ಬಿಸಿ ಮಾಡಿ ತಿಂದರೆ ಸತ್ವ ನಾಶವಾಗುವುದೆ?

ಕೆಲವರಿಗೆ ವಿಚಿತ್ರ ಅಭ್ಯಾಸ. ಅದೆಂದರೆ ಯೋಗರ್ಟ್ ಅನ್ನು ಬಿಸಿ ಮಾಡಿಕೊಂಡು ತಿನ್ನುವುದು. ಹಾಗೆ ಮಾಡುವುದರಿಂದ ಅದರಲ್ಲಿನ ಸತ್ವ ನಾಶವಾಗುವುದಿಲ್ಲವೆ? ಇಂಥ ಅನುಮಾನ ವ್ಯಕ್ತಪಡಿಸಿ ಹಲವರು ನನಗೆ ಎಸ್‌ಎಂಎಸ್ ಮಾಡಿದ್ದಾರೆ. ಅವರಿಗೆ ರುಚಿಯಾಗಿರುತ್ತದೆ ಅಂತಾದರೆ ಬಿಸಿ ಮಾಡಿಕೊಂಡು ತಿಂದರೆ ತಪ್ಪೇನಿಲ್ಲ. ಆದರೆ ಅತಿಸಾರವಾದಾಗ ಬಿಸಿ ಮಾಡಿ ಸೇವಿಸಕೂಡದು. ಹಾಗೆ ಮಾಡಿದರೆ ಇ-ಕೋಲಿಯಂಥ ಅತಿಸಾರ ಹರಡುವ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವ ಸಾಮರ್ಥ್ಯವನ್ನು ಯೋಗರ್ಟ್ ಕಳೆದುಕೊಳ್ಳುತ್ತದೆ. ಇದರಿಂದಾಗಿ ಭೇದಿ ನಿಯಂತ್ರಣಕ್ಕೆ ಬರುವುದಿಲ್ಲ. ಆದರೆ ಅತಿಸಾರ ಜಾಸ್ತಿಯಾಗದಂತೆ ತಡೆಯಬಲ್ಲದು. ಹೇಗೆಂದರೆ ಬಿಸಿ ಮಾಡಿದ ಯೋಗರ್ಟ್ ಬ್ಯಾಕ್ಟೀರಿಯಾಗಳನ್ನು ಕೊಲ್ಲದಿದ್ದರೂ ಅವುಗಳ ಪ್ರಮಾಣದಲ್ಲಿ ಹೆಚ್ಚಳ ಆಗದಂತೆ ನೋಡಿಕೊಳ್ಳುತ್ತದೆ.
ಐದು ವರ್ಷ ದಾಟಿದ ಮಕ್ಕಳಿಗೂ ಭೇದಿ ನಿಲ್ಲಿಸಲು ಯೋಗರ್ಟ್ ಅನ್ನು ಧಾರಾಳವಾಗಿ ನೀಡಬಹುದು. ಗಮನಿಸಬೇಕಾದ ಸಂಗತಿ ಎಂದರೆ ಫ್ರಿಡ್ಜ್‌ನಲ್ಲಿಟ್ಟ ಯೋಗರ್ಟ್ ಕೊಡಬಾರದು. ಐದು ವರ್ಷದೊಳಗಿನ ಮಕ್ಕಳಿಗೆ ಆಗಾಗ ಯೋಗರ್ಟ್ ಕೊಡುವುದು ಅಷ್ಟು ಸೂಕ್ತವಲ್ಲ. ಅದರಲ್ಲೂ ಒಂದು ವರ್ಷದೊಳಗಿನ ಹಸುಳೆಗಳಿಗೆ ಯೋಗರ್ಟ್ ನೀಡಲೇಕೂಡದು ಎನ್ನುವುದು ಶಿಶುತಜ್ಞರ ಸಲಹೆ. ಶಿಶುಗಳಿಗೆ ಯೋಗರ್ಟ್ ನೀಡಿದರೆ ಅದರಲ್ಲಿನ ಪ್ರೊಟೀನ್‌ಗಳು ರಿಯಾಕ್ಷನ್ ಉಂಟುಮಾಡಬಹುದು, ನಿದ್ರಾಹೀನತೆ, ಕಿರಿಕಿರಿಯಂಥ ಸಮಸ್ಯೆಗಳನ್ನು ಹುಟ್ಟುಹಾಕಬಹುದು ಎನ್ನುವುದು ಅವರ ಎಚ್ಚರಿಕೆ. ಕೆಲವರಿಗೆ ದೊಡ್ಡವರಾದ ಬಳಿಕ ಉಸಿರಾಟದ ತೊಂದರೆಗಳು, ಕೆಲವು ಬಗೆಯ ಅಲರ್ಜಿಗಳು ಕಾಣಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ ಎನ್ನುತ್ತಾರೆ ತಜ್ಞರು.
