ಬೈಟುಕಾಫಿ

ಭಿಕ್ಷಾ ಪಾತ್ರ

ಹರಕು ಲಂಗ ತೊಟ್ಟ ಆ ಆರನೇ ವಯಸ್ಸಿನ ಹುಡುಗಿ ಸರ್ಜಾಪುರದ ಟ್ರಾಫಿಕ್ಕಿನಲ್ಲಿ ಗುರುಗುಡುತ್ತ ನಿಂತ ವಾಹನಗಳ ಮುಂದೆ ಕೈಚಾಚುತ್ತಿದ್ದಳು. ಒಂದಿಷ್ಟು ಚಿಲ್ಲರೆ ಭಿಕ್ಷೆ ಸಿಕ್ಕರೆ ....

ಭಿಕ್ಷಾ ಪಾತ್ರ
Published On :

ಹರಕು ಲಂಗ ತೊಟ್ಟ ಆ ಆರನೇ ವಯಸ್ಸಿನ ಹುಡುಗಿ ಸರ್ಜಾಪುರದ ಟ್ರಾಫಿಕ್ಕಿನಲ್ಲಿ ಗುರುಗುಡುತ್ತ ನಿಂತ ವಾಹನಗಳ ಮುಂದೆ ಕೈಚಾಚುತ್ತಿದ್ದಳು. ಒಂದಿಷ್ಟು ಚಿಲ್ಲರೆ ಭಿಕ್ಷೆ ಸಿಕ್ಕರೆ ಗುಡಿಸಲಿನಲ್ಲಿ ಹಾಸಿಗೆ ಹಿಡಿದ ಅಮ್ಮನಿಗೆ ಗಂಜಿಗಾದರೂ ಆದೀತು ಎಂಬ ಲೆಕ್ಕಾಚಾರ ಆ ಪುಟ್ಟ ಬಾಲೆಯದು. ಅಂತೂ ಹತ್ತು ರುಪಾಯಿ ಒಟ್ಟಾಯಿತು. ಖುಷಿಯಲ್ಲೇ ಗುಡಿಸಲಿಗೆ ಹೋದಾಗ, ಹಾಸಿಗೆ ಮೇಲಿದ್ದ ತಾಯಿ ಶವವಾಗಿದ್ದಳು. ಆಕೆ ಅರೆನಗ್ನಳಾಗಿದ್ದಳು. ಯಾರು ಆಕೆಯ ಮೇಲೆರಗಿ ಸಾಯಿಸಿದ್ದರೋ, ಈ ಹುಡುಗಿಗೆ ಇವತ್ತಿಗೂ ಗೊತ್ತಿಲ್ಲ. ಪುಟ್ಟ ಬಾಲೆ, ತಾಯಿಯ ಶವವನ್ನು ಹೊರುವುದು ಅಸಾಧ್ಯ. ಸುತ್ತಲಿದ್ದ ನಾಲ್ಕಾರು ಮನೆಯ ಕದ ಬಡಿದಳು. ಯಾರೂ ಬರಲಿಲ್ಲ. ಬೀದಿಯಲ್ಲೊಬ್ಬ ಕುಡುಕ ಓಲಾಡುತ್ತಿದ್ದ. ಕೊನೆಗೆ ಅವನ ಕಾಲಿಗೆ ಬಿದ್ದು, ತರಕಾರಿ ಗಾಡಿಯಲ್ಲಿ ತಾಯಿಯ ಶವವನ್ನು ಸ್ಮಶಾನಕ್ಕೆ ಸಾಗಿಸಿದಳು. ಇನ್ನು ಆ ಬಾಲೆ ಅನಾಥೆ.
ಒಂದೆರಡು ವರುಷದ ನಂತರ, ಒಮ್ಮೆ ಬೀದಿ ಬದಿಯಲ್ಲಿ ಸ್ಟೇಜ್ ಶೋ ನಡೆಸಿಕೊಡುತ್ತಿದ್ದ ಜಾನ್ ದೇವರಾಜ್‌ರನ್ನು ಕಂಡು ಈ ಹುಡುಗಿ ಕಣ್ಣೀರಾಗುತ್ತಾಳೆ. 'ಬೀದಿ ಮಕ್ಕಳ ಕಲಾಶಾಲೆ' ನಡೆಸುತ್ತಿದ್ದ ಜಾನ್ ಈಕೆಯನ್ನು ಕರೆತಂದು, 'ರೇಷ್ಮಾ ಮಲೈಕಾ' ಅಂತ ಹೆಸರಿಡುತ್ತಾರೆ. ಅಂದಹಾಗೆ, ಜಾನ್ ದೇವರಾಜ್ ಈ ಭಿಕ್ಷುಕಿ ಬಾಲೆಯ ಮೇಲೀಗ ಡಾಕ್ಯುಮೆಂಟರಿ ಮಾಡಿದ್ದಾರೆ. ನ.13ರಂದು ಅದು ಜಾಗತಿಕ ಮಟ್ಟದಲ್ಲಿ ಬಿಡುಗಡೆ ಕಂಡಿದೆ. ಈ ಚಿತ್ರದ ಹೆಸರು 'ರೋಸಾ ಮಿಸ್ಟಿಕಾ'. ರೇಷ್ಮಾಳ ಪಾತ್ರವನ್ನು 'ರಂಜಿತಾ' ಎಂಬಾಕೆ ನಿರ್ವಹಿಸಿದ್ದಾಳೆ. ಪಾಕಿಸ್ತಾನಿ ಮಕ್ಕಳಿಗೆ ಜಗತ್ತಿನ ಅತಿದೊಡ್ಡ ಪ್ರೇಮಪತ್ರ ಬರೆದು ಗಿನ್ನೆಸ್ ದಾಖಲೆ ಸ್ಥಾಪಿಸಿದ ಜಾನ್ ದೇವರಾಜ್ (ಮೊ. 9886306366) ಇಂಥ 20 ಅನಾಥ ಮಕ್ಕಳನ್ನು ಸಾಕಿದ್ದಾರೆ. ಅಲ್ಲದೆ, ಅವರಿಗೆ ಕಲೆಯ ಮೂಲಕ ಶಿಕ್ಷಣವನ್ನೂ ಒದಗಿಸುತ್ತಿದ್ದಾರೆ.
'ರೋಸಾ ಮಿಸ್ಟಿಕಾ' ಜೊತೆಗೆ 'ಟ್ವಿನ್ಸ್‌' ಎಂಬ ಮತ್ತೊಂದು ಚಿತ್ರವೂ ಇದೇ ವೇಳೆ ತೆರೆಕಾಣುತ್ತಿದೆ. ಭಿಕ್ಷುಕಿಯ ಮಗಳೊಬ್ಬಳು ಬಹುಶಃ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಥೆಯಾಗಿರುವುದು ಇದೇ ಮೊದಲು. ಅದೇ ಖುಷಿಯಲ್ಲೇ ನಗುತ್ತಾಳೆ ಮಲೈಕಾ.

ನನ್ನಂತೆ ಇನ್ನ್ಯಾರೂ ಇಂಥ ಸಂಕಷ್ಟ ಅನುಭವಿಸಬಾರದು. ಮುಂದೊಂದು ದಿನ ಅನಾಥ ಮಕ್ಕಳಿಗಾಗಿಯೇ ನಾನು ಶಾಲೆ ತೆರೆಯುತ್ತೇನೆ.
- ರೇಷ್ಮಾ ಮಲೈಕಾ

- ಮಿಲೀ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.