ಬೈಟುಕಾಫಿ

ಓಣಂ ಬಂತು

ಓಣಂ ರಾಷ್ಟ್ರೀಯ ಭಾವೈಕ್ಯ ಸಾರುವ ವಿಭಿನ್ನ ಜನಾಂಗಗಳನ್ನು ಸಂಸ್ಕೃತಿಯ ನೆಲೆಯಲ್ಲಿ ಬಂಧಿಸುವ ಮಹತ್ವದ ಹಬ್ಬ....

ಓಣಂ ಬಂತು
Published On :

ಕಾರ್ಲ್‌ಮಾರ್ಕ್ಸ್‌ನ ಸಮತಾವಾದ, ಗಾಂಧೀಜಿಯವರ ರಾಮರಾಜ್ಯ, ಕ್ರಿಸ್ತನ ಧರ್ಮರಾಜ್ಯ, ನಾರಾಯಣ ಗುರು ಮತ್ತು ಬಸವಣ್ಣನವರ ಜಾತಿರಹಿತ ಸಮಾಜದ ಪರಿಕಲ್ಪನೆಯ ಒಟ್ಟು ಮೊತ್ತವೇ ಹಿಂದಿನ ಮಹಾಬಲಿ ಚಕ್ರವರ್ತಿಯ ಆಳ್ವಿಕೆಯ ಕಾಲ. ಮಹಾಬಲಿ ಆಳುತ್ತಿದ್ದ ಕಾಲದಲ್ಲಿ ಪ್ರಜೆಗಳೆಲ್ಲಾ ಸಮಾನರು. ಸುಳ್ಳು, ಕಪಟಗಳಿರಲಿಲ್ಲ. ಯಾವುದಕ್ಕೂ ಕೊರತೆಯಿರಲಿಲ್ಲ. ಸಮೃದ್ಧಿಯ ಬದುಕು. ಅವನು ಪ್ರಜಾದರ್ಶನಕ್ಕಾಗಿ ಬರುವ ಸಂದರ್ಭವೇ ಕೇರಳದ ಓಣಂ. ಮತ್ತೊಂದು ಮಗ್ಗುಲಿನಲ್ಲಿ ಓಣಂ ರಾಷ್ಟ್ರೀಯ ಭಾವೈಕ್ಯ ಸಾರುವ ವಿಭಿನ್ನ ಜನಾಂಗಗಳನ್ನು ಸಂಸ್ಕೃತಿಯ ನೆಲೆಯಲ್ಲಿ ಬಂಧಿಸುವ ಮಹತ್ವದ ಹಬ್ಬ. ಮಲಯಾಳಂನ ಚಿಂಗ (ಸಿಂಹ) ಮಾಸದ ಹಸ್ತ ನಕ್ಷತ್ರದಿಂದ ಶ್ರಾವಣದವರೆಗೆ ಕೇರಳದ ಎಲ್ಲೆಡೆ ಓಣಂ ಹಬ್ಬದ ಸಂಭ್ರಮ.
ಬಲಿ ಚಕ್ರವರ್ತಿ ಮಹಾ ಶಿವಭಕ್ತ, ಕೊಡುಗೈ ದಾನಿ. ಪುರಾಣಗಳಲ್ಲಿ ಬರುವ ಬಹುತೇಕ ಶಿವಭಕ್ತರೆಲ್ಲಾ ದಾನವರು. ಹಿರಣ್ಯಕಶಿಪು ಶಿವಭಕ್ತ- ರಾಕ್ಷಸ, ಅವನ ಮಗ ಪ್ರಹ್ಲಾದ ವಿಷ್ಣು ಭಕ್ತ- ರಾಕ್ಷಸನಲ್ಲ. ಈ ಪ್ರಹ್ಲಾದನ ಮೊಮ್ಮಗನೇ ಬಲಿ. ಯಥಾಪ್ರಕಾರ ಶಿವಭಕ್ತ- ರಾಕ್ಷಸ. ಇದು ಹೇಗೆ ಎಂಬುದನ್ನು ತಿಳಿಯಬೇಕೆಂದರೆ ಪುರಾಣ ತಜ್ಞರನ್ನೇ ಕೇಳಬೇಕು.
