ಬೈಟುಕಾಫಿ

ಸಂಕಲ್ಪಬಲ

ಸಂಕಲ್ಪಬಲ
Published On :

ಎದುರಾಳಿಯಾಗಿ ಲಂಕೆಯ ಅಧಿಪತಿ, ಮಹಾ ಬಲಶಾಲಿ, ಹತ್ತು ತಲೆಯ ರಾವಣ. ಅವನಿಗೆ ಸಹಾಯಕರಾಗಿ ಮಾಯಾವಿದ್ಯೆಗಳನ್ನು ಬಲ್ಲ ರಾಕ್ಷಸರು. ಎದುರಿಗೆ ಮನುಷ್ಯಕುಲವನ್ನೇ ನುಂಗಿ ನೀರು ಕುಡಿಯಬಲ್ಲ ಸಮುದ್ರ. ತನ್ನ ಕೈಯಲ್ಲಿ ಬಿಲ್ಲು, ಬಾಣ ಮಾತ್ರ. ಜತೆಗೆ ಒಡನಾಡಿಗಳಾಗಿ ಮಂಗಗಳು. ಇಷ್ಟಿದ್ದರೂ ರಾಮ, ರಾವಣನನ್ನು ಸೋಲಿಸಿ ಸೀತೆಯನ್ನು ಮರಳಿ ಪಡೆದ. ಹೇಗೆ? ಹನ್ನೊಂದು ಅಕ್ಷೋಹಿಣಿಯಷ್ಟಿದ್ದ ಬೃಹತ್ ಸೇನೆಯ ಮುಂದೆ ಖಾಲಿಪೀಲಿ ಏಳು ಅಕ್ಷೋಹಿಣಿ ಸೇನೆಯನ್ನಿಟ್ಟುಕೊಂಡ ಯುಧಿಷ್ಠಿರ ಹೇಗೆ ಗೆದ್ದ?
'ಕಾರ್ಯಸಿದ್ಧಿಃ ಸತ್ವೇ ಭವತಿ ಮಹತಾಂ ನೋಪಕರಣೇ' ಅನ್ನುತ್ತದೆ ಸುಭಾಷಿತ. ಅದರರ್ಥ, ಯಾವುದೇ ಕಾರ್ಯವಾಗಲೀ ಸಿದ್ಧಿಸುವುದು, ಅದನ್ನು ಮಾಡಲು ಹೊರಟವನಲ್ಲಿ ಯಾವ ಯಾವ ಉಪಕರಣಗಳಿವೆ ಎಂಬ ಅಂಶವನ್ನು ಅವಲಂಬಿಸಿ ಅಲ್ಲ. ಅದು ಅವರ ಸಂಕಲ್ಪದಿಂದ, ಸತ್ವದಿಂದ. ಎಂಥ ಅಪೂರ್ವವಾದ ಆಯುಧವಾಗಲಿ, ಬುದ್ಧಿಶಕ್ತಿಯ ಮುಂದೆ ಮೊಂಡೇ ಆಗುತ್ತದೆ. ಅಶ್ವತ್ಥಾಮನ ಬ್ರಹ್ಮಾಸ್ತ್ರವೂ ಕೃಷ್ಣನ ಉಪಾಯದ ಮುಂದೆ ಮಂಡಿ ಊರಲಿಲ್ಲವೆ?
ರಾಮನ ಸತ್ವ, ಅವನು ನಂಬಿದ ತತ್ವವೇ ಅತನನ್ನು ಗೆಲ್ಲಿಸಿದ್ದು. ಧರ್ಮರಾಜನ ವಿಚಾರವೂ ಹಾಗೆಯೇ. ನಾವು ನಂಬಿದ ಮತ್ತು ಅನುಸರಿಸಹೊರಟ ಸಿದ್ಧಾಂತ ಪ್ರಾಮಾಣಿಕವಾಗಿದೆ ಎಂದರೆ ನಮ್ಮನ್ನು ಬೆಂಬಲಿಸಲು ಪ್ರಪಂಚದ ಸಕಲ ಶಕ್ತಿಗಳೂ ಸಿದ್ಧವಾಗುತ್ತವೆ. ನೀವು ಆರಿಸಿಕೊಂಡ ದಾರಿ ಹಾಗೂ ಗುರಿ, ಕಾರ್ಯಗಳು ಮಹತ್ ಆಗಿದ್ದರೆ, ಅದನ್ನು ಈಡೇರಿಸಲು ದೇವರೂ ಸಜ್ಜಾಗಿರುತ್ತಾನಂತೆ. ಈ ದಾರಿಯಲ್ಲಿ ನಮ್ಮನ್ನು ಕಾಯುವುದು ನಮ್ಮ ಸತ್ವವೇ ಹೊರತು ನಮ್ಮ ಕೈಯಲ್ಲಿರುವ ಸಾಧನಗಳಲ್ಲ. ಎವರೆಸ್ಟ್ ಅನ್ನು ಮೊದಲ ಬಾರಿಗೆ ಏರಿದ್ದು ತೇನ್‌ಸಿಂಗ್ ಹಾಗೂ ಹಿಲರಿಯ ಕಾಲುಗಳಲ್ಲ. ಏರವಲ್ಲೆವೆಂಬ ದೃಢವಿಶ್ವಾಸ ಹಾಗೂ ಹಿಮಪರ್ವತದ ಅಪಾಯಗಳನ್ನು ಎದುರಾಗಬಲ್ಲ ಧೈರ್ಯ. 'ಸಂಕಲ್ಪಬಲದ ಜಾಗರಣೆ, ಕತ್ತಲಿನೆಡೆಗೆ ಕಣೆ, ದಂಡಕಾರಣ್ಯಕ್ಕೆ ಹಗಲದೊಣ್ಣೆ' ಎಂಬ ಅಡಿಗರ ಸಾಲುಗಳು ನೆನಪಾಗುತ್ತವೆ ಅಲ್ಲವೆ?

-  ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.