ಮಣಿ ಮಣಿ ಮಣಿ ಮಣಿ...
ಬಂಗಾರದ ಬೆಲೆ ಸೂರ್ಯನನ್ನೂ ಏರಿ ಕುಳಿತಿದೆ. ಬಂಗಾರದ ಆಭರಣ ತೊಟ್ಟರಂತೂ ಕಳ್ಳಕಾಕರ ಭಯ. ಹಾಗಾಗಿ ಇವತ್ತು ಮಹಿಳೆಯರ...

-ನೀವೇ ಪೋಣಿಸಿ ಮಣಿಗೊಂದು ದಾರ
ಬಂಗಾರದ ಬೆಲೆ ಸೂರ್ಯನನ್ನೂ ಏರಿ ಕುಳಿತಿದೆ. ಬಂಗಾರದ ಆಭರಣ ತೊಟ್ಟರಂತೂ ಕಳ್ಳಕಾಕರ ಭಯ. ಹಾಗಾಗಿ ಇವತ್ತು ಮಹಿಳೆಯರ ಕಣ್ಣು ಸೆಳೆದಿರುವುದು ಕೃತಕ ಆಭರಣಗಳು. ಅದರಲ್ಲೂ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ತಾವು ಉಡುವ ಸೀರೆ, ಸಲ್ವಾರ್ಗಳಿಗೆ ಹೋಲುವಂತಹ ಬಳೆ, ಸರ, ಕಿವಿಯೋಲೆಗಳು ಬೇಕು. ಎಲ್ಲ ಮ್ಯಾಚಿಂಗ್ ಜಮಾನ! ಇಂತಹ ಆಭರಣಗಳನ್ನು ನಾವೇ ತಯಾರಿಸುವಂತಿದ್ದರೆ, ಅದನ್ನು ತೊಡುವ ಖುಷಿ, ಸಂತೋಷವೇ ಬೇರೆ ಅಲ್ಲವೆ?
ಹೌದು, ನಮಗೆ ಬೇಕಾದ ಆಭರಣಗಳನ್ನು ಈಗ ನಾವೇ ತಯಾರಿಸಬಹುದು. ಮಾರುಕಟ್ಟೆಯಲ್ಲಿ ಆಭರಣ ತಯಾರಿಸಲು ಬೇಕಾದ ಎಲ್ಲಾ ಸಾಧನಗಳೂ ಸಿಗುತ್ತವೆ. ಮುಖ್ಯವಾಗಿ ಇದಕ್ಕೆ ಬೇಕಿರುವುದು ವಿವಿಧ ನಮೂನೆಯ ಮಣಿಗಳು.
ಗ್ಲಾಸ್, ಮುತ್ತು, ಪಂದೋರ, ಸರೋಸ್ಕಿ ಮಣಿಗಳು, ಅಲ್ಲದೆ ಮಣ್ಣಿನಿಂದ ತಯಾರಿಸಿದ ಮಣಿ, ಮರದ ಮಣಿ, ಪ್ಲಾಸ್ಟಿಕ್, ಲೋಹ ಮುಂತಾದವುಗಳಿಂದ ತಯಾರಿಸಿದ ಅದೆಷ್ಟೋ ಮಣಿಗಳು ಸಿಗುತ್ತವೆ. ಅಲ್ಲದೆ ವಿವಿಧ ಚಿತ್ತಾರಗಳನ್ನು ಬಿಡಿಸಿದ ಕಲಾತ್ಮಕ ಮಣಿಗಳೂ ಸಿಗುತ್ತವೆ. ವಿವಿಧ ಬಣ್ಣಗಳಲ್ಲಿ ವಿವಿಧ ಗಾತ್ರಗಳಿಂದ ಕೂಡಿದ ಮಣಿಗಳು ಇವೆ. ಅದರಲ್ಲೂ ಸೆಮಿ ಪ್ರೆಶಿಯಸ್ ಸ್ಟೋನ್ಗಳಿಂದ ತಯಾರಿಸಿದ ಆಭರಣಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ. ಆನ್ಲೈನ್ನಲ್ಲೂ ಈಗ ಮಣಿಗಳನ್ನು ತರಿಸಿಕೊಳ್ಳಬಹುದು.
