ಬೈಟುಕಾಫಿ

ಅಮೆರಿಕನ್ನರ ನಿದ್ದೆ ಕೆಡಿಸಿದ್ದು ಯಾವುದು?

Published On :

ಆಲಿವ್ ಎಣ್ಣೆಯ ಉಪಯೋಗ ನಮಗೆ ಗೊತ್ತಿರಲಾರದ್ದೇನಲ್ಲ. ಅಡುಗೆಗೆ, ಸೌಂದರ್ಯವರ್ಧಕವಾಗಿ ಇದರ ಬಳಕೆ ಇದೆ. ಹಳೆ ಕಾಲದಲ್ಲಿ ದೀಪಗಳಿಗೂ ಇದನ್ನು ಉಪಯೋಗಿಸುತ್ತಿದ್ದರಂತೆ. ಸಾಬೂನುಗಳ ತಯಾರಿಕೆಯಲ್ಲೂ ಇದರ ಬಳಕೆ ಉಂಟು. ಔಷಧೀಯವಾಗಿ ತ್ವಚೆಯನ್ನು ಸುಂದರವಾಗಿಡಲು, ಕೆಲವು ತೆರನಾದ ಕ್ಯಾನ್ಸರ್ ವಿರುದ್ಧ ಹೋರಾಡಲು, ತ್ವಚೆಯನ್ನು ಚೆನ್ನಾಗಿಟ್ಟುಕೊಳ್ಳಲು ಆಲಿವ್ ಎಣ್ಣೆಯನ್ನು ಬಳಸುವುದುಂಟು. ಆದರೆ ಇದು ಹೃದ್ರೋಗಿಗಳಿಗೂ ಬಹಳ ಉಪಯುಕ್ತ ಎನ್ನುವುದು ಅಷ್ಟಾಗಿ ಗೊತ್ತಿರಲಿಕ್ಕಿಲ್ಲ.
ಇದೊಂದು ಬಗೆಯ ಹಣ್ಣು. ಮೂಲತಃ ಮೆಡಿಟರೇನಿಯನ್ ಪ್ರದೇಶದ್ದು. ಗ್ರೀಸ್, ಇಟಲಿ, ಸ್ಪೇನ್, ದಕ್ಷಿಣ ಫ್ರಾನ್ಸ್ ಮೊದಲಾದ ದೇಶಗಳಲ್ಲಿನ ಮಂದಿ ಅಮೆರಿಕದವರಿಗಿಂತ ಅಧಿಕ ಪ್ರಮಾಣದಲ್ಲಿ ಕೊಬ್ಬಿನ ಪದಾರ್ಥಗಳನ್ನು ಸೇವಿಸುತ್ತಾರೆ. ಆದರೆ ಅವರಲ್ಲಿ ಹೃದ್ರೋಗಿಗಳ ಸಂಖ್ಯೆ ಬಹಳ ಕಡಿಮೆ. ಸಹಜವಾಗಿ ಅಮೆರಿಕದ ಹೃದ್ರೋಗ ತಜ್ಞರು ಇದರ ಬೆನ್ನು ಹತ್ತಿದರು. ಆಲಿವ್ ಮೆಡಿಟರೇನಿಯನ್ ಪ್ರದೇಶದವರ ಆರೋಗ್ಯದ ಕೀಲಿಕೈ ಎನ್ನುವುದು ಗೊತ್ತಾದದ್ದು ಆಗಲೇ. ಸಂಶೋಧನೆ ಉದ್ದೇಶಕ್ಕಾಗಿ 15 ವರ್ಷಗಳ ಅಂಕಿ-ಅಂಶಗಳನ್ನು ತಜ್ಞರು ಸಂಗ್ರಹಿಸಿದರು. ಪ್ರತಿ 10 ಸಾವಿರ ಜನರಲ್ಲಿ ಮೆಡಿಟರೇನಿಯನ್ ಪ್ರದೇಶದ 38 ಜನ ಮಾತ್ರ ಹೃದ್ರೋಗಕ್ಕೆ ತುತ್ತಾಗಿದ್ದರು. ಆದರೆ ಅಮೆರಿಕದಲ್ಲಿ ಈ ಪ್ರಮಾಣ 773. ಅಂದರೆ ಸುಮಾರು 20 ಪಟ್ಟು ಅಧಿಕ!
ಆಲಿವ್ ಎಣ್ಣೆಯಲ್ಲಿ ಮೊನೊಸ್ಯಾಚುರೇಟೆಡ್ ಕೊಬ್ಬು ಅಧಿಕ ಪ್ರಮಾಣದಲ್ಲಿರುತ್ತದೆ. ಎಲ್‌ಡಿಎಲ್ ಕೊಲೆಸ್ಟಾರಲ್ ಅನ್ನು ನಿಯಂತ್ರಿಸುತ್ತದೆ. ಆ ಮೂಲಕ ರಕ್ತನಾಳಗಳ ಸ್ನೇಹಿತನಾಗಿ ಕೆಲಸ ಮಾಡುತ್ತದೆ. ಹೀಗಾಗಿ ಸುಗಮ ರಕ್ತ ಸಂಚಾರಕ್ಕೆ ಇದು ಅತ್ಯುತ್ತಮವಾದದ್ದು. ಮೆಡಿಟರೇನಿಯನ್ ಪ್ರದೇಶದ ಜನ ಪ್ರಾಣಿಜನ್ಯ ಆಹಾರಗಳನ್ನು ಅಧಿಕವಾಗಿ ಸೇವಿಸಿದರೂ ಅವರು ಕೊಬ್ಬಿನಿಂದ ಪಾರಾಗಲು ಇದ್ದ ಉಪಾಯ ಎಂದರೆ ಆಲಿವ್! ಇದು ಅವರ ಆಹಾರ ಪದ್ಧತಿಯಲ್ಲಿ ಪರಂಪರಾಗತವಾಗಿ ನಡೆದು ಬಂದದ್ದು. 'ಮೊನೊಸ್ಯಾಚುರೇಟೆಡ್ ಕೊಬ್ಬಿನ ಪದಾರ್ಥಗಳನ್ನು ಹೆಚ್ಚು ಸೇವಿಸುವುದು ಆರೋಗ್ಯಕ್ಕೆ ಯಾವಾಗಲೂ ಒಳ್ಳೆಯದು' ಎನ್ನುವ ಸಲಹೆಯನ್ನು ಈಗಿನ ತಜ್ಞರು ನೀಡುತ್ತಿದ್ದಾರೆ. ಇದು ಅಲ್ಲಿ ಲಾಗಾಯ್ತಿನಿಂದಲೇ ಚಾಲ್ತಿಯಲ್ಲಿತ್ತು. ಆಲಿವ್ ಎಣ್ಣೆ ಅವರ ಆಹಾರದ ಭಾಗ. ಇದರ ಹಣ್ಣಿನ ರಸ ತೆಗೆದು ಕುಡಿಯುವುದೂ ಉಂಟಂತೆ. ಇಟಲಿಯಲ್ಲಿ 'ಆಲಿವ್ ಆಯಿಲ್ ಥೆರಪಿ'ಯೂ ಇದೆ ಎಂದು ಕೇಳಿದ್ದೇನೆ.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.