ಬೈಟುಕಾಫಿ

ಕೆಂಪಕ್ಕಿ ಸಂತೆ

ಕೆಂಪಕ್ಕಿ ಸಂತೆ
Published On :

ರೈತರ ಸಮೃದ್ಧ ಬೆಳೆ

ಹೆಸರಿಗಷ್ಟೆ ಕೆಂಪಕ್ಕಿ ಸಂತೆ, ಒಳಹೊಕ್ಕರೆ ಇಡೀ ರಾಜ್ಯದ ವೈವಿಧ್ಯಮಯ ದೇಶಿ ಭತ್ತದ ತಳಿಗಳ ಜಗತ್ತಿನ ಅನಾವರಣ... ಬಾಣಂತಿಯರಿಗೇ ಒಂದ್ ಥರದ ಅಕ್ಕಿ. ಸಕ್ರೆ ಕಾಯಿಲೆ ಇದ್ಯಾ? ಅವರಿಗೇ ಒಂದು ಟೈಪ್ ಅಕ್ಕಿ. ಒಟ್ನಲ್ಲಿ ಇದು ಅಕ್ಕಿಗಳ ಜಾತ್ರೆ!
'ಹೊಟ್ಟೆಗೆ ಅನ್ನ ತಿನ್ನೋಣ ವಿಷವನ್ನಲ್ಲ' ಎಂಬ ಮಾತು ಮತ್ತೆ ಮತ್ತೆ ಪ್ರಸ್ತುತ. ದೇಶಿ ಭತ್ತದ ತಳಿಗಳ ಸಂರಕ್ಷಣೆಯಲ್ಲಿ ರೈತರನ್ನು ಸೇರಿಸಿಕೊಂಡು ಕಾರ್ಯೋನ್ಮುಖವಾಗಿರುವ ಸಹಜ ಸಮೃದ್ಧ ಸಂಸ್ಥೆ ಹುಬ್ಬಳ್ಳಿಯ ಲಕ್ಷ್ಮಿ ಸದನದಲ್ಲಿ 'ಕೆಂಪಕ್ಕಿ ಸಂತೆ' ಆಯೋಜಿಸಿತ್ತು.
ಮಲೆನಾಡಿನ ಬನವಾಸಿ ರೈತ ಶಿವಪುತ್ರ, ತುಮಕೂರು ಜಿಲ್ಲೆಯ ಭೈರಸಂದ್ರದ ಚಿದಂಬರಯ್ಯ ತಾವು ಬೆಳೆಯುವ ದೇಶಿ ಭತ್ತದ ತಳಿಗಳನ್ನು ಮಾರಾಟಕ್ಕೆ ಮತ್ತು ಪ್ರದರ್ಶನಕ್ಕೆ ತಂದಿದ್ದರೆ, ಹಿರೇಕೆರೂರ ತಾಲೂಕಿನ ಮಕರಿ ಗ್ರಾಮದ ನಾಗಪ್ಪ ನಿಂಬೇಗುಡಿ ಅವರು ಬಿಟಿ ಹತ್ತಿ ಭರಾಟೆಯಲ್ಲೂ 42ಕ್ಕೂ ಹೆಚ್ಚು ದೇಶಿ ಹತ್ತಿ ತಳಿಗಳನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ.
ಕೆಂಪಕ್ಕಿ ಸಂತೆ ಒಳಹೊಕ್ಕರೆ ಸಾಕು ದೇಶಿ ಕೃಷಿಯ ಕಂಪು. ಒಂದಾ ಎರಡಾ? ಅಲ್ಲಿರುವುದು ನೂರಾರು ತಳಿಗಳು, ಭೀಕರ ಬರದಲ್ಲೂ ಜನ ಜಾನುವಾರುಗಳಿಗೆ ಸಮೃದ್ಧಿ ಆಹಾರ ನೀಡಬಲ್ಲ ನವಣೆಯಲ್ಲಿನ 30 ತಳಿಗಳು, ಸಾವೆ, ರಾಗಿ 10 ಬಗೆಯ ಬೇಳೆ ಕಾಳುಗಳನ್ನು ಕೆಂಪಕ್ಕಿ ಸಂತೆಯಲ್ಲಿ ಪ್ರದರ್ಶನಕ್ಕಿಟ್ಟಿದ್ದು ಹಿರೇಕೆರೂರ ತಾಲೂಕಿನ ಮಕರಿ ಗ್ರಾಮದ ನಾಗಪ್ಪ ನಿಂಬೇಗುಡಿ.
ತುಮಕೂರು ಜಿಲ್ಲೆ ಭೈರಸಂದ್ರದ ಚಿದಂಬರಯ್ಯ ಅವರದ್ದು, ದೇಶಿ ಭತ್ತದ ತಳಿ ಸಂರಕ್ಷಣೆಯಲ್ಲಿ ಎತ್ತಿದ ಕೈ, ರಾಜ್ಯದ ಪ್ರಮುಖ ಬೀಜ ಸಂರಕ್ಷಕರಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿರುವ ಇವರಲ್ಲಿ ತುಮಕೂರು ಜಿಲ್ಲೆಯಲ್ಲಿ ವಿಶೇಷವಾಗಿ ಬೆಳೆಯುವ ದೇವಮಲ್ಲಿಗೆ ಇದೆ. ನೋಡುವುದಕ್ಕೆ ಸ್ವಲ್ಪ ಗೋದಿಯಂತೆ ಕಾಣುವ ಪರಿಮಳ ಸಣ್ಣಕ್ಕಿ ಅನ್ನ ಮಾಡಿದ ಮೇಲೆ ಸೂಸುವ ಸುವಾಸನೆ ಮತ್ತು ಉಣ್ಣುವಾಗ ಥೇಟ್ ಗೋದಿ ಹುಗ್ಗಿ, ತಿಳಿಸಾರು ಇಲ್ಲವೇ ಮಜ್ಜಿಗೆ ಕಲೆಸಿ ಈ ಅನ್ನ ಉಂಡರೆ ಮನಸ್ಸಿಗೂ ತೃಪ್ತಿ, ದೇಹಕ್ಕೂ ಸಮಾಧಾನ. ಬನ್ನಿ ಆ ಸಂತೇಲಿ ಯಾವ್ಯಾವ ತಳಿಗಳಿದ್ವು ನೋಡೋಣ...

