ಚಂದ್ರಯಾನ
ಮೊಹ್ಮದ್ ಘೌರಿ ಎನ್ನುವ ಹೈಸ್ಕೂಲ್ ಟೀಚರ್ನ ಪ್ರೇರಣೆ ಇಲ್ಲದೆ ಹೋದರೆ ಬಹುಶಃ ಕನ್ನಡಿಗರಿಗೆ ಡಾ.ಸಿ.ಆರ್.ಚಂದ್ರಶೇಖರ್ ಎನ್ನುವ ಅನರ್ಘ್ಯ ರತ್ನವೊಂದು ಸಿಗದೇ..

ಮೊಹ್ಮದ್ ಘೌರಿ ಎನ್ನುವ ಹೈಸ್ಕೂಲ್ ಟೀಚರ್ನ ಪ್ರೇರಣೆ ಇಲ್ಲದೆ ಹೋದರೆ ಬಹುಶಃ ಕನ್ನಡಿಗರಿಗೆ ಡಾ.ಸಿ.ಆರ್.ಚಂದ್ರಶೇಖರ್ ಎನ್ನುವ ಅನರ್ಘ್ಯ ರತ್ನವೊಂದು ಸಿಗದೇ, ಚನ್ನಪಟ್ಟಣದ ಪ್ರಿಂಟಿಂಗ್ ಪ್ರೆಸ್ನಲ್ಲಿ ಕೆಲಸ ಮಾಡುವಂತೆ ಆಗಿರುತ್ತಿತ್ತು.
ಚನ್ನಪಟ್ಟಣ ತಾಲೂಕಿಗೆ ಎಸ್ಎಸ್ಎಲ್ಸಿಯಲ್ಲಿ ಮೊದಲು ಬಂದಿದ್ದ ಚಂದ್ರಶೇಖರ್ ಓದು ಸಾಕೆಂದು ಜೀವನೋಪಾಯಕ್ಕೆ ಇರುವ ಪ್ರಿಂಟಿಂಗ್ ಪ್ರೆಸ್ನಲ್ಲಿಯೇ ಕೆಲಸ ಮಾಡಲಾರಂಭಿಸಿದ್ದರು. 'ನೀನು ಮೈಸೂರಿಗೆ ಹೋಗಿ ಪಿಯುಸಿ ಓದಿ, ಡಾಕ್ಟರ್ ಆಗಲೇಬೇಕೆಂದು ಒತ್ತಾಯಿಸಿದ್ದು ಘೌರಿ ಮೇಷ್ಟ್ರು. ಅವರ ಬೆಂಬಲದಿಂದಲೇ ಇಂದು ಈ ಮನಶ್ಶಾಸ್ತ್ರಜ್ಞರಿಗೆ ಇಷ್ಟು ಒಳ್ಳೆ ಹೆಸರು ಮಾಡ್ಲಿಕ್ಕೆ ಸಾಧ್ಯವಾಗಿದ್ದು.
ಸಾಹಿತ್ಯದಲ್ಲಿಯೂ ಆಸಕ್ತಿ ಇದ್ದ ಚಂದ್ರಶೇಖರ್ಗೆ ಮನಶ್ಶಾಸ್ತ್ರವನ್ನೇ ತೆಗೆದುಕೊಳ್ಳಬೇಕೆಂದು ಆಸಕ್ತಿ ಮೂಡಿದ್ದು ವಿಚಿತ್ರವೇ. ತ್ರಿವೇಣಿಯವರ 'ಬೆಕ್ಕಿನ ಕಣ್ಣು', 'ಶರಪಂಜರ' 'ಮುಚ್ಚಿದ ಬಾಗಲು'ನಂಥ ಮಾನಸಿಕ ಕಾಯಿಲೆಯ ವಸ್ತುಸ್ಥಿತಿಯುಳ್ಳ ಕಾದಂಬರಿಗಳು ಹಾಗೂ ಎಂ. ಶಿವರಾಂ ಅವರ 'ಮನಮಂಥನ'ದಂಥ ಪುಸ್ತಕಗಳು ಇವರಿಗೆ ಮನಸ್ಸಿನ ಬಗ್ಗೆಯೇ ಓದುವಂತೆ ಮಾಡಿತು. ಸರಿ, ವಿಕ್ಟೋರಿಯಾ ಆಸ್ಪತ್ರೆಗೆ ಎಚ್.ಎಸ್.ನಾರಾಯಣ್ ಎನ್ನುವ ಮನಶ್ಶಾಸ್ತ್ರಜ್ಞರೊಬ್ಬರು ಬರುತ್ತಿದ್ದರು. ಅವರ ಸಹಾಯದಿಂದ ಅಲ್ಲಿಯೇ ಕೆಲಸ ಮಾಡಲು ಆರಂಭಿಸಿದರಂತೆ ಡಾ.ಚಂದ್ರಶೇಖರ್.
