ಬೈಟುಕಾಫಿ

ಬದುಕು ಪ್ರತಿಧ್ವನಿ

ಬದುಕು ಪ್ರತಿಧ್ವನಿ
Published On :

ದೊಡ್ಡ ಗೋಡೆಯ ಮುಂದೆ ನಿಂತುಕೊಂಡು ಪುಟ್ಟ ಹುಡುಗ ಕೂಗುತ್ತಿದ್ದಾನೆ- 'ನಂಗೆ ನಿನ್ನ ಕಂಡ್ರೆ ಆಗಲ್ಲಾ...'. ಅತ್ತಲಿಂದ ಅದೇ ಮಾತು ಪುನಃ ಕೇಳಿಬರುತ್ತದೆ. 'ನಾನು ನಿನ್ನ ಸುಮ್ನೆ ಬಿಡೊಲ್ಲಾ...'. ಅತ್ತಲಿಂದ ಮತ್ತದೇ ಧ್ವನಿಯ ಪುನರಾವರ್ತನೆ. ಅದನ್ನು ನೋಡಿದ ಹಿರಿಯರೊಬ್ಬರು ಆ ಹುಡುಗನನ್ನು ಕರೆದು ಹೇಳುತ್ತಾರೆ- 'ಹಾಗೆ ಕೂಗಬೇಡ. ನಾ ನಿನ್ನ ಇಷ್ಟಪಡ್ತೀನಿ ಅಂತ ಕೂಗು'. ಹುಡುಗ ಹಾಗೇ ಕೂಗುತ್ತಾನೆ. ಏನಾಶ್ಚರ್ಯ! ಕೆಲವೇ ಕ್ಷಣಗಳ ಹಿಂದೆ ಹುಡುಗನನ್ನು ದ್ವೇಷಿಸುತ್ತಿದ್ದ ಗೋಡೆ ಈಗ ಹುಡುಗನನ್ನು ಇಷ್ಟಪಡುತ್ತಿದೆ! 'ಅದ್ಯಾಕೆ ಹಾಗೆ?' ಅಂತ ಕೇಳಿದ ಹುಡುಗನಿಗೆ ಹಿರಿಯರ ಉತ್ತರ- 'ನೋಡಪ್ಪಾ, ಗೋಡೆಗೆ ಸ್ವಂತ ಸ್ವಭಾವವಿಲ್ಲ. ಅದು ಮಾತಾಡೊಲ್ಲ. ನೀನೇನು ಮಾತಾಡ್ತೀಯೋ ಅದನ್ನೇ ನಿನಗೆ ವಾಪಸು ಮಾಡ್ತಿದೆ.'
ಕೊಂಚ ಹೊತ್ತು ಯೋಚಿಸಿ ನೋಡಿ. ಇದು ನಮ್ಮ ಜೀವನದ ಬಗೆಗೂ ಸತ್ಯವಾದ ಮಾತು ಅಲ್ಲವೇ? ಕೆಲವೊಮ್ಮೆ ತಾಳ್ಮೆ ಕಳೆದುಕೊಂಡು ಯಾರ್ಯಾರ ಬಗೆಗೋ ಕೆಟ್ಟ ಕೆಟ್ಟ ಮಾತುಗಳನ್ನು ಆಡಿರುತ್ತೇವೆ. ಅವರೇನು ಸುಮ್ಮನಿರೋದಿಲ್ಲ. ತಿರುಗಿಸಿ ಅವೇ ಮಾತುಗಳನ್ನು ನಮಗೆ ಬಯ್ಯುತ್ತಾರೆ. ಮಾತು ನಮ್ಮನ್ನು ಕೈ ಕೈ ಮಿಲಾಯಿಸುವ ವರೆಗೆ ಒಯ್ಯುತ್ತದೆ. ಸಂಬಂಧ ಶಾಶ್ವತವಾಗಿ ಕೆಡುತ್ತದೆ. ಅದೇ ಸಂದರ್ಭದಲ್ಲಿ ಕೊಂಚ ತಾಳ್ಮೆ ವಹಿಸಿದರೆ, ಉಭಯರನ್ನೂ ನೆಮ್ಮದಿಯ ಕಡೆಗೆ ಒಯ್ಯುವ ಒಳ್ಳೆಯ ಮಾತುಗಳನ್ನೇ ಆಡಿದರೆ ಏನಾಗುತ್ತದೆ? ಪರಿಣಾಮವೂ ಒಳ್ಳೆಯದೇ ಇರುತ್ತದೆ. ಹೆಚ್ಚಿನ ಬಾರಿ ನಮ್ಮ ಮಾತುಗಳನ್ನು ನಾವೇ ಕೇಳುತ್ತಿರುತ್ತೇವೆ. ಒಳ್ಳೆಯದಿರಲಿ, ಕೆಟ್ಟದಿರಲಿ- ನಮ್ಮ ಮಾತು ನಮಗೇ ಬಂದು ಬಡಿಯುತ್ತಿರುತ್ತದೆ. ನಮ್ಮ ದಿನಚರಿ ಹಿತಕರವಾಗಿರಬೇಕಾದರೆ ನಾವು ಪಡೆಯುವ ಪ್ರತಿಕ್ರಿಯೆಗಳೂ ಹಿತಕರವಾಗಿರಬೇಕಾದುದು ಅವಶ್ಯಕ. ನಮ್ಮ ಬದುಕು ಲವಲವಿಕೆಯಿಂದ ಕೂಡಿರಬೇಕಾದರೆ ನಾವೂ ಒಳ್ಳೆಯ ಮಾತುಗಳನ್ನಾಡುವುದು, ಒಳ್ಳೆಯ ಮಾತಾಡುವವರ ಸಂಗವನ್ನೇ ಮಾಡುವುದು ಅಗತ್ಯ. ಗಾಂಧೀಜಿಯವರ ಮೂರು ಮಂಗಗಳು ಸಾರುವುದೂ ಇದನ್ನೇ ಅಲ್ಲವೇ- 'ಕೆಟ್ಟದ್ದನ್ನು ಹೇಳಬೇಡ, ಕೇಳಬೇಡ ಮತ್ತು ನೋಡಬೇಡ' ಅಂತ.

-  ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.