ರೊಟ್ಟಿ ಹಬ್ಬ
ಚಾಮರಾಜನಗರ ಜಿಲ್ಲೆಯ ಕಾಡಂಚಿನ ಗ್ರಾಮ(ಪೋಡು)ಗಳಲ್ಲಿ ವಾಸಿಸುತ್ತಿರುವ ಸೋಲಿಗ ಬುಡಕಟ್ಟು, ಆಧುನಿಕತೆಯ ದಾಳಿಯನ್ನು...

ಚಾಮರಾಜನಗರ ಜಿಲ್ಲೆಯ ಕಾಡಂಚಿನ ಗ್ರಾಮ(ಪೋಡು)ಗಳಲ್ಲಿ ವಾಸಿಸುತ್ತಿರುವ ಸೋಲಿಗ ಬುಡಕಟ್ಟು ಆಧುನಿಕತೆಯ ದಾಳಿಯನ್ನು ಎದುರಿಸಿ ತನ್ನ ವಿಶಿಷ್ಟ ಆಚರಣೆಗಳನ್ನು ಉಳಿಸಿಕೊಂಡಿದೆ. ಕಾಡಿನ ಮಕ್ಕಳಾದ ಸೋಲಿಗರು ಆಚರಿಸುವ 'ರೊಟ್ಟಿ ಹಬ್ಬ' ಇದಕ್ಕೆ ನಿದರ್ಶನ.
ಕೊಳ್ಳೆಗಾಲ ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಗ್ರಾಮಗಳ ಸೋಲಿಗರು ಪ್ರತಿ ವರ್ಷ ಫೆಬ್ರವರಿಯಿಂದ ಮೇ ವರೆಗೆ ರೊಟ್ಟಿ ಹಬ್ಬ ಆಚರಿಸುತ್ತಾರೆ. ಸಾಮಾನ್ಯವಾಗಿ ಇದನ್ನು ಶುಕ್ರವಾರ ರಾತ್ರಿ ವೇಳೆ ಆಚರಿಸುವುದು ರೂಢಿ. ಹಬ್ಬದ ಹಿಂದಿನ ದಿನ ಸುತ್ತಲಿನ ಗ್ರಾಮಗಳಲ್ಲಿ ವಾಸಿಸುವ ಸೋಲಿಗರೆಲ್ಲ ಒಟ್ಟುಗೂಡುತ್ತಾರೆ. ಆ ವರ್ಷದಲ್ಲಿ ಬೆಳೆದ ರಾಗಿಯನ್ನು ಬೀಸುವ ಕಲ್ಲಿನಲ್ಲಿ ಹಿಟ್ಟು ಮಾಡುತ್ತಾರೆ. ನಂತರ ರಾಗಿ ರೊಟ್ಟಿ ತಟ್ಟಿ ಕೆಂಡದಲ್ಲಿ ಸುಡುತ್ತಾರೆ. ಸಣ್ಣ, ಮಧ್ಯಮ ಮತ್ತು ದೊಡ್ಡದು ಎಂದು ವರ್ಗೀಕರಿಸಿ ಸುಡುವುದು ರೂಢಿ. ದೊಡ್ಡ ರೊಟ್ಟಿ ದೇವರಿಗೆ ಮೀಸಲು.
ರೊಟ್ಟಿಯ ಜೊತೆಗೆ ಎಳೆ ಹಲಸಿನ ಕಾಯಿ ಪಲ್ಯ, ಪಾಯಸ ಮಾಡಿ ದೊಡ್ಡಸಂಪಿಗೆ ಮರದ ಅಡಿಯಲ್ಲಿರುವ ತಮ್ಮ ಕುಲದೇವರು ಜಡೇಸ್ವಾಮಿ ಮತ್ತು ಕೇತಮ್ಮ ದೇವರಿಗೆ ಅರ್ಪಿಸುತ್ತಾರೆ. 'ಮುಂದಿನ ವರ್ಷ ಕಾಡಿಗೆ ಬೆಂಕಿ ಬೀಳದಿರಲಿ, ಮಳೆ ಬೆಳೆ ಉತ್ತಮವಾಗಿರಲಿ, ಮಾರಣಾಂತಿಕ ಕಾಯಿಲೆಗಳು ಬಾರದಿರಲಿ' ಎಂದು ಪ್ರಾರ್ಥಿಸುತ್ತಾರೆ. ಮಹಿಳೆಯರು ಪಂಜು ಹಿಡಿದು ದೊಡ್ಡಸಂಪಿಗೆ ಮರಕ್ಕೆ ಪ್ರದಕ್ಷಿಣೆ ಹಾಕುತ್ತಾರೆ. ನಂತರ ವ್ಯಕ್ತಿಯೊಬ್ಬರ ಮೈಮೇಲೆ ದೇವರು ಬಂದು ಇವರಿಗೆ ಒಳಿತೋ, ಕೆಡುಕೋ ಎಂಬ ಭವಿಷ್ಯ ನುಡಿಯುತ್ತದೆ.
