ಸಿಹಿ ಲಾಡು
ಮೈಸೂರಿನ 'ಪೀಪಲ್ ಫಾರ್ ಪೀಪಲ್' ಸಂಸ್ಥೆ ಜನರಿಂದ ಜನರಿಗೆ ಎಂಬ ಹೆಸರಿನಲ್ಲಿ ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ...

ಮೈಸೂರಿನ 'ಪೀಪಲ್ ಫಾರ್ ಪೀಪಲ್' ಸಂಸ್ಥೆ ಜನರಿಂದ ಜನರಿಗೆ ಎಂಬ ಹೆಸರಿನಲ್ಲಿ ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು ಎಂಬಂತೆ ಸದ್ದಿಲ್ಲದೇ ಸಮಾಜಸೇವೆ ಮಾಡುತ್ತಿದೆ ಎಂದರೆ ನೀವು ನಂಬಲೇಬೇಕು.
ಅಂದಹಾಗೆ, ಈ ಸಂಸ್ಥೆಗೆ ಒಂದು ಕಚೇರಿ ಇಲ್ಲ. ಪದಾಧಿಕಾರಿಗಳಿಲ್ಲ. ಬ್ಯಾಂಕ್ ಖಾತೆ ಇಲ್ಲ. ದೇಣಿಗೆಯನ್ನೂ ಸ್ವೀಕರಿಸುವುದಿಲ್ಲ.
ಸಮಾಜಸೇವೆಯ ಬಗ್ಗೆ ಕಳಕಳಿವುಳ್ಳ 30- 40 ಮಂದಿ ಪ್ರತಿ ಭಾನುವಾರ ಮೈಸೂರಿನ ಸಯ್ಯಾಜಿರಾವ್ ರಸ್ತೆಯ ಇಂದ್ರಭವನ ಪಾರಸ್ ಹೋಟೆಲ್ ಬಳಿ ಒಟ್ಟಾಗುತ್ತಾರೆ. ಅಲ್ಲಿಂದ ನೇರವಾಗಿ ಆಸ್ಪತ್ರೆ, ವೃದ್ಧಾಶ್ರಮ, ಬುದ್ಧಿಮಾಂದ್ಯರು, ಅಂಗವಿಕಲರು, ಕಿವುಡರ ಶಾಲೆ, ನಿರಾಶ್ರಿತರ ತಾಣ, ಕೊಳೆಗೇರಿ, ಸರ್ಕಾರಿ ಶಾಲೆಗಳು, ಹಾಸ್ಟೆಲ್ಗಳು, ಪ. ಜಾತಿ ಮತ್ತು ವರ್ಗದವರು ಹೆಚ್ಚಾಗಿ ವಾಸಿಸುವ ಬಡಾವಣೆಗಳು- ಹೀಗೆ ಯಾವುದಾದರೂ ಒಂದೆಡೆ ತೆರಳುತ್ತಾರೆ. ತಮ್ಮ ಕೈಯಲ್ಲಿ ಆದದ್ದನ್ನು ಅಂದರೆ ಬಟ್ಟೆ, ಮೂಲಭೂತ ವಸ್ತುಗಳು ಮೊದಲಾದವನ್ನು ದಾನ ಮಾಡುತ್ತಾರೆ. ಅವರೊಂದಿಗೆ ಉಪಾಹಾರ ಸೇವಿಸುತ್ತಾರೆ. ನಾಲ್ಕಾರು ಒಳ್ಳೆಯ ಮಾತನಾಡಿ, ಅಲ್ಲಿಂದ ನಿರ್ಗಮಿಸುತ್ತಾರೆ. ಹೊರಗೆ ಬರುತ್ತಿದ್ದಂತೆಯೇ ಅಂದಿನ ಖರ್ಚನ್ನು ಎಲ್ಲರೂ ಸಮನಾಗಿ ಹಂಚಿಕೊಳ್ಳುತ್ತಾರೆ. ಅಲ್ಲಿಗೆ ಅಂದಿನ ಕಾರ್ಯಕ್ರಮ ಮುಗಿಯಿತು. ಆಸಕ್ತ ಸದಸ್ಯರ ಗಮನಕ್ಕೆ ಆ ಭಾನುವಾರ ಎಲ್ಲಿ ಕಾರ್ಯಕ್ರಮ ನಡೆಯುತ್ತದೆ ಎಂಬುದನ್ನು ಮಾಧ್ಯಮಗಳ 'ನಗರ ಕಾರ್ಯಕ್ರಮ'ದಲ್ಲಿ ಪ್ರಕಟಿಸಲು ನೀಡುವುದನ್ನು ಹೊರತುಪಡಿಸಿದರೆ ಅವರು ಯಾವುದೇ ಪ್ರಚಾರ ಪಡೆಯಲು ಬಯಸುವುದಿಲ್ಲ.
