ಬೀದರ್ ಬೆಳಕು

ಅಂತಾರಾಷ್ಟ್ರೀಯ ಪ್ರವಾಸಿ ತಾಣಗಳನ್ನು ಗುರುತಿಸಿ ವಿಶ್ವಾದ್ಯಂತ ಪ್ರಚುರಪಡಿಸುವ ಅಮೆರಿಕದ ಡಬ್ಲ್ಯುಎಂಎಫ್ ವೆಬ್ಸೈಟ್ನಲ್ಲಿ ಐತಿಹಾಸಿಕ ಬೀದರ್ ನಗರಕ್ಕೆ ಸ್ಥಾನ ಲಭಿಸಿದೆ. ಆ ಮೂಲಕ ವಿಶ್ವ ಪ್ರವಾಸಿಗರ ಭೂಪಟದಲ್ಲಿ ದಪ್ಪಕ್ಷರಗಳಲ್ಲಿ ಕಾಣುವಂಥ ಅವಕಾಶ ಬೀದರ್ ಗಿಟ್ಟಿಸಿಕೊಂಡಿದೆ.
ಮಂಗಳವಾರ ನ್ಯೂಯಾರ್ಕ್ ಮೂಲದ ಡಬ್ಲ್ಯುಎಂಎಫ್(World Monuments Fund) ವಿಶ್ವಾದ್ಯಂತ ಪ್ರವಾಸಿಗರಿಗೆ ಅತ್ಯುತ್ತಮ ಸ್ಥಳಗಳನ್ನು ಪರಿಚಯಿಸುವ ವರ್ಲ್ಡ್ ಮಾನ್ಯುಮೆಂಟ್ ವಾಚ್ (WMW) 2014ರ ಪಟ್ಟಿಯಲ್ಲಿ ಬೀದರ್ ನಗರವನ್ನು ಆಯ್ಕೆ ಮಾಡಲಾಗಿದೆ.ವಿಶ್ವದ 166 ದೇಶಗಳ 741 ಐತಿಹಾಸಿಕ ಸ್ಮಾರಕ ಸ್ಥಳಗಳು, ನಗರಗಳು ನಾಮನಿರ್ದೇಶನದ ಅರ್ಜಿ ಗುಜರಾಯಿಸಿದ್ದವು. ಆದರೆ 41 ದೇಶಗಳ 61 ಸ್ಮಾರಕ ಸ್ಥಳಗಳು ಹಾಗೂ ನಗರಗಳು ಮಾತ್ರ ಆಯ್ಕೆಯಾಗಿವೆ.
ಉತ್ತರ ಭಾರತದಿಂದ ಫತೇಪೂರ್ ಸಿಕ್ರಿಯ ಶೇಕ್ ಸಲಿಂ ಚಿಸ್ತಿ ಮಹಲ್ ಹಾಗೂ ರಾಜಸ್ಥಾನದ ಡೊಂಗರಪುರದ ಜುನಾ ಮಹಲ್ ಪಟ್ಟಿಗೆ ಸೇರಿದ್ದರೆ, ದಕ್ಷಿಣ ಭಾರತದಿಂದ ಐತಿಹಾಸಿಕ ಸ್ಮಾರಕ ನಗರಿಯಾಗಿ ಗುರುತಿಸಿಕೊಂಡಿದ್ದು ಬೀದರ್ ನಗರ ಮಾತ್ರ.
ಬೀದರ್ಗೇನು ಲಾಭ?
ವಿಶ್ವದ ವಿವಿಧ ದೇಶಗಳಿಂದ ಪ್ರವಾಸಕ್ಕೆಂದು ತೆರಳುವವರು ಕೆಲವು ನಿಗದಿತ ಮತ್ತು ಆಯ್ದ ಪ್ರವಾಸಿ ಗೈಡ್ಗಳು, ಇಂಟರ್ನೆಟ್ ಜಾಲತಾಣಗಳಿಗೆ ಮೊರೆ ಹೋಗಿ ಭೇಟಿ ನೀಡುವ ಪ್ರವಾಸಿ ಸ್ಥಳಗಳನ್ನು ಆಯ್ಕೆ ಮಾಡುತ್ತಾರೆ. ಇಂಥ ಆಯ್ದ ಪುಸ್ತಕಗಳು ಮತ್ತು ಪ್ರಸಿದ್ಧ ಅಂತರ್ಜಾಲ ತಾಣಗಳಲ್ಲಿ ಗಿಂಗಿ ಪಟ್ಟಿಯನ್ನು ಡಬ್ಲ್ಯುಎಂಎಫ್ ಅಗತ್ಯ ಮಾಹಿತಿಗಳೊಂದಿಗೆ ಪ್ರಕಟಿಸುತ್ತದೆ.