ಮಾಡಿದ ಕೆಲಸವನ್ನು ಖುಷ್, ಖುಷಿಯಾಗಿ ಮಾಡಿ, ಅದನ್ನು ಆನಂದಿಸುವುದರಿಂದ ಚಂದ್ರಶೇಖರ್ಗೆ ಈ ವೃತ್ತಿ ಯಾವತ್ತೂ ಹೆಕ್ಟಿಕ್ ಎನಿಸಿಲ್ವಂತೆ. ಈಗಿನ ಕಾಲದಲ್ಲಿ ಎಂಬಿಬಿಎಸ್ ಸೀಟ್ ಹಿಡಿಯುವಾಗಲಿಂದ ಹಿಡಿದು, ಕೊನೆಯರೆಗೂ ದುಡ್ಡಿಗೇ ಮಹತ್ವ ಕೊಡೋದು ಹೆಚ್ಚಾಗಿದೆ. ಅದರಿಂದ ಆತ್ಮತೃಪ್ತಿ ಸಿಗೋದು ಕಷ್ಟ ಎನ್ನುತ್ತಾರೆ ಈ ಮನಸ್ಸಿನ ತಜ್ಞ.
ಒತ್ತಡದಿಂದ ಮುಕ್ತರಾಗೋದಕ್ಕೆ ಓದೋದು, ಸಂಗೀತ ಕೇಳೋದು, ಪ್ರವಾಸ ಹೋಗುವಂಥ ಆರೋಗ್ಯಕಾರಿ ಹವ್ಯಾಸಗಳೂ ಇವರಿಗಿದೆ. ಅಲ್ಲದೇ ನಿರ್ವಂಚನೆಯಿಂದ ರೋಗಿಗಳ ಸೇವೆ ಮಾಡಿ, ರೋಗಿಗಳಿಗೆ ಹಾಗೂ ಅವರ ಕುಟುಂಬದವರಿಗೆ ಶೋಷಣೆ ಮಾಡದೇ ನೈತಿಕತೆ ರೂಢಿಸಿಕೊಂಡರೆ ಅದಕ್ಕಿಂತ ಸುಖ ಮತ್ತೊಂದಿಲ್ಲ ಎನ್ನುವುದು ಈ ಡಾಕ್ಟರ್ ಅಭಿಮತ.
ಎಂಎ ಸೈಕಾಲಜಿ ಓದಿರುವ ಸಹಧರ್ಮಿಣಿ ಡಿ.ಎಸ್.ರಾಜೇಶ್ವರಿ ಸಂಗೀತ ವಿದ್ವಾನ್ ಸಹ ಹೌದು. ಇವರಿಗೆ ವೃತ್ತಿಯಲ್ಲೂ ಸಹಕರಿಸುವ ಇವರು 20 ಮಕ್ಕಳಿಗೆ ಸಂಗೀತವನ್ನೂ ಹೇಳಿ ಕೊಡುತ್ತಾರಂತೆ.
ಶಿಕ್ಷಣ ಕ್ಷೇತ್ರದಂತೆ, ವೈದ್ಯ ವೃತ್ತಿಯೂ ಸೇವೆ ಮಾಡಲು ಉತ್ತಮ ಅವಕಾಶ ಇರುವ ಕ್ಷೇತ್ರ. ಕೇವಲ ದುಡ್ಡಿಗೆ ಬೆಲೆ ಕೊಡದೇ, ಮಾನವೀಯ ದೃಷ್ಟಿಯಿಂದ, ಪ್ರಾಮಾಣಿಕವಾಗಿ ಇಂದಿನ ವೈದ್ಯರು ಸೇವೆ ಸಲ್ಲಿಸಬೇಕು. ಆಗ ಸಮಾಜಕ್ಕೂ ಒಳ್ಳೆಯದು. ಅವರ ವೈಯಕ್ತಿಕ ಬೆಳವಣಿಗೆಯೂ ಸಾಧ್ಯವಾಗುತ್ತದೆ.
- ಡಾ.ಸಿ.ಆರ್.ಚಂದ್ರಶೇಖರ್, ಮನಶ್ಶಾಸ್ತ್ರಜ್ಞರು
-ನಿರುಪಮಾ ಕೆ.ಎಸ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