ಬಲಿ 99 ಯಾಗ ಪೂರೈಸಿ ನೂರನೆಯ ಯಾಗಕ್ಕೆ ಅಣಿಯಾಗುತ್ತಿದ್ದ. ನೂರನ್ನು ಪೂರೈಸಿದರೆ ಅವನು ಇಂದ್ರ ಪದವಿಗೆ ಲಗ್ಗೆ ಹಾಕುವುದು ಖಚಿತ. ದೇವತೆಗಳಿಗೆ ಬಲಿಯ ಕೀರ್ತಿ ಸಹಿಸಲಾಗಲಿಲ್ಲ. ದೇವಾದಿ ದೇವತೆಗಳು ಇಂದ್ರನ ನೇತೃತ್ವದಲ್ಲಿ ತಮ್ಮ 'ಹೈಕಮಾಂಡ್‌' ವಿಷ್ಣುವಿನ ಬಳಿಗೆ ಹಾರಿದರು. ದೇವತೆಗಳ ಅಹವಾಲನ್ನು ಕೇಳಿದ ವಿಷ್ಣು, ಬಲಿಯಿಂದ ರಕ್ಷಣೆಯ ಆಶ್ವಾಸನೆಯನ್ನಿತ್ತ. ವಾಮನನಾಗಿ ಬಲಿಯ ಬಳಿಗೆ ಬಂದು ತನ್ನ ವಾಸ್ತವ್ಯಕ್ಕೆ ಮೂರು ಹೆಜ್ಜೆ ಸ್ಥಳ ದಾನವಾಗಿ ಕೇಳಿದ. ಬಲಿ ದೂಸರಾ ಯೋಚಿಸದೇ ಒಪ್ಪಿಕೊಂಡ. ತಕ್ಷಣ ವಾಮನ ತ್ರಿವಿಕ್ರಮನಾಗಿ ಬೆಳೆದು ಎರಡು ಹೆಜ್ಜೆಗಳಿಂದ ಭೂಮಿ ಮತ್ತು ಆಕಾಶ ಅಳೆದು ಮೂರನೆಯ ಹೆಜ್ಜೆಯನ್ನು ಎಲ್ಲಿಡಲಿ ಎಂದು ಕೇಳಿದ. ಬಲಿ ಮಂಡಿಯೂರಿ ಕುಳಿತು ತನ್ನ ತಲೆಯನ್ನು ತೋರಿಸಿದ. ವಾಮನ ತನ್ನ ಬೃಹತ್ ಪಾದವನ್ನು ಬಲಿಯ ತಲೆಯ ಮೇಲಿಟ್ಟಾಗ ಬಲಿ ಚಕ್ರವರ್ತಿ ಪಾತಾಳಕ್ಕೆ ತಳ್ಳಲ್ಪಟ್ಟ.
ಬಲಿಯ ಒಳ್ಳೆಯತನ ದುರುಪಯೋಗ ಪಡಿಸಿಕೊಂಡಿದ್ದಕ್ಕೆ ವಿಷ್ಣುವಿಗೆ ಪಶ್ಚಾತ್ತಾಪವಾಗಿರಬೇಕು. ಪರಿಹಾರವಾಗಿ ಏನು ಕೊಡಲೆಂದು ಬಲಿಯನ್ನು ಕೇಳಿದ. ವರ್ಷಕ್ಕೊಮ್ಮೆ ಪಾತಾಳದಿಂದ ಮೇಲೆದ್ದು ಬಂದು ತನ್ನ ಪ್ರೀತಿಯ ಪ್ರಜೆಗಳ ದರ್ಶನ ಪಡೆಯುವ ವರವನ್ನು ಕೇಳಿದ ಬಲಿ. ಬಲಿಯ ಈ ಪ್ರಜಾದರ್ಶನವೇ ಕೇರಳದ ಓಣಂ.
ಬಲಿ ಒಂದು ಸಮುದಾಯಕ್ಕೆ ಮಾತ್ರ ಸೇರಿದವನಾಗಿರಲಿಲ್ಲ. ಪ್ರಜೆಗಳ ಪ್ರೀತಿಪಾತ್ರ ಅರಸನಾಗಿದ್ದ. ಆದ್ದರಿಂದಲೇ ಅರಸನ ಪ್ರಜಾದರ್ಶನ ಸಾರ್ವಜನಿಕರ ಹಬ್ಬ. ಜಾತಿ, ಮತ, ಪಂಥ ಮೀರಿ ಓಣಂನ್ನು ಕೇರಳದಲ್ಲಿ ಎಲ್ಲರೂ ಆಚರಿಸುತ್ತಾರೆ. ಬಹುಶಃ ಭಾರತದಲ್ಲಿ ಎಲ್ಲಾ ಸಮುದಾಯದವರು ಆಚರಿಸುವ ಏಕೈಕ ಹಬ್ಬ ಇದೆನ್ನಬಹುದು. ಓಣಂ ಹತ್ತು ದಿನ ಆಚರಿಸುವ ಹಬ್ಬ. ಈ ಹತ್ತು ದಿನಗಳಲ್ಲಿ ಒಂದು ದಿನ ಬಲಿ ಮಹಾರಾಜ ನಮ್ಮ ಮನೆ ಅಂಗಳಕ್ಕೆ ಅಡಿಯಿಡಬಹುದೆಂದು ಪ್ರಜೆಗಳ ನಂಬಿಕೆ.
