ಸುರಕ್ಷಿತ ವಲಯ

ಮನೆ ಕಟ್ಟೋಕೆ, ಆಸ್ತಿ ಕೊಳ್ಳೋಕೆ ಸಾಲ ಮಾಡಲು ಹೆದರಿಕೆ- ಕಟ್ಟಲಾಗದಿದ್ದರೆ? ತನ್ನ ಪ್ರೇಮವನ್ನು ಹುಡುಗಿಯ ಮುಂದೆ ಹೇಳಿಕೊಳ್ಳಲು ಆತಂಕ- ತಿರಸ್ಕೃತನಾಗಿಬಿಟ್ಟರೆ? ಕೆಲಸದಲ್ಲಿ ಹೆಚ್ಚಿನದ್ದನ್ನು ಮಾಡಲು ಆಲಸ್ಯ- ಅದರ ಅಗತ್ಯವೇನಿದೆ? ಬ್ಯುಸಿನೆಸ್ನಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಭಯ- ಲಾಸ್ ಆಗಿಬಿಟ್ಟರೆ? ಇರುವುದನ್ನೇ ನೋಡಿಕೊಂಡು ಹೋದರೆ ಸಾಕಲ್ಲ, ಆಳ ನೀರಿಗೆ ಯಾಕೆ ಇಳಿಯಬೇಕು?
ನಾವೆಲ್ಲ ಸದಾ ನಮ್ಮ ನಮ್ಮ ಭರವಸೆಯ ಭದ್ರ ಲೋಕಗಳಲ್ಲೇ ವಿಹರಿಸುತ್ತಿರುತ್ತೇವೆ. ಅದರಿಂದ ಹೊರಗೆ ಬರಲು, ರಿಸ್ಕ್ ತೆಗೆದುಕೊಳ್ಳಲು ಆತಂಕ. ಇದನ್ನೇ ವ್ಯಕ್ತಿತ್ವ ವಿಕಸನ ಪರಿಣತರು 'ಕಂಫರ್ಟ್ ಝೋನ್' ಎಂದು ಕರೆದಿರುವುದು. ಈ ಸುರಕ್ಷಿತ ವಲಯದಲ್ಲೇ ನಮ್ಮ ಸಕಲ ಲೋಕವೂ ಇರುತ್ತದೆ. ಇಲ್ಲೇ ಉಣ್ಣು, ತಿನ್ನು, ಮಲಗು, ದುಡಿ. ಆದರೆ ಎಷ್ಟು ದಿನ ಅಂತ ಅಲ್ಲೇ ಇರುತ್ತೀರಿ? ಹೊರಗಿನ ಲೋಕವನ್ನೂ ನೋಡಬೇಕಲ್ಲವೆ? ನಾವು ನೋಡದಿರುವುದು, ತಿಳಿಯದಿರುವುದು, ದುಡಿಯದಿರುವುದು, ಆಸ್ವಾದಿಸದಿರುವುದು ಎಷ್ಟೊಂದಿದೆ ಈ ಲೋಕದಲ್ಲಿ! ನಿಮ್ಮ ಸುರಕ್ಷಿತ ವಲಯ ದಾಟಿ ನೋಡಿ. ಪ್ರಪಂಚ ವಿಸ್ತಾರವಾಗಿ ತೆರೆದುಕೊಳ್ಳುತ್ತದೆ.
ತಾಯಿಯ ಗರ್ಭದಿಂದ ಮಗು ಹೊರಬರಲೇಬೇಕು. ಅಲ್ಲೇ ಬೆಚ್ಚಗಿದೆ ಎಂದು ಅನಂತಕಾಲ ಹಾಗೇ ಉಳಿಯಲಾಗುತ್ತದೆಯೆ? ಹೊಕ್ಕುಳ ಬಳ್ಳಿ ಕತ್ತರಿಸಿಕೊಂಡು, ತನಗೆ ತಾನೇ ಆಹಾರ ಸೇವಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಲೇಬೇಕು. ಟಾಟಾ, ಅಂಬಾನಿ, ಜಾಬ್ಸ್, ಗೇಟ್ಸ್ ಮುಂತಾದ ಮಹಾನ್ ಉದ್ಯಮಿಗಳು ಹೊಸ ಸಾಹಸಗಳಿಗೆ ಕೈ ಹಾಕದಿದ್ದರೆ ಇಂದು ಇಂಥ ಮಹಾನ್ ಇಂಡಸ್ಟ್ರಿಗಳ ಸಾಮ್ರಾಜ್ಯಕ್ಕೆ ಅಧಿಪತಿಗಳಾಗಿರುತ್ತಿರಲಿಲ್ಲ. ಆಗ ಅವರು ತಗೊಂಡ ರಿಸ್ಕ್ಗಳು ಸಣ್ಣವೇನಲ್ಲ.
ಒಮ್ಮೆ ರಿಸ್ಕ್ ತೆಗೆದುಕೊಂಡು ನೋಡಿ. ಅದು ಉಂಟುಮಾಡುವ ಪರಿಣಾಮ ಊಹಿಸಲಸಾಧ್ಯವಾಗಿರುತ್ತದೆ. ಅದೇ ಮತ್ತಷ್ಟು ರಿಸ್ಕ್ ತಗೊಳ್ಳುವ ಹುಮ್ಮಸ್ಸನ್ನೂ ನಿಮ್ಮಲ್ಲಿ ಮೂಡಿಸುತ್ತದೆ. ನಮ್ಮ ಹಿರಿಯರು ರಿಸ್ಕ್ ತಗೊಳ್ಳಲು ಹಿಂಜರಿದು ನಮ್ಮನ್ನು ಹುಟ್ಟಿಸದೇ ಇರುತ್ತಿದ್ದರೆ ಏನಾಗುತ್ತಿತ್ತು ಯೋಚಿಸಿ!
- ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


