ಬೈಟುಕಾಫಿ

ಗುರುವಾಯನಕೆರೆ

ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಮಂದಿ ಗುರುವಾಯನಕೆರೆ ಪ್ರೌಢಶಾಲೆಯತ್ತ ಒಮ್ಮೆ ಗಮನ ಹರಿಸಿ.

ಗುರುವಾಯನಕೆರೆ
Published On :

ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಮಂದಿ ಗುರುವಾಯನಕೆರೆ ಪ್ರೌಢಶಾಲೆಯತ್ತ ಗಮನ ಹರಿಸುವುದು ಒಳ್ಳೆಯದು. ಯಾವುದೇ ಶ್ರೀಮಂತ ಖಾಸಗಿ ಶಾಲೆಗಳನ್ನು ಮೀರಿಸುವ ವ್ಯವಸ್ಥೆಯುಳ್ಳ ಈ ಶಾಲೆ ಫಲಿತಾಂಶದಲ್ಲೂ ಇತರ ಶಾಲೆಗಳನ್ನು ಹಿಂದಿಕ್ಕಿದ ದಾಖಲೆ ಹೊಂದಿದೆ. ಈ ಬಾರಿಯ ಹತ್ತನೇ ತರಗತಿ ಫಲಿತಾಂಶದಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ಪೈಕಿ ಶೇ.100 ಫಲಿತಾಂಶ ಪಡೆದ ಏಕೈಕ ಶಾಲೆ ಎಂಬ ಹೆಗ್ಗಳಿಕೆ ಗಳಿಸಿದೆ. ಅದೂ ಸತತ ಎರಡನೇ ಬಾರಿಗೆ.

ಆದರ್ಶ ಅಂಶಗಳು
ಕಳೆದ ಸಾಲಿನಲ್ಲಿ 153 ಮಕ್ಕಳು ವ್ಯಾಸಂಗ ಮಾಡಿದ್ದು, ಅಗತ್ಯವುಳ್ಳಷ್ಟು ತರಗತಿ ಕೋಣೆಗಳಿವೆ. ಆಡಿಯೊ ವಿಡಿಯೊ ಕೊಠಡಿ ಇದ್ದು, ಟಿವಿ, ಪ್ರೊಜೆಕ್ಟರ್ ಸೌಲಭ್ಯ ಇದೆ. ಇದರಿಂದ ಮಕ್ಕಳಿಗೆ ಪ್ರಾಜೆಕ್ಟ್‌ಗಳನ್ನು ಮಾಡುವುದು, ಧ್ವನಿ ಆಧಾರಿತ, ದೃಶ್ಯಾಧಾರಿತ ಪಠ್ಯ ಚಟುವಟಿಕೆ ಸುಲಭ. ತರಗತಿ ಕೋಣೆಗಳಿಗೆ ಕೃಷ್ಣಾ, ನೇತ್ರಾವತಿ ಎಂಬಂತಹ ಹೆಸರು. 11 ಕಂಪ್ಯೂಟರ್‌ಗಳಿದ್ದು, ಐದು ಲ್ಯಾಪ್‌ಟಾಪ್‌ಗಳನ್ನು ಸಂಸ್ಥೆಯೊಂದು ಕೊಡುಗೆಯಾಗಿ ನೀಡಿದೆ. ಸ್ವಚ್ಛತೆಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ. ಕುಡಿಯಲು ಶುದ್ಧ ಜಲ ಘಟಕ ಇದೆ.

ಕುಂಚ ಪ್ರಪಂಚ
ಈ ಶಾಲೆಗೆ ಕಾಲಿಟ್ಟ ಕೂಡಲೇ ಮೊದಲು ಗಮನ ಸೆಳೆಯುವುದು ಇಲ್ಲಿನ ಆಕರ್ಷಕ ಭಿತ್ತಿಚಿತ್ರಗಳು. ಇಲ್ಲಿನ ಕಲಾಶಿಕ್ಷಕ ವಿ.ಕೆ. ವಿಟ್ಲ ಅವರ ಕುಂಚದಿಂದ ಮೂಡಿಬಂದ ಆಳೆತ್ತರದ ವಿವೇಕಾನಂದ, ಬುದ್ಧನ ಚಿತ್ರಗಳು ಆಕರ್ಷಕವಾಗಿವೆ. ಕಂಬ ಕಂಬಗಳಲ್ಲೂ ಹಿತೋಕ್ತಿಗಳು, ಗೋಡೆಗಳಲ್ಲಿ ಸೂಕ್ತಿಗಳು, ಕಡ್ಡಿಚಿತ್ರಗಳು, ತರಗತಿ ಕೋಣೆಗಳಲ್ಲೂ ಮಿಂಚುವ ಚಿತ್ರಗಳು ಮಕ್ಕಳ ಮನಸ್ಸಿಗೆ ಮುದ ನೀಡುತ್ತವೆ. ಮಕ್ಕಳ ಪ್ರತಿಭೆಗೂ ಮನ್ನಣೆ ನೀಡಿ ಅವರಿಂದಲೂ ಚಿತ್ರ ಬರೆಸಿ ಗೋಡೆಯಲ್ಲಿ ನೇತು ಹಾಕುತ್ತಾರೆ. ಇಲ್ಲಿನ ಕಲಾಶಿಕ್ಷಕರು ಸರ್ಕಾರದ ಪಠ್ಯಪುಸ್ತಕ ರಚನಾ ಸಮಿತಿಯ ಚಿತ್ರಕಲಾ ವಿಭಾಗದಲ್ಲಿದ್ದು, 8ನೇ ತರಗತಿ ಪಠ್ಯದಲ್ಲಿ ಇವರು ಬಿಡಿಸಿದ ಚಿತ್ರಗಳಿವೆ.

