ಬೈಟುಕಾಫಿ

ಕೃತಜ್ಞತೆಯೆಂಬ ರತ್ನ

Published On :

ಕೆಲವರನ್ನು ನೋಡಿ. ತಮಗೆ ಬೇಕಾದ ಕೆಲಸವನ್ನು ಎಲ್ಲರಿಂದಲೂ ಮುಲಾಜಿಲ್ಲದೆ ಮಾಡಿಸಿಕೊಳ್ಳುತ್ತಾರೆ. ಅದರ ಲಾಭವನ್ನು ಪಡೆದುಕೊಂಡು ಕೈಬೀಸಿ ಬೆನ್ನು ತಿರುಗಿಸಿ ನಡೆದು ಬಿಡುತ್ತಾರೆ. ಇವರು ಸ್ವಾರ್ಥಿಗಳಷ್ಟೇ ಅಲ್ಲ, ಕೃತಜ್ಞತೆ ಎಂಬ ಗುಣವನ್ನು ಅರಿಯದವರು ಕೂಡ ಆಗಿರುತ್ತಾರೆ.
ಕೃತಜ್ಞತೆ ಮಾನವನ ಬಹು ದೊಡ್ಡ ಗುಣಗಳಲ್ಲೊಂದು. ನಾವು ನಮ್ಮ ಜೀವಮಾನವಿಡೀ ಇನ್ನೊಬ್ಬರನ್ನು ಯಾವುದ್ಯಾವುದೋ ಕಾರಣಗಳಿಗಾಗಿ ಅವಲಂಬಿಸಿಯೇ ಇರಬೇಕಾಗುತ್ತದೆ. ಇಲ್ಲಿ ಯಾರೊಬ್ಬರೂ ದ್ವೀಪಗಳಲ್ಲ. ಯಾರದೂ ನೆರವಿಲ್ಲದೆ ಇಲ್ಲಿ ಯಾರೂ ಬದುಕಿದ ಉದಾಹರಣೆಗಳಿಲ್ಲ. ಸ್ವತಂತ್ರವಾಗಿ ಹುಟ್ಟಿ ಬೆಳೆದು ಮನುಷ್ಯನಿಗೆ ನೆರಳು, ಫಲ ನೀಡುವ ಮರ ಕೂಡ ಆಧರಿಸಿದ ಭೂಮಿತಾಯಿಗೆ ಕೃತಜ್ಞವಾಗಿರುತ್ತದೆ. ನಮ್ಮೆಲ್ಲರನ್ನು ಒಂದಿಲ್ಲೊಂದು ಬಗೆಯಲ್ಲಿ ಋಣಿಗಳನ್ನಾಗಿ ಮಾಡಿರುವ ಈ ಭೂಮಿ ಕೂಡ, ಸೂರ್ಯನ ಬೆಳಕಿಗೆ, ಆತನ ಗುರುತ್ವಾಕರ್ಷಣೆಗೆ ಕೃತಜ್ಞವಾಗಿರುತ್ತದೆ.
ಸಾಕಿದ ನಾಯಿ ಕೂಡ ತನ್ನ ಯಜಮಾನನಿಗೆ, ಆಹಾರದ ತುಣುಕು ಎಸೆಯುವವನಿಗೆ ಜೀವಮಾನ ಪರ್ಯಂತ ಕೃತಜ್ಞವಾಗಿರುತ್ತದೆ. ಹಾಗಿರುವಾಗ, ಸಹಾಯ ಮಾಡಿದವನಿಗೆ ಪ್ರತಿಯಾಗಿ ಯಾವ ಪ್ರತಿಫಲವನ್ನಾದರೂ ನೀಡುವುದು ಹೋಗಲಿ, ಅದನ್ನು ನೆನೆಪಿಸಿಕೊಳ್ಳಲೂ ಹಿಂಜರಿಯುವ ಮನುಷ್ಯನ ಧೂರ್ತತೆಯನ್ನು ಏನೆಂದು ವರ್ಣಿಸೋಣ?
ದೊಡ್ಡ ಸಹಾಯಗಳೇ ಆಗಿರಬೇಕೆಂದೇನಿಲ್ಲ. ಚಿಕ್ಕಪುಟ್ಟ ಕೆಲಸಗಳನ್ನು ಮಾಡಿಸಿಕೊಂಡರೂ, ಅದಕ್ಕೆ ಪ್ರತ್ಯುಪಕಾರವನ್ನು ಮಾಡುವ ಗುಣ ನಮಗಿರಬೇಕು. ಅದು ಸಾಧ್ಯವಾಗದಿದ್ದರೆ, ಆ ಸಹಜೀವಿಗೆ ಕನಿಷ್ಠ ಥ್ಯಾಂಕ್ಸ್ ಎನ್ನುವ ಸಜ್ಜನಿಕೆಯಾದರೂ ಇರಬೇಕು. ಹಾಗೆಂದು ನಾವು ಇನ್ನೊಬ್ಬರಿಗೆ ಸಹಾಯ ಮಾಡುತ್ತೇವೆಂದಿಟ್ಟುಕೊಳ್ಳಿ. ಆದರೆ ಅದಕ್ಕಾಗಿ ನಾವು ಅವರಿಂದ ಇಂಥದೇ ಕೃತಜ್ಞತೆಯನ್ನು ಜೀವಮಾನದಾದ್ಯಂತ ನಿರೀಕ್ಷಿಸುವುದು ತಪ್ಪು. ಮಾತ್ರವಲ್ಲ, ಇದು ಸ್ವಾರ್ಥ ಕೂಡ. ಕೃತಜ್ಞತೆ ತೋರಿಸುವುದು ಹಿರಿತನ ಹೊರತು, ಕೃತಜ್ಞತೆ ನಿರೀಕ್ಷಿಸುವುದಲ್ಲ.
ಮನುಷ್ಯನ ಕೈಗಳು ಸದಾ ಚಾಚಿಕೊಂಡೇ ಇರುತ್ತವೆ. ಆಧರಿಸುವ ಕೈಗಳು ಕೆಲವಾದರೆ, ಆಧಾರಕ್ಕಾಗಿ ಚಡಪಡಿಸುತ್ತಿರುವ ಕೈಗಳು ಕೆಲವು. ಕೆಲವೊಮ್ಮೆ ನಾವು ಆಧಾರಕ್ಕಾಗಿ, ಸಹಾಯಕ್ಕಾಗಿ ಒದ್ದಾಡುತ್ತಿರುತ್ತೇವೆ. ಇನ್ನು ಕೆಲವೊಮ್ಮೆ ಅಂಥವರಿಗೆ ನೆರವಾಗಬಲ್ಲ ಸುಸ್ಥಿತಿಯಲ್ಲಿರುತ್ತೇವೆ. ನೆರವು ನೀಡುವ ಕೈಗಳೇ ನೆರವು ಪಡೆಯಲೂ ಅರ್ಹ ಎಂದು ನಾವು ನೆನಪಿಟ್ಟುಕೊಳ್ಳಬೇಕು.

- ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.