ಮಾತಿನ ಸಿಹಿ ಕಹಿ

ವರ್ತನೆಯಲ್ಲಿ ತೀರ ಸಭ್ಯರಾಗಿರುವವರು, ಸಭ್ಯತೆಗಾಗಿ ಇತರರಿಂದ ಮೆಚ್ಚುಗೆ ಪಡೆದವರು ಕೂಡ ಒಮ್ಮೊಮ್ಮೆ ಬಾಯಿತಪ್ಪಿ ಅನಾಹುತಕಾರಿ ಮಾತಾಡಿಬಿಟ್ಟಿರುತ್ತಾರೆ. 'ಅವನೇನು ಮಹಾ ಬಿಡು, ಅವನೋ, ನಾನೇನ್ ಕಂಡಿಲ್ವಾ? ಇವನು ಇಷ್ಟೇ ಬಿಡು' ಎಂದೆಲ್ಲ ಹೇಳಿರುತ್ತಾರೆ. ಹಾಗೆ ಹೇಳುವ ಮೂಲಕ ಎದುರಿಗಿದ್ದವರ, ತಾವ್ಯಾರ ಕುರಿತು ಮಾತಾಡಿದ್ದೇವೋ ಅಂಥವರ ಗೌರವ ಕಳೆದುಕೊಂಡುಬಿಟ್ಟಿರುತ್ತಾರೆ. ಯಾರೋ ಆಡಿದ ಒಂದು ಮಾತು ಹೇಗೇಗೋ ಬಂದು ನಮ್ಮ ಎದೆಗೆ ನಾಟುತ್ತದೆ. ಹಾಗೆ ಆಡಿದವರು ಒಂದು ಕ್ಷಣ ಯೋಚಿಸಿ ತಮ್ಮನ್ನು ನಿಯಂತ್ರಿಸಿಕೊಂಡಿದ್ದರೆ ಸಾಕಿತ್ತು, ನೀವು ಅವರ ಸಂಬಂಧ ಮುರಿದುಕೊಳ್ಳುವ ಪ್ರಮೇಯವೇ ಬರುತ್ತಿರಲಿಲ್ಲ. ಅವರನ್ನು ಉದಾಹರಣೆಯಾಗಿಟ್ಟುಕೊಂಡು ಈಗ ನಿಮ್ಮ ಕುರಿತು ಯೋಚಿಸಿ. ನೀವೆಷ್ಟು ಬಾರಿ, ಯಾರ್ಯಾರ ಕುರಿತು ಏನೇನೆಲ್ಲ ಮಾತನಾಡಿಲ್ಲ? ಅದರಿಂದ ಅವರಿಗೆ ನೋವಾಗಿರಬಹುದೇ ಎಂದು ಕೂಡ ನಾವು ಯೋಚಿಸಲು ಹೋಗಿರುವುದಿಲ್ಲ. ಅಗತ್ಯವಿಲ್ಲದಿದ್ದಾಗ ನಿಷ್ಠುರ ನುಡಿ ಆಡುವುದು, ಕಟು ಟೀಕೆಯ ವಿಮರ್ಶೆ ಮಾಡುವುದು- ಇವೆಲ್ಲ ನಿಮ್ಮ ಅರಿವೇ ಇರದೆ ಆಗಿಹೋಗಿರುತ್ತದೆ. ಎಲ್ಲವೂ ಒಂದು ಮಾತಿನಿಂದ. ಅಷ್ಟಾಗಿ ಬಸವಣ್ಣ ಸುಮ್ಮನೆ ಹೇಳಿದ್ದಾನೆಯೆ- ನುಡಿದರೆ ಮುತ್ತಿನ ಹಾರದಂತಿರಬೇಕು ಅಂತ. ನುಡಿ ಸುಂದರ ಹುಡುಗಿ ಮುತ್ತಿಟ್ಟಂತಿದ್ದರೆ ಒಳಿತು. ಅದಾಗದಿದ್ದರೆ ಕನಿಷ್ಠ ಎಂಜಲು ಹಾರದಂತಾದರೂ ಇರಬೇಕು. ಮಾತಿನಿಂ ನಗೆ ನುಡಿಯು, ಮಾತಿನಿಂ ನಗೆ ಹೊಲೆಯು, ಮಾತಿನಿಂ ಸಕಲ ಸಂಪದವು ಅಂತ ಸರ್ವಜ್ಞ ಹೇಳಿದ್ದೂ ಇದನ್ನೆ. ಒಂದು ಕ್ಷಣ ನಾವು ನಮ್ಮನ್ನೇ ನಿಯಂತ್ರಿಸಿಕೊಳ್ಳದಿದ್ದರೆ ಹೇಗೆ? ಮಾತು ವ್ಯಕ್ತಿಯ ಎಲ್ಲ ಗುಣಗಳನ್ನೂ ಪ್ರತಿನಿಧಿಸುತ್ತದೆ. ಆತ ದುಷ್ಟನಾ ಒಳ್ಳೆಯವನಾ, ಅನ್ಯರನ್ನು ನೋಯಿಸುವವನಾ ಪೋಷಿಸುವವನಾ, ಪ್ರೀತಿಸುವವನಾ ದ್ವೇಷಿಸುವವನಾ- ಇದೆಲ್ಲವೂ ಗೊತ್ತಾಗುತ್ತದೆ. ಆತ ಬದುಕಿನಲ್ಲಿ ಸುಖಪಟ್ಟವನಾ ನೊಂದವನಾ ಎಂಬೆಲ್ಲ ಚರಿತ್ರೆಯನ್ನೂ ಅದು ಬಿಚ್ಚಿಡುತ್ತದೆ. ನಿಮ್ಮ ಜಾತಕವನ್ನು ಪರರ ಮುಂದೆ ಯಾಕೆ ಬಿಚ್ಚಿಡಬೇಕು? ಅದು ನಿಮ್ಮಲ್ಲೇ ಇರಬಾರದೇಕೆ? ನಿಮ್ಮ ಕಹಿಯನ್ನು ಅನ್ಯರಿಗೂ ಹಂಚುವಿರೇಕೆ?ಮಾತಿನಲ್ಲಿ ಸಿಹಿಯನ್ನು ಹಂಚುವುದರಿಂದ ನಿಮಗ್ಯಾವ ನಷ್ಟವೂ ಇಲ್ಲ. ಲಾಭವೇ ಎಲ್ಲ.
- ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


