ನವಜಾತ ಶಿಶುವನ್ನೂ ಕಾಡುವ ಲ್ಯಾಕ್ಟೋಸ್ ಅಲರ್ಜಿ

ಹಾಲು ಎಷ್ಟೇ ಪೌಷ್ಟಿಕಾಂಶಗಳನ್ನು ಹೊಂದಿದ್ದರೂ ಬಹುತೇಕರಿಗೆ 'ಲ್ಯಾಕ್ಟೋಸ್ ಅಲರ್ಜಿ' ಇರುತ್ತದೆ ಎಂದರೆ ಆಶ್ಚರ್ಯ ಆಗುವುದು ಸಹಜ. ನಿಮಗೆ ನಂಬಲು ಅಸಾಧ್ಯವಾದರೂ ವೈದ್ಯಕೀಯ ಲೋಕದ ಪ್ರಕಾರ ಇದು ಸತ್ಯ. ವಿಶ್ವ ಜನಸಂಖ್ಯೆಯ ಶೇ 70ರಷ್ಟು ಮಂದಿಗೆ 'ಲ್ಯಾಕ್ಟೋಸ್ ಅಲರ್ಜಿ' ಇದೆ ಎನ್ನುತ್ತವೆ ವರದಿಗಳು. ಅಪರೂಪಕ್ಕೆ ಆಗತಾನೆ ಹುಟ್ಟಿದ ಶಿಶುಗಳಲ್ಲಿ ಕೂಡ ಈ ಅಲರ್ಜಿ ಕಾಣಿಸಿಕೊಳ್ಳಬಹುದು. ಹುಟ್ಟುತ್ತಲೇ ಈ ತೊಂದರೆ ಇರುವವರಿಗೆ ಎದೆ ಹಾಲು ಸೇರಿದಂತೆ ಲ್ಯಾಕ್ಟೋಸ್ ಇರುವ ಏನನ್ನೂ ಸೇವಿಸಲು ಸಾಧ್ಯವಾಗುವುದಿಲ್ಲ. ಆದರೆ ವಯಸ್ಕರಲ್ಲಿ ಸಮಸ್ಯೆ ಅಷ್ಟು ತೀವ್ರವಾಗಿರುವುದಿಲ್ಲ. ಲ್ಯಾಕ್ಟೋಸ್ ಅಲರ್ಜಿಯನ್ನು ಫುಡ್ ಅಲರ್ಜಿ ಎಂದು ಭಾವಿಸುವುದು ಸರಿಯಲ್ಲ. ಇವೆರಡೂ ಬೇರೆಬೇರೆ. ಹದಿವಯಸ್ಸಿನವರು ಮತ್ತು ದೊಡ್ಡವರಲ್ಲಿ ಈ ತೊಂದರೆ ಇದ್ದರೆ ಅವರಿಗೆ ಹಾಲು ಕುಡಿಯಲು ಆಗುವುದೇ ಇಲ್ಲ ಅಂತಲ್ಲ. ಸ್ವಲ್ಪಪ್ರಮಾಣದಲ್ಲಿ ಕುಡಿದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಒಂದು ಹಂತ ದಾಟಿದರೆ ಅಲರ್ಜಿ ಶುರುವಾಗುತ್ತದೆ. ಕೆಲವು ವ್ಯಕ್ತಿಗಳಿಗೆ ಹಾಲು ಮಾತ್ರವಲ್ಲ, ಐಸ್ಕ್ರೀಂ ಸೇರಿದಂತೆ ಹಾಲಿನ ಯಾವುದೇ ಉತ್ಪನ್ನಗಳನ್ನು ಸೇವಿಸಿದರೂ ತೊಂದರೆ ಶುರುವಾಗಬಹುದು. ಇದು ಆಯಾ ವ್ಯಕ್ತಿಗಳ ಮೇಲೆ ಅವಲಂಬಿತ. ಲ್ಯಾಕ್ಟೋಸ್ ಅಲರ್ಜಿಯ ಇರುವಿಕೆ ಗೊತ್ತಾಗುವುದೇ ಹೊಟ್ಟೆಯ ಮೂಲಕ. ಹೊಟ್ಟೆ ಉಬ್ಬರಿಸುವುದು, ಹೊಟ್ಟೆ ನೋವು ಅಥವಾ ಸೆಳೆತ, ಹೊಟ್ಟೆಯಲ್ಲಿ ಗುಳುಗುಳು ಅನುಭವ, ಭೇದಿ, ಅತಿಸಾರ, ಗ್ಯಾಸ್ಟ್ರಿಕ್ ಇವು ಲ್ಯಾಕ್ಟೋಸ್ ಅಲರ್ಜಿಯ ಪ್ರಮುಖ ಲಕ್ಷಣಗಳು.
