ಬೈಟುಕಾಫಿ

ನಿರ್ಧಾರ ನಿಮ್ಮದೇ ಆಗಿರಲಿ

Published On :

ನಾನು ಏನಾಗಬೇಕೆಂದು ನಿರ್ಧರಿಸಲು ನನಗಿಂತ ಸೂಕ್ತ ವ್ಯಕ್ತಿ ಈ ಜಗತ್ತಿನಲ್ಲಿ ಬೇರೊಬ್ಬರಿರಲು ಸಾಧ್ಯವೇ ಇಲ್ಲ. ಹಾಗೆಯೇ ನಾನು ಏನೆಂಬುದನ್ನು ಅರಿತುಕೊಳ್ಳುವುದೂ ಸಹ ನನಗೆ ಸಾಧ್ಯವಾದಷ್ಟು ಬೇರೆಯವರಿಂದ ಸಾಧ್ಯವಿಲ್ಲ. ನನ್ನೊಳಗಿನ ನೋವು, ನನ್ನ ದೌರ್ಬಲ್ಯ, ನನ್ನ ಮಿತಿ, ನನ್ನ ಸಾಮರ್ಥ್ಯ ಇವೆಲ್ಲವೂ ನನಗೆ ಗೊತ್ತಿದ್ದಷ್ಟು ಬೇರೆಯವರಿಗೆ ಗೊತ್ತಾಗಲು ಹೇಗೆ ತಾನೇ ಸಾಧ್ಯ ಹೇಳಿ? ಹೀಗಿರುವಾಗ ನಾವು ಒಂದು ಹೆಜ್ಜೆ ಮುಂದಿಡಲು ನಿರ್ಧರಿಸಿದಾಗ, ಬದುಕಿನಲ್ಲಿ ಮಹತ್ವವಾದೊಂದು ನಿರ್ಧಾರಕ್ಕೆ ಬರಬೇಕಾದ ಸಂದರ್ಭದಲ್ಲಿ ಅಂತಿಮವಾಗಿ ತೀರ್ಮಾನ ನಮ್ಮದೇ ಆಗಿರಬೇಕೇ ವಿನಃ ಬೇರೊಬ್ಬರ ಅಭಿಪ್ರಾಯಗಳನ್ನು ನಮ್ಮ ಮೇಲೆ ಹೇರಿಕೊಳ್ಳುವುದು ಯಾವುದೇ ಕಾರಣಕ್ಕೂ ಸೂಕ್ತವಾದುದಲ್ಲ. ಹಾಗೆಂದು ಬೇರೆಯವರ ಸಲಹೆಯನ್ನೇ ತೆಗೆದುಕೊಳ್ಳಬಾರದು, ಬೇರೆಯವರ ಮಾತನ್ನು ಕೇಳಬಾರದು ಎಂದೇನೂ ಅಲ್ಲ. ಯಾವುದೇ ವಿಷಯಗಳಿರಲಿ ಅದರ ಬಗ್ಗೆ ಸೂಕ್ತ ಮಾಹಿತಿ ನಮ್ಮ ಬಳಿ ಇಲ್ಲದಿದ್ದಾಗ ಇತರರನ್ನು ಕೇಳಿ ತಿಳಿದಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ. ಆದರೆ ನೆನಪಿಡಿ, ಒಂದು ವಿಷಯದ ಬಗ್ಗೆ ಇಬ್ಬರನ್ನು ಕೇಳಿದರೆ ಕನಿಷ್ಠ ಮೂರು ಅಭಿಪ್ರಾಯಗಳು ನಿಮ್ಮ ಮುಂದೆ ನಿಲ್ಲುತ್ತವೆ. ಇದರಿಂದ ವೃಥಾ ಗೊಂದಲಕ್ಕೆ ಒಳಗಾಗುವ ಸಂದರ್ಭಗಳೇ ಹೆಚ್ಚು. ನೀವು ಏನಾಗಬೇಕು, ನಿಮ್ಮ ಮುಂದಿನ ಹೆಜ್ಜೆ ಹೇಗಿರಬೇಕು ಎಂಬ ಬಗ್ಗೆ ಕನಿಷ್ಠ ಕಲ್ಪನೆ ನಿಮಗಿರಲೇಬೇಕಾಗುತ್ತದೆ. ಅಷ್ಟರಮಟ್ಟಿಗೆ ನಿಮ್ಮ ಸ್ವಾತಂತ್ರ್ಯವನ್ನು ನೀವು ಕಾಯ್ದುಕೊಳ್ಳಲೇಬೇಕಾಗುತ್ತದೆ. ನಿಮ್ಮ ನಿರ್ಧಾರ ಸೂಕ್ತವೋ ಅಲ್ಲವೋ ಎಂಬ ಬಗ್ಗೆ ಪರಿಶೀಲನೆಗಾಗಿಯಷ್ಟೇ ನೀವು ಬೇರೆಯವರೊಂದಿಗೆ ಚರ್ಚಿಸುವ ಔದಾರ್ಯ ತೋರಬಹುದಷ್ಟೇ. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ನಿರ್ಧಾರದ ಬಳಿಕ ಮುಂದಿನ ಪರಿಣಾಮಗಳ ಸಂಪೂರ್ಣ ಫಲಾನುಭವಿಗಳು ನೀವೇ ಆಗಿರುತ್ತೀರಿ. ಅದ್ಯಾವುದಕ್ಕೂ ಯಾರೂ ಹೊಣೆಗಾರರಾಗಿರುವುದಿಲ್ಲ ಎಂಬುದನ್ನು ನೀವು ಜ್ಞಾಪಕದಲ್ಲಿಟ್ಟುಕೊಳ್ಳಬೇಕಿರುತ್ತದೆ. ತಮ್ಮನ್ನು ತಾವು ಅರಿತುಕೊಳ್ಳಲಾಗದ ವ್ಯಕ್ತಿಗಳು ಯಾವತ್ತಿಗೂ ಜಗತ್ತನ್ನು ಅರಿತುಕೊಳ್ಳಲಾರರು. ಮಾತ್ರವಲ್ಲ, ಅವರೆಂದಿಗೂ ಬದುಕನ್ನು ಅರ್ಥ ಮಾಡಿಕೊಳ್ಳಲು ಸಮರ್ಥರಾಗಿರಲಾರರು. ಗೊಂದಲ, ದ್ವಂದ್ವಗಳಲ್ಲೇ ಅವರು ಇಡೀ ಜೀವನವನ್ನು ಕಳೆಯಬೇಕಾದ, ಅದರಿಂದ ನಷ್ಟಕ್ಕೆ ಒಳಗಾಗಬೇಕಾದ ದುರದೃಷ್ಟಕ್ಕೆ ಈಡಾಗುತ್ತಾರೆ. ಜೀವನದಲ್ಲಿ ಎಲ್ಲವೂ ಸೂಕ್ತ ನಿರ್ಧಾರಗಳನ್ನೇ ಕೈಗೊಳ್ಳುತ್ತೇನೆ ಎಂಬುದು ಯಾವತ್ತಿಗೂ ಆಗದ ಸಂಗತಿ. ಯಾರಿಂದಲೂ ಸಾಧ್ಯವಿಲ್ಲ. ಆದರೆ ಕೈಗೊಂಡ ನಿರ್ಧಾರದಲ್ಲಿ ಮುಂದುವರಿದು ಅದರಲ್ಲೇ ಯಶಸ್ಸನ್ನು ಗಳಿಸುತ್ತೇನೆ, ಜಯವನ್ನು ದಕ್ಕಿಸಿಕೊಳ್ಳುತ್ತೇನೆ ಎಂಬ ವಿಶ್ವಾಸ ನಮ್ಮೊಳಗೆ ಇರಬೇಕು. ಅಂಥ ನಿರ್ಧಾರಗಳೊಂದಿಗೆ ಧೈರ್ಯವಾಗಿ ಮುನ್ನುಗ್ಗಿ.
- ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.