ಬೈಟುಕಾಫಿ

ವಿಶ್ರಾಂತಿ ಮನೆ

ಭಾರತೀಯ ಮೂಲದ ಅಖಿಲೇಶ್ ವಾಷಿಂಗ್ಟನ್‌ನಲ್ಲಿರುವ ವಿಶ್ವಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸಿ ಆರು ತಿಂಗಳ ಹಿಂದಷ್ಟೇ...

ವಿಶ್ರಾಂತಿ ಮನೆ
Published On :

ಭಾರತೀಯ ಮೂಲದ ಅಖಿಲೇಶ್ ವಾಷಿಂಗ್ಟನ್‌ನಲ್ಲಿರುವ ವಿಶ್ವಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸಿ ಆರು ತಿಂಗಳ ಹಿಂದಷ್ಟೇ ನಿವೃತ್ತಿಯಾದರು. ಸುಮಾರು 5.7 ಕೋಟಿ ನಿವೃತ್ತಿ ವೇತನವನ್ನೂ ಪಡೆದರು. ಇನ್ನು ಇರುವಷ್ಟು ದಿನ ಸುಖವಾಗಿರಬೇಕೆಂದು ಮನಸು ಹಾತೊರೆಯುತ್ತಿತ್ತು. ಆದರೆ ಅಲ್ಲಿನ ವಾತಾವರಣ ಹಿಡಿಸುತ್ತಿರಲಿಲ್ಲ. ವೃದ್ಧಾಪ್ಯವನ್ನು ಎಲ್ಲಿ ಕಳೆಯಬೇಕೆಂಬುದೇ ಪ್ರಶ್ನೆಯಾಗಿತ್ತು. ಕೊನೆಗೂ ತಾಯಿ, ಪತ್ನಿ, ಮಕ್ಕಳೊಂದಿಗೆ ದೇಶ- ವಿದೇಶಗಳ ಸಂಸ್ಕೃತಿ, ಸಂಪ್ರದಾಯ, ನೆಮ್ಮದಿ ಜೀವನದ ಸ್ಥಿತಿಗತಿ ಎಲ್ಲವನ್ನೂ ಯೋಚನೆ ಮಾಡಿ ಸ್ವದೇಶದಲ್ಲೇ ನೆಲೆಯೂರುವ ನಿರ್ಧಾರಕ್ಕೆ ಬಂದರು.
ಆದರೆ ಅವರು ಅಮೆರಿಕಕ್ಕೆ ತೆರಳುವ ಮುನ್ನ ಪುಣೆಯಲ್ಲಿದ್ದ ತಮ್ಮ ಅಪ್ಪನ ಚಿಕ್ಕ ಮನೆಯನ್ನು ಮಾರಾಟ ಮಾಡಿ ಆಗಿತ್ತು. ಈಗ ಮತ್ತೆ ಯಾವ ಊರಲ್ಲಿ ನೆಲೆಸಬೇಕು? ಮನೆ ಕೊಂಡುಕೊಳ್ಳುವುದು ಹೇಗೆ? ಇವೇ ಮೊದಲಾದ ಪ್ರಶ್ನೆಗಳು ಎದುರಾದವು. ಮೇಲಾಗಿ ಅವರಿಗೆ ಭಾರತದಲ್ಲಿ ಹೇಳಿಕೊಳ್ಳುವಂತಹ ಪರಿಚಿತರೂ ಇರಲಿಲ್ಲ. ಕೊನೆಗೆ ಸ್ಥಳೀಯ ಡೆವಲಪರ್ಸ್ ಒಬ್ಬರ ಮೊರೆ ಹೋದರು. ಆಗ ಅವರಿಂದ ಸಿಕ್ಕ ಸಲಹೆ- 'ನಿಮಗೆ ವಿಶ್ರಾಂತಿ ಮನೆ (retirement home) ಆಯ್ಕೆಯೇ ಉತ್ತಮ' ಎಂಬುದು.

ಏನಿದು ವಿಶ್ರಾಂತಿ ಮನೆ?
ಸರ್ಕಾರಿ ಅಥವಾ ಅರೆ ಸರ್ಕಾರಿ ನೌಕರಿಯಿಂದ ನಿವೃತ್ತಿ ಹೊಂದಿದ ಮೇಲೆ ವಾಸವಾಗಿರಲು ಸಕಲ ಸೌಲಭ್ಯಗಳುಳ್ಳ ಹಾಗೂ ಸದಾಕಾಲ ಸಹಾಯ ಮತ್ತು ಸಹಕಾರ ಕೂಡ ಲಭ್ಯವಿರುವಂತಹ ಮನೆ. ಇಲ್ಲಿ ವಾಸಿಸುವ ನಿವೃತ್ತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಇದರಲ್ಲೂ ಎರಡು ಆಯ್ಕೆಗಳಿವೆ. - ಸ್ವತಂತ್ರವಾಗಿ ವಾಸಿಸುವಿಕೆ -ಆಸರೆಯೊಂದಿಗೆ ವಾಸಿಸುವಿಕೆ.
ಸ್ವತಂತ್ರ ವಾಸ ಯೋಜನೆಯ ಮನೆಯಲ್ಲಿ ಆಸ್ಪತ್ರೆ, ಊಟೋಪಚಾರದ ಸೌಲಭ್ಯವಿರದು. ತಾವು ವಾಸಿಸುವ ಮನೆಗೆ ಸಂಬಂಧಿಸಿದ ಕೆಲಸಗಳನ್ನು ತಾವೇ ಮಾಡಿಕೊಳ್ಳಬೇಕು. ಆಸರೆಯೊಂದಿಗೆ ವಾಸಿಸುವಿಕೆ ಯೋಜನೆಯ ಮನೆಯವರಿಗೆ ನೆರವು ಮತ್ತು ಸಹಾಯ ಬಯಸಿದರೆ ದಿನದ 24 ಗಂಟೆಯೂ ಸೇವೆ ಲಭ್ಯ.  
ದೇಶದಲ್ಲಿ 30ಕ್ಕೂ ಹೆಚ್ಚು ಕಡೆ ಈ ಎರಡೂ ತರಹದ ಸೌಲಭ್ಯಗಳುಳ್ಳ ವಿಶ್ರಾಂತಿ ಮನೆ ಯೋಜನೆಗಳು ಆರಂಭವಾಗಿವೆ.
ಬೆಂಗಳೂರಲ್ಲೇ ಏಳು ವಿಶ್ರಾಂತಿ ಮನೆಗಳು ತಲೆಎತ್ತಿ  ಕಾರ್ಯನಿರ್ವಹಿಸುತ್ತಿವೆ.
ಮಹಾನಗರಗಳಲ್ಲಿರುವ ವಿಶ್ರಾಂತಿ ಮನೆಗಳ ದರ ಉಳಿದ ಮನೆಗಳ ದರಕ್ಕೆ ಹೋಲಿಕೆ ಮಾಡಿದರೆ ಶೇ.30ರಿಂದ 40ರಷ್ಟು ಹೆಚ್ಚು. ಏಕೆಂದರೆ- ಇಲ್ಲಿ ಮನೆ ಸ್ವಚ್ಛ, ನೀರಿನ ಸೌಲಭ್ಯ, ವಿದ್ಯುತ್, ಊಟ ಮತ್ತು ರಕ್ಷಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತದೆ. ಸಾಮಾನ್ಯ ಮನೆಗಳಲ್ಲಿ ಇದಾವುದೂ ಅನ್ವಯವಾಗದು.
ಪುಣೆಯಲ್ಲಿ ಸಾಮಾನ್ಯ ಮನೆಗಳ ದರ ಪ್ರತಿ ಚದರ ಅಡಿಗೆ 5 ಸಾವಿರ ಇದ್ದರೆ ಅದೇ ಪ್ರದೇಶದಲ್ಲಿರುವ ವಿಶ್ರಾಂತಿ ಮನೆಗೆ 6,500-7,000 ಇದೆ. ಅದೇ ರೀತಿ ಬೆಂಗಳೂರಲ್ಲಿ ಟಾಟಾ ಹೌಸಿಂಗ್ ಡೆವಲೆಪ್‌ಮೆಂಟ್ ಕಂಪನಿ  ಲಿಮಿಟೆಡ್ ನವರ ಟೌನ್‌ಷಿಪ್‌ನ ಸಾಮಾನ್ಯ ಮನೆಗಳ ದರ ಪ್ರತಿ ಚದರ ಅಡಿಗೆ 3,400 ಇದ್ದರೆ ಹಿರಿಯ ನಾಗರಿಕರ ವಿಶ್ರಾಂತಿ ಗೃಹಗಳಿಗೆ 3,950 ದರ ನಿಗದಿಪಡಿಸಲಾಗಿದೆ.
ಇತರೆ ಮನೆಗಳಿಗೆ ಹೋಲಿಸಿದರೆ ಹಿರಿಯ ನಾಗರಿಕರ ಮನೆಗಳ ನಿರ್ವಹಣೆಗೆ ವಾರ್ಷಿಕ 15,000- 60,000 ವರೆಗೆ ವೆಚ್ಚವಾಗುತ್ತದೆ ಎನ್ನುತ್ತಾರೆ ಡೆವಲಪರ್ಸ್. ಕೆಲವೆಡೆ ವಿದ್ಯುತ್, ಆಹಾರ, ನೀರು ಮತ್ತು ಇತರ ಸೇವೆಗಳ ಆಧಾರದ ಮೇಲೆ ದರದಲ್ಲಿ ವ್ಯತ್ಯಾಸವಿರುತ್ತದೆ.

