ಬೈಟುಕಾಫಿ

ನಟನೆಯೇ ಧರ್ಮು

'ಮಲೆಗಳಲ್ಲಿ ಮದುಮಗಳು' ನಾಟಕವನ್ನು ವೀಕ್ಷಿಸಿದ್ದರೆ ಈ ಪುಟ್ಟ ಪೋರ ನಿಮ್ಮ ಕಣ್ಣಿಗೆ...

ನಟನೆಯೇ ಧರ್ಮು
Published On :

'ಕೇಳು ಪರನಿಂದಕನೆ ನಿಂದ್ಯನೂ...' ತನ್ನ ಸಹಪಾಠಿಗಳ ಜತೆ ಬಾಯಿಪಾಠ ಹೊಡೆಯುತ್ತಾ, ಗುರುಗಳಿಗೇ ಮಂಕುಬೂದಿ ಎರಚುವ ಪೋರ. ಗುರುಗಳು ಅತ್ತಿತ್ತ ಸುಳಿದರೆ ಸಾಕು ಬಾಲ ಬಿಚ್ಚಿ, ಮಾತಿಗಿಳಿಯುವ, ಗುರುಗಳನ್ನು ಕಂಡಾಗ ಓಡಿಬರಲು ಆಗದೆ, ಏಳೆಂಟು ಅಡಿ ಮೇಲಿಂದ ಚಂಗನೆ ಹಾರುವ ಚೂಟಿ.
ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮದ ಆವರಣದ ತಣ್ಣನೆಯ ಗಾಳಿ, ಜೀಗುಡುವ ಜೀರುಂಡೆಗಳು, ಗೌ ಎನ್ನುವ ಕತ್ತಲ ನಡುವೆ ರಾಷ್ಟ್ರಕವಿ ಕುವೆಂಪು 'ಮಲೆಗಳಲ್ಲಿ ಮದುಮಗಳು' ನಾಟಕವನ್ನು ವೀಕ್ಷಿಸಿದ್ದರೆ ಈ ಪುಟ್ಟ ಪೋರ ನಿಮ್ಮ ಕಣ್ಣಿಗೆ ಬಿದ್ದಿರುತ್ತಾನೆ.
ಇಡೀ ನಾಟಕದಲ್ಲಿ 70ಕ್ಕೂ ಹೆಚ್ಚು ಹಿರಿಯ ಕಲಾವಿದರಿದ್ದಾರೆ. ಅವರ ನಡುವೆ ಒಬ್ಬನೇ ಈ ಪುಟ್ಟ. ಹೆಸರು ಅನಿಲ್. ನಾಟಕದಲ್ಲಿ ಧರ್ಮು. ಒಂದು ಪಾತ್ರದಲ್ಲಿ ವಿದ್ಯಾರ್ಥಿ. ಮತ್ತೊಂದರಲ್ಲಿ ಕುಟುಂಬದವರಿಂದ ನಿಂದನೆಗೊಳಗಾದ ತಾಯಿಯನ್ನು ಸಮಾಧಾನ ಮಾಡುವ ಬಾಲಕ.
ನಾಟಕದ ಮಧ್ಯೆ 2 ಬಾರಿ ಸುಮಾರು 30 ನಿಮಿಷ ಬಂದುಹೋಗುವ ಈತ ನಿಜಕ್ಕೂ ಒಂದು ಕ್ಷಣ ಪ್ರೇಕ್ಷಕರ ಗಮನ ಸೆಳೆಯುತ್ತಾನೆ.
ಒಂದು ದಿನ ರಾತ್ರಿ ನಾಟಕಕ್ಕೆ ಹೋಗಿ ನಿದ್ದೆಗೆಡುವುದೆಂದರೆ ಗೊಣಗಾಡುವವರಿದ್ದಾರೆ. ಆದರೆ ಈ ಪುಟಾಣಿ ಪ್ರತಿ ರಾತ್ರಿ ಎಚ್ಚರಿರುತ್ತಾನೆ. ತನಗೆ ವಹಿಸಿದ ಎರಡು ಪಾತ್ರಗಳನ್ನು ಅಚ್ಚುಕಟ್ಟಾಗಿ ಮಾಡುತ್ತಾನೆ. ಅದರಲ್ಲೂ ವಿದ್ಯಾರ್ಥಿ ಪಾತ್ರ ನೋಡುಗರಲ್ಲಿ ನಗು ತರಿಸುತ್ತದೆ.
ಈತನ ಜತೆ 'ಕನ್ನಡಪ್ರಭ ಪತ್ರಿಕೆ' ನಡೆಸಿದ ಮಾತುಕತೆ ಇಲ್ಲಿದೆ. ಅದನ್ನು ಆತನ ಬಾಯಿಂದಲೇ ಕೇಳಿ.
ಕುಣಿಗಲ್ನ ಕಿಚವಡಿ ನಮ್ಮೂರು. ಅಪ್ಪ ವೆಂಕಟೇಶ್, ಅಮ್ಮ ಲಕ್ಷ್ಮಿ. ಅಕ್ಕ, ಅಣ್ಣ ಇದಾರೆ. ಆತ ಪಿಯುಸಿ, ಆಕೆ 10ನೇ ತರಗತಿ. ತಂದೆ ವ್ಯವಸಾಯ.
ನಾನು ಚಿಕ್ಕವನಿದ್ದಾಗಿಂದಲೇ ದೊಡ್ಡಪ್ಪ ಸಿ.ಲಕ್ಷ್ಮಣ್ ಅವರ ಮನೆಯಲ್ಲಿದ್ದೇನೆ. ಸದ್ಯ ಉತ್ತರಹಳ್ಳಿ ಸಮೀಪದ ಗೌಡನಪಾಳ್ಯದಲ್ಲಿ ವಾಸ. ಪ್ರಾರ್ಥನಾ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದೇನೆ.
ನಾನು ಈ ಹಿಂದೆ ಸುಮಾರು 70 ನಾಟಕ, ಚಿತ್ರಗಳಲ್ಲೂ ನಟಿಸಿದ್ದೇನೆ. ಅವುಗಳಲ್ಲಿ ಬೊಮ್ಮನಹಳ್ಳಿ ಕಿಂದರಿಜೋಗಿ, ನನ್ನ ಗೋಪಾಲ ಹಾಗೂ ಕಾರಣಿಕ ಶಿಶು (ನಾಟಕ, ಚಿತ್ರ), ಸ್ಮಶಾನದ ಮಕ್ಕಳು, ಮೋಡಣ್ಣನ ತಮ್ಮ, ಜರಾಸಂಧ, ಮಂಜಿನ ಹನಿ, ಕಿರಾತಕ, ನಾವು ಗೆಳೆಯರು, ನೇತ್ರಾವತಿ(ಕಿರುಚಿತ್ರ) ಕೆಲವು. ನನ್ನ ದೊಡ್ಡಪ್ಪ ಸಾಹಿತ್ಯಾಸಕ್ತ. ಅವರಿಗೆ ಬಸವಲಿಂಗಯ್ಯರ ಪರಿಚಯವಿದೆ. ಬಸು ಸರ್ಗೆ ನನ್ನ ಬಗೆಗೂ ಗೊತ್ತಿತ್ತು.

