ಸಾಹಿತ್ಯ ರೇಖೆ
ಒರಿಸ್ಸಾದ ಖ್ಯಾತ ಬರಹಗಾರ್ತಿ, ಕಳೆದ ವರ್ಷದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕಿ ಪ್ರತಿಭಾ ರೇ ಮೊನ್ನೆ ಬೆಂಗಳೂರಿಗೆ ಬಂದಿದ್ದರು...

ಒರಿಸ್ಸಾದ ಖ್ಯಾತ ಬರಹಗಾರ್ತಿ, ಕಳೆದ ವರ್ಷದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕಿ ಪ್ರತಿಭಾ ರೇ ಮೊನ್ನೆ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿನಲ್ಲಿ ಎರಡು ದಿನ ಕಾಲ ನಡೆದ ಲೇಖಕಿಯರ ಸಮ್ಮೇಳನದಲ್ಲಿ ಭಾಗವಹಿಸಿದ್ದರು. 'ಯಾಜ್ಞಸೇನಿ' ಎಂಬ ಕಾದಂಬರಿಯ ಮೂಲಕ ಚಿರಪರಿಚಿತರಾದ ಅವರು ಮಹಿಳೆಯ ಅಂತರಾಳದ ನೋವನ್ನು, ಆಕ್ರೋಶವನ್ನು ತಣ್ಣನೆಯ ರೀತಿಯಲ್ಲಿ ಅಭಿವ್ಯಕ್ತಿಪಡಿಸಬಲ್ಲವರು. ಅವರ ಕಾದಂಬರಿ ಕನ್ನಡಕ್ಕೂ ಬಂದಿದೆ.
ನಿಮ್ಮ ಕೃತಿಗಳ ರಚನೆಗೆ ಮೂಲ?
ಪ್ರೀತಿ. ನಾವು ಯಾವ ಕೆಲಸವನ್ನು ಮಾಡುತ್ತಿದ್ದೇವೆಯೋ ಅದನ್ನು ಪ್ರೀತಿಸಬೇಕು. ಪ್ರೀತಿಯಿಂದ ಎಲ್ಲವೂ ಸಾಧ್ಯ. ನಾನು ಹೇಳುವುದೇನೆಂದರೆ ಒಬ್ಬ ಬರಹಗಾರ ಯಾವುದೇ ಕೃತಿ ರಚನೆಗೆ ತೊಡಗುವ ಮುನ್ನ ತಾನು ಆಯ್ದುಕೊಂಡ ವಿಷಯದ ಬಗ್ಗೆ ಪ್ರೀತಿ ಹೊಂದಬೇಕು. ಆ ವಿಷಯವನ್ನು ನಾವು ಪ್ರೀತಿಸಿದರೆ ಮಾತ್ರ ನಮ್ಮಿಂದ ಅದರ ಬಗ್ಗೆ ಬರೆಯಲು ಸಾಧ್ಯ. "We should not fall in love, but rise in Love "ಪ್ರೀತಿ ಕುರುಡು ಎಂಬುದನ್ನು ನಾನು ನಂಬುವುದಿಲ್ಲ. ಪ್ರೀತಿ ನಮಗೆ ಆಂತರಿಕ ಶಕ್ತಿಯನ್ನು ನೀಡುತ್ತದೆ. ಒಬ್ಬ ಬರಹಗಾರನಿಗೆ ಬೇಕಾದುದು ಅದೇ ಅಲ್ಲವೆ?
ನಿಮ್ಮ ದೃಷ್ಟಿಯಲ್ಲಿ ಸಾಹಿತಿ ಅಂದ್ರೆ?
ಒಬ್ಬ ಹೋರಾಟಗಾರ. ಅವರಿಗೆ ತೃಪ್ತಿ ಇರುವುದಿಲ್ಲ. ತಾವು ಬಯಸಿದ್ದು ಸಿಗದೆ ಇದ್ದಾಗಲೇ ಅವರು ಬರೆಯುತ್ತಾರೆ. ಬರೆಯುವ ಮೂಲಕ ತೃಪ್ತಿಗಾಗಿ ಹುಡುಕಾಟ ಮಾಡುತ್ತಾರೆ. ಸಮಾಜದಲ್ಲಿನ ಶೋಷಣೆಗಳು, ಬದಲಾವಣೆಗಳ ಬಗ್ಗೆ ಅವರು ದಿಟ್ಟತನದಿಂದ ಬರೆಯಬೇಕಾದರೆ ಅವರಿಗೆ ಧೈರ್ಯ ಬೇಕೇ ಬೇಕು. ಬರಹಗಾರನಿಗೆ ಸಮಾಜದ ಅನೀತಿಗಳನ್ನು ಪ್ರಶ್ನಿಸುವ ಹಕ್ಕು ಇರುತ್ತದೆ. ತನಗೆ ತಪ್ಪು ಎನಿಸಿದ್ದನ್ನು ಆತ ನಿರ್ಭಿಢೆಯಿಂದ ತನ್ನ ಬರಹದ ಮೂಲಕ ವ್ಯಕ್ತಪಡಿಸಿಕೊಳ್ಳಬಲ್ಲ. ಸತ್ಯಸಂಧತೆ ಮತ್ತು ತನ್ನ ನಿಲುವಿನ ಮೇಲೆ ಅಚಲವಾಗಿರುವ ಶಕ್ತಿ ಬರಹಗಾರನಿಗಿರಬೇಕು.