ಕೆಲಕಾಲ ವಾಸವಾಗಿರಿ
ವಿಶ್ರಾಂತಿ ಮನೆ ಅಥವಾ ನಿವೃತ್ತಿ ಗೃಹವನ್ನು ಕೊಳ್ಳುವ ಮೊದಲು ಅದನ್ನು ಕೆಲ ದಿನ ಬಾಡಿಗೆಗಾಗಿ ಪಡೆದು ವಾಸಿಸಬೇಕು. ಅಲ್ಲಿ ನಿಮಗೆ ನೆಮ್ಮದಿ ವಾತಾವರಣ ಸಿಕ್ಕು ಅದು ನಿಮಗೆ ಹೊಂದಿಕೆಯಾದಲ್ಲಿ, ಎಲ್ಲ ಅಗತ್ಯ ಸೌಕರ್ಯಗಳು ಡೆವಲಪರ್ಸ್ ಅಥವಾ ಟೌನ್‌ಶಿಪ್‌ನಿಂದ ಲಭ್ಯವಾದಲ್ಲಿ ಮತ್ತು ಇತರೆಡೆ ಇರುವ ವಿಶ್ರಾಂತಿ ಗೃಹಗಳಿಗೆ ಸೂಕ್ತವೆನಿಸಿದಲ್ಲಿ ಮುಂದೆ ಅದೇ ಮನೆಯ ಖರೀದಿಯ ವ್ಯವಹಾರ ಕುದುರಿಸುವುದು ಒಳಿತು.

ಮೊದಲೇ ವಿಚಾರಿಸಿಕೊಳ್ಳಿ
ವೈದ್ಯಕೀಯ ಸೇವೆ ವಿಚಾರದಲ್ಲಿ ಕೆಲವು ಟೌನ್‌ಶಿಪ್‌ನವರು ಕೆಲವೊಂದು ಆಸ್ಪತ್ರೆಗಳ ಜತೆಗೆ ಒಪ್ಪಂದ ಮಾಡಿಕೊಂಡಿರುತ್ತಾರೆ. ಆದರೆ ಅಲ್ಲಿನ ವೈದ್ಯಕೀಯ ಸೇವೆ ಕೆಲ ಹಿರಿಯ ನಾಗರಿಕರಿಗೆ  ಇಷ್ಟವಾಗದೇ ಇರಬಹುದು. ಹೀಗಾಗಿ ಕೆಲ ಡೆವಲಪರ್ಸ್ ವೈದ್ಯಕೀಯ ಸೇವೆಯನ್ನು ಐಚ್ಛಿಕವಾಗಿಟ್ಟುಕೊಂಡಿದ್ದಾರೆ. ಯಾವುದಕ್ಕೂ ಈ ವಿಷಯದ ಬಗ್ಗೆ ಮುಂಚಿತವಾಗಿಯೇ ವಿಚಾರಿಸುವುದು ಒಳಿತು.

ಸೌಲಭ್ಯಗಳಾವುವು?


ವೈದ್ಯಕೀಯ ಆರೈಕೆ
ಪ್ರತಿಯೊಂದು ವಿಶ್ರಾಂತಿ ಮನೆ ಯೋಜನೆಯ ವೈದ್ಯಕೀಯ ಸೌಲಭ್ಯಗಳು ಬೇರೆಬೇರೆ ರೀತಿ. ಆರೋಗ್ಯ ಏರುಪೇರಾದರೆ ಕೂಡಲೇ ಆ್ಯಂಬುಲೆನ್ಸ್ ಸೇವೆ, ಶಾರೀರಿಕ ಚಿಕಿತ್ಸೆ, ಹೊರ ರೋಗಿಗಳ ತಜ್ಞರಿಂದ ಕಾಲಕಾಲಕ್ಕೆ ತಪಾಸಣೆ, ಅಗತ್ಯವಿದ್ದಲ್ಲಿ ನುರಿತ ತಜ್ಞರಿಂದ ಮನೆಗಳಲ್ಲಿಯೇ ಚಿಕಿತ್ಸೆ ಕೊಡಿಸಲಾಗುತ್ತದೆ. ವೈದ್ಯಕೀಯ ಸೌಲಭ್ಯಕ್ಕಾಗಿಯೇ ಆ ಡೆವಲಪರ್ಸ್, ತಜ್ಞ ವೈದ್ಯರು ಹಾಗೂ ಔಷಧ ಸರಬರಾಜು ಮಾಡುವವರೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತಾರೆ. ಉದಾ- ಟಾಟಾ ಹೌಸಿಂಗ್ ಡೆವಲಪ್‌ಮೆಂಟ್ ಮತ್ತು ಕಂಪನಿಯವರು ಬೆಂಗಳೂರಿನಲ್ಲಿ ಅಪೋಲೋ ಹೆಲ್ತ್ ಕೇರ್ ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು ವೈದ್ಯಕೀಯ ಸೇವೆ ಕಲ್ಪಿಸುತ್ತಿದೆ.

