ಕೊಂಚಾಡಿ ಚಂಡೆ
ಮೆರವಣಿಗೆಯಲ್ಲಿ ಕೇರಳ ಚಂಡೆಯಿದ್ದರೆ ಅದಕ್ಕೊಂದು ವಿಶೇಷ ಕಳೆ. ಇಡೀ ಉತ್ಸವದ ವೈಭವವೇ ಇಮ್ಮಡಿ. ಪ್ರತಿ ಬಾರಿಯೂ...

ಮೆರವಣಿಗೆಯಲ್ಲಿ ಕೇರಳ ಚಂಡೆಯಿದ್ದರೆ ಅದಕ್ಕೊಂದು ವಿಶೇಷ ಕಳೆ. ಇಡೀ ಉತ್ಸವದ ವೈಭವವೇ ಇಮ್ಮಡಿ. ಪ್ರತಿ ಬಾರಿಯೂ ಕೇರಳದಿಂದಲೇ ಚಂಡೆ ವಾದಕರನ್ನು ಕರೆಸುವುದು ಎಲ್ಲರಿಗೂ ಅಸಾಧ್ಯ. ಕೇರಳ ಮಾದರಿಯಲ್ಲಿ ನಮ್ಮಲ್ಲೇ ಚಂಡೆ ವಾದಕರು ಇದ್ದರೆ... ಎಂದು ಚಿಂತಿಸುತ್ತಿರುವಾಗಲೇ ಮಂಗಳೂರಿನ ಕೊಂಚಾಡಿಯಲ್ಲೊಂದು ಚಂಡೆ ತಂಡ ಹುಟ್ಟಿಕೊಂಡಿದೆ.
ತನ್ನ ಅಬ್ಬರದ ಚಂಡೆ ಸದ್ದನ್ನು ಈ ತಂಡ ಈಗಾಗಲೇ ರಾಜ್ಯದ ವಿವಿಧೆಡೆ ಹಾಗೂ ಹೊರ ರಾಜ್ಯಗಳಲ್ಲೂ ಮೈ ನವಿರೇಳಿಸುವಂತೆ ಪ್ರದರ್ಶಿಸಿ ಸೈ ಎನಿಸಿಕೊಂಡಿದೆ. ಇತ್ತೀಚೆಗೆ ಖಾಸಗಿ ವಾಹಿನಿಯ 'ಅಶ್ವಿನಿ ನಕ್ಷತ್ರ' ಧಾರಾವಾಹಿಯಲ್ಲೂ ದೃಶ್ಯವೊಂದಕ್ಕೆ ಇವರ ಚಂಡೆ ಪ್ರದರ್ಶನ ಸೇರಿಸಿದ್ದು, ಇವರ ಜನಪ್ರಿಯತೆ ಇಮ್ಮಡಿಗೊಳಿಸಿದೆ.
ಶ್ರೀ ಮೂಕಾಂಬಿಕಾ ಚಂಡೆ ತಂಡದಲ್ಲಿ ಬಾಲಕರು, ಯುವತಿಯರೂ ಸೇರಿ 125 ಮಂದಿಯಿದ್ದಾರೆ. ಇವರು ಚಂಡೆ ವಾದನದೊಂದಿಗೆ ತಾಳ ಬಡಿಯುತ್ತಾ, ನೃತ್ಯ ಮಾಡುತ್ತಾ, ಚಂಗನೆ ಜಿಗಿಯುತ್ತಾ ಸಾಗುವುದನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ಸುನಿಲ್ (9844619485), ಸ್ಥಳೀಯ ಟಿ.ವಿ. ಚಾನೆಲ್ನಲ್ಲಿ ಕೆಲಸ ಮಾಡಿದ ದೇವಿಪ್ರಸಾದ್ ಹಾಗೂ ಚಂದ್ರಹಾಸ್ ಈ ಮೂವರು ಸಹೋದರರು ತಂಡದ ನೇತೃತ್ವ ವಹಿಸಿದ್ದಾರೆ.
ಕೇರಳದ ಗುರುವಿನಿಂದ ಕಲಿತು, ಇಲ್ಲಿನ ಪರಿಸರದ ಯುವಕರಿಗೆ ಉಚಿತವಾಗಿ ತರಬೇತಿ ನೀಡಿ ಯುವಕರ ಹೊಸ ತಂಡವನ್ನೇ ಕಟ್ಟಿದ್ದಾರೆ. ತಂಡದಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳೇ. ಕಲಿಕೆಯೊಂದಿಗೆ ಗಳಿಕೆ. ಕೆಲ ಉದ್ಯೋಗಿಗಳೂ ಇದ್ದಾರೆ.
ಸಾಫ್ಟವೇರ್ನಿಂದ 'ಹಾರ್ಡ್ವೇರ್'
ಮೂಕಾಂಬಿಕಾ ಚಂಡೆ ತಂಡದ ಸುನಿಲ್ ಓದಿದ್ದು ಎಂಜಿನಿಯರಿಂಗ್. ಕೆಲ ವರ್ಷ ಸಾಪ್ಟ್ವೇರ್ ಕಂಪನಿಯಲ್ಲಿ ಕೆಲಸವನ್ನೂ ಮಾಡಿದ್ದರು. ತಂದೆ ಬಿ.ಕೆ. ಬಾಬು ಮರಣದ ಬಳಿಕ ಮನೆ ಸಮೀಪವಿರುವ ಮೂಕಾಂಬಿಕಾ ದೇವಳ ನೋಡಿಕೊಳ್ಳಲು ಉದ್ಯೋಗ ತ್ಯಜಿಸಿದರು. ದೇವಳದಲ್ಲಿ ಸಣ್ಣ ಪ್ರಮಾಣದಲ್ಲಿದ್ದ ಚಂಡೆ ಬಳಗವನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಲು ಪಣತೊಟ್ಟರು.
ತಂಡ ಇದುವರೆಗೆ 3000 ಪ್ರದರ್ಶನ ನೀಡಿದೆ ಎನ್ನುತ್ತಾರೆ ಸುನಿಲ್. ತಂಡ ಸಾಂಪ್ರದಾಯಿಕ ಕೇರಳ ಶೈಲಿಯ ಜತೆಗೆ ಆಧುನಿಕ ಶೈಲಿಯನ್ನೂ ಅಳವಡಿಸಿಕೊಂಡಿದೆ. ಪ್ರದರ್ಶನದಲ್ಲಿ ಮುಖ್ಯವಾಗಿ 2 ಪ್ರಕಾರ. 'ಮೇಳಂ' ಅಂದರೆ ಉತ್ಸವ, ಜಾತ್ರೆಯಲ್ಲಿ ನೀಡುವ ಸಾಮಾನ್ಯ ಚಂಡೆ ವಾದನ. 'ಸಿಂಗಾರಿ ಮೇಳಂ' ಮನರಂಜನೆಗಾಗಿ.
- ರಾಘವೇಂದ್ರ ಅಗ್ನಿಹೋತ್ರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


