ಬೈಟುಕಾಫಿ

ಕಾರಂತ ಜೀವಂತ

ಕನ್ನಡದ ಮೇರು ಸಾಹಿತಿ ಡಾ.ಶಿವರಾಮ ಕಾರಂತರ ಹುಟ್ಟಿದ ದಿನ ಇಂದು...

ಕಾರಂತ ಜೀವಂತ
Published On :

ಕನ್ನಡದ ಮೇರು ಸಾಹಿತಿ ಡಾ.ಶಿವರಾಮ ಕಾರಂತರ ಹುಟ್ಟಿದ ದಿನ ಇಂದು. ಅವರ ನೆನಪಿನಲ್ಲಿ ನಾವು, ಅವರೇ ಸೃಷ್ಟಿಸಿದ ಬಾಲವನಕ್ಕೊಮ್ಮೆ ಹೋಗಿ ನೋಡೋಣ.

ಕೋಟ ಶಿವರಾಮ ಕಾರಂತರು ತಮ್ಮ ಜೀವಿತದ ಮಧ್ಯ ಕಾಲದಲ್ಲಿ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ನೆಲೆ ನಿಂತು ಸಾಹಿತ್ಯ ರಚನೆ ಮಾಡಿದ್ದರು. ಇಲ್ಲೇ ಪುಟಾಣಿ ಮಕ್ಕಳ ಜತೆ ಮಗುವಾಗಿ ಬೆರೆತಿದ್ದರು. ಆ ಮಹಾನ್ ಚೇತನ ಅಸ್ತಂಗತವಾದ ನಂತರ ಕೆಲವು ಕಾಲ ಬಾಲವನ ಕಳೆಗುಂದಿತ್ತು. ಈಗ ಮತ್ತೆ ಅದು ಮಕ್ಕಳ ನೆಲೆಯಾಗಿ ಚಿಗುರಿ ಕಲಕಲ ಸದ್ದು ಮಾಡುತ್ತಿದೆ.

ಕಾರಂತರು ಊರೂರು ಸಂಚರಿಸಿ ಮಕ್ಕಳ ಕೂಟವನ್ನು ರಚಿಸಿ ಮುಂದೆ ಪುತ್ತೂರಿನಲ್ಲಿ ಬಾಲವನ ನಿರ್ಮಿಸಿದರು. ಅವರ ಸೃಜನಶೀಲ ಚಟುವಟಿಕೆಗಳಿಗೆ ಪೂರಕ ಎನ್ನುವಂತೆ, 70 ವರ್ಷಗಳ ಹಿಂದೆಯೇ ಮಕ್ಕಳಿಗಾಗಿ ಪುಟಾಣಿ ರೈಲನ್ನು ಸಿದ್ಧಪಡಿಸಿ, ಬಾಲವನದ ತುಂಬಾ ಓಡಿಸಿ ಮಕ್ಕಳ ಮನೋಲ್ಲಾಸಕ್ಕೆ ಕಾರಣಕರ್ತರಾಗಿದ್ದರು. ಮಕ್ಕಳಲ್ಲಿ ಆ ಕ್ಷಣದ ಯೋಚನೆಗಳು ಗರಿಗೆದರಿ ಕಾರ್ಯಸಿದ್ಧಿಗೆ ಒಳಪಡುವುದನ್ನು ಅಪೇಕ್ಷಿಸಿ ಅವಕಾಶಗಳನ್ನು ಒಡ್ಡುತ್ತಿದ್ದರು. ಈಗ ಮತ್ತೆ ಬಾಲವನ ಮಕ್ಕಳ ಸರ್ವಾಂಗೀಣ ವಿಕಸನದ ನೆಲೆಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಸದ್ದಿಲ್ಲದೆ ಕಾರ್ಯಾಚರಿಸುತ್ತಿದೆ.

