ಸೇವೆ ಸಂಸಾರ
ಒಂದು ಕುಟುಂಬದ ಮೂರು ತಲೆಮಾರುಗಳು ರೋಗಿಗಳ ಸೇವೆಯಲ್ಲಿ ತೊಡಗಿಕೊಂಡಿರುವುದು, ಅನೇಕ ಮೊದಲು ಗಳುಳ್ಳ ಹಳೆಯ ಆಸ್ಪತ್ರೆ ಎನಿಸಿ...

ಒಂದು ಕುಟುಂಬದ ಮೂರು ತಲೆಮಾರುಗಳು ರೋಗಿಗಳ ಸೇವೆಯಲ್ಲಿ ತೊಡಗಿಕೊಂಡಿರುವುದು, ಅನೇಕ ಮೊದಲು ಗಳುಳ್ಳ ಹಳೆಯ ಆಸ್ಪತ್ರೆ ಎನಿಸಿಕೊಂಡಿರುವುದು ವಿಶೇಷ ಎನಿಸುತ್ತಿದೆಯೇ?
ಜಯನಗರದ ರಾಮಕೃಷ್ಣ ನರ್ಸಿಂಗ್ ಹೋಂ, 70ರ ದಶಕದಲ್ಲಿ ಆರಂಭವಾದ ಆಸ್ಪತ್ರೆಗಳಲ್ಲೊಂದು. ಕುಟುಂಬದ ಮೂರು ತಲೆಮಾರಿನವರೂ ಇಲ್ಲಿ ಸಂಪೂರ್ಣವಾಗಿ ತೊಡಗಿಕೊಂಡವರು. ಇದರ ಸಂಸ್ಥಾಪಕರು ದಿ.ಡಾ. ಐ.ಆರ್.ಸತ್ಯನಾರಾಯಣ ಶೆಟ್ಟಿ. 'ಮದ್ರಾಸಿನಲ್ಲಿ ಸೇವೆ ಶುರುಮಾಡಿ, ಆಂಧ್ರ, ಮೈಸೂರುಗಳಲ್ಲಿ ವೃತ್ತಿಗೈದು, ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್ಗಿರಿ ಮಾಡಿ ನಿವೃತ್ತಿ ಪಡೆದ ಬಳಿಕ ನರ್ಸಿಂಗ್ಹೋಂ ಕಟ್ಟಿದರು' ಎನ್ನುತ್ತಾರೆ ಅವರ ಪತ್ನಿ ಶೋಭಾ ಶೆಟ್ಟಿ. ಮಾರಾಟಕ್ಕಿಟ್ಟ ಆಸ್ಪತ್ರೆಯೊಂದರ ಸಾಮಗ್ರಿಗಳನ್ನು ತಂದು 5 ಬೆಡ್ಡಿನ ಆಸ್ಪತ್ರೆ ಶುರು. ಬೆಡ್ಡು. ಓ.ಟಿ. ರೆಡಿ ಮಾಡುವುದು ಮುಂತಾದ ಕೆಲಸ ಶೋಭಾ ಅವರೇ ಮಾಡುತ್ತಿದ್ದರು. ಅದೇ ಶ್ರದ್ಧೆ, ಆಸಕ್ತಿಯಿಂದ ಈಗಲೂ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ 82ರ ಶೋಭಾ ಶೆಟ್ಟಿ.
ಅವರ ಮಗ ಪ್ರೇಂನಾಥ್, ಓದಿದ್ದು ಎಂಜಿನಿಯರಿಂಗ್. ಪಿಜಿ ಮಾಡಲು ಅಮೆರಿಕಕ್ಕೆ ಹೋಗುವ ಕನಸು. ತಂದೆ- ತಾಯಿಯ ವೃತ್ತಿಶ್ರದ್ಧೆ, ಶ್ರಮಗಳನ್ನು ಕಂಡು ಮನಸ್ಸು ಬದಲಾಯಿಸಿದರು. ಭಾರತ್ ಎಲೆಕ್ಟ್ರಾನಿಕ್ಸ್ನ ಕೆಲಸಕ್ಕೆ ರಾಜೀನಾಮೆ ನೀಡಿ ನರ್ಸಿಂಗ್ಹೋಂ ಸೇರಿದರು. ಎಕ್ಸ್ರೇ ಮಾಡಲು, ಅಕೌಂಟ್ಸ್ ನಿಯಂತ್ರಿಸಲು ಕಲಿತರು. ಈಗ ಅವರೇ ನರ್ಸಿಂಗ್ಹೋಂನ ಪ್ರೆಸಿಡೆಂಟ್.
