ಬೈಟುಕಾಫಿ

ಮಾಂಸ ಮೀಮಾಂಸ

ಮಾಂಸ ಮೀಮಾಂಸ
Published On :

'ಬೀಡಿ ಸೇದಬೇಡ ಮಗನೇ' ಎಂದು ಅಪ್ಪ ಉಪದೇಶಿಸುತ್ತಾನೆ. ಅಪ್ಪನೇನೋ ಪ್ರಾಮಾಣಿಕತೆಯಿಂದಲೇ ಅದನ್ನು ಹೇಳುತ್ತಾನೆ. ಆದರೆ ಬೀಡಿ ಎಂದರೇನಂದೇ ಗೊತ್ತಿಲ್ಲದ ಹುಡುಗನಿಗೆ ಅದರ ಬಗ್ಗೆ ಕೆಟ್ಟ ಕುತೂಹಲ ಹುಟ್ಟುತ್ತದೆ. ಬೀಡಿ ಸೇದಿದರೆ ಏನಾಗುತ್ತದೆ ನೋಡೋಣ ಎಂದು ಮುಂದಾಗಿಯೇಬಿಡುತ್ತಾನೆ! ಸರ್ವ ಪ್ರಾಪಂಚಿಕ ವಿಚಾರಗಳಲ್ಲೂ ಹೀಗೇ ಆಗುತ್ತದೆ.
ಅಲ್ಲೊಬ್ಬ ಅಧ್ಯಾತ್ಮ ಪಂಡಿತನಿದ್ದನಂತೆ. ಆತನ ಬಳಿ ಜ್ಞಾನಾರ್ಜನೆಗಾಗಿ ಬಂದ ಹತ್ತಾರು ವಟುಗಳು. ಅವರಿಗೆ ಪ್ರತಿದಿನ ಗುರುಗಳ ಮೂಲಕ ಶಂಕರಾಚಾರ್ಯರ 'ಭಜಗೋವಿಂದಂ' ಪಾಠ. ಪ್ರಾಪಂಚಿಕ ವಿಷಯಗಳಲ್ಲಿ ಮೋಹವನ್ನಿಟ್ಟುಕೊಳ್ಳಬಾರದು, ಅದನ್ನೆಲ್ಲ ಮೀರಿ ಭಗವಂತನಲ್ಲಿ ಮನಸ್ಸು ನೆಡಬೇಕು ಎಂಬುದೇ ಶಂಕರಾಚಾರ್ಯರ ಈ ಕಿರುಕಾವ್ಯದ ತಿರುಳು. ಸ್ತೋತ್ರದ ಎಲ್ಲಾ ಶ್ಲೋಕಗಳನ್ನೂ ಓತಪ್ರೋತವಾಗಿ ವಿವರಿಸುತ್ತಿದ್ದ ಗುರುಗಳು ಈ ಕೆಳಗಿನ ಶ್ಲೋಕವನ್ನು ಸುಮ್ಮನೆ ಓದಿ, ಅರ್ಥ ವಿವರಿಸದೆ ಹಾರಿಸಿ ಮುಂದೆ ಹೋಗುತ್ತಿದ್ದರು.

ನಾರೀಸ್ತನಭರನಾಭಿನಿವೇಶಂ ದೃಷ್ಟ್ವಾ ಮಾ ಗಾ ಮೋಹಾವೇಶಂ
ಏತನ್ಮಾಂಸವಸಾದಿವಿಕಾರಂ ಮನಸಿ ವಿಚಿತಯ ವಾರಂ ವಾರಂ


ಶಿಷ್ಯರಿಗೆ ಬಗೆಹರಿಯಲಿಲ್ಲ. ಒಂದು ದಿನ ಚುರುಕಾದ ವಟು ಕೇಳಿಯೇಬಿಟ್ಟ. 'ಗುರುಗಳೇ ಅದರರ್ಥವೇನು?' ಇನ್ನು ಮುಚ್ಚಿಡಲಾಗದೆಂದು ಅರಿತ ಗುರುಗಳು ಹೇಳಿದರು: 'ನಾರಿಯರ ತುಂಬಿದ ಸ್ತನಗಳು, ನಾಭಿಪ್ರದೇಶ, ಇವೆಲ್ಲವನ್ನು ಕಂಡು ಸುಮ್ಮನೇ ಉದ್ರೇಕಿತನಾಗಬೇಡ. ಅವು ಮಾಂಸದ ಬೇರೆ ಬೇರೆ ರೂಪಗಳಷ್ಟೇ...'
ಶಿಷ್ಯನ ಪ್ರಶ್ನೆ ಎರಗಿತು: 'ನಾವದನ್ನು ನೋಡಿಯೇ ಇಲ್ಲವಲ್ಲ ಗುರುಗಳೇ! ಅದು ಹೇಗಿರುತ್ತದೆಂದು ವಿವರಿಸುತ್ತೀರಾ?'
ಗುರುಗಳು ಮನದಲ್ಲಿಯೇ ಶಂಕರಾಚಾರ್ಯರಿಗೆ ಬಯ್ದುಕೊಂಡಿರಬೇಕು!

- ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.