ವಿದ್ಯಾರ್ಥಿ ವೇತನ
ನಾಗರಿಕ ಸೇವಾ ಟ್ರಸ್ಟ್‌ನ ಕೆ. ಸೋಮನಾಥ ನಾಯಕ್ ದಂಪತಿ ಈ ಶಾಲೆಯ ಅನೇಕ ಮಕ್ಕಳಿಗೆ ಪ್ರತಿವರ್ಷ ವಿದ್ಯಾರ್ಥಿ ವೇತನ ನೀಡುತ್ತಾರೆ. ಕೆಲವರು ಪುಸ್ತಕಗಳನ್ನು ನೀಡುತ್ತಾರೆ. ಸರ್ಕಾರದಿಂದ ಶೇ. 100 ಫಲಿತಾಂಶ ಪಡೆದದ್ದಕ್ಕಾಗಿ ಕಳೆದ ಬಾರಿ ರು. 10 ಸಾವಿರ ಪ್ರೋತ್ಸಾಹಧನ ದೊರೆತಿತ್ತು. ಐಸಿಟಿ ಫೇಸ್ ಕಾರ್ಯಕ್ರಮದಡಿ ಜಿಲ್ಲೆಯ 18 ಶಾಲೆಗಳಿಗೆ ಕಂಪ್ಯೂಟರ್ ತರಬೇತಿ ಶಿಕ್ಷಕರನ್ನು ನೇಮಿಸಲಾಗಿದೆ. ತಾಲೂಕಿನಲ್ಲಿರುವ ಇಂತಹ 6 ಶಾಲೆಗಳಲ್ಲಿ ಗುರುವಾಯನಕೆರೆಯೂ ಒಂದು. ಜತೆಗೆ ತಾವು ತರಬೇತಿ ನೀಡುವ ಶಾಲೆಗಳ ಪೈಕಿ ಅತಿ ಹೆಚ್ಚಿನ ಅಂಕ ಪಡೆಯುವ ಇಬ್ಬರು ವಿದ್ಯಾರ್ಥಿಗಳ ಪಿಯುಸಿ ವ್ಯಾಸಂಗಕ್ಕೆ ಎರಡೂ ವರ್ಷ ರು. 12 ಸಾವಿರ ನೀಡುತ್ತಾರೆ.  

ಪರಿಶ್ರಮಿ ವಿದ್ಯಾರ್ಥಿಗಳು
ಈ ಎರಡೂ ಬಹುಮಾನ ಪಡೆದ ವಿದ್ಯಾರ್ಥಿಗಳು ಕಠಿಣ ಪರಿಶ್ರಮಿಗಳು. 579 ಅಂಕ ಪಡೆದ ದಿವ್ಯಶ್ರೀ ರಜಾ ಅವಧಿಯಲ್ಲಿ ಅಕ್ಕಿ ಗಿರಣಿಯಲ್ಲಿ ಕೆಲಸ ಮಾಡಿ ಪಿಯುಸಿ ಕಲಿಕೆಗೆ ಹಣ ಹೊಂದಿಸಿದ್ದರು. ಈ ಸಲ ಅತಿಹೆಚ್ಚು ಅಂಕ ಪಡೆದಾತ ಹೊಟೇಲ್ ಒಂದರಲ್ಲಿ ಕೆಲಸ ಮಾಡಿ ಹಣ ಸಂಪಾದಿಸುತ್ತಿದ್ದಾನೆ. ದ್ವಿತೀಯ ಸ್ಥಾನ ಪಡೆದಾತ ಗಾರೆ ಕೆಲಸಕ್ಕೆ ಸಹಾಯಕನಾಗಿ ಹೋಗುತ್ತಿದ್ದಾನೆ! ಜಿಲ್ಲೆಯ ಒಟ್ಟು 459 ಶಾಲೆಗಳ ಪೈಕಿ 171 ಸರ್ಕಾರಿ ಶಾಲೆಗಳಲ್ಲಿ 7 ಶಾಲೆಗಳಿಗೆ ಶೇ.100 ಫಲಿತಾಂಶ ಬಂದಿದೆ. ಇದರಲ್ಲಿ ಮೂರು ಬೆಳ್ತಂಗಡಿ ತಾಲೂಕಿನವು. ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಮುಂಡಾಜೆ ನವೋದಯ ವಸತಿ ಶಾಲೆ ಹೊರತುಪಡಿಸಿದರೆ, ಕನ್ನಡ ಮಾಧ್ಯಮ ಶಾಲೆಗಳ ಪೈಕಿ ಗುರುವಾಯನಕೆರೆ ಪ್ರೌಢಶಾಲೆ, ಜಿಲ್ಲೆಯ ಫಲಿತಾಂಶದಲ್ಲಿ ಅಗ್ರಸ್ಥಾನ ಪಡೆದ ಏಕೈಕ ಶಾಲೆ.