ರಾಜಮುಡಿ

ಮೈಸೂರು ಮಹಾರಾಜರು ಬಳಸುತ್ತಿದ್ದ ರಾಜಮುಡಿ, ಜುಲೈನಲ್ಲಿ ನಾಟಿಗೆ ಸೂಕ್ತ, ಸಿರಿ ಪದ್ಧತಿಯಲ್ಲೂ ಇದನ್ನು ಬೆಳೆಯಬಹುದು, 6 ಅಂಗುಲ ಅಂತರದಲ್ಲಿ ನಾಟಿ ಮಾಡುವ ಭತ್ತದ ಗಡ್ಡೆಗೆ ನೇರವಾಗಿ ಜೀವಾಮೃತ ಮತ್ತು ಘನಾಮೃತ ನೀಡಬೇಕು. 150 ದಿನಗಳಲ್ಲಿ ಪೈರು ಕೋಯ್ಲಿಗೆ ಬರುತ್ತದೆ. ಎಕರೆಗೆ 25-35 ಕ್ವಿಂಟಲ್ ಭತ್ತ ಬೆಳೆಯಬಹುದು.



ಅಂಬಿಮೋರ್
ಪಕ್ಕಾ ನೀರಾವರಿ ದೇಶಿ ಭತ್ತದ ತಳಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಯುವ ಈ ತಳಿ 135 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. 18ರಿಂದ 20 ಕ್ವಿಂಟಲ್ ಇಳುವರಿ ನಿರೀಕ್ಷಿಸಬಹುದು.



ಸಣ್ಣ ಭತ್ತ
ಮಲೆನಾಡು ವಾತಾವರಣಕ್ಕೆ ಹೇಳಿ ಮಾಡಿಸಿದ ತಳಿ. ನಾಟಿ ಮಾಡಿದ 5 ತಿಂಗಳ ನಂತರ ಕೋಯ್ಲಿಗೆ ಬರುತ್ತದೆ. ಇದಕ್ಕೆ ಹೆಚ್ಚು ಮಳೆ ಬೇಕು. ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು, ಬೆಂಗಳೂರಿಗರಿಗೆ ಹೆಚ್ಚು ಇಷ್ಟವಾಗಿರುವ ಅಕ್ಕಿ ಎನ್ನುತ್ತಾರೆ ಚಿದಂಬರಯ್ಯ.


