ಬೈಟುಕಾಫಿ

ಅನ್ನಲೇಬೇಕು!

ಒಪ್ಪೊತ್ತಿನ ಅನ್ನಕ್ಕೂ ಗತಿಯಲ್ಲದೆ ಹಸಿವಿನಿಂದ ನರಳುವವವರು ಒಂದೆಡೆ, ಅಜೀರ್ಣವಾಗುವಷ್ಟು ತಿಂದು ಚೆಲ್ಲುವವರು ಇನ್ನೊಂದೆಡೆ.

ಅನ್ನಲೇಬೇಕು!
Published On :

ಎಲ್ಲೋ ಹಸಿದು ಕುಳಿತಿರುವವರ ಹೊಟ್ಟೆ ತುಂಬಿಸಲು ಆಗದಿದ್ದರೂ, ನಾವು ಎಷ್ಟು ಬೇಕೋ ಅಷ್ಟು ಹಾಕಿಸಿಕೊಂಡು ಆಹಾರದ ಬಗೆಗೊಂದಿಷ್ಟು ಕಾಳಜಿ ವಹಿಸಬೇಕಿರುವುದು ಈ ದಿನಗಳ ಅಗತ್ಯ...

ಇದು ಊಟದ ವಿಷ್ಯ. ಒಪ್ಪೊತ್ತಿನ ಅನ್ನಕ್ಕೂ ಗತಿಯಲ್ಲದೆ ಹಸಿವಿನಿಂದ ನರಳುವವವರು ಒಂದೆಡೆ, ಅಜೀರ್ಣವಾಗುವಷ್ಟು ತಿಂದು ಚೆಲ್ಲುವವರು ಇನ್ನೊಂದೆಡೆ. ಮದುವೆ, ಮುಂಜಿಯಂಥ ಫಂಕ್ಷನ್‌ನಲ್ಲೂ ಇದೇ ಹಣೆಬರಹ. ಅನ್ನ ಬಿಡುವುದು ಸಿರಿವಂತರಿಗೆ ಫ್ಯಾಶನ್ ಆಗಿರುವುದು ದುರಂತ.

ಎಲ್ಲೋ ಹಸಿದು ಕುಳಿತಿರುವವರ ಹೊಟ್ಟೆ ತುಂಬಿಸಲು ಆಗದಿದ್ದರೂ, ನಾವು ಎಷ್ಟು ಬೇಕೋ ಅಷ್ಟು ಹಾಕಿಸಿಕೊಂಡು ಆಹಾರದ ಬಗೆಗೊಂದಿಷ್ಟು ಕಾಳಜಿ ವಹಿಸಬೇಕಿರುವುದು ಈ ದಿನಗಳ ಅಗತ್ಯ. ಈ ನಿಟ್ಟಿನಲ್ಲಿ ಊಟ ಮಾಡುವವರು ಮತ್ತು ಅದನ್ನು ಬಡಿಸುವವರು ಕೆಲವು 'ನೀತಿ ಸಂಹಿತೆ'ಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಲೇಬೇಕು.

ತಿನ್ನುವವರು ಹೀಗೆ ಮಾಡಿ...