ಆರಂಭ ಹೇಗಾಯಿತು?
2012ರಲ್ಲಿ ಪುತ್ತೂರಿಗೆ ಸಹಾಯಕ ಕಮಿಷನರ್ ಆಗಿ ಬಂದ ಎಚ್. ಪ್ರಸನ್ನ ಅವರು ಶಿವರಾಮ ಕಾರಂತರ ಬಾಲವನದ ಬಗ್ಗೆ ತಿಳಿದುಕೊಂಡರು. ಕರ್ನಾಟಕಕ್ಕೆ ಅನುಪಮ ಸೇವೆ ನೀಡಿದ ಕಾರಂತರ ಬಾಲವನ ಮತ್ತೆ ಸಾಂಸ್ಕೃತಿಕ ಕೇಂದ್ರವಾಗಬೇಕೆಂಬ ದಿಟ್ಟ ನಿರ್ಧಾರ ಮಾಡಿದರು. ಆಗ ಅವರ ಕಣ್ಣಿಗೆ ಬಿದ್ದವರು ಹಿರಿಯ ಕಲಾವಿದರಾದ ಮೋಹನ ಸೋನ ಹಾಗೂ ಚಂದ್ರ ಸೌಗಂಧಿಕಾ. ಮೋಹನ ಸೋನ ನಾಲ್ಕು ದಶಕಗಳಿಂದ ಮಕ್ಕಳ ರಂಗಭೂಮಿ ನಿರ್ದೇಶಕರಾಗಿ, ಮಕ್ಕಳ ಸೃಜನಶೀಲ ಚಟುವಟಿಕೆಗಳಲ್ಲಿ ಶ್ರಮಿಸಿದ ವ್ಯಕ್ತಿ. ಹರೀಶ್ ಕುಮಾರ್ ಮನವಿಗೆ ಸೋನ ಸಮ್ಮತಿಸಿದರು.

ಅಲ್ಲಿಂದ ಪ್ರಾರಂಭವಾಯಿತು ಸೋನರ ಯಜ್ಞ. ಮಕ್ಕಳ ಚಿತ್ರಗಳು ಮನೋವಿಕಸನದ ಹಾದಿಯಲ್ಲಿ ಅರಳಬೇಕು ಎಂದುಕೊಂಡ ಸೋನ ಯೋಜನೆ ರೂಪಿಸಿದರು. ಗೆಳೆಯ ಚಂದ್ರ ಸಾಥಿಯಾಗಿ ನಿಂತರು. ಬೆಂಡರವಾಡಿ ರಾಜೇಶ್ ಶರ್ಮ ಬೆಂಬಲಿಗರಾದರು. ಮುಂದೆ ಎಂ.ಜಿ. ಕಜೆ, ಕುಸುಮಾಧರ ಸೋನ ಜತೆಗೂಡಿದರು. ಪುತ್ತೂರು ತಾಲೂಕಿನ ಎಲ್ಲ ಶಾಲೆಗಳಿ ಗೆ ಸುತ್ತೋಲೆ ಹಂಚಲಾಗಿತ್ತು. ಇದಕ್ಕೆ ಓಗೊಟ್ಟ 125 ಮಕ್ಕಳಲ್ಲಿ ಬದ್ಧರಾಗಿ ಬಂದವರು 25. ವರುಷದ ಬಳಿಕ ಆ ಸಂಖ್ಯೆ 75 ಮೀರಿತು. ಬೆಂಬಲಕ್ಕೆ ಹಿರಿಯರು. ಅಲ್ಲಿ ಶುಲ್ಕದ ಮಾತಿಲ್ಲ. ಪ್ರೀತಿಯ ಸೆಳೆತವೊಂದೇ ಇರುವುದು.

