ಮನಸ್ಸಿನ ಭಾಗ!
ಮನುಷ್ಯನ ಮನಸ್ಸಿನ ಇನ್ನೊಂದು ಭಾಗವೇ ವಾಸ್ತು. ಮನೆ ಕಟ್ಟಿದ ವ್ಯಕ್ತಿಗೆ ಗೃಹ ಪ್ರವೇಶ ಮಾಡುವಾಗ ಅವನ ಮನಸ್ಸಿನಲ್ಲಿ ಯಾವುದೇ ಅಳಕು ಇಲ್ಲದೆ ಮನೆಯ ಪ್ರವೇಶ ಮಾಡಿದರೆ ಯಾವುದೇ ತೊಂದರೆ ಬರುವುದಿಲ್ಲ. ಅದನ್ನು ಬಿಟ್ಟು ಯಾರೋ ಹೇಳುವ ಮಾತಿಗೆ ಕಟ್ಟು ಬೀಳುವುದು ಸರಿಯಲ್ಲ. ನಿಮ್ಮ ಮನೆಯಲ್ಲಿ ಯಾವುದೇ ತೊದರೆಯಾದರೂ ನೀವು ಅಂದುಕೊಳ್ಳುವುದು 'ಮನೆ ವಾಸ್ತು ಸರಿಯಿಲ್ಲ' ಎಂದು. ಇಲ್ಲಿ ಮನುಷ್ಯನ ಮನಸ್ಸಿಗಿಂತ ಮಿಗಿಲಾದದ್ದು ಇನ್ನೊಂದಿಲ್ಲ ಎಂದು ತಿಳಿಯಬೇಕು. ನಾವು ಎಂದಿಗೂ ನಮ್ಮ ಮನದ ನಿರ್ಧಾರದಂತೆ ನಡೆಯುವುದು ಸೂಕ್ತ. ವಾಸ್ತು ಮನುಷ್ಯನ ಮನಸ್ಸಿಗೆ ಮುದ ನೀಡಲು ಬೇಕೇ ಹೊರತು ಅವನ ಮನಸ್ಥಿತಿಯನ್ನೇ ಬದಲಾಯಿಸಲು ಬೇಡ ಎಂಬುವುದು ನನ್ನ ವಾದ.
-ವೀರೇಶ್, ಚಳ್ಳಕೆರೆ
ವಾಸ್ತವ ವಾಸ್ತುಶಾಸ್ತ್ರ
ಪ್ರಕೃತಿ ನಮ್ಮನ್ನು ಸಲಹಿ ಪೋಷಿಸುತ್ತಿದೆ ಎಂಬ ಅತ್ಯಂತ ಸಹಜವಾದ ವಸ್ತು ಸ್ಥಿತಿಯ ಅರಿವು ನಮ್ಮೆಲ್ಲರಿಗೂ ಇದೆ. ಇದರ ಒಂದು ಭಾಗವಾಗಿಯೇ ಮನುಷ್ಯ ಪ್ರಕೃತಿದತ್ತವಾದ ವಸ್ತುಗಳನ್ನು ಬಳಸಿ, ನಮ್ಮ ಪರಿಸರಕ್ಕೆ ಸ್ಪಂದಿಸಿ, ನಮಿಸಿ, ನಿರ್ಮಿಸುವ ಕಟ್ಟಡಗಳಿಗೆ ನಮ್ಮ ಪೂರ್ವಿಕರು ಹಾಕಿ ಕೊಟ್ಟಿರುವ ಸುಲಭ ಸೂತ್ರವೇ ವಾಸ್ತುಶಾಸ್ತ್ರ. ನಮ್ಮ ಜೀವನಕ್ಕೆ ಅತ್ಯವಶ್ಯಕವಾದ ಸೂರ್ಯ, ಗಾಳಿ, ನೀರು, ಅಗ್ನಿ ಇವುಗಳ ಸೂಕ್ಷ್ಮ ಚಲನವಲನಗಳನ್ನು ಒಳಗೊಂಡ ವಾಸ್ತುಶಿಲ್ಪ ಅತ್ಯಂತ ಸ್ವಾಸ್ಥ್ಯ ಬದುಕನ್ನೂ, ಸಂತೋಷವನ್ನೂ ರೂಪಿಸಬಲ್ಲದು. ಈ ಸೂಕ್ಷ್ಮ ವಿಚಾರಗಳನ್ನು ಆಳವಾದ ಅಧ್ಯಯನ ಮಾಡಿದ ನಮ್ಮ ಪೂರ್ವಿಕರು ನಮಗೆ ಬಳುವಳಿಯಾಗಿ ಕೊಟ್ಟಿರುವ ವಾಸ್ತುಶಾಸ್ತ್ರವೆಂಬ ಈ ಜ್ಞಾನ ಭಂಡಾರವನ್ನು ತಿರಸ್ಕರಿಸುವಂತಿಲ್ಲ. ಹಾಗೆಯೇ ಮೂಢ ನಂಬಿಕೆಗಳಿಗೆ ಒಳಗಾಗಿ ಸರಿಯಾದ ಮಾಹಿತಿಯಿಲ್ಲದೆ ತೊಂದರೆಗೆ ಒಳಗಾಗಬಾರದು.
