ಬೊಂಬು ಬ್ರಿಜ್

ಸೂರೀಮನೆಯನ್ನು ಮುಖ್ಯವಾಹಿನಿಯಿಂದ ದೂರವಿಟ್ಟಿದೆ ಶಾಲ್ಮಲಾ ಎಂಬ ನದಿ. ಬೇಸಿಗೆಯಲ್ಲಿ ನದಿ ಬತ್ತಿ ಹೋಗುವುದರಿಂದ ಅಂಥ ಸಮಸ್ಯೆಯೇನಿಲ್ಲ. ಆದರೆ ಮಳೆಗಾಲದಲ್ಲಿ ಈ ಊರಿನವರ ಜೀವನ ಬಹಳ ಅತಂತ್ರ. ಏಕೆಂದರೆ ಸುಮಾರು 70 ಅಡಿ ಅಗಲದ ನದಿಯನ್ನು ದಾಟಲು ಇಲ್ಲಿರುವುದು ಒಂದು ಕಾಲುಸಂಕ ಮಾತ್ರ. ಅದೂ ಇಲ್ಲಿನ ಜನರೇ ನಿರ್ಮಿಸಿಕೊಂಡದ್ದು. ಅಂದಹಾಗೆ ಈ ಕಾಲುಸಂಕಕ್ಕೀಗ 40 ವರ್ಷ.
ಅಲ್ಪ ಪ್ರಮಾಣದ ಗದ್ದೆಗಳ ಸಾಗುವಳಿ ಅಥವಾ ಕೂಲಿ ಮಾಡಿ ಬದುಕು. ಆರಕ್ಕೆ ಏಳದ, ಮೂರಕ್ಕೂ ಇಳಿಯದ ಜೀವನ. ಪ್ರತಿನಿತ್ಯದ ಕೆಲಸ, ಖರೀದಿ, ಶಾಲೆಗಳಿಗಾಗಿ 3 ಕಿ.ಮೀ. ನಡೆಯುವುದು ಅನಿವಾರ್ಯ. 'ಮೂರಲ್ಲ... ಮೂವತ್ತು ಕಿ. ಮೀ. ಆದರೂ ನಡೆಯಲೂ ಸಿದ್ಧ. ಆದ್ರೆ... ಮೂವತ್ತು ಮಾರಿನ ಹಳ್ಳ ದಾಟುವುದೇ ದೊಡ್ಡ ಕೆಲ್ಸ' ಎನ್ನುತ್ತಾರೆ ಸೂರೀಮನೆ ಊರಿನ ಜನ.
ಕಾಲು ಸಂಕವನ್ನು ಸಂಪೂರ್ಣವಾಗಿ ಬಿದಿರು ಹಾಗೂ ಕತ್ತದ ಬಳ್ಳಿಯಿಂದಲೇ ಕಟ್ಟಲಾಗಿದೆ. ನೆಲ ಮಟ್ಟದಿಂದ 30 ಅಡಿ ಎತ್ತರದಲ್ಲಿ 70 ಅಡಿ ಉದ್ದಕ್ಕಿರುವ ಈ ಸಂಕವನ್ನು ಯಾವುದೇ ಇಂಜಿನಿಯರ್ ಸಹಾಯವಿಲ್ಲದೆ ಗ್ರಾಮಸ್ಥರೇ ನಿರ್ಮಿಸಿಕೊಂಡದ್ದು. ಸಂಕದ ಅಕ್ಕಪಕ್ಕ ವಿಶಾಲವಾಗಿ ಹರಡಿರುವ ಮರಗಳ ರೆಂಬೆಗಳೇ ಇದಕ್ಕೆ ಆಧಾರ ಸ್ತಂಭ. ಸಂಕಕ್ಕೆ ಕಬ್ಬಿಣದ ಸರಳಾಗಲಿ, ತಂತಿಯಾಗಲಿ ಇಲ್ಲ. ಅವುಗಳನ್ನು ಪಡೆಯುವ ಸಾಮರ್ಥ್ಯವೂ ಅವರಿಗಿಲ್ಲ ಅನ್ನಿ!
