ಮಾರುತಿ ಪ್ರತಾಪ

ಉತ್ತರ ಕರ್ನಾಟಕದಲ್ಲಿ ಕರಿಕೋತಿಗಳು ಕಾಣಿಸಿಕೊಂಡರೆ, ಮನೆಯಿಂದ ಮನೆಗೆ, ಗೋಡೆಯಿಂದ ಗೋಡೆಗೆ ಜಿಗಿದಾಡುತ್ತಿದ್ದರೆ ಮಕ್ಕಳೆಲ್ಲಾ ಹೋ ಎಂದು ಕೇಕೆ ಹಾಕುತ್ತಾ 'ಕೋತಿ ಕೋತಿ ಗೂಕ್, ಸಜ್ಜಿ ರೊಟ್ಟಿ ಗೂಕ್' ಎಂದು ಕುಣಿದಾಡುತ್ತವೆ. ಆದರೆ ಕರಿಕೋತಿಗಳು ಮಾಡುವ ಅವಾಂತರಗಳು ಒಂದೆರಡಲ್ಲ. ಮನೆಯೊಳಗಿನ ರೊಟ್ಟಿಗಳನ್ನು ಕದ್ದೊಯ್ಯುವುದು, ತೋಟದ ಬೆಳೆಗಳನ್ನು, ಶೇಂಗಾ ಬೀಜಗಳನ್ನು, ದವಸಧಾನ್ಯಗಳನ್ನು ಹಾಳು ಮಾಡುವುದು, ಹುಣಸೆಕಾಯಿ ತಿಂದು ಹಾಕುವುದು. ಮಂಗಗಳು ಮಣ್ಣಿನ ಮನೆಯ ಮಾಳಿಗೆ ಹತ್ತಿ ಕುಣಿದಾಡಿ ಮನೆಗಳು ಜಖಂಗೊಂಡು ಮಳೆಗಾಲದಲ್ಲಿ ಸೋರುವುದುಂಟು.
ಮಂಗಗಳು ಎಷ್ಟೇ ಉಪದ್ರವ ಕೊಟ್ಟರೂ ಉತ್ತರ ಕರ್ನಾಟಕದ ಜನರು ಸಿಟ್ಟಾಗಿ ಹಿಂಸಿಸಲಾರರು. ಪ್ರೀತಿಯಿಂದ ಮಂಗಗಳಿಗೆ ರೊಟ್ಟಿ ಕೊಡುತ್ತಾರೆ, ನೀರಿಡುತ್ತಾರೆ. ಮಂಗ ತಿಂದು ಬಿಟ್ಟ ಕೊಬ್ಬರಿ, ಹುಣಸೇಕಾಯಿ, ಹಣ್ಣು ಪದಾರ್ಥ ತಿಂದರೆ ಕೆಮ್ಮು ಕಡಿಮೆಯಾಗುತ್ತದೆ. ಅದು ದೇವರ ಪ್ರಸಾದ, ಅದು ಬರೀ ಕೋತಿಯಲ್ಲ, ರಾಮಭಂಟ ಆಂಜ ನೇಯನ ಅವತಾರ ಎಂಬ ನಂಬಿಕೆ ಈ ಭಾಗದಲ್ಲಿದೆ. ವಿದ್ಯುತ್ ತಂತಿ ಸ್ಪರ್ಶಿಸಿಯೋ, ಮೇಲಿಂದ ಬಿದ್ದೋ ಮಂಗಗಗಳು ಮೃತಪಟ್ಟರೆ ಜನರೆಲ್ಲಾ ಸೇರಿ ಹೂವು ಹಾರ ತುರಾಯಿ ಹಾಕಿ ಪೂಜೆ ಮಾಡಿ ಊರೆಲ್ಲಾ ಮೆರವಣಿಗೆ ಮಾಡಿ ಸಂಸ್ಕಾರ ಮಾಡುತ್ತಾರೆ.
ಮಲೆನಾಡಿನ ಕೆಲವೆಡೆ ಗದ್ದೆ, ತೋಟದ ಬೆಳೆಗಳಿಗೆ ಉಪದ್ರವ ಕೊಡುವ ಮಂಗಗಳನ್ನು ನಿರ್ದಾಕ್ಷಿಣ್ಯವಾಗಿ ಬಂದೂಕಿನಿಂದ ಗುಂಡಿಟ್ಟು ಸಾಯಿಸಲಾಗುತ್ತದೆ ಅಂತ ಹೇಳುವುದನ್ನು ಕೇಳಿದ್ದೇವೆ. ಶಿರಸಿ ಹತ್ತಿರದ ರೈತರು ಮಂಗಗಳನ್ನು ಗಡಿಪಾರು ಮಾಡಬೇಕೆಂದು ಗೋಳಿಟ್ಟಿದ್ದು ಕೇಳಿದ್ದೇವೆ.
ತೀರ್ಥಹಳ್ಳಿ ಬಳಿ ಈ ಕರಿಕೋತಿಗಳನ್ನು ಬುಕ್ಕ, ಮುಸಿ ಅಂತ ಕರೆಯಲಾಗುತ್ತದೆ. ಈ ಬುಕ್ಕಗಳನ್ನು ತಿನ್ನುವ ಜನಾಂಗವಿಲ್ಲಿದೆ. ಇವರನ್ನು ಬುಕ್ಕದ ಹೆಸರಿನ ಜತೆಗೆ ಜೋಡಿಸಿಯೇ ಈ ಭಾಗದಲ್ಲಿ ಕರೆಯುವುದುಂಟು. ಇವರಿಗೆ ಈ ಕರಿಕೋತಿ ಅತ್ಯಂತ ಪ್ರಿಯವಾದ ಆಹಾರ. ಈ ಕರಿಕೋತಿಯ ತಲೆ ರಕ್ತ ಕುಡಿದರೆ ಎಲ್ಲಾ ರೋಗಗಳು ನಿವಾರಣೆಯಾಗುತ್ತವೆ ಎಂಬ ಮೂಢನಂಬಿಕೆ ಅವರಲ್ಲಿದೆ.
ಹೀಗೆ ಒಂದೆಡೆ ಪೂಜೆಗೆ, ಮತ್ತೊಂದೆಡೆ ಭಕ್ಷಣೆಗೆ ಪಾತ್ರವಾಗಿರುವ ಈ ಕರಿಕೋತಿ ಸ್ವಭಾವತಃ ಸೌಮ್ಯ ಹಾಗೂ ನಿರುಪದ್ರವಿ, ಸಂವೇದನಾಶೀಲ ಜೀವಿ. ತನ್ನ ಆಹಾರ, ಅಸ್ತಿತ್ವಕ್ಕಾಗಿ ಊರೇನು, ಕಾಡೇನು ಅಂತ ಅಲೆದಾಡಿ ಬದುಕುತ್ತಿದೆ.
- ಸುರೇಶ ಜಾಲಹಳ್ಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