ಏಳು ಸುತ್ತಿನ ಕೋಟೆ, ವಿಶ್ವದ ಪ್ರಥಮ ವಿಶ್ವವಿದ್ಯಾಲಯ ಎಂದೇ ಖ್ಯಾತಿ ಪಡೆದ ಮಹಮ್ಮದ್ ಗವಾನ ಮದರಸಾ, ನರಸಿಂಹ ಝರಣಾ, ಅಷ್ಟೂರ್ ಗುಂಬಜ್ಗಳು, ನೂರಾರು ವರ್ಷಗಳ ಹಿಂದೆಯೇ ನೀರು ಪೂರೈಕೆಗಾಗಿ ಕರೇಝ್ ವಿಶೇಷ ವ್ಯವಸ್ಥೆ ಮುಂತಾದ ಪ್ರೇಕ್ಷಣೀಯ ಐತಿಹಾಸಿಕ ಸ್ಥಳಗಳು ಇಲ್ಲಿವೆ. ಸಾಕಷ್ಟು ಪ್ರಮಾಣದಲ್ಲಿ ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ಬೀದರ್ಗೆ ಪ್ರವಾಸಿಗರನ್ನು ಆಕರ್ಷಿಸುವುದು ಕಷ್ಟವಾಗಿತ್ತು.
(WMW) ಪರಿಚಯ
50 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಡಬ್ಲ್ಯುಎಂಎಫ್ ಪ್ರತಿವರ್ಷ ಕೆಲವು ನಗರಗಳನ್ನು (WMW) ಎಂದು ಘೋಷಿಸುತ್ತದೆ. ಆಯ್ಕೆಯಾಗಿರುವ ಸ್ಥಳಗಳ ಐತಿಹಾಸಿಕ ಪರಂಪರೆ ಹಾಗೂ ಅಳಿವಿನ ಅಂಚಿನಲ್ಲಿರುವ ಸ್ಮಾರಕಗಳನ್ನು ಉಳಿಸಲು ಸ್ಥಳೀಯ ಸರ್ಕಾರದೊಂದಿಗೆ ಕೈ ಜೋಡಿಸುತ್ತದೆ. ನುರಿತ ಅಂತಾರಾಷ್ಟ್ರೀಯ ಸಂಶೋಧಕರು ಹಾಗೂ ತಂತ್ರಜ್ಞಾನದ ಸಹಕಾರವನ್ನೂ ನೀಡುತ್ತದೆ. ಅರ್ಜೆಂಟೀನಾ, ಬೆಲ್ಜಿಯಂ, ಬ್ರೆಜಿಲ್, ಚಿಲಿ, ಈಜಿಪ್ಟ್, ಫ್ರಾನ್ಸ್, ಜರ್ಮನಿ, ಜಪಾನ್, ಜೋರ್ಡಾನ್, ನೈಜೀರಿಯಾ, ಪಾಕಿಸ್ತಾನ, ಸಿಂಗಾಪುರ, ಟರ್ಕಿ ಸೇರಿದಂತೆ ಒಟ್ಟು 41 ದೇಶಗಳ ಆಯ್ದ ಐತಿಹಾಸಿಕ ಸ್ಮಾರಕಗಳು ಮತ್ತು ನಗರಗಳು 2014ರ ಪಟ್ಟಿಗೆ ಸೇರಿವೆ. ಹೆಚ್ಚಿನ ಮಾಹಿತಿಗೆ:http://www.wmf.org/project/historic-city-bidar.
- ಅಪ್ಪಾರಾವ್ ಸೌದಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