ಅಷ್ಟಕ್ಕೂ ಲ್ಯಾಕ್ಟೋಸ್ ಅಲರ್ಜಿ ಎಂದರೆ ಏನು? ಇದು ಹೇಗೆ ಉಂಟಾಗುತ್ತದೆ? ಇದಕ್ಕೆ ಪರಿಹಾರವೆಂತು? ಇಂಥ ಹಲವು ಅನುಮಾನಗಳು ನಿಮ್ಮ ಮನಸ್ಸಿನಲ್ಲಿ ಸುಳಿದಾಡುತ್ತಿರಬಹುದು. ಹಾಲಿನಲ್ಲಿ ಲ್ಯಾಕ್ಟೋಸ್ ಎನ್ನುವ ಪದಾರ್ಥ ಇರುತ್ತದೆ. ಅದು ಒಂದು ಬಗೆಯ ನೈಸರ್ಗಿಕ ಸಕ್ಕರೆ. ಅದು ಜೀರ್ಣವಾಗಲು ಲ್ಯಾಕ್ಟೇಸ್ ಎನ್ನುವ ಕಿಣ್ವಗಳು ಬೇಕು. ಲ್ಯಾಕ್ಟೇಸ್ ಅನ್ನು ಸಣ್ಣಕರುಳು ಉತ್ಪಾದಿಸುತ್ತದೆ. ಒಮ್ಮೊಮ್ಮೆ ಸಣ್ಣಕರುಳು ಲ್ಯಾಕ್ಟೇಸ್ ಉತ್ಪಾದನೆಯನ್ನು ಕಡಿಮೆ ಮಾಡಬಹುದು ಅಥವಾ ಉತ್ಪಾದಿಸದೆಯೂ ಇರಬಹುದು. ಸ್ಟೊಮಕ್ ಫ್ಲೂನಂತ ಕೆಲವು ಕಾಯಿಲೆಗಳಿಗೆ ತುತ್ತಾದಾಗ, ಸಣ್ಣಕರುಳಿನ ಯಾವುದಾದರೂ ಭಾಗವನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆ ನಡೆದಾಗ ಸಣ್ಣಕರುಳು ಲ್ಯಾಕ್ಟೇಸ್ ಉತ್ಪಾದನೆಯನ್ನು ತಾತ್ಕಾಲಿವಾಗಿ ಸ್ಥಗಿತಗೊಳಿಸುತ್ತದೆ. ಸಿಸ್ಟಿಕ್ ಫೈಬ್ರೊಸಿಸ್ನಂಥ ಕಾಯಿಲೆ ಇರುವವರಲ್ಲಿ ಲ್ಯಾಕ್ಟೇಸ್ ಉತ್ಪಾದನೆ ಶಾಶ್ವತವಾಗಿ ಸ್ಥಗಿತಗೊಳ್ಳಬಹುದು. ಲ್ಯಾಕ್ಟೇಸ್ ಕೊರತೆ ಆದಾಗ ಹಾಲು ಮತ್ತು ಅದರ ಉತ್ಪನ್ನಗಳು ಜೀರ್ಣ ಆಗುವುದಿಲ್ಲ. ಪರಿಣಾಮ ಗ್ಯಾಸ್ಟ್ರಿಕ್ ಮತ್ತಿತರ ತೊಂದರೆಗಳು ಕಾಣಿಸಿಕೊಳ್ಳಲು ಶುರುವಾಗುತ್ತವೆ.
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