ಅವರ ಪತ್ನಿ ಉಷಾ, ಪತಿಗೆ ಬೆನ್ನೆಲುಬಾಗಿ ನಿಂತರು. ರೋಗಿಗಳಿಗೆ, ಅವರ ಜತೆ ಬರುತ್ತಿದ್ದವರಿಗೆ ಆಗುತ್ತಿದ್ದ ತೊಂದರೆ ಕಂಡು ಇದ್ದ ಚಿಕ್ಕ ಜಾಗದಲ್ಲೇ ಕೆಫೆಟೇರಿಯ ತೆರೆದರು. ಅದು ಈಗ ಅಭಿವೃದ್ಧಿ ಹೊಂದಿದೆ.
ಹೀಗೆ ಬೇರು ಬಿಟ್ಟು ನಿಂತ ಆಸ್ಪತ್ರೆಯನ್ನು ಈಗ ಮುನ್ನಡೆಸುತ್ತಿರುವವರು ಅವರ ಪುತ್ರ ಡಾ.ರಾಜೀವ್ ಪ್ರೇಂನಾಥ್. ಆಸ್ಪತ್ರೆ ಕಟ್ಟಿದ ತಾತನ ಶ್ರದ್ಧೆ, ತಂದೆಯ ಶ್ರಮಗಳನ್ನು ಮನಗಂಡ ಅವರು ಇದನ್ನು ಆಧುನಿಕ ತಂತ್ರಜ್ಞಾನದಿಂದ ಸುಸಜ್ಜಿತಗೊಳಿಸಿದ್ದಾರೆ. ಅವರು ಜನರಲ್ ಮತ್ತು ಲ್ಯಾಪ್ರೋಸ್ಕೋಪಿಕ್ ಸರ್ಜನ್. ಅವರ ಪತ್ನಿ ಶ್ವೇತಾ ಹಾಸ್ಪಿಟಲ್ ನಿರ್ವಹಣೆಯಲ್ಲಿ ಎಂಬಿಎ ಪದವಿ ಪಡೆದು ದಕ್ಷ ಆಡಳಿತ ನಿಭಾಯಿಸುತ್ತಿದ್ದಾರೆ.
ಪುರಾತನ ಆಸ್ಪತ್ರೆಯಾದರೂ, ಹಲವು ಮೊದಲುಗಳನ್ನು ಇದು ಕಂಡಿದೆ. 1982 ರಲ್ಲಿ ರಾಜ್ಯದಲ್ಲಿ ಮೊತ್ತಮೊದಲ ಆಂಬುಲೆನ್ಸ್ ಸೇವೆ ಆರಂಭಿಸಿದರು. ಅದರಲ್ಲಿ ಆಕ್ಸಿಜನ್ ಸಿಲಿಂಡರ್, ಐಸಿಯು, ಚಿಕ್ಕಪುಟ್ಟ ಸರ್ಜರಿ ಒದಗಿಸಿದರು. ಮೊದಲ ಬಾರಿ ವೆಬ್ಸೈಟ್ ಆರಂಭಿಸಿ, ಅದರಲ್ಲಿ ಅಪಾಯಿಂಟ್ಮೆಂಟ್ ನೀಡತೊಡಗಿದ ಖಾಸಗಿ ಆಸ್ಪತ್ರೆ. ಡೇ ಕೇರ್ ಸರ್ಜರಿ, ಹೋಂ ಕೇರ್ ರಂಭಿಸಿದ ಮೊತ್ತಮೊದಲಿಗರು. ನರ್ಸ್, ರೋಗಿಯ ಮನೆಯಿಂದ ನೀಡುವ ಮಾಹಿತಿ ನೋಡಿ ವೈದ್ಯರು ಚಿಕಿತ್ಸೆ ಮುಂದುವರಿಸುತ್ತಾರೆ. ಸರ್ಜರಿ ಬಳಿಕ ಡರ್ಮಾಬಾಂಡ್ ಹಾಕತೊಡಗಿದ ಮೊದಲಿಗರು. ಇದು ಸರ್ಜರಿ ಗಾಯಕ್ಕೆ ಹೊಲಿಗೆ ಅಥವಾ ಪಿನ್ ಬದಲು ಬಳಸುವ ವಿಶೇಷ ಅಂಟು. ಮೊಬೈಲ್ ಎಕ್ಸ್ರೇ, ವಿಸಿಟಿಂಗ್ ಡಾಕ್ಟರ್ ಪರಿಕಲ್ಪನೆ ತಂದವರು.
ಬಾಳೆಹಣ್ಣು ತಿಂದರೆ ಟೆನ್ಷನ್ ಕಡಿಮೆಯಾಗುತ್ತಾ?
ಇಲ್ಲ.
ಬಿಳಿ ರಕ್ತಕಣ ಮತ್ತು ರಕ್ತದಲ್ಲಿ ಹಿಮೋಗ್ಲೊಬಿನ್ ಕೊರತೆಯಿಂದ ಹೃದಯ ಕಾಯಿಲೆ ಬರಿಸುತ್ತಾ?