ನಿದ್ದೆ ಬರುತ್ತೆ
ಈ ನಾಟಕಕ್ಕೆ ತಿಂಗಳು ತರಬೇತಿ ಪಡೆದೆ. ಮೇಲಿಂದ ಜಿಗಿಯಲು ಕಷ್ಟ ಎನಿಸಲಿಲ್ಲ. ಹೀಗೆ ಮಾಡಿದರೆ ಹೇಗಿರುತ್ತದೆ ಎಂದು ನಾನೇ ಕೇಳಿದೆ. ಒಪ್ಪಿದರು. ಅದನ್ನೇ ರೂಢಿಸಿಕೊಂಡಿದ್ದೇನೆ.
ನಾಟಕ ರಾತ್ರಿ 9 ಗಂಟೆ ಇರುವುದರಿಂದ ನಿದ್ದೆ ಬರುತ್ತೆ. ಕಂಟ್ರೋಲ್ ಮಾಡುತ್ತೇನೆ. ಆಗದಿದ್ದರೆ ನನ್ನ ಪಾತ್ರ ಮುಗಿಸಿ ಒಂದು ಕೋಳಿ ನಿದ್ದೆ ಮಾಡುತ್ತೇನೆ. ಮುಂದಿನ ಪಾತ್ರ ಬಂದಾಗ ಎಬ್ಬಿಸುತ್ತಾರೆ.