ಇವರೆಲ್ಲರ ಸಮನ್ವಯಕರು 60 ವರ್ಷದ ಎನ್. ವಿಠ್ಠಲ್ ಲಾಡ್. ಈ ಸಂಸ್ಥೆ ಈವರೆಗೆ 811 ಭಾನುವಾರ ಇಂಥ ಕಾರ್ಯಕ್ರಮಗಳನ್ನು ನಡೆಸಿದೆ. ಮೈಸೂರಿನಲ್ಲಿ ಬಂದ್ ಇರಲಿ, ಕರ್ಫ್ಯೂ ಇರಲಿ, ದಸರೆ ಇರಲಿ, ಹಬ್ಬಹರಿದಿನಗಳು ಇರಲಿ ಪ್ರತಿ ಭಾನುವಾರ ಈ ಕಾರ್ಯಕ್ರಮ ನಿಲ್ಲದು. ಹಿಂದಿನ ದಿನವೇ ಅಲ್ಲಿಗೆ ಹೋಗಿ ಸಂಸ್ಥೆಗೆ ಅಗತ್ಯವಿರುವ ವಸ್ತುಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಅಂಥ ವಸ್ತುಗಳನ್ನು ಕೊಟ್ಟು ಬರುತ್ತಾರೆ. ಫ್ಯಾನ್ಗಳು, ವೃದ್ಧಾಶ್ರಮಗಳಾದರೇ ಕೊಬ್ಬರಿ ಎಣ್ಣೆ, ಸೋಪು, ಅಮೃತಾಂಜನ, ಅಯೋಡೆಕ್ಸ್ ಅಂಗವಿಕಲರಾದರೆ ಊರುಗೋಲು, ನಿರಾಶ್ರಿತರಾದರೆ ರಗ್ಗು, ರೋಗಿಗಳಾದರೆ ಹಣ್ಣು, ಕೊಳೆಗೇರಿ ಮಕ್ಕಳಿಗಾದರೆ ಪುಸ್ತಕಗಳನ್ನು ನೀಡುತ್ತಾರೆ. ಭಿಕ್ಷುಕರನ್ನು ಹಿಡಿದು ಕೇಶಮುಂಡನ ಮಾಡಿಸುತ್ತಾರೆ. ನಿರಾಶ್ರಿತರ ಪುನರ್ವಸತಿ ಕೇಂದ್ರಕ್ಕೆ ತೆರಳಿ, ಹೋಳಿಗೆ- ತುಪ್ಪ, ಸಮೋಸ, ಕಲ್ಲಂಗಡಿ, ಪಪ್ಪಾಯಿ, ಹಲಸಿನ ಹಣ್ಣು ವಿತರಿಸುತ್ತಾರೆ.
ಇಷ್ಟೇ ಅಲ್ಲ... ಸುನಾಮಿ, ಅತಿವೃಷ್ಟಿ ಸಂದರ್ಭಗಳಲ್ಲಿ ನಿರಾಶ್ರಿತರಿಗೆ ನೆರವಾಗುತ್ತಾರೆ. ಔಷಧಿ ಪೂರೈಸುತ್ತಾರೆ. ದಾರಿ ತಪ್ಪಿ ಬಂದವರಿಗೆ ಊಟೋಪಚಾರ ಕೊಡಿಸಿ, ಊರಿಗೆ ಸೇರಿಸುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಸಾಂತ್ವನ ಹೇಳಿ ಶಕ್ತಿಧಾಮ, ಒಡನಾಡಿ ಮೊದಲಾದ ಸಂಸ್ಥೆಗಳಿಗೆ ಸೇರಿಸುತ್ತಾರೆ. ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಅಶಕ್ತ ಪ್ರಾಣಿಗಳ ತಾಣ- ಪ್ರಿಂಜ್ರಾಪೋಲ್ಗೆ ತೆರಳಿ ಜಾನುವಾರುಗಳಿಗೆ ಸೌತೆಕಾಯಿ, ತರಕಾರಿ ತಿನ್ನಿಸುತ್ತಾರೆ. ಸಣ್ಣ ಕರುಗಳಿದ್ದರೆ ಹಾಲು ಪೂರೈಸುತ್ತಾರೆ. ಕಸಾಯಿಖಾನೆಗೆ ಸಾಗಿಸುವ ಜಾನುವಾರು ಕಳ್ಳರು ಸಿಕ್ಕಿಬಿದ್ದರೆ ಕರುಗಳನ್ನು ದುಡ್ಡು ಕೊಟ್ಟು ಖರೀದಿಸಿ, ಪಿಂಜ್ರಾಪೋಲ್ಗೆ ಬಿಡುತ್ತಾರೆ. ಪೀಪಲ್ ಫಾರ್ ಅನಿಮಲ್ ಸಂಸ್ಥೆಗೆ ತೆರಳಿ, ಅಲ್ಲಿರುವ ಪ್ರಾಣಿಗಳಿಗೆ ಆಹಾರ ವಿತರಿಸುತ್ತಾರೆ. ಹಳೆಯ ಬಟ್ಟೆಗಳನ್ನು ಬಡವರಿಗೆ ವಿತರಿಸುತ್ತಾರೆ. ಮದುವೆಗಳಲ್ಲಿ ಉಳಿಯುವ ಊಟವನ್ನು ನಿರಾಶ್ರಿತರ ಶಿಬಿರಗಳಲ್ಲಿ ವಿತರಿಸುತ್ತಾರೆ.
