ಬೈಟುಕಾಫಿ

ಆಶ್ಚರ್ಯಕರ ಗುರುವಿಗೆ ಕುಶಲಶಿಷ್ಯ!

Published On :

ನರೇಂದ್ರನು ದಕ್ಷಿಣೇಶ್ವರಕ್ಕೆ ಬರುವುದು ತಡವಾದರೆ ರಾಮಕೃಷ್ಣರು ವ್ಯಾಕುಲಗೊಳ್ಳುತ್ತಿದ್ದರು; ಜಗನ್ಮಾತೆಯಲ್ಲಿ ಮೊರೆಯಿಡುತ್ತಿದ್ದರು. ಅವನು ಬಂದನೆಂದರೆ ಆನಂದದಿಂದ ಸಮಾಧಿಸ್ಥರಾಗಿಬಿಡುತ್ತಿದ್ದರು. ದಿನಕಳೆದಂತೆ ಅವರಿಬ್ಬರ ಅನ್ಯೋನ್ಯ ಪ್ರೇಮ ಭಕ್ತರಿಗೆ ಸಾಮಾನ್ಯವಾಗಿಬಿಟ್ಟಿತು. ಹೀಗಿರುವಾಗ ನರೇಂದ್ರ ತುಂಬಾ ದಿನಗಳಿಂದ ದಕ್ಷಿಣೇಶ್ವರಕ್ಕೆ ಬಂದಿರಲಿಲ್ಲ. ಅವನನ್ನು ಕಾಣಲು ರಾಮಕೃಷ್ಣರು ಕಾತರರಾಗಿದ್ದರು. ಆಗ ಅವರೇ ಕೊಲ್ಕತಾ ನಗರಕ್ಕೆ ಹೋಗುವ ಸಂದರ್ಭ ಒದಗಿಬಂತು.
ರಾಮಕೃಷ್ಣರು ಕೊಲ್ಕತದ ರಾಮಚಂದ್ರದತ್ತನ ಮನೆಗೆ ಆಗಮಿಸಿದರು. ಬಂದವರೇ ನೆರೆದಿದ್ದ ಭಕ್ತರ ಗುಂಪಿನಲ್ಲಿ ಹುಡುಕುತ್ತಾ, 'ನರೇನ್ ಎಲ್ಲಿ ಕಾಣುತ್ತಿಲ್ಲವಲ್ಲ, ನಾನವನನ್ನು ನೋಡಲೇಬೇಕು, ಅವನನ್ನು ಬೇಗನೇ ಕರೆತನ್ನಿ' ಎಂದರು. ಶಿಷ್ಯರು ನರೇಂದ್ರನ ಮನೆಗೆ ಹೋದಾಗ ಆತ ಮಲಗಿಕೊಂಡಿದ್ದ. ತಲೆನೋವಿನಿಂದ ನರಳುತ್ತಿದ್ದ. ಬರಲು ಸಾಧ್ಯವಾಗುತ್ತಿಲ್ಲ, ನನ್ನ ಪರವಾಗಿ ಕ್ಷಮೆ ಕೋರಿ ಎಂದ. ಶಿಷ್ಯರು ಬಿಡಬೇಕಲ್ಲ, ನರೇಂದ್ರ ಬಂದು ರಾಮಕೃಷ್ಣರಿಗೆ ಪ್ರಣಾಮ ಮಾಡುತ್ತಲೇ ಅವರು ಅತ್ಯಂತ ವಾತ್ಸಲ್ಯದಿಂದ ತಮ್ಮೆರಡೂ ಕೈಗಳಿಂದ ಅವನ ತಲೆಯನ್ನು ಮುಟ್ಟಿ ಹರಸಿದರು. ಮರುಕ್ಷಣವೇ ನರೇಂದ್ರ ಕೂಗಿಕೊಂಡ 'ಏನು ಮಾಡಿದಿರಿ ನೀವು? ನನ್ನ ತಲೆಶೂಲೆ ಹೊರಟುಹೋಯಿತು'. ಸೇರಿದ್ದ ಭಕ್ತರೆದುರಿಗೆ ಅದ್ಭುತ ನಡೆದುಹೋಯಿತು. ಗುರುಗಳ ಅಪೇಕ್ಷೆಯಂತೆ ನರೇಂದ್ರ ತನ್ನ ಗಾನಸುಧೆಯನ್ನು ಹರಿಸಿದ. ರಾಮಕೃಷ್ಣರು ಭಾವಸ್ಥರಾದರು. ಗುರುವಿಗೆ ಕುಶಲಶಿಷ್ಯ ಸಿಕ್ಕಿದ್ದು ಅದ್ಭುತ ಕಾರ್ಯ ಸಾಧನೆಗೆ ನಾಂದಿಯಾಯಿತು.

-ಆನಂದ ಎಸ್.ಎನ್.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.