ಬೈಟುಕಾಫಿ

ಜೈಲು ಸಾಲು

ಜೈಲು ಸಾಲು
Published On :

ಜೈಲಿನಲ್ಲಿ ಶಿಕ್ಷೆ ಅನುಭವಿಸುವ ಮಂದಿಯಲ್ಲಿ ಹೆಚ್ಚಿನವರು, ಅದೇ ಜೈಲಿನಲ್ಲಿರುವ ಇತರ ಕ್ರಿಮಿನಲ್‌ಗಳೊಂದಿಗೆ ಸೇರಿ ಇನ್ನಷ್ಟು ಹಾಳಾಗಿಹೋಗುತ್ತಾರೆ. ಪಾಪಪ್ರಜ್ಞೆ ಹಾಗೂ ಜೈಲಿನಲ್ಲಿ ದೊರೆಯುವ ಅವಕಾಶಗಳನ್ನು ಸರಿಯಾಗಿ ವಿನಿಯೋಗಿಸಿ ಬದಲಾವಣೆಯ ಹಾದಿಯಲ್ಲಿ ನಡೆವವರು ವಿರಳ. ಅಂಥ ವಿರಳರಲ್ಲೊಬ್ಬರು ಆರ್. ವಿಶ್ವಸಾಗರ.

ಚಿತ್ರದುರ್ಗ ಮೂಲದ ಆರ್. ವಿಶ್ವಸಾಗರ(54)ಗೆ ಪ್ರಕರಣವೊಂದಕ್ಕೆ ಸಂಬಂಧಿಸಿ ಐದು ವರ್ಷಗಳ ಸೆರೆವಾಸ ಶಿಕ್ಷೆಯಾಗಿದೆ. ಈಗಾಗಲೇ ನಾಲ್ಕು ವರ್ಷ ಪೂರೈಸಿದ್ದು, ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಜೈಲಿನಲ್ಲಿರುವಾಗ ಇವರು ಮಾಡಿದ ಕಾಯಕ ಏನು ಗೊತ್ತೆ? ಐದು ಪುಸ್ತಕಗಳನ್ನು ರಚಿಸಿದ್ದು!

'ಬುದ್ಧ ಪ್ರೇಮ' ಎಂಬ 230 ಪುಟಗಳ ಕಾದಂಬರಿ, 'ರೆಕ್ಕೆ ಮುರಿದ ಹಕ್ಕಿಗಳು' ಎಂಬ 50 ಕವನಗಳಿರುವ ಕವನ ಸಂಕಲನ, 'ದಲಿತ ಚಳವಳಿಗಳು' ಎಂಬ ದಲಿತ ಬರಹಗಾರರ ಲೇಖನ ಸಂಕಲನ ಇವರ ಕೃತಿಗಳು. ಬಳ್ಳಾರಿ ಕೇಂದ್ರ ಕಾರಾಗೃಹದ ಕೈದಿಯಾಗಿ ಅಲ್ಲಿ ಅನುಭವಿಸಿರುವ ನೋವು ಹಾಗೂ ತೊಳಲಾಟದ ಸಾರವನ್ನು ಕಟ್ಟಿಕೊಡುವ 300 ಪುಟಗಳ ಆತ್ಮಕಥೆಯನ್ನೂ ಬರೆದಿದ್ದು ಮುದ್ರಣದ ಹಂತದಲ್ಲಿದೆ. ಅಲ್ಲದೆ, ಇಂದಿನ ಜೈಲುಗಳ ವಾಸ್ತವ, ಬೆಳವಣಿಗೆ ಹಾಗೂ ಭಾರತದಲ್ಲಿ ಕೈದಿಗಳು ಪ್ರಸ್ತುತ ಎದುರಿಸುತ್ತಿರುವ ಸವಾಲುಗಳ ಕುರಿತು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪುಸ್ತಕ ಬರೆದಿದ್ದಾರೆ.

