ಮುಂಜಾನೆ ರಂಜನೆ
ಬುಗುರಿಯಂತೆ ತಿರು ತಿರುಗಿ ಬೀಳುವ, ಘಮ ಘಮಿಸುವ ಸುವಾಸನೆ ಬೀರುವ, ಮುತ್ತಿನ ಮಣಿಯಂತೆ ಕಾಣುವ ಮುಂಜಾನೆಯ ಹೂವೊಂದರ ಕತೆ ಇದು. ಹೆಸರು ರಂಜ, ರಂಜೆ, ಬಾಗಳ ಅಥವಾ ಬಕುಲ. ಬೇಸಿಗೆಯ ಬೆಳಗನ್ನು ಬೆರಗುಗೊಳಿಸುವ ಪೌರಾಣಿಕ ಪುಷ್ಪ.

ಹೆಚ್ಚಾಗಿ ಹೂವುಗಳನ್ನು ಗಿಡದಿಂದ ಕೀಳುವುದು ವಾಡಿಕೆ. ಆದರೆ ಈ ಹೂವು ಬೃಹತ್ ಗಾತ್ರದ ಮರದಲ್ಲಿ ಆಗುವುದರಿಂದ ಅದು ಧರೆಗಿಳಿಯುವವರೆಗೆ ಕಾಯಲೇ ಬೇಕು. ಹೀಗೆ ಕೆಳಗೆ ಬಿದ್ದ ರಂಜದ ಹೂವನ್ನು ಹೆಕ್ಕುವುದು ಇಂದಿಗೂ ಹಳ್ಳಿ ಮಕ್ಕಳ ದಿನಚರಿಯಲ್ಲಿ ಒಂದಾಗಿದೆ.
ಸಾಮಾನ್ಯವಾಗಿ ಮಾರ್ಚ್ನಿಂದ ಮೇ ಕೊನೆಯವರೆಗೆ ವರ್ಷದ ಮೂರ್ನಾಲ್ಕು ತಿಂಗಳ ಕಾಲ ಪ್ರಕೃತಿ ಮಾತೆಯ ಮುಡಿಯನ್ನಲಂಕರಿಸುವ ಈ ಹೂವನ್ನು ದಾರದಲ್ಲಿ ಪೋಣಿಸಿದಾಗ ಬಿಳಿ ಕಂಬಳಿ ಹುಳುವಿನಂತೆ ಭಾಸವಾಗುತ್ತದೆ.
ಹಳ್ಳಿ ಮಕ್ಕಳ ಬೆಳಗಿನ ದಿನಚರಿಯಲ್ಲಿ ರಂಜದ ಹೂವನ್ನು ಹೆಕ್ಕಿ ಪೋಣಿಸಿ ಮಾಲೆ ಮಾಡುವುದೂ ಒಂದು ಪ್ರಮುಖ ಭಾಗ. ಗಿಜಿಗಿಜಿಗುಡುತ್ತಾ ರಂಜದ ಮರದ ಸುತ್ತ ಕುಳಿತು ಹೂ ಹೆಕ್ಕುವುದು, ಪೋಣಿಸುವುದು ಮಕ್ಕಳಿಗೂ ಖುಷಿಯ ವಿಚಾರ. ಪೋಣಿಸಿದ ರಂಜದ ಹೂವಿನ ಮಾಲೆ ನೋಡುವುದು ಕಣ್ಣಿಗೆ ರಂಜನೆಯಾದರೆ, ಅದರ ಘಮ, ಘಮ ಪರಿಮಳ ಮೂಗಿಗೆ ಹಬ್ಬ.
ವಿವಾಹಕ್ಕೆ ಶ್ರೇಷ್ಠ
ರಂಜದ ಹಾರವನ್ನು ವಿವಾಹ ಕಾಲದಲ್ಲಿ ವಧುವರರು ಹಾಕಿಕೊಂಡರೆ ದೀರ್ಘ ದಾಂಪತ್ಯವಿರುತ್ತದೆ ಎಂಬ ನಂಬಿಕೆ ಬಹಳ ಹಿಂದಿನಿಂದಲೂ ಇದೆ. ಹೀಗಾಗಿಯೇ ಕೇವಲ ಹಸಿ ಹೂವಿಗೆ ಮಾತ್ರವಲ್ಲದೆ ಹಲವೆಡೆ ಒಣಗಿದ ರಂಜದ ಹಾರಕ್ಕೂ ಬೇಡಿಕೆ ಇದೆ. ಬಕುಲ ಪುಷ್ಪ 'ಬೆಸುಗೆಯ ಬಂಧ' ಎನಿಸಿಕೊಳ್ಳಲು ಪೌರಾಣಿಕ ಕತೆಯೇ ಇದೆ.