ಊಟೋಪಚಾರ
ಬಹುತೇಕ ವಿಶ್ರಾಂತಿ ಮನೆಗಳಲ್ಲಿ ಊಟ ಮತ್ತು ಉಪಹಾರದ ವ್ಯವಸ್ಥೆಯಿರುತ್ತದೆ. ಇಲ್ಲಿ ಹೆಚ್ಚಾಗಿ ಪೌಷ್ಟಿಕ ಆಹಾರಕ್ಕೆ ಆದ್ಯತೆ. ಅಲ್ಲದೆ ನಿವೃತ್ತರು ಯಾವ ಊಟವನ್ನು ಬಯಸುತ್ತಾರೋ ಅದನ್ನು ತಿಳಿದು ಪೂರೈಸುತ್ತಾರೆ. ಆದರೆ ಇಲ್ಲಿ ಪ್ರತಿಯೊಂದು ಡೆವಲಪರ್ಸ್‌ಗಳ ಊಟದ ದರ ಭಿನ್ನವಾಗಿರುತ್ತದೆ. ಊಟದ ಗುಣಮಟ್ಟ ಮತ್ತು ಗಾತ್ರಕ್ಕೆ ಅನುಗುಣವಾಗಿ ಪ್ರತಿ ಊಟಕ್ಕೆ 45 ರಿಂದ 100 ರು.ವರೆಗೆ ಇದೆ.

ನೆಮ್ಮದಿ
ನಿವೃತ್ತಿ ಹೊಂದಿರುವವರಿಗೆ ಮುಖ್ಯವಾಗಿ ಬೇಕಿರುವುದೇ ನೆಮ್ಮದಿ, ಶಾಂತ ವಾತಾವರಣ. ಅದಕ್ಕೆಂದೇ ವಿಶ್ರಾಂತಿ ಮನೆಗಳಲ್ಲಿ ನೆಮ್ಮದಿ, ಸೂಕ್ತ ವಾತಾವರಣ ನಿರ್ಮಾಣಕ್ಕೆ ಮೊದಲ ಆದ್ಯತೆ. ಸಮಾಜದಲ್ಲಿ, ನೆರೆ- ಹೊರೆಯವರೊಂದಿಗೆ ಬೆರೆಯಲು ಅವಕಾಶ ಕಲ್ಪಿಸಲಾಗುತ್ತೆ. ಅದಕ್ಕಾಗಿ ಆಸಕ್ತಿಯುಳ್ಳವರಿಗೆ ವಿವಿಧ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಅವುಗಳಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತಾರೆ. ಈ ಮೂಲಕ ಅವರ ಮನಕ್ಕೆ ಮುದ ನೀಡಲು ಪ್ರಯತ್ನಿಸುತ್ತಾರೆ.

ನಿರ್ಬಂಧಗಳೇನು?
ವಯಸ್ಸಿನ ಮಿತಿ: ಸಾಮಾನ್ಯವಾಗಿ ಎಲ್ಲ ವಿಶ್ರಾಂತಿ ಮನೆಗಳಲ್ಲಿ ವಯಸ್ಸಿನ ಮಿತಿಯನ್ನು 55ಕ್ಕಿಂತ ಹೆಚ್ಚಿರಬೇಕು. ಆದರೆ ನಿವೃತ್ತರಾದವರ ಪತ್ನಿ ಅಥವಾ ಪತಿಯ ವಯಸ್ಸು 55ಕ್ಕಿಂತ ಕಡಿಮೆ ಇರಲೂಬಹುದು. ಇಂಥವರಿಗೆ ವಾಸಿಸಲು ಅವಕಾಶವೂ ಇದೆ. ಈ ದಂಪತಿಗೆ ಮಕ್ಕಳಿದ್ದಲ್ಲಿ ಅವರಿಗೆ ವಿಶ್ರಾಂತಿ ಮನೆಯಲ್ಲಿ ವಾಸಿಸಲು ಅವಕಾಶವಿಲ್ಲ. ಭೇಟಿ ಮಾಡಲು ಮಾತ್ರ ಅವಕಾಶವುಂಟು. ಅದೂ ಎರಡು ಅಥವಾ ಮೂರು ತಿಂಗಳಿಗೊಮ್ಮೆ ಮಾತ್ರ.

