ಪ್ರಕೃತಿಪ್ರಿಯೆ
ಹದಿನೇಳು ವಯಸ್ಸಿನ, ಕಾಡಿನ ಹಾದಿ ಹಿಡಿದ ಪ್ರಕೃತಿಯನ್ನು ಇದೀಗ ದೂರದ ಇಂಗ್ಲೆಂಡೂ ಕಂಡು ಬೆರಗಾಗಿದೆ. ಜತೆಗೆ ಪುರಸ್ಕರಿಸಿದೆ.

ಟಿವಿಯಲ್ಲಿ ಬಿಗ್ಬಾಸೇ 'ಹೌದು, ಸ್ವಾಮಿ' ಎನ್ನುತ್ತಿರಲಿ; ಕೋಟ್ಯಾಧಿಪತಿಯ ಕೊನೆಯ ಪ್ರಶ್ನೆಗೆ ಯಾರೋ ಉತ್ತರ ಲಾಕ್ ಮಾಡುತ್ತಿರಲಿ... ಅವಳಿಗೆ ಅವುಗಳ ಮೇಲೆ ಕ್ರೇಜ್ ಇಲ್ಲ. 'ಡಿಸ್ಕವರಿ' ಅಥವಾ 'ಎನಿಮಲ್ ಪ್ಲಾನೆಟ್'ನ ಯಾವುದೋ ಥ್ರಿಲ್ಲಿಂಗ್ ದೃಶ್ಯದೊಳಗೆ ಸದಾ ಮುಳುಗೇಳುವ ಆಕೆಗೆ ನಿತ್ಯದೂಟ, ತಿಂಡಿ, ಓದನ್ನು ನೆನಪಿಸುವುದು ಅಪ್ಪ- ಅಮ್ಮ. ಟಿವಿ ಪರದೆ ಮೇಲೆ ಎಗರಿ ಬರುವ ಹುಲಿಗಳ ಮೇಲೆ ಅವಳಿಗೆ ಭಯನೇ ಇಲ್ಲ. ಏಕೆಂದರೆ, ಎರಡು ಮೂರಡಿ ದೂರದಲ್ಲೇ ನಿರ್ಭಯವಾಗಿ ನಿಂತು ಅವಳು ಹುಲಿ ನೋಡಿದ್ದಾಳೆ. ಆ ಹುಲಿ ಮೀಸೆಯಗಲಿಸಿ, ಕಣ್ಣು ಕೆಂಪು ಮಾಡಿ ಗರ್ಜಿಸಿದರೂ ಲೆಕ್ಕಿಸದೆ ಕೈಯಲ್ಲಿದ್ದ 'ನಿಕಾನ್ ಡಿ- 300' ಕ್ಯಾಮೆರಾದಿಂದ ಆ ರುದ್ರರೋಮಾಂಚನವನ್ನು ಸೆರೆಹಿಡಿದಿದ್ದಾಳೆ.
ಅವಳು ಪ್ರಕೃತಿ. ಹಾಗೆಯೇ ಪ್ರಕೃತಿಪ್ರಿಯೆ. ಮಲ್ಲೇಶ್ವರದ ಎಂಇಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ. ಕ್ಯಾಮೆರಾ ಹಿಡಿದು ಕಾಡು ಮರಗಳ ನಡುವೆ ಹಕ್ಕಿ- ಪ್ರಾಣಿಗಳನ್ನು ಹುಡುಕುತ್ತಾ ಸಾಗುವುದು ಪ್ರಕೃತಿಯ ಪ್ರವೃತ್ತಿ. ವೀಕೆಂಡ್ನಲ್ಲಿ ಮಾಲ್ಗಳನ್ನು ಸುತ್ತುವ ಬದಲು ನ್ಯಾಶನಲ್ ಪಾರ್ಕ್ಗಳಿಗೆ ಹೋಗುವ ಪ್ರಕೃತಿಗೆ ಅಪ್ಪನಿಂದ ಫೋಟೋಗ್ರಫಿ ಹುಚ್ಚು ಬಳುವಳಿಯಾಗಿ ಬಂತು. ತಂದೆ ಎಚ್.ವಿ. ಪ್ರವೀಣ್ಕುಮಾರ್ ಹೆಸರಾಂತ ವನ್ಯಜೀವಿ ಛಾಯಾಚಿತ್ರಗಾಹಕ.