  • 'ಸಾವಕಾಶ' ತಿನ್ನಿ ಎಂಬುದು ಪುರಾತನ ನುಡಿ. ಇದರ ನಿಜಾರ್ಥ 'ಸ ಅವಕಾಶ' (ವಿತ್ ಸ್ಪೇಸ್) ಅಂದರೆ ತಿಂದಮೇಲೂ ಹೊಟ್ಟೆಯೊಳಗೆ ಸ್ವಲ್ಪ ಖಾಲಿ ಜಾಗ ಇರಲಿ ಎಂದು. ಕಂಠಮಟ್ಟ ತಿಂದು ಅಜೀರ್ಣ ಮಾಡಿಕೊಳ್ಳದೇ ಗಾಳಿಯಾಡಲು ಅವಕಾಶವಿಡಿ ಎಂದು. ಇದು ಹಿಂದಿನವರ ಆಹಾರ ಜಾಗೃತಿ ಮಾತ್ರವಲ್ಲದೆ ಆರೋಗ್ಯ ಜಾಗೃತಿಯನ್ನೂ ಸೂಚಿಸುತ್ತದೆ.
  • ಊಟ ಪ್ರಾರಂಭವಾಗುವ ಒಂದು ಗಂಟೆ ಮುಂಚೆ ಏನನ್ನೂ ತಿನ್ನದಿರಿ. ಮುಂದಿನ ಊಟಕ್ಕೆ ನಿಮ್ಮ ಮನಸ್ಸು, ದೇಹವನ್ನು ಸಜ್ಜುಗೊಳಿಸಿಕೊಂಡಿರಿ. ಬಾಯಿ ಚಪಲಕ್ಕಾಗಿ ಮೊದಲೇ ತಿಂದರೆ ಊಟಕ್ಕೆ ಕುಳಿತಾಗ ಏನೂ ಸೇರುವುದಿಲ್ಲ. ಆಗ ಬಡಿಸಿದ್ದೆಲ್ಲವನ್ನೂ ಅಲ್ಲೇ ಬಿಡಬೇಕಾಗುವುದು.
  • ಊಟದೆಲೆಯ ಮುಂದೆ ಕುಳಿತಾಗ ಯಾವ ಪದಾರ್ಥಗಳು ಬರುತ್ತವೆ ಎಂದು ಗಮನಿಸುತ್ತಿರಬೇಕು. ಯಾವುದು ಬೇಡವೆನಿಸುತ್ತದೋ ಅದನ್ನು ಕೈಮುಂದೆ ಮಾಡಿ ಬೇಡ ಎನ್ನಲು ಯಾವುದೇ ನಾಚಿಕೆ ಪಡಬೇಕಾಗಿಲ್ಲ. ಅಥವಾ ಸ್ವಲ್ಪ ಹಾಕಿಸಿಕೊಂಡರೆ ಸಾಕು.
  • ಈ ಪದಾರ್ಥ ಹಾಕಿಸಿಕೊಳ್ಳದಿದ್ದರೆ ಅವರೇನು ತಿಳಿದುಕೊಳ್ಳುತ್ತಾರೋ, ಇವರು ಏನು ಹೇಳುತ್ತಾರೋ ಎಂಬ ಕೀಳರಿಮೆ ಬೇಕಾಗಿಲ್ಲ. ನಿಮ್ಮ ಹೊಟ್ಟೆಗೆ ಬೇಕಿದನ್ನು ಮಾತ್ರ ಹಾಕಿಸಿಕೊಂಡು ತಿನ್ನಿ.
  • ಮಾಡಿದ ಎಲ್ಲಾ ಪದಾರ್ಥಗಳನ್ನು ತಿನ್ನಲೇಬೇಕೆಂದಿಲ್ಲ. ಹೊಟ್ಟೆ ತುಂಬಿದೆ ಎಂದಾಕ್ಷಣ ತಿನ್ನುವುದನ್ನು ನಿಲ್ಲಿಸಿಬಿಡಿ.
  • ಊಟದಿಂದ ಏಳುವ ಮುನ್ನ ಹಾಕಿಸಿಕೊಂಡ ಪದಾರ್ಥಗಳನ್ನೆಲ್ಲಾ ತಿಂದು ಎಲೆಯನ್ನು ಆದಷ್ಟು ಖಾಲಿಯಾಗಿ ಇರಿಸಲು ಪ್ರಯತ್ನಿಸಿ.
  • ಬಡಿಸುವವರು ಹೀಗೆ ಮಾಡಿ...
  • ಯಾವುದೇ ಪದಾರ್ಥವನ್ನು ಮೊದಲು ಸ್ವಲ್ಪ ಬಡಿಸಿ, ತಿನ್ನುವವರು ಬೇಕು ಎಂದಾಗ ಮಾತ್ರ ಇನ್ನಷ್ಟು ಬಡಿಸಿ.
  • ಬೇಡ, ಬೇಡವೆಂದರೂ ಒತ್ತಾಯಿಸಿ ಬಡಿಸಲು ಹೋಗಬೇಡಿ.