ಬಲಿಯನ್ನು ಬರಮಾಡಿಕೊಳ್ಳಲು ಮಲಯಾಳಿಗಳು ಮನೆ ಅಲಂಕರಿಸುತ್ತಾರೆ. ಮನೆಯ ಮುಂದೆ ಹೂವಿನ ರಂಗೋಲಿ ಹಾಕುತ್ತಾರೆ. ಆಸ್ತಿ ಮಾರಿಯಾದರೂ ಓಣಂ ಆಚರಿಸಬೇಕೆಂಬುದು ಲಾಗಾಯ್ತಿನಿಂದ ಚಾಲ್ತಿಯಲ್ಲಿರುವ ಗಾದೆ. ಗುಡಿಸಲೇ ಆಗಲಿ, ಬಂಗ್ಲೆಯೇ ಆಗಲಿ ಓಣಂನ ಹತ್ತು ದಿನ ಮಲಯಾಳಿಯ ಮನೆಯ ಅಂಗಳದಲ್ಲಿ ಹೂವಿನ ರಂಗೋಲಿ ಇದ್ದೇ ಇರುತ್ತದೆ.
ಕೇರಳದ ಹಿಂದಿನ ಸಮಾಜಿಕ ವ್ಯವಸ್ಥೆಯಲ್ಲಿ ಕೃಷಿ ಕಾರ್ಮಿಕರು, ಗೇಣಿದಾರರು ತಾವು ಬೆಳೆದ ಫಸಲಿನಲ್ಲಿ ಅತ್ಯುತ್ತಮವಾದುದನ್ನು ಆಯ್ಕೆ ಮಾಡಿ ಒಡೆಯನಿಗೆ ಕಾಣಿಕೆ ಅರ್ಪಿಸುತ್ತಿದ್ದರು. ಅವರು ಅದಕ್ಕೆ ಪ್ರತಿಯಾಗಿ ದವಸ, ಧಾನ್ಯ, ಉಡುಪು ಉಡುಗೊರೆಯನ್ನಾಗಿ ನೀಡುತ್ತಿದ್ದರು. ಉಳುವವನಿಗೆ ಭೂಮಿ ಎಂಬ ನಿಯಮ ಜಾರಿಗೆ ಬಂದ ಮೇಲೆ ಹಾಗೂ ಎಡಪಂಥೀಯ ವಿಚಾರಧಾರೆಯ ಪ್ರಭಾವ ದಟ್ಟವಾದಾಗಿನಿಂದ ಈ ಕ್ರಮ ಕಂಡು ಬರುತ್ತಿಲ್ಲ.
ಹಬ್ಬದ ದಿನ ಕುಟುಂಬದ ಸದಸ್ಯರೆಲ್ಲ ಎಲ್ಲೇ ಇದ್ದರೂ ಊರಿಗೆ ಮರಳುತ್ತಾರೆ. ಮನೆಯ ಮುಂದೆ ಹಾಕಿದ ರಂಗೋಲಿಯ ಮಧ್ಯೆ ಕಾಲುದೀಪ ಹಚ್ಚಿಟ್ಟು ಸಾಂಪ್ರಾದಾಯಿಕ ಉಡುಪುಟ್ಟು ಮಹಿಳೆಯರು ಚಪ್ಪಾಳೆ ತಟ್ಟುತ್ತಾಹಾಡು ಗುನುಗುತ್ತಾ ನೃತ್ಯವಾಡುತ್ತಾರೆ. ಇದಕ್ಕೆ ಕೈಕೊಚ್ಚಿಕಳಿ ಎಂದು ಹೇಳುತ್ತಾರೆ. ಯುವಕರು ಕೇರಳದ ಪ್ರಾಚೀನ ಯುದ್ಧಕಲೆಯ ಅಣಕು ಓಣತಲ್ಲ್ (ಪರಸ್ಪರ ಹೊಡೆದಾಡಿಕೊಳ್ಳುವುದು) ಆಡುತ್ತಾರೆ. ಇನ್ನು ಕೆಲವರು ದೊಡ್ಡ ಮರದ ರೆಂಬೆಗೆ ಉಯ್ಯಾಲೆ ಇಳಿಬಿಟ್ಟು ತೂಗಾಡುತ್ತಾರೆ. ಆಲೆಪ್ಪಿಯ ಪಂಪಾನದಿಯಲ್ಲಿ ನಡೆಯುವ ದೋಣಿ ಸ್ಪರ್ಧೆಯಂತೂ ಇಡೀ ಜಗತ್ತಿನ ಗಮನ ಸೆಳೆದಿದೆ. ಓಣಂನಲ್ಲಿ ಔತಣಕ್ಕೆ (ಓಣಸದ್ಯ) ಬಹಳ ಪ್ರಾಮುಖ್ಯ. ಕುಂಬಳಕಾಯಿ, ಬಾಳೆ, ಹಲಸು, ಸುವರ್ಣಗೆಡ್ಡೆ ಸೌತೆ, ಹಾಗಲ, ತೊಂಡೆ ಮುಂತಾದ ತರಕಾರಿಗಳ ಸಾಂಬಾರು ಮೇಲೋಗರಗಳು ಅತ್ಯಗತ್ಯ. ಮೂರ್ನಾಲ್ಕು ರೀತಿಯ ಪಾಯಸಗಳು ಇರಬೇಕು. ಮನೆಯವರೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡುವುದೂ ಅಗತ್ಯ.