ಇಲ್ಲ. ಆದರೆ, ನಾರ್ಮಲ್ ಹಿಮೋಗ್ಲೋಬಿನ್ ಇದ್ದರೆ ನಿಮಗೆ ವ್ಯಾಯಾಮ ಮಾಡುವ ಸಾಮರ್ಥ್ಯ ಹೆಚ್ಚಿಸುತ್ತದೆ.
ಬ್ಯುಸಿಯಾಗಿದ್ದಾಗ ಒಮ್ಮೊಮ್ಮೆ ವ್ಯಾಯಾಮ ಮಾಡ್ಲಿಕ್ಕೇ ಆಗೋಲ್ಲ. ಆಗ ವಾಕಿಂಗ್ ಅಥವಾ ಮೆಟ್ಟಿಲು ಹತ್ತೋದು ಮುಂತಾದವು ವ್ಯಾಯಾಮಕ್ಕೆ ಸಮನಾಗುತ್ತಾ?
ಖಂಡಿತಾ. ಒಂದೇ ಕಡೆ ಅರ್ಧ ಗಂಟೆಗಿಂತ ಹೆಚ್ಚು ಹೊತ್ತು ಕೂತು ಕೆಲಸ ಮಾಡೋದನ್ನು ಕಡಿಮೆಮಾಡಿ. ಒಂದು ಚೇರ್ನಿಂದ ಇನ್ನೊಂದು ಚೇರ್ ಅನ್ನು ಬದಲಾಯಿಸೋದೂ ನಿಮಗೆ ಸಾಕಷ್ಟು ರಿಲ್ಯಾಕ್ಸ್ ಕೊಡುತ್ತದೆ.
ಸಕ್ಕರೆ ಕಾಯಿಲೆ ಹಾಗೂ ಹೃದಯದ ಕಾಯಿಲೆಗೂ ಸಂಬಂಧವಿದ್ಯಾ?
ಹೌದು. ಮಧುಮೇಹಿಗಳಿಗೆ ಉಳಿದವರಿಗಿಂತ ಹೃದಯ ರೋಗಗಳು ಬರುವ ಸಾಧ್ಯತೆ ಬಹಳ ಹೆಚ್ಚಿರುತ್ತದೆ.
ಹಾರ್ಟ್ ಆಪರೇಷನ್ ಆದ ನಂತರ ಯಾವ ರೀತಿಯ ಕೇರ್ ತೆಗೆದುಕೊಳ್ಳಬೇಕು?
ಪಥ್ಯ, ವ್ಯಾಯಾಮ, ಹೊತ್ತ್ ಹೊತ್ತಿಗೆ ಔಷಧಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಕೊಲೆಸ್ಟೆರಾಲ್ ಅನ್ನು ಕಂಟ್ರೋಲ್ ಮಾಡಿಕೊಳ್ಳಿ. ಬಿಪಿ ಕಡೆ ಗಮನವಿರಲಿ. ತೂಕ ಕಡಿಮೆ ಮಾಡಿಕೊಳ್ಳಿ.
ಹಗಲು ಕೆಲಸ ಮಾಡುವವರಿಗಿಂತ ರಾತ್ರಿ ಕೆಲಸ ಮಾಡುವವರಿಗೆ ಹೆಚ್ಚು ಹೃದಯ ಕಾಯಿಲೆಗಳು ಬರುತ್ತಾ?
ಇಲ್ಲ.
ಬಡವರಿಗೆ ನೀವು ಸಾಕಷ್ಟು ನೆರವು ನೀಡಿದ್ದೀರಿ. ಇಂಥದ್ದೊಂದು ಕೆಲಸವನ್ನು ಕೈಗೊಳ್ಳಲು ನಿಮಗೆ ಪ್ರೇರಣೆ ಏನು?
ನನ್ನ ಪೇಷೆಂಟ್ ಆಗಿದ್ದ ಮದರ್ ತೆರೇಸಾ.
ಅಂದು ಖಾಸಗಿ ವೈದ್ಯಕೀಯ ಚಿಕಿತ್ಸೆ ಜನರಿಗಿನ್ನೂ ಹತ್ತಿರವಾಗಿರಲಿಲ್ಲ. ಆಗ ತಂದೆ ಜತೆ ಓಡಾಡ್ತಾ ಆಸ್ಪತ್ರೆ ಬೆಳೆಸಿದೆ. ಇಂದು ರಾಮಕೃಷ್ಣ ಸಮೂಹ ಸಂಸ್ಥೆಯಾಗಿ ಬೆಳೆದು ನಿಂತಿದೆ. ಜಯನಗರ, ಇಂದಿರಾನಗರ, ಎಲೆಕ್ಟ್ರಾನಿಕ್ ಸಿಟಿಗಳಲ್ಲಿ ನಮ್ಮ ಶಾಖೆಗಳಿವೆ.
- ಪ್ರೇಂನಾಥ್, ಆಸ್ಪತ್ರೆ ಅಧ್ಯಕ್ಷ
-ಗೀತಾ ಶ್ರೀನಿವಾಸನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


