ಬೈಟುಕಾಫಿ

ಹಾಲಿನ ಜತೆ ಚಾಕೊಲೆಟ್ ಜೀರ್ಣವಾಗುವುದು ಫಟಾಫಟ್

ಹಾಲಿನ ಜತೆ ಚಾಕೊಲೆಟ್ ಜೀರ್ಣವಾಗುವುದು ಫಟಾಫಟ್
Published On :

ನಿಮಗೆ ಹಾಲು ಅಥವಾ ಡೈರಿ ಉತ್ಪನ್ನಗಳ ಬಗ್ಗೆ ಇನ್ನಿಲ್ಲದ ಮಮಕಾರ. ಆದರೆ ಅದೇರೀತಿ ಗ್ಯಾಸ್ಟ್ರಿಕ್ ಮತ್ತಿತರ ಉದರ ಸಂಬಂಧಿ ತೊಂದರೆಗಳು. ಹಾಗಂತ ನಿಮಗೆ ಲ್ಯಾಕ್ಟೋಸ್ ಅಲರ್ಜಿ ಇದೆ ಎಂದು ಏಕಾಏಕಿ ನಿರ್ಧಾರಕ್ಕೆ ಬರಬೇಡಿ. ಹೇಗೂ ನಿಮಗೆ ಲ್ಯಾಕ್ಟೋಸ್ ಅಲರ್ಜಿಯನ್ನು ಪತ್ತೆ ಮಾಡಿಕೊಳ್ಳುವ ವಿಧಾನ ಗೊತ್ತಾಗಿದೆ. ಪರೀಕ್ಷಿಸಿಕೊಳ್ಳಿ. ಆದರೂ ದ್ವಂದ್ವ ಇದೆ ಅಂತಾದರೆ ನಿಮ್ಮ ಕುಟುಂಬ ವೈದ್ಯರನ್ನು ಭೇಟಿ ಮಾಡಿ ಅವರು ಸಲಹೆ ಮಾಡುವ ತಪಾಸಣೆಗಳನ್ನು ಮಾಡಿಸಿಕೊಳ್ಳಿ. ಒಟ್ಟಾರೆ ಹೇಳುವುದು ಇಷ್ಟೇ, ಅನುಮಾನವನ್ನು ಖಚಿತಪಡಿಸಿಕೊಳ್ಳದೇ ಏಕಾಏಕಿ ನಿರ್ಧಾರಕ್ಕೆ ಬರಬೇಡಿ. ಪರೀಕ್ಷಿಸಿ, ಖಚಿತಪಡಿಸಿಕೊಂಡು, ಆ ನಂತರ ನಿಮ್ಮ ಡಯಟ್‌ನಲ್ಲಿ ಅಗತ್ಯ ಬದಲಾವಣೆ ಮಾಡಿಕೊಳ್ಳಿ.
ಇನ್ನೊಂದು ಸಂದೇಹ ಕಾಡಬಹುದು. ಲ್ಯಾಕ್ಟೋಸ್ ಅಲರ್ಜಿ ಇದೆ ಎನ್ನುವುದು ಖಚಿತವಾದರೆ ಅದರ ತೀವ್ರತೆ ನಮ್ಮಲ್ಲಿ ಎಷ್ಟಿರಬಹುದು? ಇದು ವೈದ್ಯರನ್ನೂ ಕಾಡಿದೆ, ಸಂಶೋಧಕರ ತಲೆಯನ್ನೂ ತಿಂದಿದೆ. ಲ್ಯಾಕ್ಟೋಸ್ ಅಲರ್ಜಿ ತೀವ್ರತೆ ಪ್ರಮಾಣ ಸರಾಸರಿ ಶೇ 60ರಿಂದ 80ರಷ್ಟು! ಕೆಲವರಿಗೆ ಒಂದು ಗ್ಲಾಸ್ ಹಾಲು ಕುಡಿದರೂ ಕೆಲಹೊತ್ತಿನಲ್ಲೇ ಸಮಸ್ಯೆ ಶುರುವಾಗಬಹುದು. ಇನ್ನು ಹಲವರಲ್ಲಿ ಎರಡು ಗ್ಲಾಸ್ ಹಾಲು ಸುಲಭವಾಗಿ ಜೀರ್ಣವಾಗಿ, ಅದಕ್ಕಿಂತ ಹೆಚ್ಚಿನ ಪ್ರಮಾಣದ ಹಾಲು ಹೊಟ್ಟೆ ಸೇರುತ್ತಿದ್ದಂತೆ ತೊಂದರೆ ಆರಂಭವಾಗಬಹುದು. ಇದು ಆಯಾ ವ್ಯಕ್ತಿಯಲ್ಲಿ ಅಲರ್ಜಿ ತೀವ್ರತೆ ಹೇಗಿದೆ ಎನ್ನುವುದನ್ನು ಅವಲಂಬಿಸಿದೆ. ಆರೋಗ್ಯವಂತ ವ್ಯಕ್ತಿ ಹಾಲಿನಲ್ಲಿರುವ ಲ್ಯಾಕ್ಟೋಸ್‌ನಲ್ಲಿ ಶೇ 92ರಷ್ಟನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಲ್ಲ. ಅದೇ ಲ್ಯಾಕ್ಟೋಸ್ ಅಲರ್ಜಿ ಇರುವವರು ಶೇ 25ರಿಂದ 58ರಷ್ಟು ಲ್ಯಾಕ್ಟೋಸ್ ಅನ್ನು ಮಾತ್ರ ಜೀರ್ಣಿಸಿಕೊಳ್ಳಬಲ್ಲರು.
ಲ್ಯಾಕ್ಟೋಸ್ ಅಲರ್ಜಿ ಇರುವವರು ಡೈರಿ ಪದಾರ್ಥಗಳಲ್ಲಿ ಯೋಗರ್ಟ್ ಅನ್ನು ಮಾತ್ರ ಧಾರಾಳವಾಗಿ ಸೇವಿಸಬಹುದು. ಅದರಲ್ಲಿ ಜೀವಂತ ಬ್ಯಾಕ್ಟೀರಿಯಾಗಳಿರುತ್ತವೆ. ಅವು ಲ್ಯಾಕ್ಟೋಸ್ ಅನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಲ್ಲವು. ಆದರೆ ಇಲ್ಲೂ ಎಚ್ಚರಿಕೆ ವಹಿಸಬೇಕು. ಫ್ರೋಜನ್ ಯೋಗರ್ಟ್‌ಗಳನ್ನು ಸೇವಿಸಿದರೆ ತೊಂದರೆ ಕಟ್ಟಿಟ್ಟದ್ದೇ. ಏಕೆಂದರೆ ಒಮ್ಮೊಮ್ಮೆ ಫ್ರೋಜನ್ ಪ್ರಕ್ರಿಯೆಯಲ್ಲಿ ಒಮ್ಮೊಮ್ಮೆ ಪುನರ್ ಪ್ಯಾಶ್ಟರೀಕರಣ ಆಗುವ ಸಂಭವ ಇರುತ್ತದೆ. ಹಾಗಾದರೆ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಇದರಿಂದ ಲ್ಯಾಕ್ಟೋಸ್ ಜೀರ್ಣಿಸಿಕೊಳ್ಳುವ ಸಾಮರ್ಥ್ಯವನ್ನು ಯೋಗರ್ಟ್ ಕಳೆದುಕೊಳ್ಳುತ್ತದೆ.
ಲ್ಯಾಕ್ಟೋಸ್ ಅಲರ್ಜಿ ಇರುವವರನ್ನು ಖುಷಿಗೊಳಿಸುವ ಇನ್ನೊಂದು ಸಂಗತಿ ಇದೆ. ಅದೆಂದರೆ ಹಾಲಿನಲ್ಲಿ ಸ್ವಲ್ಪ ಪ್ರಮಾಣದ ಚಾಕೊಲೆಟ್ ಅನ್ನು ಸೇರಿಸಿಕೊಂಡು ಕುಡಿದರೆ ಹೆಚ್ಚಿನ ಪ್ರಮಾಣದ ಲ್ಯಾಕ್ಟೋಸ್ ಜೀರ್ಣವಾಗುತ್ತದೆ ಎನ್ನುವುದು. ಸಾಮಾನ್ಯವಾಗಿ ಒಂದು ಕಪ್‌ಗೆ ಒಂದೂವರೆ ಕಪ್ ಚಾಕೊಲೆಟ್ ಒಳ್ಳೆಯದು. ಇದಕ್ಕಿಂತ ಕಡಿಮೆ ಸಾಕು ಅಂತನ್ನಿಸಿದರೆ ನಿಮಗೆ ಎಷ್ಟು ಬೇಕೋ ಅಷ್ಟು ಬಳಸಬಹುದು. ಪ್ರಮಾಣದಲ್ಲಿ ಏರಿಳಿತ ಮಾಡಿಕೊಳ್ಳುತ್ತ ಎಷ್ಟು ಚಾಕೊಲೆಟ್ ಬಳಸಿದರೆ ಆರಾಮ ಅನ್ನಿಸುತ್ತದೆ ಅಷ್ಟನ್ನೇ ಉಪಯೋಗಿಸಬಹುದು.

- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.