ಬೈಟುಕಾಫಿ

ಆಕೆ ಸರೋವರ

ಆಕೆ ಸರೋವರ
Published On :

ಹೆಣ್ಣಿನ ದೇಹವನ್ನು ಎಷ್ಟು ಬಗೆಗಳಲ್ಲಿ ಬಣ್ಣಿಸಬಹುದು? ಒಬ್ಬೊಬ್ಬನಿಗೂ ಒಂದೊಂದು ರೀತಿಯಲ್ಲಿ ಕಾಣಿಸುವ ತರುಣೀಕಾಯ, ಕವಿಗಳ ಕಣ್ಣಲ್ಲಿ ಹೊಳೆಯಿಸುವ ಸ್ವಾರಸ್ಯವೇ ಬೇರೆ. ಇಲ್ಲೊಬ್ಬ ಕವಿಗೆ ಸುಂದರ ತರುಣಿಯ ಶರೀರ ಸರೋವರದಂತೆ ಕಂಡುಬಿಟ್ಟಿದೆ!

ಬಾಹೂ ದ್ವೌಚ ಮೃಣಾಲಮಾಸ್ಯಕಮಲಂ ಲಾವಣ್ಯ ಲೀಲಾಜಲಂ
ಶ್ರೋಣೀತೀರ್ಥಶಿಲಾ ಚ ನೇತ್ರ ಶಫರೀ ಧಮ್ಮಿಲ್ಲಶೈವಾಲಿಕಮ್
ಕಾಂತಾಯಾಃ ಸ್ತನಚಕ್ರವಾಕಯುಗಲಂ ಕಂದರ್ಪ ಬಾಣಾನಿಲೈರ್
ದಗ್ಧಾನಾಮವಗಾಹನಾಯ ವಿಧಿನಾ ರಮ್ಯಂ ಸರೋ ನಿರ್ಮಿತಮ್

ಈ ತರುಣಿಯ ಶರೀರದ ಲಾವಣ್ಯವೇ ಅಲೆಅಲೆಯಾಗಿ ಅಲ್ಲಾಡುತ್ತಿರುವ ನೀರು. ಈಕೆಯ ಮುಖವೇ ಅರಳಿದ ಕಮಲದ ಹೂ. ನಳಿದೋಳುಗಳೇ ಕೋಮಲವಾದ ಕಮಲದ ದಂಟುಗಳು. ಉಕ್ಕುವ ತಾರುಣ್ಯವನ್ನು ತಡೆಯುತ್ತಿರುವ ಕಲ್ಲಿನ ಬದಿಕಟ್ಟೆಗಳೇ ನಿತಂಬಗಳು! ಕಣ್ಣುಗಳು, ನೀರಿನಲ್ಲಿ ಕ್ರೀಡಿಸುತ್ತಿರುವ ಚೆಲುವಾದ ಮೀನುಗಳು. ಹಬ್ಬಿ ಹರಡಿರುವ ಜಲಸಸ್ಯಗಳೇ ಕೂದಲು. ಇನ್ನು ನೀರಿನಲ್ಲಾಡುವ ಜೋಡಿ ಚಕ್ರವಾಕ ಪಕ್ಷಿಗಳು, ಬೇರೇನು, ಎದೆಯ ಸಂಪದಗಳು! ಈಕೆ ಸೃಷ್ಟಿಕರ್ತ ಬ್ರಹ್ಮನೇ ಸೃಷ್ಟಿಸಿದ ಸರೋವರ. ಯಾವುದಕ್ಕೆ? ಕಾಮನ ಬಾಣದ ಬೆಂಕಿಗೆ ತುತ್ತಾದವರು ಧುಮುಕಿ ಈಜಿ ತಂಪಾಗಲೆಂದೇ ಆತ ಸೃಷ್ಟಿಸಿದ್ದು!
ಮುಖವನ್ನು ಕಮಲಕ್ಕೂ, ಸ್ತನಗಳನ್ನು ಚಕ್ರವಾಕ ಪಕ್ಷಿಗಳಿಗೂ ಹೋಲಿಸುವುದು ಅಂಥ ಮಹಾ ಕವಿತ್ವವೇನಲ್ಲ. ಅದನ್ನು ಸಾಮಾನ್ಯ ಕವಿಯೂ ಮಾಡಬಲ್ಲ. ಆದರೆ ಅವೆಲ್ಲವನ್ನೂ ಸೇರಿಸಿ ಇಡೀ ಶರೀರವೇ ಸರೋವರ ಎಂದು ಬಣ್ಣಿಸುವುದು, ಅದು ಕಾಮತಪ್ತನು ಕ್ರೀಡಿಸುವುದಕ್ಕಾಗಿಯೇ ಸೃಷ್ಟಿಸಿದ್ದು ಎಂದು ವ್ಯಾಖ್ಯಾನಿಸುವುದು ಮಹಾನ್ ಕವಿಪ್ರತಿಭೆಗೆ ಮಾತ್ರ ಕಾಣಬಲ್ಲಂಥ ನೋಟ.

- ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.