ಸೂರೀಮನೆ ಗ್ರಾಮಸ್ಥರಿಗೆ ಈ ಕಾಲು ಸಂಕ ಅನಿವಾರ್ಯ. ಒಂದನೇ ತರಗತಿಯ ಮಗುವಿನಿಂದ ಹಿಡಿದು 75ರ ವೃದ್ಧರು, ರೋಗಿಗಳು ಎಲ್ಲರಿಗೂ ಇದರಲ್ಲೇ ಓಡಾಟ. ಸೇತುವೆ ಇಲ್ಲದಿದ್ದರೆ ಸುಮಾರು 15 ಕಿ.ಮೀ. ದೂರ ಸುತ್ತಿತಿರುಗಿ ಮುಖ್ಯ ರಸ್ತೆಗೆ ಬರಬೇಕಾದ ಕಷ್ಟ. ಊರ ನಾಗರಿಕರು ಪ್ರತಿ ವರ್ಷವೂ ಜನಪ್ರತಿನಿಧಿಗಳನ್ನು ಕಂಡು ಸೇತುವೆಗಾಗಿ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಯಾರೂ ಸ್ಪಂದಿಸಿಲ್ಲ. ಕೆಲ ವರ್ಷಗಳಿಂದ ಉಮ್ಮಚ್ಗಿ ಗ್ರಾ.ಪಂ. ಕಾಲು ಸಂಕ ಕಟ್ಟಿಕೊಳ್ಳಲು 400 ರು. ಅನುದಾನ ನೀಡುತ್ತಿದೆ. ಅದು ಕತ್ತದ ಬಳ್ಳಿಗೂ ಸಾಲದು. ಸಂಕದ ಕಚ್ಚಾವಸ್ತು, ಕೂಲಿಗಳಿಗೆ ಪ್ರತಿವರ್ಷ ಮೂರ್ನಾಲ್ಕು ಸಾವಿರ ಖರ್ಚಾಗುತ್ತದೆ. ಅದನ್ನು ಊರಿನವರೇ ಭರಿಸಿಕೊಳ್ಳುತ್ತಿದ್ದೇವೆ ಎನ್ನುತ್ತಾರೆ ಇಲ್ಲಿನ ನಿವಾಸಿ ಜೋಸೆಫ್.
ಮಂತ್ರಿಗಳ ಮನೆ ಮುಂದೆ ಧರಣಿ ಹೂಡಲಿಲ್ಲ, ಚುನಾವಣೆ ಬಹಿಷ್ಕರಿಸಲಿಲ್ಲ, ತೆರಿಗೆಯನ್ನೂ ಬಾಕಿ ಇಟ್ಟುಕೊಂಡಿಲ್ಲ. ಆದರೂ ನಮ್ಮ ಧ್ವನಿ ಸರ್ಕಾರಕ್ಕೆ ಕೇಳುತ್ತಿಲ್ಲ ಯಾಕೆ? ಎಂಬುದಿವರ ಪ್ರಶ್ನೆ.
ಎಲ್ಲಿದೆ ಸೂರೀಮನೆ?
ಉ.ಕ. ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿರುವ ಕುಗ್ರಾಮ. ತಾಲೂಕು ಕೇಂದ್ರದಿಂದ 30 ಕಿ.ಮೀ. ದೂರದಲ್ಲಿ ತುಡುಗುಣಿ ಎಂಬ ಪುಟ್ಟ ಊರಿದೆ. ಅಲ್ಲಿಂದ ಎಡಕ್ಕೆ 3 ಕಿ.ಮೀ. ಕ್ರಮಿಸಿದರೆ ಸಿಗುತ್ತದೆ. ಈ ಪುಟ್ಟ ಹಳ್ಳಿ ಉಮ್ಮಚ್ಗಿ ಮತ್ತು ಕುಂದಗರ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. 20ಕ್ಕೂ ಹೆಚ್ಚು ಮನೆಗಳಿದ್ದು, 75ಕ್ಕೂ ಹೆಚ್ಚು ಜನ ನೆಲೆಸಿದ್ದಾರೆ.
- ಚಿತ್ರ-ಬರಹ: ಗಣಪತಿ ಹಾಸ್ಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