ನೀವು ಮಹಿಳಾವಾದಿಯೇ?
ನಾನು ಮಹಿಳೆಯರ ಬಗ್ಗೆಯೇ ಹಲವಾರು ಕೃತಿ ಲೇಖನಗಳನ್ನು ಬರೆದಿದ್ದರೂ, ಮಹಿಳಾವಾದಿಯಲ್ಲ. ನಾನು ಮಾನವತಾವಾದಿ. ನನಗೆ ಎಲ್ಲರೂ ಸಮಾನರು. ಎಲ್ಲಿ ಯಾರಿಗೆ ಶೋಷಣೆ ನಡೆಯುತ್ತಿದೆಯೋ ಅದರ ಬಗ್ಗೆ ದನಿಯೆತ್ತಲು ನಾನು ಹಿಂಜರಿಯುವುದಿಲ್ಲ.
ತಪ್ಪು ಗ್ರಹಿಕೆಗೊಳಗಾದ ಮಹಿಳೆಯರ ಬಗ್ಗೆ ದನಿಯೆತ್ತುತ್ತೇನೆ ಎಂದಿರಿ. ಈ ಬಗ್ಗೆ ವಿವರಿಸುತ್ತೀರಾ?
ನೋಡಿ, ಮಹಾಭಾರತ ಯುದ್ಧಕ್ಕೆ ಕಾರಣಕರ್ತೆ ದ್ರೌಪದಿ ಎಂದು ಹೇಳಲಾಗುತ್ತದೆ. ಆದರೆ ಅದು ತಪ್ಪು, ಧರ್ಮರಾಯನೇ ಈ ಯುದ್ಧಕ್ಕೆ ಕಾರಣ. ಇಲ್ಲಿ ದ್ರೌಪದಿಯನ್ನು ತಪ್ಪು ಗ್ರಹಿಕೆಗೊಳಪಡಿಸಲಾಗಿದೆ. ಇದೇ ವಿಷಯವನ್ನಿಟ್ಟುಕೊಂಡೇ ನಾನು ಯಾಜ್ಞಸೇನಿ ಎಂಬ ಕೃತಿ ರಚಿಸಿದ್ದು. ಸಮಾಜದಲ್ಲಿನ ದಮನಿತರ ಬಗ್ಗೆ, ಅವರ ಹಕ್ಕುಗಳ ಹೋರಾಟಕ್ಕೆ ನನ್ನ ಲೇಖನಿಯೇ ಅಸ್ತ್ರ.
ಒರಿಸ್ಸಾದ ನಕ್ಸಲ್‌ಗಳ ಬಗ್ಗೆ?
ನಕ್ಸಲ್‌ಗಳು ತಮ್ಮ ಬೇಡಿಕೆಗಳಿಗಾಗಿ ಹೋರಾಟ ಮಾಡುತ್ತಿದ್ದಾರೆ. ಅವರ ಉದ್ದೇಶಗಳೇನೋ ಸರಿಯಿರಬಹುದು. ಆದರೆ ಅವರು ಅದಕ್ಕಾಗಿ ಅನುಸರಿಸುತ್ತಿರುವ ಮಾರ್ಗ ತಪ್ಪು. ಹಿಂಸೆಯಿಂದ ಯಾವುದನ್ನೂ ಪಡೆಯಲು ಸಾಧ್ಯವಿಲ್ಲ.
ನಿಮ್ಮ ಬಗ್ಗೆ ನೀವೇ ಹೇಳುವುದಾದರೆ?
ನಾನು ಯಾವತ್ತೂ ಸಮಾಜದ ಸಿದ್ಧ ಸೂತ್ರಗಳನ್ನು ಅನುಸರಿಸುವುದಿಲ್ಲ. ಇನ್ನೊಬ್ಬರ ಒಳಿತಿಗಾಗಿ, ಅನ್ಯಾಯದ ವಿರುದ್ಧವಾಗಿ ನಾನು ಬರೆಯುತ್ತೇನೆ. ಸ್ವಯಂ ರೂಪಿತ ಕಟ್ಟುಪಾಡುಗಳಲ್ಲಿ ಬಂಧಿಯಾಗಲು ನನಗೆ ಇಷ್ಟವಿಲ್ಲ. ನನಗೆ ಸರಿ ಎನಿಸಿದ್ದನ್ನು ನಾನು ಮಾಡುತ್ತೇನೆ. ಶೋಷಣೆಗೊಳಗಾಗುವ ವ್ಯಕ್ತಿಗೆ ನೆರವಾಗಲು ನಾನು ಸಿದ್ಧ.ಟಿ
- ರಶ್ಮಿ ಕಾಸರಗೋಡು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