-ಭವಾನಿ.ಎಂ.ಅರ್, ಬೆಂಗಳೂರು
ವಾಸ್ತು ಅಗತ್ಯವಿಲ್ಲ
ಆಸೆ ಎಂಬ ನಾಗಾಲೋಟದಲ್ಲಿ ಮನುಷ್ಯ ಜರ್ಝರಿತನಾಗಿ, ಬದುಕು ದುಸ್ತರವೆನಿಸಿದೆ. ಎಲ್ಲೋ ಹುಟ್ಟಿ ಎಲ್ಲೋ ಬೆಳೆದು, ಮೈಮುರಿದು ದುಡಿದು ಬರುವವರಿಗೆ ಒಂದು ಪುಟ್ಟ ಜೋಪಡಿಯಲ್ಲಿರುವವರಿಗೆ, ಎಲ್ಲಿದೆ ವಾಸ್ತು? ಜೀವನವೇ ಕಷ್ಟ ಇರುವಾಗ ವಾಸ್ತು ನೋಡಲು ಸಮಯವೆಲ್ಲಿ? ಕಾರಣ ಧರ್ಮ ಮಾರ್ಗದಲ್ಲಿ ನಡೆದು, ಪುಣ್ಯ ಕಾರ್ಯಗಳನ್ನು ಮಾಡುತ್ತ ಮನಸ್ಸಿನಲ್ಲಿ ಯಾವುದೇ ದ್ವೇಷಾಸೂಯೆ ಇಟ್ಟುಕೊಳ್ಳದೆ ಜೀವನ ಮಾಡಿದರೆ ಮನ-ಮನೆಗಳಲ್ಲಿ ಶಾಂತಿ ಇರುತ್ತದೆ. ಆಗ ಯಾವ ವಾಸ್ತುವೂ ಬೇಕಿಲ್ಲ.
-ಉಮೇಶ ಹ. ಪೂಜಾರ, ಶಂಕರ ಹಟ್ಟಿ
ಒಳ್ಳೆಯತನವೇ ಶಕ್ತಿ
ವಾಸ್ತು ಅನ್ನುವುದು ಕೇವಲ ಭ್ರಮೆ. ವಾಸ್ತು ಪ್ರಕಾರ ಯಾವುದೇ ರೀತಿ ಕಟ್ಟಡ ಕಟ್ಟಿದ್ದರೂ ನಮ್ಮ ಕರ್ಮಫಲ ಸರಿ ಇಲ್ಲದೇ ಇದ್ದರೆ ವಾಸ್ತು ಏನು ಮಾಡಲು ಸಾಧ್ಯ? ಹಣೆಬರಹ ಅಂದುಕೊಂಡು ಸುಮ್ಮನೆ ಕೂರುವುದೂ ಸರಿಯಲ್ಲ. ನಮ್ಮ ಕೆಲಸದಲ್ಲಿ ನಿಷ್ಠೆಯಿಂದ ಇದ್ದರೆ, ಒಳ್ಳೆಯತನ ನಮ್ಮಲ್ಲಿದ್ದರೆ ತಕ್ಕ ಪ್ರತಿಫಲವನ್ನು ದೇವರು ನೀಡುತ್ತಾನೆ. ಯಾವುದೇ ಒಬ್ಬ ವ್ಯಕ್ತಿಯಿಂದಂದ ಹಣ, ಅಧಿಕಾರ, ಆಭರಣ, ಭೂಮಿ ಹೀಗೆ ಎಲ್ಲವನ್ನೂ ಕಿತ್ತುಕೊಳ್ಳಬಹುದು. ಆತ ಒಳ್ಳೆಯತನದಿಂದ ಪಡೆಯುವ ಫಲವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ.
-ಎನ್. ಆನಂದಕುಮಾರ್, ಶಿಡ್ಲಘಟ್ಟ
'ಜಗುಲಿ'ಯಲ್ಲಿ ಈ ಸಲದ ವಿಷಯ 'ಸಚಿನ್ ನಿವೃತ್ತಿ'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

