ಬೈಟುಕಾಫಿ

ಪತ್ರ ಪಕ್ಷಿ

ಪತ್ರ ಪಕ್ಷಿ
Published On :

ಅಂಚೆಗೂ ಪಾರಿವಾಳಕ್ಕೂ ಅವಿನಾಭಾವ ಸಂಬಂಧವಿದೆ. ಈ ಪಾರಿವಾಳಗಳಿಗೆ ಎಲ್ಲೇ ತೆಗೆದುಕೊಂಡು ಹೋಗಿ ಬಿಟ್ಟರೂ ಪುನಃ ತನ್ನ ಗೂಡಿಗೆ ಬಂದು ಸೇರಿಕೊಳ್ಳುವ ವಿಶಿಷ್ಟ ಗುಣವಿದ್ದದ್ದರಿಂದ ಅವುಗಳನ್ನು ಸಂದೇಶವಾಹಕರನ್ನಾಗಿ ಬಳಸಿಕೊಂಡು ಪತ್ರ ವಿನಿಮಯ ಮಾಡುವ ಪದ್ಧತಿ ಮೊದಲಿಂದಲೂ ಇತ್ತು.

ತಂತಿ ಸಂದೇಶಕ್ಕೂ ಮುಂಚೆ ಅಂಚೆಯನ್ನು ವಾಯು ಮಾರ್ಗವಾಗಿ ಪಾರಿವಾಳಗಳು ತಲುಪಿಸುತ್ತಿದ್ದವು. ಸುಮಾರು 2000 ವರ್ಷ ಹಿಂದೆಯೇ ಪರ್ಶಿಯನ್ನರು, ಮೊಘಲರು ಸಂದೇಶ ರವಾನೆಗೆ ಪಾರಿವಾಳಗಳನ್ನು ಬಳಸಿದರೆ, ರೋಮನ್ನರು ಸಾಕಿದ ಪಾರಿವಾಳಗಳನ್ನು ದುರ್ಗಮ ಮಿಲಿಟರಿ ನೆಲೆಗಳಲ್ಲಿ ಬಳಸುತ್ತಿದ್ದರು. ಮೊದಲನೇ ಮಹಾಯುದ್ಧದ ಸಮಯದಲ್ಲಿ ಆಕಾಶಮಾರ್ಗದಲ್ಲಿ ಸಂಚರಿಸುತ್ತ ದೇಹಕ್ಕೆ ಕಟ್ಟಿದ್ದ ಜರ್ಮನ್ನರ ಮಾನವರಹಿತ ಅತಿ ಹಗುರ ವಿಶೇಷ ಕ್ಯಾಮೆರಾಗಳಿಂದ ಫೋಟೋ ಸಹ ತೆಗೆಯುತ್ತಿತ್ತಂತೆ. ಈ ಪರಿಯ ಸೇವೆ ನೀಡುವ ಪಾರಿವಾಳಗಳಿಗೆ ಪದಕ ನೀಡುವ ಪದ್ಧತಿಯೂ ಇತ್ತು.

ಆದರೆ ಬರಬರುತ್ತ ವೈರಿ ದೇಶದವರು ವಾಯು ಮಾರ್ಗದಲ್ಲಿ ಸಾಗುವ ಪಾರಿವಾಳಗಳನ್ನು ತಿಂದು ಹಾಕಲು ರಣಹದ್ದನ್ನು ಕಳುಹಿಸಲಾರಂಭಿಸಿದರಂತೆ. ಹೀಗಾಗಿ ಅತಿ ಬಳಕೆಯಲ್ಲಿದ್ದ ಪಾರಿವಾಳ ಅಂಚೆಯ ಗತಿ ಕಡಿಮೆಯಾಯಿತು. ಭಾರತೀಯ ಅಂಚೆ ಕೂಡ 18ನೇ ಶತಮಾನದಲ್ಲಿ ಸಾಕಿದ ಪಾರಿವಾಳ ಬಳಸಿ ಅಂಚೆ ಸಾಗಿಸುತ್ತಿತ್ತು. ನಂತರ ರನ್ನರ್, ಪಲ್ಲಕ್ಕಿ, ಎತ್ತಿನ ಗಾಡಿ, ಕುದುರೆ ಗಾಡಿ, ರೈಲು ಗಾಡಿ, ದೋಣಿ, ಹಡಗು, ಬಸ್, ವಿಮಾನ ವ್ಯವಸ್ಥೆ ಬಂತು.

ಒಂದು ಕಾಲಿನಲ್ಲಿ ಪತ್ರದ ಕೊಳವೆ ಕಟ್ಟಿಕೊಂಡು ಪತ್ರ ತಲುಪಬೇಕಾದವರಿಗೇ ತಲುಪಿಸುತ್ತಿದ್ದ 'ಪಾರಿವಾಳ ಅಂಚೆ'ಗೂ ಇಂದು ಒಂದು ಗಂಟೆಗೆ 30000ಕ್ಕೂ ಹೆಚ್ಚು ಪತ್ರಗಳನ್ನು ವಿಂಗಡಿಸುವ ಆಧುನಿಕ ತಂತ್ರಜ್ಞಾನದ ಅಂಚೆಗೂ ಮತ್ತು ಇಂಟರ್‌ನೆಟ್ ಮೂಲಕ ಸಾಗುವ ಇ-ಅಂಚೆಗೂ ಅಜಗಜಾಂತರ. ಆದರೆ ಕಾಕತಾಳೀಯ ಎನ್ನುವಂತೆ ಭಾರತೀಯ ಅಂಚೆಯ ಈಗಿನ ಲಾಂಛನ ಹಾರುತ್ತಿರುವ ಹಕ್ಕಿಯ ರೆಕ್ಕೆಯನ್ನೇ ಹೋಲುತ್ತದೆ. ಇಂದಿಗೂ ಅಂಚೆ ಇಲಾಖೆಯಲ್ಲಿ ಪತ್ರ ವಿಂಗಡಣೆಗಿರುವ ಸಾರ್ಟಿಂಗ್ ಕೇಸ್‌ಗಳಲ್ಲಿ ಪತ್ರ ವಿಂಗಡಿಸುವ  ಖಾನೆಗಳಿಗೆ ಪಿಜನ್ ಹೋಲ್- ಪಾರಿವಾಳದ ಗೂಡು ಎನ್ನುವ ಹೆಸರಿದೆ.

ಅ.9ರಂದು ಭಾರತೀಯ ಅಂಚೆಯು ಅಂಚೆ ದಿನ ಆಚರಿಸುತ್ತಿರುವ ಸಂದರ್ಭ, ಮರೆತು ಹೋಗಿರುವ  ತಮ್ಮನ್ನು ನೆನಪಿಸಲೆಂದೇ ಈ ಪಾರಿವಾಳಗಳು ದೆಹಲಿಯ ಅಂಚೆ ಮುಖ್ಯಾಲಯದ ಲಾಂಛನದ ಮೇಲೆ ಬಂದು ಕುಳಿತಿರಬಹುದೆ ಎಂದು ಭಾಸವಾಗುವಂತಿದೆ.

- ಬಿ.ಎಸ್.ವೆಂಕಟಾಚಲ ಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.