ಬೈಟುಕಾಫಿ

ಅಬ್ಬಾ ಅಣಬೆ!

ಅಬ್ಬಾ ಅಣಬೆ!
Published On :

ಈಗ ಅಣಬೆಗಳ ಸೀಜನ್. ನೈಸರ್ಗಿಕವಾಗಿ ನೂರಾರು ಜಾತಿಯ ಅಣಬೆಗಳು ಮಳೆಗಾಲವಾದ ಈ ದಿನಗಳಲ್ಲಿ ತ್ಯಾಜ್ಯ ವಸ್ತುಗಳ ಮೇಲೆ ಕಾಣುತ್ತವೆ. ಆದರೆ ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಮಾತ್ರ ಸಿಗುವ ಅಪರೂಪದ ಶ್ವೇತ ವರ್ಣದ, ಒಂದು ಅಡಿಗಿಂತ ಹೆಚ್ಚು ಬೇರನ್ನು ಹೊಂದಿರುವ ಅಣಬೆ ಸಿಗುವುದು ವಿರಳ.
ನೈಸರ್ಗಿಕವಾಗಿ ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಮಾತ್ರ ಸಿಗುವ ಈ ಅಣಬೆಗಳು ದೊರಕಬೇಕೆಂದರೆ ಅದೃಷ್ಟ ಮಾಡಿರಬೇಕು. ಕಾಡಿನಲ್ಲಿ ಬೇಟೆಯಾಡುವ ರೀತಿ ಐದಾರು ಕಿಮೀ ದೂರ ಹುಡುಕಾಡಿ ತರುತ್ತಾರೆ. ಹುಟ್ಟಿದ ಎರಡು ದಿನಗಳೊಳಗೆ ಇವುಗಳನ್ನು ಪತ್ತೆ ಹಚ್ಚಿ ಕಿತ್ತು ಉಪಯೋಗಿಸದಿದ್ದಲ್ಲಿ ಬಾಡಿ ಇಲ್ಲವಾಗುತ್ತವೆ.
ಭೂಮಿಯಿಂದ ಹೊರಬಂದ ಅಣಬೆಗಳು ಮೊದಲು ಮನುಷ್ಯನ ತಲೆಯಂತೆ ಮಿಡಿಯಾಗಿರುತ್ತವೆ. ಮಾರನೇ ದಿನ ಛತ್ರಿಯ ಆಕಾರದಲ್ಲಿ ಅಂಗೈಯಗಲ ಹೂವಿನಂತೆ ಅರಳಿಕೊಳ್ಳುತ್ತವೆ. ಬೂಸ್ಟು, ಲೋಳೆ ಬೂಸ್ಟು ಎಂದು ವೈಜ್ಞಾನಿಕವಾಗಿ ಕರೆಯಲಾಗುವ ಈ ಅಣಬೆಗಳಲ್ಲಿ ನೂರಾರು ಪ್ರಭೇದಗಳಿವೆ. ಆ ಪೈಕಿ ಒಂದೆರಡು ಪ್ರಭೇದ ಮಾತ್ರ ಊಟಕ್ಕೆ ಯೋಗ್ಯ. ಕೊಳೆತ ದೇಹ, ಕೊಳಚೆ ಪ್ರದೇಶಗಳಲ್ಲಿ ಹುಟ್ಟುವ ಅಣಬೆಗಳು ವಿಷಪೂರಿತ. ಗೋಲಿಗುಂಡಿನ ಆಕಾರದಿಂದ ಹಿಡಿದು ಕೆಜಿಗಟ್ಟಲೆ ತೂಕದ ಅಣಬೆಗಳನ್ನು ಪ್ರಕೃತಿಯಲ್ಲಿ ಕಾಣಬಹುದಾಗಿದೆ. ಈ ಅಣಬೆ ಹುಡುಕುವುದೆಂದರೆ ಕಡಲಾಳದಲ್ಲಿ ಮುತ್ತು ಹುಡುಕಿದ ಹಾಗೆ. ಕೆಲವೊಮ್ಮೆ ಒಂದೇ ಕಡೆ ಗುಂಪುಗಟ್ಟಲೆ ಪ್ರತ್ಯಕ್ಷವಾಗುತ್ತವೆ. ಗಟ್ಟಿಯಾಗಿ ಹಿಡಿದು ಕಿತ್ತರೆ ಅಡಿಗಟ್ಟಲೆ ಬೇರು ಸಮೇತ ಬರುತ್ತದೆ. ಇನ್ನಿತರ ಅಣಬೆ ಕೀಳುವಾಗ ಈ ರೀತಿಯ ಉದ್ದ ಬೇರು ಇರುವುದಿಲ್ಲ. ಕೈ ತಾಗಿದರೆ ನೆಲಕ್ಕೆ ಉರುಳುತ್ತವೆ. ಇಂತಹ ಅಣಬೆಗಳು ವಿಷಪೂರಿತ ಎಂದೇ ತಿಳಿಯಬೇಕು.

ಸಸ್ಯಹಾರಿಗಳ ಚಿಕನ್
ಅಣಬೆಯ ಸಾಂಬಾರ್ ಜತೆ ಮುದ್ದೆ, ಅನ್ನ ಊಟ ಮಾಡಿದವರಿಗೆ ಮಾತ್ರ ಗೊತ್ತು ಅದರ ಸವಿ. ಇದು ಸಸ್ಯಾಹಾರಿಗಳ ಚಿಕನ್ ಎಂದರೆ ತಪ್ಪಾಗುವುದಿಲ್ಲ. ಚಿಕನ್, ಮಟನ್, ಮೀನಿನಲ್ಲಿ ಸಿಗುವ ವಿಟಮಿನ್, ಖನಿಜಾಂಶ ಅಣಬೆಗಳಲ್ಲಿ ಸಿಗುತ್ತದೆ. ಅಣಬೆ ಸೇವಿಸುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ ಎನ್ನುತ್ತದೆ ಪಾರಂಪರಿಕ ಜ್ಞಾನ. ಮನೆಯಲ್ಲಿಯೇ ಬೀಜ ಹಾಕಿ ಕೃತಕವಾಗಿ ಬೆಳೆಸಿದ ಅಣಬೆಗಳು ನೈಸರ್ಗಿಕ ಅಣಬೆಗಳಿಗೆ ಸರಿಸಾಟಿಯಲ್ಲ.

ಮೊದಲೆಲ್ಲಾ ನಾವು ಅಣಬೆ ಹುಡುಕ್ಲಿಕ್ಕೇ ಅಡವಿಗೆ ಹೋಗ್ತಿದ್ವಿ. ಚೀಲಗಟ್ಟಲೆ ಅಣಬೆ ತರ್ತಿದ್ವಿ. ಆದ್ರೆ ಇತ್ತೀಚೆಗೆ ಏಕೋ ಅಣಬೆಗಳು ಅಷ್ಟೊಂದು ಸಿಗ್ತಿಲ್ಲ. ಜಮೀನುಗಳಲ್ಲಿ ಕೊಳವೆ ಬಾವಿ ನೀರಾವರಿಯಾಗಿ, ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಸುರಿಯುವುದರಿಂದ ಅಣಬೆ ಸಿಗುವುದೇ ಅಪರೂಪವಾಗುತ್ತಿವೆ. ಅಡವಿಯಲ್ಲೂ ಅಷ್ಟಕ್ಕಷ್ಟೇ.
- ಬಸವರಾಜ, ಗಜಾಪುರ

- ಭೀಮಣ್ಣ ಗಜಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.