ಬೈಟುಕಾಫಿ

ನದಿಯ ನಾದ

Published On :

ಬಹುದಿನಗಳಿಂದ ಆಕೆಯ ಸುದ್ದಿ ಹೋಗಲಿ, ಸದ್ದೂ ಇರಲಿಲ್ಲ. ಆಕೆ ನನ್ನ ಬಾಲ್ಯದ ಗೆಳತಿ. ಅವಳ ಬಳಿ ನನ್ನ ನೋವು-ನಲಿವುಗಳನ್ನು ಹಂಚಿಕೊಳ್ಳಲು ಆಗಾಗ್ಗೆ ಹೋಗಿ ಅವಳ ಬಗಲಲ್ಲಿ ಕುಳಿತು ಹರಟೆ ಹೊಡೆದು ಬರುತ್ತಿದ್ದೆ. ಅವಳನ್ನು ನೋಡಿ ನನಗೇ ಸಂಕಟವಾಗುತ್ತಿತ್ತು. ಸೊರಗಿ ಒಣಕಲು ಕಡ್ಡಿಯಂತೆ ಮೂಳೆ ಚಕ್ಕಳದ ಗೂಡಾಗಿದ್ದಳು. ಅಲ್ಲೆಲ್ಲೋ ಅವಳು ಜೀವಂತವಿದ್ದಾಳೆ ಎನ್ನುವುದಕ್ಕೆ ಸಾಕ್ಷಿಯಾಗಿ ಅಲ್ಲಲ್ಲಿ ಜೀವದೊರತೆ ಮಾತ್ರ ಮಿಸುಕಾಡುತ್ತಿತ್ತು. ಅವಳ ಈ ದುರವಸ್ಥೆಗೆ ತೀರಾ ಖೇದವೆನ್ನಿಸಿದರೂ, ಅವಳು ಇನ್ನೂ ಕಾಪಿಟ್ಟುಕೊಂಡ ಜೀವನೋತ್ಸಾಹ ಕಂಡು ಒಳಗೊಳಗೇ ಹಾಯೆನಿಸಿತು. ದೂರದಿಂದಲೇ ನೋಡಿ ಮರಳಿಬಂದ ಮೇಲೆ ಹೆಚ್ಚೂಕಡಿಮೆ ಅವಳನ್ನು ಮರೆತೇಬಿಟ್ಟಿದ್ದೆ ಕೂಡ.
ಈಗ ಹೊರ ಹೋಗಲಾರದಷ್ಟು ಮಳೆ ಸುರಿಯುತ್ತಿದೆ. ಅವಳ ನಗು, ಕೇಕೆ, ಸಂಭ್ರಮ, ಸಡಗರಗಳ ಸದ್ದು ಮನೆಯೊಳಗೂ ಪಲ್ಲವಿಸುತ್ತಿದೆ. ಹಜಾರದಲ್ಲಿ ನಿಂತು ನೋಡಿದರೆ ಅಪರಿಮಿತ ಸುಂದರಿಯಂತೆ ಗೋಚರಿಸುತ್ತಿದ್ದಾಳೆ. ನಾನು ಕರೆದರೂ ಕೇಳಿಸದಷ್ಟು ಧಾವಂತ. ಅವಳೀಗ ಜವಾಬ್ದಾರಿ ಹೆಚ್ಚಿಸಿಕೊಂಡಿದ್ದಾಳೆ. ಹೌದು! ಅವಳು ನದಿಯಾಗಿಬಿಟ್ಟಿದ್ದಾಳೆ. ಅವಳ ಖುಷಿಯ ಮೇರೆ ಮೀರುತ್ತಿದೆ. ಚಿಕ್ಕ ಪುಟ್ಟ ಹಳ್ಳ, ತೋಡುಗಳೆಲ್ಲಾ ಅವಳ ಬಳಿಗೆ ಹಾತೊರೆದು ಹೋಗುತ್ತಾ, ತಾವೂ ನದಿಯಾಗಿಬಿಟ್ಟೆವೆಂದು ಸಂಭ್ರಮಿಸುತ್ತಿವೆ. ಅವಳೊಳಗೆ ಅಂದಿನದೇ ಉದಾರತೆ. ಅವಳಿಗೀಗ ಕಡಲಿನ ಕಡೆಗೇ ಧ್ಯಾನ. ಈಗ ಅವಳೆದೆಯೊಳಗೂ ನದಿಯ ನಾದದ ಲಹರಿ.


-ಸ್ಮಿತಾ ಅಮೃತರಾಜ್, ಸಂಪಾಜೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.