ಕಥೆ ಕೇಳಿದ್ದೇನೆ
ಕಾದಂಬರಿ ಓದಿಲ್ಲ. ಕಥೆ ಕೇಳಿದ್ದೇನೆ. ಅಲ್ಲಿ ಬರುವ ಪಾತ್ರಗಳು ಗೊತ್ತು. ವಿವರಿಸಿ ಹೇಳಲು ಅಗಲ್ಲ. ಒಟ್ಟಾರೆ ಕಾದಂಬರಿ ಏನು ಹೇಳುತ್ತದೆ, ಅಲ್ಲಿನ ಸಂಸ್ಕೃತಿ ಹೇಗೆ ನಾಶ ಆಗುತ್ತದೆ, ಅಸ್ಪ ಶ್ಯತೆ ಇತ್ಯಾದಿ ಬಗ್ಗೆ ಹೇಳಿದ್ದಾರೆ. ನನ್ನ ಪಾತ್ರ ಖುಷಿ ಕೊಟ್ಟಿದೆ. ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದೇನೆ.
ಪಾತ್ರದ ಬಗ್ಗೆ ಯಾರಿಂದಲೂ ಹೇಳಿಸಿಕೊಂಡಿಲ್ಲ. ಚೆನ್ನಾಗಿ ಮಾಡಿಲ್ಲ ಎಂದು ಯಾರೂ ಹೇಳಿಲ್ಲ.

ಬಿಡುವಿನ ವೇಳೆ ಓದು
7 ವರ್ಷದಿಂದ ದೊಡ್ಡಪ್ಪನ ಮನೆಯಲ್ಲಿದ್ದೇನೆ. ಅಪ್ಪ ಅಮ್ಮ ಆಗಾಗ ಬಂದು ಹೋಗುತ್ತಾರೆ. ನಾನು ಹೋಗಿಬರುತ್ತೇನೆ. 7ನೇ ತರಗತಿ ಪುಸ್ತಕ ತಂದಿದ್ದೇನೆ. ಬಿಡುವಿದ್ದಾಗ ಪುಸ್ತಕ, ಪೇಪರ್ ಓದುತ್ತೇನೆ. ಅಕ್ಕ, ಅಣ್ಣಂದಿರ ಜೊತೆ ಕಾಲ ಕಳೀತೇನೆ. ಅಭಿನಯದ ಬಗ್ಗೆ ಮನೇಲಿ ಖುಷಿ ಇದೆ. ಚೆನ್ನಾಗಿ ಓದು ಅಂತಾರೆ. ಇದರಿಂದ ಬಂದ ಹಣ ನನ್ನ ಖಾತೆ ಸೇರುತ್ತೆ. ವಿದ್ಯಾಭ್ಯಾಸಕ್ಕೆ ಸುಲಭವಾಗಲಿ ಎಂಬುದು ಮನೆಯವರ ಆಶಯ. ಇದೇ ವಿಷಯ ಇಷ್ಟ ಎಂದಲ್ಲ. ಎಲ್ಲವನ್ನೂ ಇಷ್ಟಪಟ್ಟು ಓದುತ್ತೇನೆ. ಎಲ್ಲ ಸ್ನೇಹಿತರೂ ನನಗೆ ಇಷ್ಟವೇ.

-ಶಾಂತ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.