ಬಣ್ಣದ ಲೋಕ
ಭಾನುವಾರ ಬಂತೆಂದರೆ ಮಕ್ಕಳು ಬಾಲವನದಲ್ಲಿ ಸೇರುತ್ತಿದ್ದರು. ಚಂದ್ರ ಕಥೆ ಹೇಳುತ್ತಿದ್ದರು, ಸೋನ ಅದಕ್ಕೆ ರೆಕ್ಕೆ ಪುಕ್ಕ, ರೂಪ, ಸೌಂದರ್ಯ ಹೇಗೆ ಸಾಧ್ಯ ಎನ್ನುವ ಕುರಿತಾಗಿ ಮಕ್ಕಳ ಅಂತರಂಗಕ್ಕೆ ಇಳಿಯುತ್ತಿದ್ದರು. ಮಕ್ಕಳು ಮಾಯಾಲೋಕಕ್ಕೆ ಪ್ರವೇಶಿಸುತ್ತಿದ್ದರು. ಈ ರೀತಿ ಕೇಳಿದ ಕಥೆಗಳೆಲ್ಲವೂ ವಿಭಿನ್ನ ರೇಖೆಗಳಾಗಿ ಹಾಳೆಯ ಮೇಲೆ ಮೂಡಿ ಬರುತ್ತಿದ್ದವು. ಆ ಮಕ್ಕಳು ಊರ-ಪರವೂರ ಜನಪದೀಯ ಆಚರಣೆ, ವಸ್ತುವಿಶೇಷಗಳನ್ನು ಹತ್ತಿರದಿಂದ ಗಮನಿಸಿದರು. ಪಶುಪಕ್ಷಿಗಳನ್ನು ಅವಲೋಕಿಸಿದರು. ಬೆಟ್ಟಗುಡ್ಡ ಹತ್ತಿಳಿದರು. ಗಿಡಗಂಟೆ, ಮೂಲಿಕೆ, ವೃಕ್ಷ ವಿಶೇಷಗಳನ್ನು ತಿಳಿದುಕೊಂಡರು. ಕ್ರಿಮಿಕೀಟಗಳನ್ನು, ಅವುಗಳ ಚಲನವಲನ, ಸ್ವರವಿಶೇಷಗಳನ್ನು ಆಸ್ವಾದಿಸಿದರು. ನೆಟ್ಟನೋಟಗಳನ್ನು ಹಾಳೆಗಳಿಗೆ ರವಾನಿಸಿದರು. ಅರಿವಿಲ್ಲದೇನೇ ಅವರೊಳಗೊಬ್ಬ ಕಲಾವಿದ ಜನ್ಮ ತಳೆಯುತ್ತಿದ್ದ. ಅವರವರದ್ದೇ ಮನೆಯ ವಾಸ್ತವಗಳನ್ನು, ಜಗತ್ತಿನ ನಾನಾ ಕಥೆಗಳಿಗೆ ತಮ್ಮದೇ ಆದ ದೃಶ್ಯಗಳನ್ನು ಅಳಿಸದ ಗೆರೆಗಳಾಗಿ ದಾಖಲಿಸಿದರು.

ಚಿತ್ರಗಳಿಗೆ ಪ್ರಕೃತಿಯ ಬಣ್ಣ
ಮಕ್ಕಳು ಪ್ರಕೃತಿಯ ಬಸಿರನ್ನು ತಡಕಾಡುತ್ತಲೇ ಹೂ, ಹಣ್ಣು, ಕಾಯಿ, ಬೀಜ, ಗೊರಟು, ಎಲೆ, ಬಳ್ಳಿ, ತೊಗಟೆಗಳನ್ನು ಸಂಗ್ರಹಿಸಿ, ಅರೆದು ಸುಮಾರು ಐವತ್ತೇಳು ಬಗೆಯ ಬಣ್ಣ ವೈವಿಧ್ಯಗಳನ್ನು ಶೋಧಿಸಿಕೊಂಡರು. ಮನೆ ಮನೆಗೆ ತೆರಳಿ ಅರಶಿಣ, ಸುಣ್ಣ, ಮಣ್ಣು ಬೆರೆಸಿ ವರ್ಣಗಳನ್ನು ಹದ ಮಾಡಿದರು. ಕುಂಚಗಳಿಲ್ಲದೇ ಸಿಕ್ಕಿದ ಹಾಳೆಗಳಿಗೆ ಬಣ್ಣ ಲೇಪಿಸಿದರು. ತಜಂಕು, ಬಜಂಟು, ಗೆರಟೆ, ಚೆಪ್ಪು, ಉಮಿ, ಚಿಮಣಿ ಕರಿಗಳನ್ನು ತಯಾರಿಸಿ ಕಪ್ಪು ಬಣ್ಣವೊಂದರಲ್ಲೇ ಇಪ್ಪತ್ತೊಂದು ಬಗೆಯನ್ನು ಕಂಡುಕೊಂಡರು. ವಿವಿಧ ಬಣ್ಣಗಳ ಹುಡುಕಾಟಕ್ಕಾಗಿ ಸುಳ್ಯದ ಬಂಟಮಲೆ ಕಾಡಿನಲ್ಲಿ ಮಕ್ಕಳೊಡಗೂಡಿ 2 ದಿನ ತಂಗಿದ್ದರು. ಸೋನ, ಚಂದ್ರ, ವಿದ್ಯಾ, ಸತ್ಯ, ನಯನ ತಂಡವನ್ನು ಮುನ್ನಡೆಸಿದ್ದರು.

