ಬೈಟುಕಾಫಿ

ಬದಲಾಗಬೇಕಿದೆ

ಬದಲಾಗಬೇಕಿದೆ
Published On :

'ವರುಷಕೊಮ್ಮೆ ಹೊಸತು ಜನ್ಮ' ಗಿಡಮರಗಳಿಗೆ ಬರುತ್ತದೆ. ನಮಗ್ಯಾಕಿಲ್ಲ ಎಂಬುದು ಕವಿಯ ಪ್ರಶ್ನೆ. 'ನಿದ್ದೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ' ಎಂಬುದು ಕವಿಯದೇ ಉತ್ತರ. ಗಿಡಮರಗಳು ಹೊಸಚಿಗುರಿನ ಮೂಲಕ ಪ್ರಕೃತಿಗೆ ಸ್ಪಂದಿಸಿ ಹೊಸತಾಗಿ ಹುಟ್ಟಿದರೆ, ಮನುಷ್ಯ ತಾನಿದ್ದ ಸ್ಥಿತಿಯಲ್ಲೇ ಹೊಸ ಜನ್ಮ ಕಂಡುಕೊಳ್ಳಬೇಕು. ಬಳಲಿದಂತೆ ಅನಿಸಿದಾಗ ಆಳವಾದ ಧ್ಯಾನದಲ್ಲಿ ಮಗ್ನರಾಗಿ, ಎದ್ದ ಕೂಡಲೇ ಹೊಸತಾಗಿ ನಳನಳಿಸುವ ಸಾಮರ್ಥ್ಯ ಪಡೆದವರಿದ್ದಾರೆ. ಇಂಥವರು ಅತ್ಯಲ್ಪ ಮಂದಿ. ಇವರು ಅಧ್ಯಾತ್ಮಿಕ ಸಾಧನೆಯ ಹಾದಿಯಲ್ಲಿ ಮುನ್ನಡೆದವರು. ಗೌತಮ ಬುದ್ಧನಾದದ್ದು ಎಲ್ಲಿ?

ಇನ್ನು ಕೆಲವರಿಗೆ ಅದು ಆಘಾತ ನೀಡುವ ಘಟನೆಗಳ ಸ್ವರೂಪದಲ್ಲಿರುತ್ತದೆ. ಜೀವನದ ಅರ್ಥವನ್ನೇ ಬದಲಿಸಿ ಹಾಕುವ ಘಟನೆಯೊಂದು ಕಣ್ಣೆದುರು ನಡೆದಾಗ ಅಥವಾ ತಮಗೇ ಸಂಭವಿಸಿದಾಗ, ಈ ಪಲ್ಲಟ ಉಂಟಾಗುತ್ತದೆ. ಕೆಲವರಿಗೆ ಅಪರೂಪಕ್ಕೊಮ್ಮೆ ಬೀಳುವ ಕನಸೇ ಸಾಕು. ಇವರು ಪ್ರಜ್ಞೆಯ ಆಳದಿಂದ ಕನಸಿನ ಅರ್ಥವನ್ನು ಶೋಧಿಸಿ ತೆಗೆದು ಅರ್ಥವಿಸಿಕೊಂಡು ಹೊಸತಾಗಬಲ್ಲರು. ಕೆಲವು ದೃಶ್ಯಗಳೂ ನಾವು ಪಡೆದುಕೊಂಡ ಜೀವನದ ಅನುಭವವನ್ನು ಹೊಸದೊಂದು ದೃಷ್ಟಿಕೋನದಿಂದ ನೋಡುವಂತೆ ಮಾಡಿ, ಹಳೆಯ ಪೂರ್ವಗ್ರಹಗಳಿಂದ ನಮ್ಮನ್ನು ಪಾರು ಮಾಡುತ್ತವೆ.
ನಾವೂ ನೀವೂ ಹೀಗೆಯೇ ಬದಲಾಗಲು ಸಾಧ್ಯವಿದೆ. ಬದಲಾವಣೆಗೆ ಮನಸ್ಸಿನಲ್ಲಿ ದೃಢವಾದ ಸಂಕಲ್ಪವೊಂದು ಬೇಕು ಅಷ್ಟೇ. ಆದರೆ ಅದು ಹೊರಬರಲು ಕಾರಣವನ್ನು ಕಾಯುತ್ತಿರುತ್ತದೆ. ಅದಕ್ಕೊಂದು ನಿಮಿತ್ತ ಬೇಕು ಅಷ್ಟೇ. ಇಂದೇ ಬದಲಾಗಬೇಕು ಎಂದು ಸಂಕಲ್ಪಿಸಿದ್ದರೆ ಅದು ಅಸಾಧ್ಯವೇನೂ ಅಲ್ಲ. ಹಾಗೊಮ್ಮೆ ಬದಲಾದಂತೆ ಕಾಣಿಸುವುದೂ ಇದೆ. ಆದರೆ ಮುಕ್ಕಾಲು ಪಾಲು ಇದು ತೋರಿಕೆಯ ಬದಲಾವಣೆ ಮಾತ್ರ. ಇಂದು ಬದಲಾದದ್ದು ನಾಳೆಯೂ ಹಾಗೆಯೇ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಧೂಮಪಾನ ಬಿಟ್ಟೇ ಬಿಟ್ಟೆ ಎಂದು ಸಂಕಲ್ಪಿಸಿದವರು ಮೂರನೇ ದಿನಕ್ಕೇ ಸುರುಳಿ ಬಿಡುವುದನ್ನು ವಾವು ನೋಡುತ್ತೇವೆ. ಇದು ದೃಢವಾದ ಸಂಕಲ್ಪ ಇಲ್ಲದುದರ ಫಲ. ಬದಲಾವಣೆಗೆ ಬೇಕಾದ್ದು ಎರಡು- ಸಂಕಲ್ಪ ಮತ್ತು ಪ್ರೇರಣೆ.

- ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.