ದಟ್ಟ ಕತ್ತಲಾಗುತ್ತಿದ್ದಂತೆ 'ಗೋರು ಗೊರುಕ ಗೋರುಕನ...' ಎನ್ನುವ ಹಾಡಿಗೆ ಸೋಲಿಗರು ಹೆಜ್ಜೆ ಹಾಕುತ್ತಾ ರೊಟ್ಟಿ ಹಬ್ಬಕ್ಕೆ ಮೆರುಗು ನೀಡುತ್ತಾರೆ. ನೋಡುಗರ ಕಣ್ಣಿಗಂತೂ ಮೈಮರೆತು ನೃತ್ಯಗಾರರೊಂದಿಗೆ ಹೆಜ್ಜೆ ಹಾಕಿದ ಅನುಭವ. ತಣ್ಣನೆ ಗಾಳಿ ಜೊತೆಗೆ ಮೈ ನಡುಗಿಸುವ ಚುಮು ಚುಮು ಚಳಿಯಾದರೂ ನರ್ತಿಸುವವರಿಗೆ ಅದರ ಪರಿವೆ ಇರುವುದಿಲ್ಲ.
ಕಂಕಣ ಭಾಗ್ಯ
ಹಬ್ಬದ ಸಂದರ್ಭದಲ್ಲಿ ಯುವಕರು ನಾನಾ ದೈಹಿಕ ಕಸರತ್ತು ಪ್ರದರ್ಶಿಸುತ್ತಾರೆ. ಆಗ ಯುವತಿ ತನ್ನಿಷ್ಟದ ಯುವಕನಿಗೆ, ಯುವಕ ಯುವತಿಗೆ ಒಂದು ಸಣ್ಣ ಕಲ್ಲಿನಿಂದ ಹೊಡೆಯುವ ಮುಖಾಂತರ ತಮ್ಮ ಪ್ರೀತಿಯನ್ನು ನಿವೇದಿಸಿಕೊಳ್ಳುತ್ತಾರೆ. ಅದೂ ಹಿರಿಯರ ಸಮ್ಮುಖದಲ್ಲೇ. ಮೆಚ್ಚಿದ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಮದುವೆಯಾಗುತ್ತಾರೆ.
ಗೊರವನ ಹಾಡಿಗೆ ಯುವಕರು ನೃತ್ಯ ಮಾಡುವುದರೊಂದಿಗೆ ಯುವತಿಯರತ್ತ ಕಲ್ಲು ಹೊಡೆಯುತ್ತಾ, 'ಕಾಡಿನಿಂದ ಹಣ್ಣು ತರುತ್ತೇನೆ ಬಾ, ಕಾಡಿನ ಹೂ ಕೊಡುತ್ತೇನೆ ನನ್ನ ಜೋಡಿಯಾಗು' ಎಂದು ಪದಕಟ್ಟಿ ಹಾಡುತ್ತಾರೆ. ಇನ್ನೂ ಕೆಲವರು ಹಣ್ಣು, ಹೂಗಳನ್ನು ತಂದು ಆಗಲೇ ಕೊಡುತ್ತಾರೆ. ಆದರೆ ಈ ಬಾರಿ ಯುವಕನೊಬ್ಬ ಪಾರ್ಲೆಜಿ ಬಿಸ್ಕೆಟ್ ಕೊಟ್ಟು ಸಂಗಾತಿಯನ್ನು ಒಲಿಸಿಕೊಂಡದ್ದು ಮಾತ್ರ ಅಲ್ಲಿನ ಜನರಿಗೆ ತುಸು ಹೊಸತನದ ಜತೆಗೆ ಪೆಚ್ಚನ್ನೂ ಉಂಟು ಮಾಡಿತ್ತು.
ಸೋಲಿಗರಲ್ಲಿ ಎರಡು ಉಪ ಪಂಗಡಗಳಿದ್ದು, ಒಂದೇ ಪಂಗಡದಲ್ಲಿ ವಿವಾಹ ನಿಷಿದ್ಧ. ಈ ಪಂಗಡದವರು ಅಣ್ಣ- ತಂಗಿ ಸಮಾನ. ಪರಸ್ಪರ ಇಷ್ಟಪಡುವ ಜೋಡಿಗಳು ಬೇರೆ ಬೇರೆ ಕುಲದವರಾಗಿದ್ದರೆ ಇದಕ್ಕೆ ಯಾರ ಅಡ್ಡಿಯೂ ಇಲ್ಲ. ಆ ದಿನ ಮೆಚ್ಚಿಕೊಂಡ ಜೋಡಿಗಳು ಆ ರಾತ್ರಿಯೇ ಕಾಡಿಗೆ ಹೋಗಿ ಏಕಾಂತದಲ್ಲಿರುತ್ತಾರೆ. ಸೋಲಿಗ ಮಹಿಳೆಯರು ತಾಳಿ ಮತ್ತು ಕಾಲುಂಗುರ ಎರಡನ್ನೂ ಧರಿಸುವುದಿಲ್ಲ. ಇದು ಅವರ ಸಂಪ್ರದಾಯ.
