ಬೈಟುಕಾಫಿ

ಕನ್ನಡ ಮಾತು

Published On :

ಈ ಮಕ್ಕಳು ಹುಟ್ಟಿದ್ದು ಬಂಗಾಲಿಗಳಾಗಿ. ಬೆಳೆದಿದ್ದು ಬಾಂಬೆ ಮತ್ತಿತರೆಡೆ. ಕಲಿತಿದ್ದು ಮಾತ್ರ ಕನ್ನಡವನ್ನೇ. ಇದು ಬಂಗಾಲದ ಕನ್ನಡ 'ಮಾತು' ಕುಟುಂಬ.

ಇಲ್ಲೊಂದು ಕುತೂಹಲಕರ ಕನ್ನಡ ಪ್ರೇಮದ ಕತೆಯಿದೆ. ಓದಿ.
ಇಲ್ಲಿರುವ ಮೂವರು ಪುಟಾಣಿಗಳು ಹುಟ್ಟಿದ್ದು ಬಂಗಾಲಿ ಕುಟುಂಬದಲ್ಲಿ. ತಂದೆ ಅಡುಗೆ ಕೆಲಸ ಮಾಡುತ್ತ ದೇಶವನ್ನು ಸುತ್ತಿದವರು. ಬಾಂಬೆ, ಪುಣೆ, ಬಿಹಾರ, ಕೋಲ್ಕತ್ತಾ ಎಂದು ಹೋದೆಡೆಯೆಲ್ಲ ಅಲ್ಲಿನದೇ ಸಂಸ್ಕೃತಿ ರೂಢಿಸಿಕೊಳ್ಳಬೇಕಾದ ಅನಿವಾರ್ಯತೆ ಇದ್ದರೂ, ಮಕ್ಕಳು ಮಾತ್ರ ಕನ್ನಡದಲ್ಲಿ ಚಿಲಿಪಿಲಿ ಎನ್ನುತ್ತಿವೆ.
ಇವರೀಗ ಅಪ್ಪಟ ಕನ್ನಡದ ಕಂದಮ್ಮಗಳಾಗಿ ಬದಲಾಗಿದ್ದಾರೆ. ಕನ್ನಡ ಶಾಲೆಯ ಮೆಟ್ಟಿಲೇರಿ ಕಪ್ಪು ಹಲಗೆಯ ಮೇಲೆ ಕನ್ನಡ ನುಡಿ ಬರಹವನ್ನು ಮುದ್ದು ಮುದ್ದಾಗಿ ಚಿತ್ರಿಸುತ್ತಿದ್ದಾರೆ. ಕನ್ನಡ ಪತ್ರಿಕೆಗಳನ್ನು ಸರಾಗವಾಗಿ ಓದುತ್ತಾರೆ. ಕನ್ನಡ ಸಿನಿಮಾಗಳೆಂದರೆ ಊಟವನ್ನು ತೊರೆದಾದರೂ ವೀಕ್ಷಿಸುತ್ತಾರೆ.  ಕುವೆಂಪುರವರ ಪದ್ಯಗಳಿಗೆ ರಾಗ ಸೇರಿಸುತ್ತಾರೆ. ಬೇಂದ್ರೆಯವರ ಹಾಡುಗಳಿಗೆ ಕಂಠ ನೀಡುತ್ತಾರೆ. ಕನ್ನಡದ ಲೇಖನಗಳನ್ನು ಚೌಕಟ್ಟಾಗಿ ಕತ್ತರಿಸಿ ಜೋಪಾನವಾಗಿರಿಸಿಕೊಳ್ಳುತ್ತಾರೆ. ಕನ್ನಡದ ಹಬ್ಬಗಳಲ್ಲಿ ಭಾಗವಹಿಸಿ ಅಭಿಮಾನವನ್ನು ವ್ಯಕ್ತಪಡಿಸುತ್ತಾರೆ. ಇವಿಷ್ಟೇ ಅಲ್ಲ... ತಮ್ಮ ಪಾಲಕರಿಗೂ ಕನ್ನಡ ಕಲಿಯಲು ಪ್ರೇರೇಪಿಸುತ್ತಾರೆ. ಸಮಾಜದಲ್ಲಿ ಮಾತ್ರವಲ್ಲದೆ ಮನೆಯಲ್ಲಿಯೂ ಕನ್ನಡವನ್ನೆ ಮಾತನಾಡುತ್ತಾರೆ.
ಪ್ರಸ್ತುತ ಯಲ್ಲಾಪುರದ ಕಾಳಮ್ಮ ನಗರ ನಿವಾಸಿಗಳಾದ ಗೌರಿ ಮಾತೂ ಹಾಗೂ ಕಿಶೋರ ಮಾತೂ ದಂಪತಿಗಳ ಮಕ್ಕಳಾದ ಸಂತಮ್, ಅಮರ್ ಹಾಗೂ ಕರಣ ಎಂಬ ಚಿಣ್ಣರೇ ಬಂಗಾಲಿ ಮೂಲದ ಕನ್ನಡಾಭಿಮಾನಿಗಳು. ಈ ಪೈಕಿ ಸಂತಮ್ ಮಾಯ್ಕನಕೆರೆ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದಾನೆ. ಅಮರ್ ಒಂದನೇ ತರಗತಿಯಲ್ಲಿದ್ದಾನೆ. ಕರಣ ಪಾಲಕರೊಡನೆ ಮನೆಯಲ್ಲಿಯೇ ಕನ್ನಡದಲ್ಲಿ ಮಾತನಾಡುತ್ತಾನೆ. ದೂರದ ಊರಿಂದ ವಲಸೆ ಬಂದು ಕನ್ನಡದ ಮಣ್ಣಿನಲ್ಲಿ ಕಾಗುಣಿತ ಕಲಿಯುತ್ತಿರುವ ಚಿಣ್ಣರು ಇತರೆ ವಿದ್ಯಾರ್ಥಿಗಳಲ್ಲಿ ಮುಕ್ತವಾಗಿ ಬೆರೆಯುತ್ತಾರೆ. ಈ ಹಿಂದೆ ಬಾಂಬೆ, ಪುಣೆ, ಬಿಹಾರ, ಕೋಲ್ಕತ್ತಾಗಳಲ್ಲೂ ಇವರು ಸಂಚರಿಸಿದ್ದರು, ಅಲ್ಲಿನ ಶಾಲೆಗಳಲ್ಲೂ ಕಲಿತಿದ್ದರು. ಆದರೆ ಇತರೆ ಭಾಷೆಗಳಿಗಿಂತ ಕನ್ನಡವೇ ಸುಲಲಿತವಾದದ್ದು ಎನ್ನುವ ಅಭಿಪ್ರಾಯ ಸಂತಮ್ನದು.

-ಅಚ್ಯುತಕುಮಾರ ಯಲ್ಲಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.