ಪ್ರಕೃತಿಗೊಂದು ಹೆಗ್ಗರಿ
ಹದಿನೇಳು ವಯಸ್ಸಿನ, ಕಾಡಿನ ಹಾದಿ ಹಿಡಿದ ಪ್ರಕೃತಿಯನ್ನು ಇದೀಗ ದೂರದ ಇಂಗ್ಲೆಂಡೂ ಕಂಡು ಬೆರಗಾಗಿದೆ. ಜತೆಗೆ ಪುರಸ್ಕರಿಸಿದೆ. ಇಂಗ್ಲೆಂಡಿನ ಪ್ರತಿಷ್ಠಿತ 'ರಾಯಲ್ ಫೋಟೋಗ್ರಾಫಿಕ್ ಸೊಸೈಟಿ' ಆಕೆಗೆ ಸದಸ್ಯತ್ವ ಕೊಟ್ಟಿದೆ. ಪ್ರಕೃತಿ ಆ ಸೊಸೈಟಿಯಲ್ಲೇ ಅತ್ಯಂತ ಕಿರಿಯ ಸದಸ್ಯೆ. ವೃತ್ತಿಪರ ಮತ್ತು ಹವ್ಯಾಸಿ ಛಾಯಾಚಿತ್ರಕಾರರನ್ನು ಸದಾ ಪ್ರೋತ್ಸಾಹಿಸುವ ಸೊಸೈಟಿ, ವಿಶೇಷ ಗುಣಮಟ್ಟದ ಚಿತ್ರಕಾರರನ್ನಷ್ಟೇ ಗುರುತಿಸುತ್ತದೆ. ನಾನಾ ವಿಭಾಗಗಳಲ್ಲಿ ಛಾಯಾಚಿತ್ರಗಳನ್ನು ಆಹ್ವಾನಿಸಿ, ಬಂದ ಲಕ್ಷ ಲಕ್ಷ ಚಿತ್ರಗಳಲ್ಲಿ ಬೆರಳೆಣಿಕೆಯ ಝಲಕ್ಗಳನ್ನಷ್ಟೇ ಆರಿಸಿ ಆ ಫೋಟೋಗ್ರಾಫರ್ಗೆ ಸದಸ್ಯತ್ವ ನೀಡುತ್ತದೆ. ಹೀಗೆ 'ಪರಿಸರ ಕಥನ' (ನ್ಯಾಚುರಲ್ ಹಿಸ್ಟರಿ) ವಿಭಾಗದಲ್ಲಿ ಪ್ರಕೃತಿಯ ಚಿತ್ರಗಳು ಸೊಸೈಟಿಯ ಗಮನ ಸೆಳೆದವು.
ಆ್ಯಕ್ಷನ್ ಚಿತ್ರ ಇಷ್ಟ
ಸ್ಥಿರ ಚಿತ್ರಗಳ ಬಗ್ಗೆ ಅಷ್ಟು ಆಸಕ್ತಿ ತೋರದ ಪ್ರಕೃತಿಗೆ ಆ್ಯಕ್ಷನ್ ಚಿತ್ರಗಳೆಂದರೆ ತುಂಬಾ ಇಷ್ಟ. ಆಕೆ ಸೆರೆ ಹಿಡಿಯುವುದೂ ಅಂಥದ್ದನ್ನೇ. ಧೂಳಲ್ಲಿ ಹೆಜ್ಜೆ ಹುಗಿದು ಛಂಗನೆ ಹಾರುವ ಚಿರತೆ, ಸಂಗಾತಿಯನ್ನು ಕಿಚಾಯಿಸಿ ಓಡಿದ ಜಿಂಕೆ, ಗೂಡು ಬಿಟ್ಟು ಹಾರುತ್ತಿರುವ ಹಕ್ಕಿ... ಇಂಥ ಸಂದರ್ಭಗಳನ್ನೇ ಈಕೆ ಸೆರೆಹಿಡಿಯುತ್ತಾಳೆ.
ಸುತ್ತಾಡುವ ಹುಡುಗಿ
ಪ್ರಕೃತಿ ಯಾವ ರಜಾದಿನಗಳನ್ನೂ ಟೈಂಪಾಸ್ ಆಗಿ ಪರಿವರ್ತಿಸಿಕೊಂಡಿಲ್ಲ. ತಡೋಬಾ (ಮಹಾರಾಷ್ಟ್ರ), ರೊಲ್ಲಪಡು (ಆಂಧ್ರಪ್ರದೇಶ) ಬಂಡಿಪುರ, ದರೋಜಿ, ರಂಗನತಿಟ್ಟು, ಕೊಕ್ಕರೆ ಬೆಳ್ಳೂರು ಇಲ್ಲೆಲ್ಲ ಫೋಟೋ ಕ್ಲಿಕ್ಕಿಸಲು ತೆರಳಿದ್ದಾಳೆ. ಅದ್ಭುತವೇ ಎನ್ನಬಹುದಾದ 200ಕ್ಕೂ ಅಧಿಕ ಚಿತ್ರಗಳ ಒಡತಿಯೂ ಹೌದು.
ಬಹುಮುಖಿ ವ್ಯಕ್ತಿತ್ವ
ಕೇವಲ ಫೋಟೋಗ್ರಫಿ ಅಷ್ಟೇ ಅಲ್ಲ. ಪ್ರಕೃತಿಯ ಒಳಗೊಬ್ಬಳು ಅಥ್ಲೀಟ್ ಇದ್ದಾಳೆ. ಅವಳೂ ಸಾಕಷ್ಟು ದಾಖಲೆ ಬರೆದಿದ್ದಾಳೆ. ಭರತನಾಟ್ಯ, ಕರ್ನಾಟಕ ಸಂಗೀತ ಈಕೆಯ ಇತರೆ ಹವ್ಯಾಸ. ಬೆಂಗಳೂರು, ಜೋಧ್ಪುರ, ಜೈಪುರ, ಇಂಧೋರ್, ಲಖ್ನೌ, ಕೋಲ್ಕತ್ತಾಗಳಲ್ಲಿ ಪ್ರಕೃತಿ ತೆಗೆದ ಚಿತ್ರಗಳು ಪ್ರದರ್ಶನ ಕಂಡಿವೆ.
ಓದಿಗಷ್ಟೇ ಮೀಸಲಿರುವ ಈಗಿನ ವಿದ್ಯಾರ್ಥಿ ವ್ಯಕ್ತಿತ್ವಗಳಿಗೆ, ಪ್ರಕೃತಿಯ ಪ್ರವೃತ್ತಿ ಮಾದರಿ ಆದರೆ ಚೆನ್ನ.
- ಮಿಲೀ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