  • ಒಂದು ಎಲೆಯಿಂದ ಇನ್ನೊಂದು ಎಲೆಗೆ ಬಡಿಸುವಾಗ ಎಚ್ಚರಿಗೆ ಅಗತ್ಯ. ಮಧ್ಯದಲ್ಲಿ ಸಾಕಷ್ಟು ಸೋರಿಕೆ ಉಂಟಾಗುವಂತೆ ಮಾಡಿ ಆಹಾರ ಪದಾರ್ಥಗಳನ್ನು ವ್ಯರ್ಥ ಮಾಡದಿರಿ.
  • ಮಕ್ಕಳು ಊಟಕ್ಕೆ ಕುಳಿತಾಗ ಅವರಿಗೂ ದೊಡ್ಡವರಿಗೆ ಬಡಿಸುವಷ್ಟೇ ಪ್ರಮಾಣದಲ್ಲಿ ಬಡಿಸಬೇಡಿ. ಖಾರವೆನಿಸಿದ ಪದಾರ್ಥಗಳನ್ನು ಮಕ್ಕಳಿಗೆ ಬಡಿಸದಿರುವುದೇ ಸೂಕ್ತ.
  • ಮಾಡಿದ ಅಡುಗೆಗಳನ್ನು ಅವಸರದಲ್ಲಿ ಬಡಿಸಲು ಹೋಗಬೇಡಿ. ಒಂದು ಪದಾರ್ಥದಿಂದ ಇನ್ನೊಂದು ಪದಾರ್ಥ ಬಡಿಸುವಾಗ ನಿರ್ದಿಷ್ಟ ಸಮಯದ ಅಂತರವಿರಲಿ. ತಿನ್ನುವವರು ಸಾವಧಾನದಿಂದ ತಿನ್ನಲು ಸಹಾಯವಾಗುತ್ತದೆ.
  • ಇವು ತಿನ್ನುವರರು ಮತ್ತು ಬಡಿಸುವವರಿಗೆ ಕೆಲವು ಸಲಹೆಗಳಾದರೆ. ಕಾರ್ಯಕ್ರಮದ ಕರ್ತೃಗಳು ಆಹಾರ ಸಂರಕ್ಷಣೆಗೆ ಕೆಲವು ನಿಯಮವನ್ನು ಪಾಲಿಸಲೇಬೇಕು.
  • ಎಷ್ಟೇ ಶ್ರೀಮಂತರಾಗಿದ್ದರೂ ಸಮಾರಂಭಗಳಲ್ಲಿ ಹೆಚ್ಚಿನ ಆಹಾರ ಪದಾರ್ಥ ಮಾಡಿಸಿ ನಿಮ್ಮ ಸಿರಿವಂತಿಕೆ ತೋರಿಸಬೇಕಾಗಿಲ್ಲ. ಬೆರಳೆಣಿಕೆಯ ಪದಾರ್ಥವನ್ನು ಮಾಡಿ ಅದರಲ್ಲೇ ಬಂದವರನ್ನು ತೃಪ್ತಿಪಡಿಸಬಹುದು.
  • ಎಷ್ಟೇ ಆತ್ಮೀಯರಾಗಿದ್ದರೂ ಊಟದ ಸಂದರ್ಭದಲ್ಲಿ ಅವರಿಗೆ ಇನ್ನಷ್ಟು ಹಾಕಿಸಿ ನಿಮ್ಮ ಆತ್ಮೀಯತೆ ಪ್ರದರ್ಶಿಸಬೇಕಿಲ್ಲ. ಇದರಿಂದ ಅವರು ಎಲೆಯಲ್ಲೇ ಆಹಾರ ಬಿಟ್ಟು ಬಿಡುವ ಸಂಭವವಿರುತ್ತದೆ.
  • ಸಮಾರಂಭಗಳಲ್ಲಿ ಕಡ್ಡಾಯವಾಗಿ 'ಬಫೆ' ಸಿಸ್ಟಮ್ ಇರುವಂತೆ ನೋಡಿಕೊಳ್ಳಿ. ಇದರಿಂದ ತಮಗೆ ಯಾವುದು ಬೇಕೋ ಅದನ್ನು ಮಾತ್ರ ಹಾಕಿಸಿಕೊಳ್ಳುವ ಸ್ವಾತಂತ್ರ್ಯ ತಿನ್ನವವರಿಗಿರುತ್ತದೆ. ಇದರಿಂದ ಒಂದಿಷ್ಟು ಆಹಾರ ವ್ಯರ್ಥವಾಗುವುದನ್ನು ತಡೆಯಬಹುದು.
  • ಅಡುಗೆ ಮಾಡಿಸುವಾಗ ಸ್ವಲ್ಪ ಕಡಿಮೆಯೇ ಮಾಡಿಸಿ. ಬೇಕಾದರೆ ನಂತರ ಅದನ್ನು ಹೆಚ್ಚಿಸಬಹುದು.
  • ಮಾಡಿದ ಪದಾರ್ಥಗಳು ಉಳಿದರೆ ಯಾವುದಾದರೂ ಅನಾಥಾಶ್ರಮ, ಹಾಸ್ಟೆಲ್‌ಗಳಿಗೆ ನೀಡಬಹುದು.
ಸುಧೀಂದ್ರ ಜಮ್ಮಟಿಗೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.