ಪಾಲುದಾರಿಕೆ ಮತ್ತು ಮರುಮಾರಾಟ
ಯಾವುದೇ ವಿಶ್ರಾಂತಿ ಮನೆಯನ್ನು ಖರೀದಿಸಿದ ನಂತರ ಆ ಆಸ್ತಿಗೆ ಅವರ ನಿಧನದ ನಂತರ ಕಾನೂನಿನಂತೆ ಮಗ ಅಥವಾ ಮಗಳು ವಾರಸುದಾರರಾಗುತ್ತಾರೆ. ಆದರೂ ಇಲ್ಲಿ ಮಗ ಅಥವಾ ಮಗಳು ತಾವು ಹಿರಿಯ ನಾಗರಿಕರಾಗುವವರೆಗೆ (55 ವರ್ಷ ತುಂಬುವವರೆಗೆ) ಅದನ್ನು ಮಾರಾಟ ಮಾಡಲು ಅಥವಾ ಅದರ ಸಂಪೂರ್ಣ ಉತ್ತರದಾಯಿತ್ವ ಪಡೆಯಲಾಗದು. ಆದರೆ ಅದನ್ನು ಬೇರೆ ಹಿರಿಯ ನಾಗರಿಕರಿಗೆ ಬಾಡಿಗೆಗೆ ನೀಡಬಹುದು. ಇನ್ನೊಂದು ಪ್ರಮುಖ ಸಂಗತಿ ಎಂದರೆ- ಅನಿವಾಸಿ ಭಾರತೀಯರ ಮಕ್ಕಳು ಈ ವಿಶ್ರಾಂತಿ ಮನೆಗಳನ್ನು ಕೊಳ್ಳಬಹುದು. ಮತ್ತೆ ಮಾರಾಟ ಮಾಡಬೇಕಿದ್ದಲ್ಲಿ ಹಿರಿಯ ನಾಗರಿಕರಿಗೇ ಕೊಡಬೇಕಾಗುತ್ತದೆ. ಇಲ್ಲಿ ಪಾರದರ್ಶಕತೆಗೆ ಪ್ರಾಮುಖ್ಯತೆ ನೀಡಲಾಗುತ್ತದೆ.

ಕರ್ನಾಟಕದಲ್ಲಿ ಎಲ್ಲೆಲ್ಲಿ?
1.    ಹೋಮ್ಸ್ ಇನ್ ಸೀನಿಯರ್ ಸಿಟಿಜನ್, ಬೆಂಗಳೂರು- ಮೊ. 80026 66666, www.tatahousing.in
2.    ಸ್ಯಾಂಥೋಮ್ ಶಾಂತಿ ಸದನ, ಬೆಂಗಳೂರು- www.santhomeonline.com
3.    ಲಿಟಲ್ ಸಿಸ್ಟರ್ಸ್ ಆಫ್ ದಿ ಪೂರ್, ಬೆಂಗಳೂರು- www.lspbangalore.com
4.    ಬೆಂಗಳೂರು ಫ್ರೀಮಾಸೂನ್ಸ್ ಸೊಸೈಟಿ ಓಲ್ಡ್ ಏಜ್ ಹೋಮ್-  www.santhomeonline.com
5.    ಬ್ರಿಗೇಡ್ ಸ್ಯಾಂಫೋನಿ ಅಪಾರ್ಟ್‌ಮೆಂಟ್ಸ್, ಮೈಸೂರು- www.brigadesamphony.com
6.    ಯುಸಿಎಫ್ ಸೀನಿಯರ್ ಸಿಟಿಝನ್ ಹೋಮ್, ಬೆಂಗಳೂರು- www.sites.google.com
7.    ರಿಟೈರ್‌ಮೆಂಟ್ ವಿಲೇಜಿಸ್, ನ್ಯೂ ಕಾನ್ಸೆಪ್ಟ್ ಆಫ್ ಲಿವಿಂಗ್, ಬೆಂಗಳೂರು- ಮೊ. 800 102 4010(ಟೋಲ್ ಫ್ರೀ) www.sereneretirment.com

- ವೀರೇಶ ಜಿ. ಮಠ
mathvg@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.