ಹಿಂದೆ ವೆಂಕಟೇಶ ದೇವರು ಪದ್ಮಾವತಿಯ ವಿಷಯದಲ್ಲಿ ವಿರಹ ವೇದನೆ ಅನುಭವಿಸುತ್ತಿದ್ದರು. ಈ ವಿಷಯವನ್ನು ಗ್ರಹಿಸಿದ ಬಕುಲಾದೇವಿ ಎಂಬ ದೇವತೆ ಪದ್ಮಾವತಿಗೆ ವೆಂಕಟೇಶನ ಈ ವಿಷಯ ತಿಳಿಸಿ, ಅವರಿಬ್ಬರನ್ನೂ ಒಂದುಗೂಡಿಸಿದಳು. ಹೀಗೆ ವೆಂಕಟೇಶ ಮತ್ತು ಪದ್ಮಾವತಿಯರು ಒಂದುಗೂಡಲು ಕಾರಣವಾಗಿದ್ದಷ್ಟೇ ಅಲ್ಲದೆ, ಅವರಿಬ್ಬರ ವಿವಾಹಕ್ಕೂ ಸಾಕ್ಷಿಯಾದಳು.
ಇದರಿಂದ ಸಂತೋಷಗೊಂಡ ದೇವಿ ಪದ್ಮಾವತಿ ಬಕುಲಾದೇವಿಗೆ 'ಇನ್ನು ಮುಂದೆ ಮಾನವರು ಕೂಡ ವಿವಾಹ ಸಂದರ್ಭದಲ್ಲಿ ನಿನ್ನನ್ನೇ ಪ್ರಮುಖ ಸಾಕ್ಷಿಯಾಗಿ ಬಳಸಿಕೊಳ್ಳುವಂತಾಗಲಿ ಮತ್ತು ನೀನು ಹೂವಿನ ರೂಪದಲ್ಲಿ ಅವರ ಮದುವೆಗೂ ಸಾಕ್ಷಿಯಾಗಿರು' ಎಂದು ವರವನ್ನಿತ್ತಳು.
ಅಲ್ಲಿಂದ ಮುಂದೆ ಬಕುಲವೆಂಬ ಹೂವಿನ ರೂಪದಲ್ಲಿ ಧರೆಗಿಳಿದ ಬಕುಲಾದೇವಿ ರಂಜ, ಬಾಗಳ ಮುಂತಾದ ಹೆಸರಿನಿಂದ ಪ್ರಸಿದ್ಧಿ ಪಡೆದಳು. ಹೀಗಾಗಿಯೇ ಮದುವೆ ಕಾಲದಲ್ಲಿ ಒಣರಂಜಕ್ಕೂ ಬೇಡಿಕೆ ಇರುವುದು.
ರಂಜದ ಹೂವು ಮುಡಿಯಲು ಶ್ರೇಷ್ಠವಾದರೆ. ಹಣ್ಣು ತಿನ್ನಲು ಬಲು ರುಚಿ. ಹಣ್ಣಿನಲ್ಲಿರುವ ಬೀಜವನ್ನು ಹಳ್ಳಿಗಳಲ್ಲಿ ಮಕ್ಕಳು ಸಂಗ್ರಹಿಸಿ ಚನ್ನೆಮಣೆ ಸೇರಿದಂತೆ ಹಲವು ಆಟಗಳಿಗೂ ಬಳಸುವುದುಂಟು. ಇದಲ್ಲದೆ ರಂಜದ ಮರದ ನಾಟ ದೀರ್ಘಕಾಲದ ಬಾಳಿಕೆ ಬರುವುದರಿಂದ ಅದಕ್ಕೂ ಹೆಚ್ಚಿನ ಬೇಡಿಕೆ ಇದೆ.
ಹೀಗೆ ಮುತ್ತಿನ ಮಣಿಯಂತೆ ಮುದ್ದಾದ ಈ ಹೂವು ಇರುವಷ್ಟು ಕಾಲ ಮಹಿಳೆಯರ ಮುಡಿಯಲ್ಲಿ, ದೇವರ ಶಿರದಲ್ಲಿ ರಾರಾಜಿಸುತ್ತಲೇ ಇರುತ್ತದೆ. ಅದ್ಯಾವತ್ತೋ ಅಜ್ಜ, ಮುತ್ತಜ್ಜ ನೆಟ್ಟಿದ್ದು, ಈಗ ಮುಪ್ಪಾಗಿರುವ ಈ ರಂಜದ ಮರದಿಂದ ಹೂವನ್ನು ಪಡೆಯುತ್ತಿರುವ ಹೆಚ್ಚು ಹೆಚ್ಚು ಇಂತಹ ಗಿಡಗಳನ್ನು ನೆಟ್ಟು ನಮ್ಮ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳ ಕಾಲದವರೆಗೂ ಇದರ ಸಂಸತಿಯನ್ನು ಉಳಿಸೋಣ, ರಂಜದ ಹೂವಿನ ಪರಿಮಳವನ್ನು ಅವರಿಗೂ ಉಣಿಸೋಣ.
- ಸುಧೀಂದ್ರ ಜಮ್ಮಟಿಗೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


