ಕಿರು ಖುಷಿಯ ಝರಿ

ಊಟಿ, ಕೊಡೈಕೆನಾಲ್ಗೆ ಸಂಸಾರ ಸಮೇತ ಹೋಗುತ್ತೇವೆ. ಅಲ್ಲಿ ಥರಹೇವಾರಿ ಹೂಗಳ ರಾಶಿ ನೋಡಿ ಸಂತೋಷಪಡುತ್ತೇವೆ. ಮನೆಯ ಪಕ್ಕದಲ್ಲೇ ಅರಳಿ ನಿಂತ ಸೊಗಸಾದ ದಾಸವಾಳ ಹೂವು ನಮ್ಮ ಗಮನ ಸೆಳೆಯುವುದೇ ಇಲ್ಲ. ದೊಡ್ಡ ದೊಡ್ಡ ಪಂಚತಾರಾ ಹೋಟೆಲ್ಗಳಿಗೆ ಹೋಗುತ್ತೇವೆ. ಭಾರಿ ಮೊತ್ತದ ತಿಂಡಿಗಳನ್ನು ತಿನ್ನಲು ಅಸಾಧ್ಯವಾದರೂ ಆರ್ಡರ್ ಮಾಡಿ ತರಿಸಿ ಅರ್ಧ ತಿಂದು ಉಳಿದದ್ದನ್ನು ಹಾಗೇ ಚೆಲ್ಲುತ್ತೇವೆ. ಮನೆಯಲ್ಲಿ ಅಮ್ಮ, ಹೆಂಡತಿ ಮಾಡಿದ ದೋಸೆಯ ರುಚಿಯನ್ನು ಆಸ್ವಾದಿಸಲು ನಮಗಾಗುವುದೇ ಇಲ್ಲ. ಲಕ್ಷಾಂತರ ರೂಪಾಯಿ ನೀಡಿ ಅಂತಾರಾಷ್ಟ್ರೀಯ ಗಾಯಕರನ್ನು ಕರೆಸಿ ಕಛೇರಿ ಇಡಿಸಿ ಮೈಕ್ ಹಚ್ಚಿ ಅವರ ಸಂಗೀತ ಅರ್ಥವಾಗದಿದ್ದರೂ ಕೇಳುತ್ತೇವೆ. ನಮ್ಮ ಕಚೇರಿಯಲ್ಲೇ ಇರುವ, ಸೊಗಸಾಗಿ ಹಾಡುವ ಹುಡುಗಿಯ ಕಂಠ ನಮಗೆ ಕೇಳಿಸುವುದೇ ಇಲ್ಲ. ಇದು ಯಾಕೆ ಹೀಗೆ?
ನಮ್ಮ ಅಕ್ಕಪಕ್ಕದಲ್ಲೇ ನಾವು ಗಮನಿಸದ, ಆದರೆ ಗಮನಿಸಲೇಬೇಕಾದ ನೂರೆಂಟು ಸಣ್ಣ ಸಣ್ಣ ಸಂಗತಿಗಳಿವೆ. ಅವುಗಳನ್ನು ನೋಡಲು, ಮುಟ್ಟಲು, ಮೂಸಲು, ಆಸ್ವಾದಿಸಲು ನಿಮ್ಮ ಹಣ, ಪರಿಶ್ರಮ, ಅಪಾಯಿಂಟ್ಮೆಂಟ್ ಏನೂ ಬೇಕಾಗಿಲ್ಲ. ಆಸ್ವಾದಿಸುವ ಮನಸ್ಸು ಇದ್ದರಾಯಿತು ಅಷ್ಟೇ. ಆದರೆ ಆಧುನಿಕತೆ ಮತ್ತು ಅನುಕರಣೆಗಳ ಬೆನ್ನು ಬಿದ್ದು ನಾವು ಅದನ್ನೆಲ್ಲ ಮರೆತೇ ಬಿಡುತ್ತೇವೆ. ಸುತ್ತಮುತ್ತಲೇ ಸೊಗಸಾದ ಸಂಗತಿಗಳಿದ್ದರೂ ಅವು ನಮ್ಮ ಗಮನ ಸೆಳೆಯುವುದೇ ಇಲ್ಲ. ಗಮನ ಸೆಳೆಯುವುದಿಲ್ಲ ಎಂಬುದಕ್ಕಿಂತ, ನೀವು ಗಮನ ಕೊಡುತ್ತಿಲ್ಲ ಎಂಬುದು ಸರಿಯಾದ ಪದಪ್ರಯೋಗ ಅನಿಸೀತು.
ಒಂದು ಪುಟ್ಟ ಮಗುವನ್ನು ನೋಡಿ. ಅದು ಯಾವ ಅತಿಯಾದ ಬಯಕೆಗಳ ಭಾರವೂ ಇಲ್ಲದೇ, ತನ್ನ ಸುತ್ತಮುತ್ತಲಿನ ಸಣ್ಣ ಸಂಗತಿಗಳಲ್ಲೇ ಎಷ್ಟು ತಾದಾತ್ಮ್ಯದಿಂದ ಮಗ್ನವಾಗಿರುತ್ತದೆ! ಯಾಕೆಂದರೆ ಅದು ಹೊರಗಿನದ್ದು, ಘನವಾದದ್ದು, ಹೆಚ್ಚಿನದ್ದು ಎಂದೆಲ್ಲ ಯಾವುದರ ಬಗೆಗೂ ತಲೆ ಕೆಡಿಸಿಕೊಂಡೇ ಇಲ್ಲ. ತನ್ನ ಅಕ್ಕಪಕ್ಕದಲ್ಲಿ ಇರುವುದರ ಬಗೆಗೇ ಗಮನ ಹರಿಸುತ್ತ, ಆದರಿಂದಲೇ ಸಾಕಷ್ಟನ್ನು ಕಲಿಯುತ್ತ, ಮನರಂಜನೆ ಪಡೆಯುತ್ತ ಇರುತ್ತದೆ. ಪ್ರಾಯ ಸಂದಂತೆ, ಸನಿಹದ್ದು ದೂರವಾಗುತ್ತದೆ. ದೂರದ್ದು ಬೇಕಾಗುತ್ತದೆ. ಇದು ಮನುಷ್ಯ ತನಗೆ ನಿಜವಾಗಿಯೂ ಏನು ಬೇಕು ಎಂದು ಕೇಳಿಕೊಳ್ಳದೆ ಇರುವುದರ ಫಲ.
- ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