 ಜೀರಿಗೆ ಸಣ್ಣ
ಸುವಾಸನೆ ಹೊಂದಿರುವ ಈ ಭತ್ತ, ಮಾಂಸಾಹಾರ ದೊಂದಿಗೆ ಅತ್ಯಂತ ಸೂಕ್ತ. ಇತರ ತಳಿಗಳಿಗೆ ಹೋಲಿಸಿದರೆ ಇಳುವರಿ ಕಡಿಮೆ. ಆದರೂ ಉತ್ತಮ
ಬೆಲೆ ಇದೆ.


ದೇವಮಲ್ಲಿಗೆ
ತುಮಕೂರು ಪರಿಸರದಲ್ಲಿ ಹೆಚ್ಚಾಗಿ ಕಾಣಸಿಗುತ್ತಿರುವ ದೇಶಿ ಭತ್ತದ ತಳಿ ಮತ್ತು ಕ್ಯಾನ್ಸರ್‌ಗೆ ರಾಮಬಾಣವಾಗಿರುವ ದೇವಮಲ್ಲಿಗೆ ಭತ್ತದ ತಳಿ ಇಂದು ತುಮಕೂರು ಜಿಲ್ಲೆಯಲ್ಲಿ ಪಸರಿಸಿದೆ.  ಮೊದಲು 7 ಗುಂಟೆಯಲ್ಲಿ ದೇವಮಲ್ಲಿಗೆ ನಾಟಿ ಮಾಡಿ 5 ಮೂಟೆ ಭತ್ತದ ಇಳುವರಿ ಪಡೆದಿದ್ದೆ. ಅಲ್ಲಿಂದ ಹಿಂದಿರುಗಿ ನೋಡಿಲ್ಲ. ತುಮಕೂರು ಜಿಲ್ಲೆಯಲ್ಲಿ ರೈತರಿಗೆ ಬೀಜ ಪೂರೈಕೆ ಮಾಡುತ್ತಿದ್ದೇನೆ ಎನ್ನುತ್ತಾರೆ ಚಿದಂಬರಯ್ಯ.


ಬಂಗಾರ ಸಣ್ಣ
ಜೂನ್-ಜುಲೈ ನಾಟಿಗೆ ಸೂಕ್ತ ಸಮಯ, ಕೋಯ್ಲಿಗೆ ಬರುವುದಕ್ಕೆ ಕನಿಷ್ಠ 160-175 ದಿನಗಳು ಬೇಕು. ಎಕರೆಗೆ ಏನಿಲ್ಲವೆಂದರೂ 30-35 ಕ್ವಿಂಟಲ್ ಇಳುವರಿ.  


ಇವುಗಳಲ್ಲದೆ, ಮಧುಮೇಹ ಚಿಕಿತ್ಸೆಗೆ ಸಕ್ಕರ್ ಚಿಣ್ಣ್, ಪಾಯಸಕ್ಕೆ ಸೂಕ್ತವಾಗಿರುವ ಬರ್ಮ ಬ್ಲ್ಯಾಕ್, ಔಷಧೀಯ ಗುಣಗಳುಳ್ಳ ನವರಾ, ಶ್ರೀಮನ್ನಾರಾಯಣನಿಗೆ ಇಷ್ಟವಾದ ಗೋವಿಂದ ಭೋಗ್, ಬಾಣಂತಿಯರಿಗಾಗಿ ಕರಿಗಿಜವಿಲಿ ಸೇರಿದಂತೆ ಹತ್ತು ಹನ್ನೆರಡು ದೇಶಿ ಭತ್ತದ ತಳಿಗಳು ಕೆಂಪಕ್ಕಿ ಸಂತೆಯಲ್ಲಿದ್ದವು.
- ಸತೀಶ ಪಾಗಾದ
ಚಿತ್ರಗಳು- ಡಿ. ಹೇಮಂತ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.