ಶಿಕ್ಷಕರ ಕರ್ತವ್ಯನಿಷ್ಠೆ
ಶಾಲೆಗೆ ಅತ್ಯುತ್ತಮ ಫಲಿತಾಂಶ ಸುಲಭದಲ್ಲಿ ಬರಲಿಲ್ಲ. ಒಬ್ಬೊಬ್ಬ ಶಿಕ್ಷಕರಿಗೂ 10ನೇ ತರಗತಿಯ ಎಂಟೆಂಟು ಮಕ್ಕಳಂತೆ ದತ್ತು ನೀಡಲಾಗಿದೆ. ಆ 8 ಮಕ್ಕಳ ಜವಾಬ್ದಾರಿ ಆಯಾ ಶಿಕ್ಷಕರದ್ದು. ನವೆಂಬರ್ ಅಂತ್ಯದಲ್ಲಿ ಸಿಲೆಬಸ್ ಮುಗಿಸಿ ಪಬ್ಲಿಕ್ ಪರೀಕ್ಷೆಗೆ ಮುಂಚೆ 4 ಪೂರ್ವಸಿದ್ಧತಾ ಪರೀಕ್ಷೆ ನಡೆಸಲಾಗಿದೆ. ಪ್ರತಿ ಪೂರ್ವಸಿದ್ಧತಾ ಪರೀಕ್ಷೆ ಮುಗಿದ ಕೂಡಲೆ ವಿದ್ಯಾರ್ಥಿಯ ಹೆತ್ತವರನ್ನು ಕರೆಸಿ ಸಮಾಲೋಚಿಸಲಾಗಿದೆ. ಪರೀಕ್ಷಾ ಅವಧಿಯಲ್ಲಿ ವಿದ್ಯಾರ್ಥಿಗೆ ಕರೆ ಮಾಡಿ ಬೆಳಗ್ಗೆ ಎಬ್ಬಿಸುವ ಜವಾಬ್ದಾರಿಯನ್ನು ಕೂಡ ಶಿಕ್ಷಕರು ನಿಭಾಯಿಸಿದ್ದಾರೆ. ಶಾಲೆಗೆ ಬರದಿದ್ದರೆ ಮನೆಗೆ ಹೋಗಿ ಕರೆತಂದಿದ್ದಾರೆ. ವೈಯಕ್ತಿಕ ಆಸಕ್ತಿಯಿಂದ ವಿದ್ಯಾರ್ಥಿಗಳ ಪ್ರಗತಿಯ ಕಡೆಗೆ ಗಮನ ಹರಿಸಿದ್ದಾರೆ. ಏಕೆಂದರೆ ಬೇರೆಲ್ಲೂ ದಾಖಲಾತಿ ಸಿಗದೆ ಇಲ್ಲಿಗೆ ಸೇರುವವರ ಸಂಖ್ಯೆಯೂ ದೊಡ್ಡದಿದೆ. ಆದ್ದರಿಂದ ಇಲ್ಲಿ ಜುಲೈವರೆಗೂ ದಾಖಲಾತಿ ಆಗುತ್ತಲೇ ಇರುತ್ತದೆ. ಏಕೆಂದರೆ ಇದು ಸರ್ಕಾರಿ ಪ್ರೌಢಶಾಲೆ. ಹಾಗಾದರೂ ಉತ್ತಮ ಫಲಿತಾಂಶ ಬಂದಿದ್ದರೆ ನಿಷ್ಠೆಯಿಂದ ಪಾಠ ಮಾಡಿದ ಶಿಕ್ಷಕ ವೃಂದಕ್ಕೆ ಜೈ ಅನ್ನಲೇ ಬೇಕು.

- ದೀಪಕ್ ಅಳದಂಗಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.