ಹಬ್ಬದ ರಾತ್ರಿ ಕಾಡಿಗೆ ಓಡಿ ಹೋದ ಜೋಡಿ 8 ದಿವಸ ಕಳೆದ ಬಳಿಕ ಹಿಂತಿರುಗಿ ಮದುವೆಯಾಗಲು ಪೋಡಿನ ಮುಖ್ಯಸ್ಥರ ಅನುಮತಿ ಕೋರುತ್ತಾರೆ. ವರದಕ್ಷಿಣೆ ಅಂದ್ರೆ ನಮಗೆ ಗೊತ್ತಿಲ್ಲ. ಆದ್ರೆ ಕುಲದೇವರಿಗೆ 12.25 (12 ರೂಪಾಯಿ 25 ಪೈಸೆಗಳು) ರುಪಾಯಿ ಕೊಟ್ಟು ಹಿರಿಯರ ಸಮ್ಮುಖದಲ್ಲಿ ಮದುವೆಯಾಗುವುದು ನಮ್ಮ ಸಂಪ್ರದಾಯ ಎನ್ನುತ್ತಾರೆ ಸೋಲಿಗರ ಮುಖಂಡ ದಾಸೇಗೌಡ.
ಹನ್ನೆರಡಾಣೆ
ಸೋಲಿಗರಲ್ಲಿ 12.25 ರು. ನೀಡಿ ಮದುವೆಯಾಗುವುದಕ್ಕೆ ಪೌರಾಣಿಕ ನಂಬಿಕೆ ಇದೆ. ಇವರ ಆರಾಧ್ಯ ದೈವ ಬಿಳಿಗಿರಿ ರಂಗಸ್ವಾಮಿ, ಸೋಲಿಗ ಬೊಮ್ಮೇಗೌಡರ ಕಿರಿಯ ಮಗಳಾದ ಪುಸುಮಾಲೆಯನ್ನು ಇಷ್ಟಪಟ್ಟು ಹಿರಿಯರ ಅನುಮತಿ ಪಡೆಯದೆ ಕಾಡಿಗೆ ಕರೆದೊಯ್ಯುತ್ತಾನೆ. 8 ದಿನ ನಂತರ ಬಿಳಿಗಿರಿ ರಂಗಸ್ವಾಮಿ, ಪುಸುಮಾಲೆಯನ್ನು ವಿವಾಹವಾಗುವುದಾಗಿ ಬೊಮ್ಮೇಗೌಡನ ಬಳಿ ಬಂದಾಗ ಆತ ನಿರಾಕರಿಸುತ್ತಾನೆ. ನಂತರ ಬಿಳಿಗಿರಿ ರಂಗಸ್ವಾಮಿ ತನ್ನಲ್ಲಿದ್ದ ವಜ್ರದ ಹಾರವನ್ನು ಮದುವೆಗಾಗಿ ಕೊಟ್ಟಾಗ ಬೊಮ್ಮೇಗೌಡ ಎಸೆಯುತ್ತಾನೆ. ಬೊಮ್ಮೇಗೌಡನ ಪತ್ನಿ ಕೆಳಗೆ ಬಿದ್ದ ವಜ್ರಗಳನ್ನು ಆಯ್ದುಕೊಂಡಾಗ ಸಿಗುವುದು ಕೇವಲ 12 ಹರಳು ಮಾತ್ರ. ಅಂದಿನಿಂದ ಸೋಲಿಗರು 12 ಆಣೆಯಲ್ಲಿ ಮದುವೆಯಾಗುವ ಪದ್ಧತಿ ಆರಂಭಿಸಿದರು. ಈಗ ಈ ಪದ್ಧತಿ 12.25 ರುಪಾಯಿಗಳಾಗಿದೆ.
ರೊಟ್ಟಿ ಹಬ್ಬದ ವೇಳೆ ಧರಿಸುವ ಕೊರಳ ಮಾಲೆ ವಿಶೇಷ ಆಕರ್ಷಣೆ. ಇದನ್ನು ಸತ್ತ ಹೆಬ್ಬಾವಿನ ಅಸ್ತಿಪಂಜರದ ತುಂಡುಗಳನ್ನು ಪೋಣಿಸಿ ಮಾಡಲಾಗುತ್ತದೆ. ಆ ಮೂಳೆಗಳ ತುಂಡಿನ ಮಧ್ಯೆ ಗೆಜ್ಜೆಗಳನ್ನು ಕಟ್ಟಿರುತ್ತಾರೆ. ಇವರಿಗೆ ಈ ಮಾಲೆ ಪ್ರತಿ ಹಬ್ಬದಲ್ಲೂ ವಿಶೇಷ ಆಭರಣವಂತೆ.
- ಅರುಣ ಎಂ.ಜಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