ಇಂದು ಬಾಲವನ, ವಿಶೇಷವಾಗಿ ಪುತ್ತೂರಿನ ಸಹಾಯಕ ಕಮಿಷನರ್ ಎಚ್. ಪ್ರಸನ್ನರ ಕಾಯಕಲ್ಪದಿಂದ ಕಾರಂತರಿಗೊಂದು ಕಲಾ ಸಮುಚ್ಚಯವನ್ನು ಹೊಂದುವಲ್ಲಿ ಯಶಸ್ವಿಯಾಗಿದೆ. ಕಾರಂತರ ಸಾಹಿತ್ಯ ಕೃತಿಗಳಿಗೆ ಕನ್ನಡ ನಾಡಿನ ಹಿರಿಯ ವರ್ಣಚಿತ್ರ ಕಲಾವಿದರು ಇಲ್ಲಿಗೆ ಬಂದು ತೈಲವರ್ಣ ಕಲಾಕೃತಿಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಕಲಾವಿದ ಕೆ.ಕೆ. ಹೆಬ್ಬಾರ್ ಆರ್ಟ್ ಫೌಂಡೇಶನ್ ಕೊಡುಗೆಯಾಗಿ ಹೆಬ್ಬಾರರ ಪುತ್ರಿ ರೇಖಾ ರಾವ್ ಅವರು ಕಾರಂತರ ಸಮಗ್ರ ನೋಟವುಳ್ಳ ರೇಖಾಶಿಲ್ಪವೊಂದನ್ನು ರಚಿಸಿಕೊಟ್ಟಿದ್ದಾರೆ. ಬಾಲವನದಲ್ಲಿ ವಿದ್ಯುನ್ಮಾನ ಗ್ರಂಥಾಲಯ, ದೃಶ್ಯ- ಶ್ರಾವ್ಯ ಸಭಾಭವನ, ಸಂಚಾರಿ ಕಲಾವಿದರಿಗಾಗಿ ಪ್ರದರ್ಶನಾಲಯಗಳು ರೂಪುಗೊಂಡಿವೆ. ಕಾರಂತರ ಮಕ್ಕಳಾದ ಉಲ್ಲಾಸ ಕಾರಂತ, ಕ್ಷಮಾ ಕಾರಂತ ಮತ್ತು ಊರ- ಪರವೂರ  ದಾನಿಗಳು ಕೈ ಜೋಡಿಸಿದ್ದಾರೆ. ಇವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಶಶಿಧರ್ ಅವರ ಸಹಕಾರವೂ ಇದೆ. ಕಾರಂತರು ಹಂಬಲಿಸಿದ ಬಾಲವನ ಸಮಗ್ರ ಶಕ್ತಿಯಾಗಿ ಎದ್ದು ನಿಲ್ಲುವಲ್ಲಿ ತುಡಿತದ ಮನಸ್ಸುಗಳು ಪ್ರೀತಿಯಿಂದ ಒಗ್ಗೂಡುತ್ತಿವೆ. ಸಂಪರ್ಕ: 08251-239291.

- ಚಿತ್ರ, ಲೇಖನ: ಉದಯ್ ವಿಟ್ಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.