ಇಂತಹ ಮಣಿಗಳನ್ನು ಪೋಣಿಸಲು ಸಪೂರ ತಂತಿಯೂ, ಅದನ್ನು ಜೋಡಿಸಲು ಬೇಕಿರುವ ಹುಕ್ಕುಗಳು ಮಾರುಕಟ್ಟೆಯಲ್ಲಿ ಬಿಡಿ ಬಿಡಿಯಾಗಿ ಲಭ್ಯವಿದೆ. ಸ್ಟಡ್, ಹ್ಯಾಂಗಿಂಗ್ಸ್, ಕಿವಿಯೋಲೆಗಳನ್ನು ಮಾಡಲು ಬೇಕಿರುವ ಬೆಳ್ಳಿ, ಬಂಗಾರದ ಬಣ್ಣದ ತಂತಿ, ಸರಿಗೆಗಳೂ ಸಿಗುತ್ತವೆ. ಈ ತಂತಿ, ಸರಿಗೆಗಳನ್ನು ನಮಗೆ ಬೇಕಾದ ಆಕಾರ, ಗಾತ್ರಕ್ಕೆ ತಕ್ಕಂತೆ ಕತ್ತರಿಸಲು, ಹುಕ್ಕುಗಳನ್ನು ಜೋಡಿಸಲು ಬೇಕಾದ ಉಪಕರಣ ಇದೆ. ಹಾಗಾಗಿ ಒಂದೇ ವಿಧದ ಆಭರಣಗಳನ್ನು ಧರಿಸಿ ಬೇಸರವಾದರೆ ಅದನ್ನು ತುಂಡರಿಸಿ, ಮಣಿಗಳನ್ನು ಇನ್ನಾವುದೋ ಮಣಿಗಳ ಜೊತೆ ಸೇರಿಸಿ ಹೊಸ ಬಗೆಯ ಆಭರಣಗಳನ್ನು ತಯಾರಿಸಬಹುದು.
ಮಾರುಕಟ್ಟೆಯಲ್ಲಿ ಅತ್ಯಂತ ದುಬಾರಿ ಬೆಲೆ ತೆತ್ತು ಕೊಂಡುಕೊಳ್ಳುವ ಸಿದ್ಧ ಆಭರಣಗಳಿಗಿಂತ ನಾವೇ ತಯಾರಿಸಿದರೆ ಹಣವೂ ಉಳಿತಾಯ, ಸ್ವಮೇಕ್ ಆದ ಕಾರಣ ಅದರ ಜೊತೆಗೊಂದು ಭಾವನಾತ್ಮಕ ಪ್ರೀತಿಯೂ ಇರುತ್ತದಲ್ಲವೆ?
ಅದೆಷ್ಟೋ ಹೆಂಗಳೆಯರು ಮನೆಯಲ್ಲಿ ಟಿವಿ ಧಾರಾವಾಹಿಗಳನ್ನು ನೋಡಿ ಅಕ್ಕ ಪಕ್ಕದ ಮಂದಿ ಜೊತೆ ಕಾಡು ಹರಟೆ ಮಾಡುವುದಕ್ಕಿಂತ ಇಂತಹ ಕಾರ್ಯ ಕೈಗೊಂಡರೆ ಸಣ್ಣ ಉದ್ದಿಮೆಯನ್ನೂ ಆರಂಭಿಸಬಹುದು. ಮನೆಯಲ್ಲಿಯೇ ಕುಳಿತು ಮಣಿಗಳಿಂದ ಮನಿ ಸಂಪಾದಿಸುವ ಸಣ್ಣ ದಾರಿಯೂ ಇದಾಗಿದೆ. ಇವೆಲ್ಲವನ್ನು ಮಾಡಲು ನಮಗೆ ಬೇಕಿರುವುದು ತಾಳ್ಮೆ ಮತ್ತು ಸಮಯ, ಬಣ್ಣದ ಮಣಿಗಳ ಜೊತೆಗೊಂದು ಅನುಬಂಧ. <
- ಸಿಂಧು ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


