ಬೈಟುಕಾಫಿ

ಪ್ರವಾಸದಲ್ಲಿ ಏನು ಮುನ್ನೆಚ್ಚರಿಕೆ ಬೇಕು?

ಪ್ರವಾಸದಲ್ಲಿ ಏನು ಮುನ್ನೆಚ್ಚರಿಕೆ ಬೇಕು?
Published On :

ಇದರ ಹೆಸರೇ 'ಟ್ರಾವೆಲರ್ಸ್ ಡಯೇರಿಯಾ'. ಅಂದರೆ ಪ್ರವಾಸಿಗರನ್ನು ಕಾಡುವ ಅತಿಸಾರ. ದೀರ್ಘ ಪ್ರವಾಸ ಕೈಗೊಳ್ಳುವವರಿಗೆ, ವಿದೇಶ ಪ್ರವಾಸ ಕೈಗೊಳ್ಳುವವರಿಗೆ ಈ ಬಾಧೆ ಹೆಚ್ಚು. ಸಣ್ಣಪುಟ್ಟ ಪ್ರವಾಸ ಕೈಗೊಳ್ಳುವವರಿಗೂ ಕಾಡುತ್ತದೆ, ಆದರೆ ಅತಿಸಾರದ ಬ್ಯಾಕ್ಟೀರಿಯಾಗಳು ಪ್ರಭಾವ ಬೀರಲು ಆರಂಭಿಸುವಾಗ ಅವರು ತಿರುಗಾಟ ಮುಗಿಸಿ ಊರಿಗೆ ಮರಳಿರುವುದರಿಂದ ಪ್ರವಾಸಕ್ಕೆ ಯಾವುದೇ ರೀತಿಯಲ್ಲಿ ತೊಂದರೆ ಉಂಟಾಗುವುದಿಲ್ಲ. ದೀರ್ಘ ಪ್ರವಾಸದಲ್ಲಿ ಇರುವವರಿಗೆ ಇದರ ಪರಿಣಾಮ ಗೊತ್ತಾಗುವುದೇ ಸಾಮಾನ್ಯವಾಗಿ ಒಂದು ವಾರದ ಬಳಿಕ. ಒಂದು ಅಂಕಿ-ಅಂಶದ ಪ್ರಕಾರ ಏಷ್ಯದ ದೇಶಗಳೂ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಭೇಟಿ ನೀಡುವ ಶೇ 30ರಿಂದ 50ರಷ್ಟು ವಿದೇಶಿ ಪ್ರವಾಸಿಗರಿಗೆ 'ಟ್ರಾವೆಲರ್ಸ್ ಡಯೇರಿಯಾ' ಕಾಡುತ್ತದೆಯಂತೆ. ನೀರು ಮತ್ತು ಆಹಾರದ ಮೂಲಕ ಬರುವ ಅತಿಸಾರವಿದು. ಸೆಡೆತ, ಜಿಡ್ಡು, ವಾಕರಿಕೆ ಇವೆಲ್ಲ ಪ್ರವಾಸಿಗರನ್ನು ಕಾಡುವ ಅತಿಸಾರದ ಮುನ್ಸೂಚನೆಗಳೇ ಆಗಿರುತ್ತವೆ. ಎಸ್ಚರೀಶಿಯಾ ಕೋಲಿ ಅಥವಾ ಇ-ಕೋಲಿ ಈ ಅತಿಸಾರಕ್ಕೆ ಪ್ರಮುಖ ಕಾರಣ ಎಂದು ಗುರುತಿಸಲಾಗಿದೆ. ಬೇಯಿಸದ ಎಲೆಗಳು, ಕಚ್ಚಾ ತರಕಾರಿ, ಸಿಪ್ಪೆ ಸುಲಿಯದ ಹಣ್ಣುಗಳನ್ನು ತಿನ್ನುವುದರಿಂದಲೂ, ರಸ್ತೆ ಪಕ್ಕದಲ್ಲಿ ಮಾರುವ ತಿನಿಸುಗಳನ್ನು ತಿನ್ನುವುದರಿಂದಲೂ 'ಟ್ರಾವೆಲರ್ಸ್ ಡಯೇರಿಯಾ' ಬರುವ ಸಾಧ್ಯತೆ ಅಧಿಕವಾಗಿದೆ. ಸಾಮಾನ್ಯವಾಗಿ ಮೊದಲ ಸಲ ಪ್ರವಾಸ ಕೈಗೊಳ್ಳುವ ಎಲ್ಲರೂ ಇಂಥ ತಪ್ಪುಗಳನ್ನು ಮಾಡಿಯೇ ಮಾಡುತ್ತಾರೆ.
'ಟ್ರಾವೆಲರ್ಸ್ ಡಯೇರಿಯಾ'ದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಸಾಧ್ಯವಿದೆ. ಅದಕ್ಕೆ ಸ್ವಲ್ಪ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಅಷ್ಟೆ. ಹೋಟೆಲ್ ಅಥವಾ ಲಾಡ್ಜ್ ಸೇರಿದಂತೆ ಎಲ್ಲಿಯೂ ಅಲ್ಲಿನ ನೀರನ್ನು ಸೇವಿಸದೆ, ಸೀಲ್ ಮಾಡಿದ ಬಾಟಲಿಯಲ್ಲಿನ ಖನಿಜಯುಕ್ತ ನೀರು ಕುಡಿಯುವುದು ನೀವು ಅನುಸರಿಸಬೇಕಾದ ಮೊದಲ ಕ್ರಮ. ಡೀಲಕ್ಸ್ ಹೋಟೆಲ್‌ಗಳಲ್ಲಿಯೂ ಬಾಟಲಿ ನೀರನ್ನೇ ಕೊಡುವ ಪದ್ಧತಿ ಈಗೀಗ ಬರುತ್ತಿದೆ. ನಿಮ್ಮ ಬ್ಯಾಗಿನಲ್ಲಿ ನೀರಿನ ಬಾಟಲಿ ಸದಾ ಇರಲಿ. ಬಾಯಾರಿಕೆಯಾದಾಗ ಸಿಕ್ಕ ನೀರು ಕುಡಿಯುವುದನ್ನು ಇದರಿಂದ ತಪ್ಪಿಸಿಕೊಳ್ಳಬಹುದು. ಸಾಧ್ಯವಾದಷ್ಟು ಕುದಿಸಿದ ನೀರಿನಿಂದ ಮಾಡುವ ಚಹಾ, ಕಾಫಿಯಂತಹ ಪೇಯಗಳನ್ನೇ ಕುಡಿಯಿರಿ. ಚೆನ್ನಾಗಿ ಬೇಯಿಸಿದ ತರಕಾರಿಗಳನ್ನೇ ಸೇವಿಸಿ. ಅನ್‌ಪಾಶ್ಚರೈಸ್ಡ್ ಡೈರಿ ಉತ್ಪನ್ನಗಳನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ. ಸಿಪ್ಪೆ ಸುಲಿದು ತಿನ್ನುವ ಹಣ್ಣುಗಳನ್ನೇ ಸೇವಿಸಿ. ಐಸ್‌ಕ್ಯೂಬ್‌ಗಳ ಸಹವಾಸ ಬೇಡ. ಬೀದಿ ಬದಿ ತಿನಿಸುಗಳ ರುಚಿಗೆ ಮಾರು ಹೋಗಬೇಡಿ. ಇಷ್ಟು ಮಾಡಿದರೆ ಪ್ರವಾಸದ ಅವಧಿ ಸಂತೋಷದಿಂದ ಕೂಡಿರುವುದರಲ್ಲಿ ಅನುಮಾನವಿಲ್ಲ.

- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.