ಜೈಲು ಶಿಕ್ಷಕನೂ ಹೌದು
ಜೈಲಿನಲ್ಲಿ ಕಲಿಯುವ ಹಂಬಲ ಇರುವ ಕೈದಿಗಳಿಗೆ ಇವರು ಮೇಷ್ಟ್ರು. ಇವರಿಂದ ಪ್ರೇರಿತರಾದ ಕೆಲವು ಕೈದಿಗಳು ಈಗಾಗಲೇ ಮುಕ್ತ ವಿವಿಯಲ್ಲಿ ಪ್ರವೇಶ ಪಡೆದಿದ್ದಾರೆ. ಕೆಎಸ್‌ಒಯುನಲ್ಲಿ 13 ಹಾಗೂ ಇಗ್ನೋದಲ್ಲಿ 70 ಕೈದಿಗಳು ಪದವಿ ಪರೀಕ್ಷೆ ಕಟ್ಟಿದ್ದು, ಇವರಿಗೆ ವಿಶ್ವಸಾಗರ ಪಾಠ ಹೇಳಿಕೊಡುತ್ತಿದ್ದಾರೆ. ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ, ಕಾರಾಗೃಹದ ನಿರೀಕ್ಷಕ ಕೆ.ವಿ. ಗಗನದೀಪ್, ಬಳ್ಳಾರಿ ಕಾರಾಗೃಹ ಅಧೀಕ್ಷಕ ಆನಂದ ರೆಡ್ಡಿ ಹಾಗೂ ಸಹಾಯಕ ಅಧೀಕ್ಷಕ ಪಿ. ರಂಗನಾಥ್ ಇದಕ್ಕೆ ಸಹಕಾರ ನೀಡಿದ್ದಾರೆ.

ವಿದೇಶಯಾತ್ರೆ
ಎಂಎ ಪದವೀಧರ, ಕಂಪ್ಯೂಟರ್ ಬಳಕೆಯಲ್ಲಿ ಪರಿಣತನಾಗಿರುವ ವಿಶ್ವಸಾಗರ, ಜೈಲು ಸೇರುವ ಮುನ್ನ ವಿದೇಶಕ್ಕೂ ಹೋಗಿ ಬಂದಿದ್ದಾರೆ. ಗ್ರೂಪ್ ಆಫ್ ಅರ್ಬನ್ ಆ್ಯಂಡ್ ರೂರಲ್ ಡೆವಲಪ್‌ಮೆಂಟ್ ಎಂಬ ಎನ್‌ಜಿಒ ಕಟ್ಟಿ ಅದಕ್ಕೆ ಪ್ರಾಜೆಕ್ಟ್ ಡೈರೆಕ್ಟರ್ ಆಗಿದ್ದಾರೆ. ವಿಮುಕ್ತಿ ವಿದ್ಯಾ ಸಮಿತಿ ಸಹ ಕಟ್ಟಿಕೊಂಡಿದ್ದಾರೆ. ಎನ್‌ಜಿಒಗಳಲ್ಲಿದ್ದಾಗ ಬೆಲ್ಜಿಯಂ, ಜರ್ಮನಿ, ಫ್ರಾನ್ಸ್, ನೆದರ್‌ಲ್ಯಾಂಡ್‌ಗೆ 1988ರಲ್ಲಿ ತೆರಳಿ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದರು.

ವಿಶ್ವಸಾಗರನಿಗೆ ಶಿಕ್ಷಣ ಹಾಗೂ ಸಾಹಿತ್ಯದಲ್ಲಿ ಆಸಕ್ತಿ ಇದ್ದು, ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಪಟ್ಟಂತೆ ಆತನಿಗೆ ಸಹಕರಿಸಲಾಗುತ್ತಿದೆ. ಓದುವ ಮನಸ್ಸುಗಳಿಗೆ ವಿದ್ಯಾಭ್ಯಾಸಕ್ಕೆ ಹಾಗೂ ಅವರ ಪ್ರತಿಭೆ ಹೊರಹಾಕಲು ಅವಕಾಶ ಮಾಡಿಕೊಡಲಾಗಿದೆ.
- ಆನಂದ್‌ರೆಡ್ಡಿ, ಜೈಲು ಅಧೀಕ್ಷಕ

ಶಿಕ್ಷೆಯಾಗಿದೆ ಎಂದು ಚಿಂತಿಸುತ್ತ ಕೂಡದೆ ಇದ್ದ ಸಮಯ ಸದುಪಯೋಗ ಪಡೆದುಕೊಳ್ಳಬೇಕೆಂದು ಪುಸ್ತಕ ಬರೆಯಲು ಮುಂದಾಗಿದ್ದೇನೆ.
- ವಿಶ್ವಸಾಗರ, ಜೈಲು ಸಾಹಿತಿ

- ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.