ಪಕ್ಷಿಪತ್ತೆ
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರು ಬೆಟ್ಟ, ಗುಡ್ಡ, ಕಣಿವೆಗಳ ಮೋಹಕ ಪ್ರದೇಶ. ಮೂರೂರು ಹಾಗೂ...

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರು ಬೆಟ್ಟ, ಗುಡ್ಡ, ಕಣಿವೆಗಳ ಮೋಹಕ ಪ್ರದೇಶ. ಮೂರೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ 350ಕ್ಕೂ ಹೆಚ್ಚು ಬಗೆಯ ಪಕ್ಷಿ ಪ್ರಭೇದಗಳು ಪತ್ತೆಯಾಗಿವೆ. ಕಳೆದ 10 ವರ್ಷಗಳಿಂದ ಸತತ ಪಕ್ಷಿಗಳ ಸುತ್ತ ಅಲೆದಾಡಿದ ಪಕ್ಷಿತಜ್ಞ ಪಿ.ವಿ. ಭಟ್ ಈ ಅಪರೂಪದ ಸಂಗತಿಯನ್ನು ಬೆಳಕಿಗೆ ತಂದಿದ್ದಾರೆ. ಮೂರೂರಿನಲ್ಲಿ ಪಕ್ಷಿಗಳ ಕಲರವವನ್ನು ದಾಖಲಿಸಿದ್ದಾರೆ.
ಅಘನಾಶಿನಿ ನದಿ ತಟದಲ್ಲಿರುವ ಮೂರೂರು, ಕಲ್ಲಬ್ಬೆ, ಬೊಗರಿಬೈಲ, ಕತಗಾಲ ಮತ್ತಿತರ ಕಡೆ 350ಕ್ಕೂ ಹೆಚ್ಚು ಪಕ್ಷಿ ಪ್ರಭೇದ, ಉಪ ಪ್ರಭೇದಗಳು ಪತ್ತೆಯಾಗಿವೆ. ಪಶ್ಚಿಮ ಘಟ್ಟದ ಅಂಚಿನಲ್ಲಿರುವ ಇಲ್ಲಿ ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಪಕ್ಷಿಗಳೂ ಇವೆ. ಅಳಿವಿನ ಅಂಚಿನಲ್ಲಿರುವ ಕಾಮನ್ ಫ್ರ್ಯಾಂಕ್ಲಿನ್ ನೈಟ್ ಝಾರ್ ಹಾಗೂ ಜಂಗಲ್ ಫ್ರಾಂಕ್ಲಿನ್ ನೈಟ್ ಝಾರ್ ಪಕ್ಷಿಗಳು ಇಲ್ಲಿವೆ. ಈ ಪಕ್ಷಿಗಳು ಅಘನಾಶಿನಿ ತೀರದಲ್ಲಿ ಕಲ್ಲು ಹಾಸಿನ ಮೇಲೆ ಹಾಗೂ ಗೋಡಂಬಿ ಮರಗಳ ಮೇಲೆ ಗೂಡು ಕಟ್ಟಿ ಮೊಟ್ಟೆ ಇಟ್ಟು ಸಂತಾನಾಭಿವೃದ್ಧಿ ಮಾಡಿದ್ದೂ ಬೆಳಕಿಗೆ ಬಂದಿದೆ.
ಮೂರೂರಿನ ವಾಟೆಕೆರೆ ಎಂಬಲ್ಲಿ ಸುಮಾರು 60ರಷ್ಟು ಪ್ರಭೇದದ ಪಕ್ಷಿಗಳಿವೆ. ಬತ್ತದ ಬಿತ್ತನೆ ಸಂದರ್ಭ ಏಷ್ಯನ್ ಓಪನ್ ಬಿಲ್ಟ್ ಸ್ಟಾರ್ಕ್ ಇಲ್ಲಿ ಹೆಚ್ಚಿಗೆ ಕಂಡುಬರುತ್ತವೆ. ವೈಟ್ ಐಬಿಸ್ ಎಂಬ ಬೃಹತ್ ಪಕ್ಷಿಗಳೂ ಸಹ ಇಲ್ಲಿ ಕಂಡುಬಂದಿವೆ.
ಹಾರ್ನ್ಬಿಲ್ಗಳೂ ಇಲ್ಲಿವೆ
ದಾಂಡೇಲಿಯನ್ನು ಹಾರ್ನ್ಬಿಲ್ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗಿದೆ. ಅಚ್ಚರಿ ಎಂದರೆ ದಾಂಡೇಲಿಯಲ್ಲಿ ಕಂಡುಬರುವ ಎಲ್ಲ ಬಗೆಯ ಹಾರ್ನ್ಬಿಲ್ಗಳೂ ಮೂರೂರು ಸುತ್ತಮುತ್ತ ಕಂಡುಬಂದಿವೆ. ಮಲಬಾರ್ ಹಾರ್ನ್ಬಿಲ್, ಫೈಯ್ಡ್ ಹಾರ್ನ್ಬಿಲ್ ಹಾಗೂ ಇಂಡಿಯನ್ ಗ್ರೇಟ್ ಹಾರ್ನ್ಬಿಲ್ಗಳು ಇಲ್ಲಿವೆ. ದಾಂಡೇಲಿಯಷ್ಟು ಹೇರಳ ಪ್ರಮಾಣದಲ್ಲಿ ಹಾರ್ನ್ಬಿಲ್ಗಳು ಇಲ್ಲದೆ ಇದ್ದರೂ, ಈ ಮೂರೂ ಬಗೆಯ ಹಾರ್ನ್ಬಿಲ್ಗಳನ್ನು ಕಾಣಲು ಸಾಧ್ಯ. ಬಗೆಬಗೆಯ ಕಿಂಗ್ಫಿಶರ್, ವೆಬೆಲರ್, ರೆಡ್ ವೆಟಲ್ಡ್ ಬುಲ್ಬುಲ್, ರೆಡ್ ವಿಶ್ಕರ್ ಹೀಗೆ ಪಟ್ಟಿ ಬೆಳೆಯುತ್ತದೆ.