ಕೆಲವು ತಾಯಂದಿರು ಎದೆ ಹಾಲಿನ ಕುರಿತಂತೆ ತಮ್ಮ ಅನುಮಾನಗಳನ್ನು ಹಂಚಿಕೊಂಡಿದ್ದಾರೆ. 'ಎದೆ ಹಾಲಿನಿಂದಲೂ ಅತಿಸಾರ ಉಂಟಾಗುತ್ತದೆ ಅಂತಾದರೆ ಎದೆ ಹಾಲು ನಿಲ್ಲಿಸುವುದು ಸೂಕ್ತವೆ? ಎದೆ ಹಾಲು ನಿಲ್ಲಿಸಿದರೆ ಮಗುವಿಗೆ ತೊಂದರೆ ಆಗಲಿಕ್ಕಿಲ್ಲವೆ'- ಇದು ಅವರ ಶಂಕೆ. ಶಿಶುವಿಗೆ ಎದೆ ಹಾಲು ಕೊಡುವುದನ್ನು ನಿಲ್ಲಿಸಬೇಕಿಲ್ಲ. ಎದೆ ಹಾಲಿನ ಮೂಲಕ ಅತಿಸಾರವೂ ಸೇರಿದಂತೆ ಕೆಲವು ಸೋಂಕುಗಳನ್ನು ಹರಡುವ ಬ್ಯಾಕ್ಟೀರಿಯಾಗಳು ಮಗುವಿನ ದೇಹ ಸೇರಿಕೊಳ್ಳುತ್ತವೆ. ಆದ್ದರಿಂದ ಎದೆ ಹಾಲು ಉಣ್ಣಿಸುವ ತಾಯಂದಿರು ಹುಷಾರಾಗಿರಬೇಕು, ಮಗುವಿಗೆ ಅಲರ್ಜಿ ಉಂಟುಮಾಡುವಂತಹ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಯಾವ ಆಹಾರಗಳು ಅಲರ್ಜಿ ಉಂಟುಮಾಡುತ್ತವೆ ಎನ್ನುವುದು ಮಗುವಿನ ಮಲ ವಿಸರ್ಜನೆಯಲ್ಲೇ ಗೊತ್ತಾಗುತ್ತದೆ. ಅಲರ್ಜಿ ಉಂಟುಮಾಡುವ ಕೆಲವು ಬಗೆಯ ಆಹಾರಗಳಿಂದ ಮೈಮೇಲೆ ಗುಳ್ಳೆಗಳೂ ಏಳಬಹುದು. ಇವೆರಡು ಸಂಗತಿಗಳ ಬಗ್ಗೆ ನಿಗಾ ವಹಿಸಿದರೆ ತಾಯಿಯ ಯಾವ ಆಹಾರ ಮಗುವಿಗೆ ಅಲರ್ಜಿ ಉಂಟುಮಾಡುತ್ತದೆ ಎನ್ನುವುದನ್ನು ಪತ್ತೆ ಮಾಡುವುದು ಸುಲಭ.
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