ನಗರಪಾಲಿಕೆ ಸೇರಿದಂತೆ ಸರ್ಕಾರಿ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಸಂಘಟನೆಯನ್ನು ನೋಂದಾಯಿಸುವಂತೆ, ಕಚೇರಿ ಆರಂಭಿಸುವಂತೆ, ಕಚೇರಿ ಆರಂಭಿಸುವುದಾದಲ್ಲಿ ಸರ್ಕಾರದಿಂದ ನಿವೇಶನ ಕೊಡಿಸುವುದಾಗಿ, ಸರ್ಕಾರದಿಂದ ಅನುದಾನ ಕೊಡಿಸುವುದಾಗಿ ದುಂಬಾಲು ಬೀಳುತ್ತವೆ. ಆದರೆ ಸಂಸ್ಥೆಯ ಯಾವೊಬ್ಬ ಸದಸ್ಯರೂ ಇದಕ್ಕೆ ಬಲಿಯಾಗಿಲ್ಲ. 'ರೋಟರಿ ರಮ್ಯಾ ಪ್ರಶಸ್ತಿ' ಹೊರತುಪಡಿಸಿದರೆ ಯಾವುದೇ ಪ್ರಶಸ್ತಿ, ಸನ್ಮಾನಗಳನ್ನು ಸ್ವೀಕರಿಸಿಲ್ಲ. ವಿಠ್ಠಲ್ ಲಾಡ್ರಿಗೆ ನೀವೂ ಶುಭಾಶಯ ಕೋರಬಹುದು... ಮೊ. 9945650579.
ಸಂಸ್ಥೆ ಹುಟ್ಟಿದ್ದು ಹೇಗೆ?
ವಿಠ್ಠಲ್ ಲಾಡ್ ಚಿಕ್ಕಂದಿನಿಂದಲೂ ಸಂಘ-ಸಂಸ್ಥೆಗಳ ಒಡನಾಟದಲ್ಲಿ ಬೆಳೆದವರು. ಸೇವಾ ಭಾರತಿಯಲ್ಲಿ ಕೆಲಸ ಮಾಡಿದವರು. ಸಮಾಜದಲ್ಲಿ ನಿಕೃಷ್ಟವಾಗಿ ಕಾಣಲಾಗುವ ಜನರ ಸೇವೆ ಮಾಡುವ ತುಡಿತವುಳ್ಳವರು. ಚೆನ್ನೈನಲ್ಲಿ ಈ ರೀತಿಯ ಸೇವೆ ಮಾಡುತ್ತಿರುವ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ನೋಡಿದ್ದ ಅವರು, ಮೈಸೂರಿನಲ್ಲಿ ಸಮಾನಮನಸ್ಕರೊಂದಿಗೆ ಚರ್ಚಿಸಿ, 1998ರ ಆಗಸ್ಟ್ 2ರಂದು ಪೀಪಲ್ ಫಾರ್ ಪೀಪಲ್ ಸಂಘಟನೆ ಹುಟ್ಟುಹಾಕಿದರು.
ಮಗಳ ಮದುವೆಗೆ 507 ನಿರಾಶ್ರಿತರಿಗೆ ಆಹ್ವಾನ
2012ರ ಅ.6ರಂದು ವಿಠ್ಠಲ್ ಲಾಡ್ ಅವರ ಪುತ್ರಿ ಸಿಂಧು ವಿಠಲ್ ಅವರ ವಿವಾಹವು ರಾಕೇಶ್ ಮೋರೆ ಅವರೊಂದಿಗೆ ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ನೆರವೇರಿತು. ಈ ಕಾರ್ಯಕ್ರಮಕ್ಕೆ 507 ನಿರಾಶ್ರಿತರನ್ನು ಕರೆಸಿ, ಊಟ ಹಾಕಿಸಲಾಯಿತು. ನಮ್ಮ ಮಕ್ಕಳು- ಮೊಮ್ಮಕ್ಕಳು ಮದುವೆಗೆ ಕರೆಯಲಿಲ್ಲ. ನೀವಾದರೂ ಕರೆದಿರಿ ಎಂದು ಕೆಲ ವೃದ್ಧರು ಕಣ್ಣೀರು ತುಂಬಿಕೊಂಡು, ವಧು-ವರರನ್ನು ಹರಿರಸಿದ್ದರು.
- ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