ಯುರೋಪ್ ಖಂಡದಿಂದ ವಲಸೆ ಬಂದ ಸ್ವಿಫ್ಟ್ ಪಕ್ಷಿಗಳು ನೇತ್ರಾಣಿ ದ್ವೀಪದಲ್ಲಿ ಮಾತ್ರ ಇರುವುದಾಗಿ ತಿಳಿದಿತ್ತು. ಆದರೆ, ಈಗ ಮೂರೂರು ಸುತ್ತಮುತ್ತ ಅವೂ ಕಂಡುಬಂದಿವೆ. ಸ್ವಿಫ್ಟ್ ಪಕ್ಷಿಗಳ ಗೂಡು ಭಾರಿ ಬೆಲೆ ಬಾಳುತ್ತವೆ. ಈ ಗೂಡಿನಿಂದ ಸೂಪ್ ತಯಾರಿಸಲಾಗುತ್ತದೆ. ಹೀಗಾಗಿಯೇ ಸ್ವಿಫ್ಟ್ಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಬಹುತೇಕ ಸಮಯ ಹಾರುತ್ತಲೇ ಇರುವ, ಹಾರುವಾಗಲೆ ಆಹಾರ ಸ್ವೀಕರಿಸುವ ಆಕಾಶಗುಬ್ಬಿಗಳಿಗೂ ಮೂರೂರು ಅಪ್ಯಾಯಮಾನ. ಗೀಜಗ ಹಕ್ಕಿ ತೆಂಗಿನಮರಗಳಿಗೆ ಕಟ್ಟುವ ಆಕರ್ಷಕ ಗೂಡುಗಳ ರಹಸ್ಯವನ್ನೂ ಇವರು ತೆರೆದಿಟ್ಟಿದ್ದಾರೆ.
ರಣಹದ್ದು ಕಂಡುಬಂತು
ಭಾರಿ ಗಾತ್ರದ ಪಕ್ಷಿ ರಣಹದ್ದು ಕಣ್ಮರೆಯಾಗಿ 20ಕ್ಕೂ ಹೆಚ್ಚು ವರ್ಷಗಳಾಗಿದ್ದವು. ಕಳೆದ ವರ್ಷ ಮೂರೂರು ಗುಡ್ಡದಲ್ಲಿ 9 ರಣಹದ್ದುಗಳ ಹಿಂಡು ಆಗಮಿಸಿದಾಗ ಪಿ.ವಿ. ಭಟ್ ಈ ಹದ್ದುಗಳು ಬಂದಿದ್ದನ್ನು ದಾಖಲಿಸಿ ಪಕ್ಷಿಪ್ರೇಮಿಗಳಲ್ಲಿ ಸಂತಸ ಹುಟ್ಟಿಸಿದ್ದಾರೆ.
ಪಕ್ಷಿ ತಜ್ಞ ಪಿ.ವಿ. ಭಟ್
ಮೂರೂರಿನವರೇ ಆದ ಪಿ.ವಿ. ಭಟ್ ಸತತ 10 ವರ್ಷಗಳಿಂದ ಇಲ್ಲಿ ಪಕ್ಷಿಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಎಲ್ಲ ಪಕ್ಷಿಗಳ ಛಾಯಾಚಿತ್ರ, ವಿಡಿಯೋ ಮಾಡಿದ್ದಾರೆ. ಪಿ.ವಿ. ಭಟ್ ತಮ್ಮ ಮನೆಯ ಸಮೀಪ ಪಕ್ಷಿಗಳಿಗೆ ಪ್ರತಿದಿನ ಆಹಾರ ಹಾಕುವುದನ್ನು ರೂಢಿಸಿಕೊಂಡರು. ಈಗ ಪ್ರತಿದಿನ ಅದೇ ಸಮಯಕ್ಕೆ ವಿವಿಧ ಬಗೆಯ ಪಕ್ಷಿಗಳು ಆಗಮಿಸುತ್ತಿವೆ. ಫೀಡಿಂಗ್ ಯಾರ್ಡ್ , ಬರ್ಡ್ ಸ್ಟಡಿ ಸೆಂಟರ್ , ಮ್ಯೂಸಿಯಂ ಇವರ ಕನಸುಗಳು. http://birds-muroor.blogspot.in/ ಎಂಬ ಬ್ಲಾಗ್ ಕೂಡ ಆರಂಭಿಸಿದ್ದಾರೆ. ಇದರಲ್ಲಿ ಮೂರೂರು ಸುತ್ತಮುತ್ತಲಿನ ಪಕ್ಷಿಗಳ ಫೋಟೋ, ವಿಡಿಯೋಗಳಿವೆ. ಸಂಪರ್ಕ: 08386-268193.
- ವಸಂತಕುಮಾರ್ ಕತಗಾಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