ಹಬ್ಬದ ದಿನ ಸಂಜೆ ಮನೆಯ ನಾಲ್ಕು ಮೂಲೆಗಳಲ್ಲಿ ಅಡುಗೆ ಬಡಿಸಿ, ದೀಪ ಹಚ್ಚಿ ಇರುವೆಗಳಿಗೂ ಊಟ ನೀಡುವ ಪದ್ಧತಿ ಇದೆ. ಹಬ್ಬದಂದು ಜೀವಂತವಿರುವ ಯಾವ ಪ್ರಾಣಿಯೂ, ಕೀಟವೂ ಉಪವಾಸ ಇರಬಾರದೆಂಬುದರ ನಂಬಿಕೆಯ ಸಂಕೇತವಿದು.

ಬಲಿ ಆಡಳಿತ
1957ರಲ್ಲಿ ಜಗತ್ತಿನಲ್ಲಿಯೇ ಪ್ರಥಮ ಚುನಾಯಿತ ಕಮ್ಯೂನಿಸ್ಟ್ ಸರಕಾರ ಕೇರಳದಲ್ಲಿ ಅಧಿಕಾರಕ್ಕೆ ಬಂತು. ಇಎಂಎಸ್ ನಂಬೂದಿರಿಪಾಡ್ ಅಧಿಕಾರದ ಚುಕ್ಕಾಣಿ ಹಿಡಿದರು. ಕೇವಲ ಹನ್ನೆರಡು ಮಂತ್ರಿಗಳ ಮಂತ್ರಿಮಂಡಲ ಅಸ್ತಿತ್ವಕ್ಕೆ ಬಂತು. ಆಯಾ ಕ್ಷೇತ್ರದ ತಜ್ಞರನ್ನೇ ಮಂತ್ರಿಗಳನ್ನಾಗಿ ಮಾಡಿದರು. ಮತ್ತೆ ಕೇರಳಕ್ಕೆ ಮಹಾಬಲಿಯ ಆಳ್ವಿಕೆಯ ಕಾಲ ಬಂತೆಂದು ಜನ ಸರ್ಕಾರದ ಕಲ್ಯಾಣ ಕಾರ್ಯಗಳನ್ನು ಹಾಡಿ ಹೊಗಳುತ್ತಿದ್ದರು. ಬಲಿಯ ಕೀರ್ತಿ ದೇವಲೋಕಕ್ಕೆ ಹರಡಿದಂತೆ, ಇಎಂಎಸ್‌ರ ಕೀರ್ತಿಯೂ ಕೇಂದ್ರ ಸರ್ಕಾರವನ್ನು ಮುಟ್ಟಿತು. ಅಂತಹ ಸರಕಾರ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ ಸಂವಿಧಾನದ 356ನೆಯ ಕಲಂನನ್ವಯ ವಜಾಗೊಳಿಸಲ್ಪಟ್ಟಿತು. ಓಣಂ ಕಾಲ ಬಂದಾಗ ಹಳೆಯ ತಲೆಮಾರಿನವರು ಅದನ್ನೆಲ್ಲ ನೆನೆಯುವುದುಂಟು.

- ಕೆ.ಕೆ. ಗಂಗಾಧರನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.