುತಿ ಚಾರಿಟೇಬಲ್ ಟ್ರಸ್ಟ್ ಎಂಬ ಹೆಸರಿನಲ್ಲಿ ನಾಯಿಗಳನ್ನು ಸಲಹುತ್ತಿದ್ದಾರೆ. ಇವರ ಬಳಿ ನಾನಾ ಜಾತಿಗೆ ಸೇರಿದ, ಜಾತಿಯೇ ಇಲ್ಲದ, ಕುರುಡ, ರೋಗಗ್ರಸ್ತ, ಕುಂಟ, ಕಿವಿ ಕತ್ತರಿಸಿದ ಹೀಗೆ ಹಲವು ಬಗೆಯ ಅಂಗವಿಕಲ ನಾಯಿಗಳಿವೆ. ಅವುಗಳ ಆರೈಕೆಗೆ ಐವರು ಸಿಬ್ಬಂದಿಗಳಿದ್ದಾರೆ. ಒಬ್ಬ ಡಾಕ್ಟರ್ ಇದ್ದಾರೆ. ಎಲ್ಲಾ ನಾಯಿಗಳಿಗೂ ಸಂತಾನ ಹರಣ ಚಿಕಿತ್ಸೆ ಮಾಡಲಾಗಿದೆ. ಕಾಯಿಲೆಗಳಿಂದ ನರಳುತ್ತಿರುವ ನಾಯಿಗೆ ಇವರೇ ಆರೈಕೆ ಮಾಡುತ್ತಾರೆ. ಆ ನಾಯಿಯಿಂದ ಮುಖವನ್ನೆಲ್ಲ ನೆಕ್ಕಿಸಿಕೊಂಡು ಅದರ ಪ್ರೀತಿ ಅನುಭವಿಸುತ್ತಾರೆ. ಯಾವುದೇ ಬೀದಿನಾಯಿ ಅಪಘಾತಕ್ಕೀಡಾದರೆ ಇಥವಾ ಆಹಾರವಿಲ್ಲದೆ ಕಂಗೆಟ್ಟರೆ ಇವರೇ ಪೋಷಕರಾಗುತ್ತಾರೆ. ತೀವ್ರವಾಗಿ ಗಾಯಗೊಂಡರೆ ಸ್ವತಃ ಮನೆಯಲ್ಲಿಯೇ ಕೆಲದಿನ ಇವರ ಪತ್ನಿ ಶಾಂತ ಆರೈಕೆ ಮಾಡುತ್ತಾರೆ. ನಂತರ ಕೇಂದ್ರಕ್ಕೆ ಬಿಡಲಾಗುತ್ತದೆ.
ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿರುವ ಕೊಡತಿಹಳ್ಳಿಯಲ್ಲಿರುವ ಇವರ ನಾಯಿಗಳ ಪುನರ್ವಸತಿ ಕೇಂದ್ರ 1,600 ಅಡಿ ವಿಸ್ತೀರ್ಣವಿದೆ. ಎಲ್ಲಾ ನಾಯಿಗಳಿಗೂ ಪ್ರತಿದಿನ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಕೆಲ ಸ್ವಯಂ ಸೇವಕರು ಆಗಮಿಸಿ ನಾಯಿಗಳಿಗೆ ಸ್ನಾನ ಮಾಡಿಸುತ್ತಾರೆ. ಕೆಲವರು ಹಣಕಾಸಿನ ನೆರವು ನೀಡುತ್ತಾರೆ. ಮಾಸಿಕ 80 ಸಾವಿರ ಆಹಾರಕ್ಕೆ ವೆಚ್ಚವಾಗುತ್ತದೆ. ವೃದ್ಧಾಪ್ಯಕ್ಕೆ ಮೀಸಲಿಟ್ಟ ಹಣದಿಂದ ಇದನ್ನು ಭರಿಸುತ್ತಿದ್ದೇನೆ ಎನ್ನುತ್ತಾರೆ. ಬಿಬಿಎಂಪಿ ಅಥವಾ ಸರ್ಕಾರದಿಂದ ಯಾವ ಸಹಾಯವೂ ಇಲ್ಲ.
ತಮ್ಮ ನಂತರ ಈ ನಾಯಿಗಳು ಅನಾಥವಾಗುತ್ತವೆ ಎಂಬ ಭಯ ಇವರಿಗಿದೆ. ಆದ್ದರಿಂದ ಇವರ ಬಳಿ ಇರುವ ನಾಯಿಗಳ ಜವಾಬ್ದಾರಿ ವಹಿಸಿಕೊಳ್ಳುವವರು, ಸ್ವಯಂಸೇವಕರು ಬೇಕಾಗಿದ್ದಾರೆ. ದಾನಿಗಳ ಅವಶ್ಯಕತೆ ಕೂಡ ಇದೆ. ಈ ನಿಸ್ವಾರ್ಥ ಸಮಾಜ ಸೇವಕರನ್ನು ಅಭಿನಂದಿಸಲು 94802 12330ಗೆ ಸಂಪರ್ಕಿಸಬಹುದು.

- ಅಚ್ಯುತಕುಮಾರ ಯಲ್ಲಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.